ಹುಬ್ಬಳ್ಳಿ: ಕೇಂದ್ರ ಸಚಿವ ಪ್ರಹ್ಲಾದ ಜೋಶಿ ನಿವಾಸಕ್ಕೆ ಶುಕ್ರವಾರ ಆಗಮಿಸಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಗೌಪ್ಯ ಮಾತುಕತೆ ನಡೆಸಿದ್ದು ಕುತೂಹಲ ಕೆರಳಿಸಿದೆ.
ಖಾಸಗಿ ಕಾರ್ಯಕ್ರಮ ನಿಮಿತ್ತ ಆಗಮಿಸಿದ್ದ ವಿಜಯೇಂದ್ರ ನಗರದಲ್ಲಿರುವ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ನಿವಾಸಕ್ಕೆ ಭೇಟಿ ನೀಡಿದ್ದರು.
ಸ್ವಾಗತಕ್ಕೆ ಜಮಾಯಿಸಿದ್ದ ಪಕ್ಷದ ಕಾರ್ಯಕರ್ತರು, ನಾಯಕರನ್ನು ಮಾತನಾಡಿಸಿದ ವಿಜಯೇಂದ್ರ ನೇರವಾಗಿ ಜೋಶಿ ಅವರೊಂದಿಗೆ ಮನೆಯೊಳಗೆ ತೆರಳಿದರು. ಕೆಲವು ಕಾಲ ಇಬ್ಬರೇ ಮಾತುಕತೆ ನಡೆಸಿದರು. ಈ ಭಾಗದ ಕೆಲ ಮುಖಂಡರು, ಪಕ್ಷದ ಕೆಲವು ನಾಯಕರು ಭಿನ್ನರಾಗ ಎತ್ತಿರುವ ಹಿನ್ನೆಲೆಯಲ್ಲಿ ಈ ಭೇಟಿ ಮಹತ್ವ ಪಡೆದಿದೆ. ಸುಮಾರು ಐದಾರು ನಿಮಿಷ ಇಬ್ಬರೂ ಮಾತುಕತೆ ನಡೆಸಿದ್ದಾರೆ.
ಇದಕ್ಕೂ ಮೊದಲು ಪಕ್ಷದ ಶಿಸ್ತು ಸಮಿತಿ ರಾಜ್ಯಾಧ್ಯಕ್ಷ ಲಿಂಗರಾಜ ಪಾಟೀಲ್, ಮಹಾನಗರ ಜಿಲ್ಲಾಧ್ಯಕ್ಷ ತಿಪ್ಪಣ್ಣ ಮಜ್ಜಗಿ, ಮಾಜಿ ಮೇಯರ್ ವೀರಣ್ಣ ಸವಡಿ ಜತೆ ಕೆಲವು ಕಾಲ ಮಾತನಾಡಿದರು. ಮುಡಾ ಹಗರಣದ ವಿರುದ್ಧ ಬಿಜೆಪಿ-ಜೆಡಿಎಸ್ ಹಮ್ಮಿಕೊಂಡಿದ್ದ ಪಾದಯಾತ್ರೆ ಯಶಸ್ಸಿನ ಕುರಿತು ಚರ್ಚಿಸಿದರು. ಆದರೆ ಇದನ್ನು ಹೊರತುಪಡಿಸಿ ಅಂತಹ ಯಾವುದೇ ಗಂಭೀರ ಮಾತುಕತೆ ನಡೆದಿಲ್ಲ ಎಂದು ಮುಖಂಡರೊಬ್ಬರು ಸ್ಪಷ್ಟಪಡಿಸಿದ್ದಾರೆ.
ಆ ಬಳಿಕ ಪತ್ರಕರ್ತರ ಜತೆ ಮಾತನಾಡಿದ ವಿಜಯೇಂದ್ರ, ಖಾಸಗಿ ಕಾರ್ಯಕ್ರಮ ನಿಮಿತ್ತ ಆಗಮಿಸಿದ್ದೆ. ಕೇಂದ್ರ ಸಚಿವರು ಇರುವುದು ಗೊತ್ತಾಯಿತು. ಹೀಗಾಗಿ ಅವರನ್ನು ಭೇಟಿಯಾಗಲು ಬಂದಿದ್ದೇನೆ. ಅಂತಹ ವಿಶೇಷತೆ ಏನಿಲ್ಲ. ಜೋಶಿ ಅವರು ನಮ್ಮ ನಾಯಕರು, ಮಾರ್ಗದರ್ಶಕರು. ಅವರನ್ನು ಭೇಟಿ ಮಾಡಲು ಬಂದಿದ್ದೆ ಎಂದರು.