Advertisement

ದ್ವಿತೀಯ ಪಿಯುಸಿ ಫ‌ಲಿತಾಂಶ ವಿಳಂಬ? ವಾಣಿಜ್ಯ, ಕಲಾ ವಿಭಾಗದ ಮೌಲ್ಯಮಾಪನ ಬಹುತೇಕ ಪೂರ್ಣ

12:39 AM May 31, 2022 | Team Udayavani |

ಉಡುಪಿ: ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಫ‌ಲಿ ತಾಂಶಕ್ಕಾಗಿ ಈ ಬಾರಿ ವಿದ್ಯಾರ್ಥಿಗಳು ಜೂನ್‌ ತಿಂಗಳ ಅಂತ್ಯದವರೆಗೆ ಕಾಯಲೇ ಬೇಕು.

Advertisement

ಮೌಲ್ಯಮಾಪನ ಪ್ರಕ್ರಿಯೆ ಈಗಾಗಲೇ ಆರಂಭವಾಗಿದೆ. ವಿಜ್ಞಾನ ವಿಭಾಗದ ಬಹು ತೇಕ ಎಲ್ಲ ಜಿಲ್ಲೆಗಳ ಉತ್ತರಪತ್ರಿಕೆಗಳ ಮೌಲ್ಯಮಾಪನ ರಾಜಧಾನಿ ಬೆಂಗಳೂರಿನಲ್ಲಿ ಮಂದಗತಿಯಲ್ಲಿ ನಡೆದಿರುವುದು ಇದಕ್ಕೆ ಕಾರಣ.

ವಾಣಿಜ್ಯ, ಕಲಾ ವಿಭಾಗದ ವಿದ್ಯಾರ್ಥಿಗಳ ಉತ್ತರಪತ್ರಿಕೆಗಳ ಮೌಲ್ಯಮಾಪನ ಉಡುಪಿ, ದಕ್ಷಿಣ ಕನ್ನಡ ಮೊದಲಾದ ಜಿಲ್ಲೆಗಳಲ್ಲಿ ನಡೆಯುತ್ತಿದೆ. ಕಲಾ ವಿಭಾಗದ ಮೌಲ್ಯಮಾಪನ ಅಂತಿಮ ಹಂತ ದಲ್ಲಿದ್ದು, ಇನ್ನೆರಡು ದಿನದಲ್ಲಿ ಪೂರ್ಣಗೊಳ್ಳಲಿದೆ. ವಾಣಿಜ್ಯ ವಿಭಾಗದ ಮೌಲ್ಯಮಾಪನವೂ ಈ ವಾರದೊಳಗೆ ಮುಗಿಯಲಿದೆ.

ಮೌಲ್ಯಮಾಪನ ಮುಗಿದ ಅನಂತರ ಫ‌ಲಿತಾಂಶ ಪ್ರಕಟಿಸಲು ಸಿದ್ಧತೆಗಾಗಿ ಕನಿಷ್ಠ 10 ದಿನಗಳು ಬೇಕು. ವಿಜ್ಞಾನ ವಿಭಾಗದಲ್ಲಿ ಉತ್ತರಪತ್ರಿಕೆಗಳ ಸಂಖ್ಯೆಯೂ ಹೆಚ್ಚಿದ್ದು, ಮೌಲ್ಯಮಾಪಕರ ಕೊರತೆ ಇರುವುದರಿಂದ ಪ್ರಕ್ರಿಯೆ ಪೂರ್ಣಗೊಳ್ಳಲು ಕನಿಷ್ಠ 15 ದಿನ ಬೇಕು.ಹೀಗಾಗಿ ಫ‌ಲಿತಾಂಶ ವಿಳಂಬವಾಗಬಹುದು ಎನ್ನಲಾಗುತ್ತಿದೆ.

ವಿಜ್ಞಾನ ವಿಷಯ ವಿಳಂಬ ಯಾಕೆ?
ಕಲಾ ಮತ್ತು ವಾಣಿಜ್ಯ ವಿಭಾಗದ ಉತ್ತರ ಪತ್ರಿಕೆಯ ಮೌಲ್ಯಮಾಪನಕ್ಕೆ ಸರಕಾರಿ ಮತ್ತು ಅನುದಾನಿತ ಪ.ಪೂ.ಕಾಲೇಜುಗಳಲ್ಲಿ ಉಪನ್ಯಾಸಕರು ಹೆಚ್ಚಿದ್ದಾರೆ. ಆದರೆ ವಿಜ್ಞಾನ ವಿಭಾಗಕ್ಕೆ ಖಾಸಗಿ ಪ.ಪೂ. ಕಾಲೇಜುಗಳ ಉಪನ್ಯಾಸಕರನ್ನು ಬಳಸಿಕೊಳ್ಳುವುದು ಅನಿವಾರ್ಯ. ಇವರಲ್ಲಿ ಬಹುತೇಕ ಮಂದಿ ಸಿಇಟಿ, ನೀಟ್‌ ಇತ್ಯಾದಿ ಕೋಚಿಂಗ್‌ನಲ್ಲಿ ತೊಡಗಿಕೊಂಡಿರುವುದರಿಂದ ಮೌಲ್ಯಮಾಪನಕ್ಕೆ ಸೂಕ್ತ ಸಮಯದಲ್ಲಿ ಹಾಜರಾಗುತ್ತಿಲ್ಲ. ಹೀಗಾಗಿ ವಿಳಂಬವಾಗುತ್ತಿದೆ.

