2022ರ ನವೆಂಬರ್ ತಿಂಗಳು, ಮಳೆಗಾಲ ಮುಗಿದು ಚಳಿಗಾಲ ಶುರುವಾದ ಸಮಯ. ನಾನು ಹಾಗೂ ಗೆಳೆಯ ಸುಹಾಸ್ ಶನಿವಾರ ಬೆಳಗಾವಿಗೆ ತಲುಪಿ, ಆದಿತ್ಯವಾರ ವಜ್ರ ಸಕಾಲ ಜಲಪಾತ ಚಾರಣ ಮಾಡುವ ಯೋಜನೆ ಮಾಡಿದ್ದೆವು. ಈ ಜಲಪಾತಕ್ಕೆ ಊರಿನ ಮೀನು ಹಿಡಿಯುವ ಕುಣುಬಿ ಜನರು ಬಿಟ್ಟರೆ ಹೊರಗಿನವರು ಹೋಗಿರುವುದು ಬಹಳ ಕಡಿಮೆ. ಬೆಳಗ್ಗೆ 5:30ಕ್ಕೆ ಬೆಳಗಾವಿಯಿಂದ ವಿರಡಿ ಎಂಬ ಹಳ್ಳಿಗೆ ಬೈಕ್ ತೆಗೆದುಕೊಂಡು ಹೊರಟೆವು.
ಘೋರ ಚಳಿ ಒಂದೆಡೆ ಆದರೆ ಮಂಜಿನಿಂದ ರಸ್ತೆಯೂ ಸರಿಯಾಗಿ ಕಾಣುತ್ತಿರಲಿಲ್ಲ. ಬೆಳಗ್ಗೆ ಸುಮಾರು 7 ಗಂಟೆ ಹೊತ್ತಿಗೆ ವಿರಡಿ ಹಳ್ಳಿಗೆ ತಲುಪಿದೆವು. ಜಲಪಾತಕ್ಕೆ ಹೋಗುವ ದಾರಿ ನಮಗೆ ತಿಳಿಯದೆ ಇದ್ದಿದ್ದರಿಂದ ಊರಿನ ಜನರ ಬಳಿ ವಿಚಾರಿಸಿದೆವು. ಮೂರು ನಾಲ್ಕು ಮನೆಯ ಜನರು “ಅಲ್ಲಿಗೆ ಹೋಗಬೇಡಿ, ತುಂಬಾ ಅಪಾಯಕಾರಿ ಜಾಗ, ದಾರಿ ಬೇರೆ ನಿಮಗೆ ತಿಳಿದಿಲ್ಲ” ಎಂದರು. ಹೀಗೆ ಹಳ್ಳಿಯಲ್ಲಿ ವಿಚಾರಿಸುತ್ತಾ ಇದ್ದಾಗ ಊರಿನ ಒಬ್ಬರು ನಮಗೆ ಸಹಾಯ ಮಾಡಲು ಮುಂದಾದರು. ಅವರ ಮನೆಯ ಹತ್ತಿರ ಕರೆದೊಯ್ದು, ಒಂದು ದಾರಿ ತೋರಿಸಿ ” ಇದೇ ದಾರಿಯಲ್ಲಿ ನಡೆದರೆ, ಇಡೀ ಊರಿಗೆ ಕುಡಿಯಲು ನೀರಿಗೆ ಆಸರೆಯಾಗಿರುವ ವಲವಂತಿ ನದಿ ಸಿಗುತ್ತದೆ, ಕಾಡಿನ ದಾರಿ ನಿಮಗೆ ತಿಳಿಯುವುದಿಲ್ಲ ಆದ್ದರಿಂದ ಇದೇ ನದಿಯ ಜಾಡು ಹಿಡಿದು 8 ಕಿಲೋಮೀಟರ್ ಹೋಗಿ” ಎಂದರು.
ಅದಲ್ಲದೇ “ಮಳೆ ಬಂದರೆ ಹೊಳೆಯನ್ನು ದಾಟುವ ಹರಸಾಹಸ ಮಾಡಬೇಡಿ, ನೀರಿನ ರಭಸ ಬಹಳ ಇರುತ್ತದೆ” ಅಂದರು. ಎಂಟು ಕಿಲೋಮೀಟರ್ ಚಾರಣ ಎಂದು ನಮಗೆ ತಿಳಿದದ್ದೇ ಆವಾಗ. ಬಂದದ್ದು ಬಂದಾಗಿದೆ, ಇಡೀ ದಿನಕ್ಕೆ ಒಂದೇ ಜಲಪಾತ ನೋಡಿದರಾಯಿತು ಎಂದು ನಮ್ಮ ಚಾರಣ ಆರಂಭಿಸಿದೆವು. ಊರಿನವರು ಹೇಳಿದ ಹಾಗೆ, ಒಂದು ಕಿಲೋಮೀಟರ್ ಚಾರಣಿಸಿದ ನಂತರ ವಲವಂತಿ ನದಿ ಸಿಕ್ಕಿತು. ನಿಧಾನವಾಗಿ ವಲವಂತಿ ನದಿಯ ಬದಿಯಲ್ಲೇ ಕಲ್ಲು ಬಂಡೆಗಳನ್ನು ದಾಟಿ ಚಾರಣ ಮುಂದುವರೆಯಿತು. 2 ಕಿಲೋಮೀಟರ್ ಚಾರಣದ ನಂತರ ನದಿಯ ಇನ್ನೊಂದು ಬದಿಗೆ ದಾಟಬೇಕಿತ್ತು. ಮೊಣಗಂಟಿನವರೆಗೆ ಬರುವಷ್ಟು ನೀರು ನದಿಯಲ್ಲಿ ರಭಸವಾಗಿ ಹರಿಯುತ್ತಿತ್ತು. ಹಗುರವಾಗಿ ಒಂದೊಂದೇ ಹೆಜ್ಜೆ ಇಡುತ್ತಾ ನದಿಯ ಇನ್ನೊಂದು ಬದಿಗೆ ದಾಟಿದೆವು. ಕಲ್ಲು ಬಂಡೆಗಳು ಜಾರುತ್ತಿದ್ದರಿಂದ ನದಿ ದಾಟಲು ಸುಹಾಸ್ ನ ಸಹಾಯ ತೆಗೆದುಕೊಂಡೆ. ಅಕಸ್ಮಾತ್ ಜಾರಿ ಬಿದ್ದರು ನದಿಯಲ್ಲಿ ತೇಲಿ ಹತ್ತಿರದ ಬಂಡೆಗಲ್ಲುಗಳನ್ನು ಹಿಡಿದುಕೊಳ್ಳಬಹುದು ಎಂದು ಸುಹಾಸ್ ಧೈರ್ಯ ತುಂಬಿದ. ಹಾಗೆ ಇಬ್ಬರಿಗೂ ಈಜಲು ಬರುತ್ತಿದ್ದರಿಂದ ಜಲಪಾತ ಅನ್ವೇಷಣೆ ಕಾರ್ಯ ಮುಂದುವರೆಯಿತು.
ಎಂಟು ಕಿಲೋಮೀಟರ್ ಚಾರಣ ಆಗಿದ್ದರಿಂದ ಆ ದಿನಕ್ಕೆ ಒಂದೇ ಜಲಪಾತದ ಅನ್ವೇಷಣೆಯ ಯೋಜನೆ ಮಾಡಿಕೊಂಡಿದ್ದೆವು. 4 ಕಿಲೋಮೀಟರ್ ಚಾರಣಿಸುತ್ತಿದ್ದಂತೆ ಇನ್ನೊಮ್ಮೆ ನದಿಯನ್ನು ದಾಟಬೇಕಿತ್ತು. ನಿಧಾನವಾಗಿ 4 ಹೆಜ್ಜೆ ಇಡುತ್ತಿದ್ದ ಹಾಗೆ ನನ್ನ ಕಾಲು ಜಾರಿತು. ನೀರು ಆ ಜಾಗದಲ್ಲಿ ಅಷ್ಟು ರಭಸವಿಲ್ಲದ ಕಾರಣ ಬಿದ್ದಲ್ಲಿಯೆ ಕೂತುಬಿಟ್ಟೆ. ಕೊನೆಯ ಅರ್ಧ ಕಿಲೋಮೀಟರ್ ಇರುವಾಗ ದೂರದಲ್ಲಿ ಜೋಡಿ ಜಲಪಾತಗಳು ಕಾಣ ತೊಡಗಿದವು. ಹತ್ತಿರವಾಗುತ್ತಿದ್ದಂತೆ ಚಾರಣ ಕಷ್ಟವಾಗ ತೊಡಗಿತು. ದೊಡ್ಡ ದೊಡ್ಡ ಕಲ್ಲು ಬಂಡೆಗಳನ್ನು ದಾಟಬೇಕಿತ್ತು. ನಾವು ತಂದ ಬ್ಯಾಗ್ ಇರಿಸಿ ಜಲಪಾತದತ್ತ ನಡೆದೆವು. ಎರಡು ಹಂತದಲ್ಲಿ ಬೀಳುವ ಶ್ವೇತ ರೂಪಸಿ. 600 ಅಡಿಗಿಂತಲೂ ಎತ್ತರದ ರೌದ್ರ ಬೀಳು. ನೀರಿನ ಶಬ್ದ ಬಿಟ್ಟರೆ ನಾವಿಬ್ಬರೇ ಇರುವ ಜಾಗ. ನೀರು ಹಾಗೂ ಜಾಗ ಕಸ ಕಡ್ಡಿಗಳಿಂದ ಮುಕ್ತವಾಗಿ ಶುಭ್ರವಾಗಿತ್ತು. ಚಾರಣ ಸುಮಾರು 2 ಗಂಟೆಗಿಂತಲೂ ಹೆಚ್ಚು ಸಮಯ ಬೇಕಾಗಿತ್ತು.
ನೋಡುಗರಿಗೆ ಅಚ್ಚರಿ ಬೀಳಿಸುವ ನಿಸರ್ಗದ ರಮಣೀಯತೆ ನಂಬಲಸಾಧ್ಯ. 8 ಕೀ ಮೀ ಚಾರಣ ಸಾರ್ಥಕವಾಗಿತ್ತು. ಸ್ವರ್ಗದಂತ ಜಾಗಕ್ಕೆ ಬಂದಿದ್ದೆವು. ಸ್ವಲ್ಪ ಹೊತ್ತು ಕೂತು ನೋಟವನ್ನು ಆನಂದಿಸಿ ಫೋಟೋ ವಿಡಿಯೋ ತೆಗೆದು, ವಾಪಸು ಹೊರಡಲು ಶುರು ಮಾಡಿದೆವು. ಮತ್ತದೇ ಕಲ್ಲು ಬಂಡೆಗಳನ್ನು ಹತ್ತಿ ಇಳಿದು, ನದಿಯನ್ನು ದಾಟಿ ಬೈಕ್ ಇಟ್ಟ ಹಳ್ಳಿಗೆ ತಲುಪಿದೆವು. ಪ್ರಕೃತಿಗೆ ನೀಡುವ ಗೌರವವೋ ಏನೋ ಸುರಕ್ಷಿತವಾಗಿ ಏನೂ ತೊಂದರೆ ಆಗದೆ ಹಿಂತಿರುಗಿದ್ದೇವು.
ಮಳೆರಾಯನ ದಯೆಯೂ ನಮ್ಮ ಮೇಲಿತ್ತು. ನಮಗೂ ಎಷ್ಟು ಜಲಪಾತದ ಅನ್ವೇಷಣೆಯ ಚಟ ಎಂದರೆ ಯಾವ ಗೈಡ್ ಇಲ್ಲದೆ, ಪರ್ಮಿಷನ್ ಇಲ್ಲದೆ, ಇಬ್ಬರೇ ಮಹದಾಯಿ ವನ್ಯ ಜೀವಿ ವಲಯದಲ್ಲಿ ರಭಸವಾಗಿ ಬೀಳುವ ಜಲಪಾತದ ಅನ್ವೇಷಣೆಗೆ ತೆರಳಿ ಸುರಕ್ಷಿತವಾಗಿ ವಾಪಸಾಗಿದ್ದೇವು.
ಜಲಪಾತದ ಸ್ಥಳ: ಬೆಳಗಾವಿಯ ವಿರಡಿ
ಉಡುಪಿಯಿಂದ 352 ಕಿಲೋ ಮೀಟರ್ ದೂರ
-ರಾಘವ ಭಟ್, ಉಡುಪಿ