Advertisement

ಮೌಲ್ಯಮಾಪನಕ್ಕೆ ಹಾಜರಾಗದ ಸರಕಾರಿ ಅಥವಾ ಅನುದಾನಿತ ಪಿಯು ಕಾಲೇಜುಗಳ ಉಪನ್ಯಾಸಕರು ಅಥವಾ ಕಾಲೇಜುಗಳ ಮೇಲೆ ಇಲಾಖೆ ನೇರ ಕ್ರಮ ಕೈಗೊಳ್ಳಲಿದೆ. ಆದರೆ ಖಾಸಗಿ ಕಾಲೇಜು ಅಥವಾ ಉಪನ್ಯಾಸಕರ ಮೇಲೆ ಇದು ಅಸಾಧ್ಯ. ಹೀಗಾಗಿ ವಿಜ್ಞಾನ ವಿಭಾಗದ ಮೌಲ್ಯಮಾಪನ ವಿಳಂಬವಾಗುತ್ತಿದೆ ಎಂದು ಹಿರಿಯ ಮೌಲ್ಯಮಾಪಕರೊಬ್ಬರು ಮಾಹಿತಿ ನೀಡಿದ್ದಾರೆ.

ಅನನುಭವಿಗಳ ನಿಯೋಜನೆ
ಇಲಾಖೆಯ ನಿಯಮದಂತೆ ಸರಕಾರಿ ಅಥವಾ ಅನುದಾನರಹಿತ ಕಾಲೇಜುಗಳ ಕನಿಷ್ಠ 3 ವರ್ಷಕ್ಕಿಂತ ಹೆಚ್ಚು ಬೋಧನಾನುಭವ ಹೊಂದಿರುವ ಮತ್ತು ಅನುದಾನಿತ ಕಾಲೇಜುಗಳ ಕನಿಷ್ಠ 5 ವರ್ಷ ಬೋಧನಾನುಭವ ಹೊಂದಿರುವ ಉಪನ್ಯಾಸಕರನ್ನು ಮೌಲ್ಯಮಾಪನಕ್ಕೆ ಬಳಸಿಕೊಳ್ಳಬಹುದು. ಆದರೆ 2020ರ ಡಿಸೆಂಬರ್‌ನಲ್ಲಿ ನೇಮಕಗೊಂಡ, ಕನಿಷ್ಠ ಒಂದು ವರ್ಷವೂ ಪೂರ್ಣವಾಗಿ ಬೋಧನೆ ಮಾಡದ(ಕೋವಿಡ್‌ ಕಾರಣದಿಂದ) ಉಪನ್ಯಾಸಕರನ್ನು ಮೌಲ್ಯಮಾಪನಕ್ಕೆ ನಿಯೋಜನೆ ಮಾಡಲಾಗಿದೆ. ಇದಕ್ಕೆ ವ್ಯಾಪಕ ವಿರೋಧವೂ ಕೇಳಿಬರುತ್ತಿದೆ.

ಹೊರ ಜಿಲ್ಲೆಯ ಕೇಂದ್ರಗಳಿಗೆ ನಿಯೋಜನೆ
ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳ ಮೌಲ್ಯಮಾಪಕರನ್ನು ಉತ್ತರ ಕರ್ನಾಟಕದ ಕೆಲವು ಜಿಲ್ಲೆಗಳಿಗೆ ನಿಯೋಜನೆ ಮಾಡಲಾಗಿದೆ. ನಿಯಮಾನುಸಾರ ಆಯಾ ಜಿಲ್ಲೆಗಳಲ್ಲೇ ಸಂಬಂಧಪಟ್ಟ ವಿಷಯದ ಉಪನ್ಯಾಸಕರಿಗೆ ಮೌಲ್ಯಮಾಪನಕ್ಕೆ ಅವಕಾಶ ನೀಡಬೇಕು. ಆ ವಿಷಯ ಇಲ್ಲದ ಕಡೆಗಳಲ್ಲಿ ಮಾತ್ರ ಬೇರೆ ಜಿಲ್ಲೆಗೆ ನಿಯೋಜನೆ ಮಾಡಬಹುದು. ಆದರೆ ಈ ವರ್ಷ ಮೌಲ್ಯಮಾಪಕರ ಕೊರತೆಯಿಂದ ಕರಾವಳಿ ಜಿಲ್ಲೆಗಳ ಮೌಲ್ಯಮಾಪಕರನ್ನು ಬೇರೆ ಜಿಲ್ಲೆಗಳಿಗೆ ನಿಯೋಜಿಸಿದ್ದಾರೆ ಎಂಬ ಆರೋಪವೂ ಇದೆ.

ದ್ವಿತೀಯ ಪಿಯುಸಿ ಮೌಲ್ಯಮಾಪನಕ್ಕೆ ಆರಂಭದಲ್ಲಿ ಸ್ವಲ್ಪ ಸಮಸ್ಯೆಯಾಗಿತ್ತು. ಜೂನ್‌ ಮೂರನೇ ವಾರದೊಳಗೆ ಫ‌ಲಿತಾಂಶ ನೀಡಲು ಎಲ್ಲ ಪ್ರಯತ್ನ ನಡೆಯುತ್ತಿದೆ. ಇಲಾಖೆಯ ನಿಯಮದಂತೆ ಮೌಲ್ಯಮಾಪಕ ರನ್ನು ನಿಯೋಜಿಸಿದ್ದೇವೆ. ಮೌಲ್ಯ ಮಾಪನಕ್ಕೆ ಹಾಜರಾಗದವರ ವಿರುದ್ಧ ಕ್ರಮಕ್ಕೂ ಯೋಚನೆ ಮಾಡುತ್ತಿದ್ದೇವೆ.
-ಬಿ.ಸಿ. ನಾಗೇಶ್‌,
ಪ್ರಾಥಮಿಕ ಮತ್ತು
ಪ್ರೌಢಶಿಕ್ಷಣ ಸಚಿವ

-ರಾಜು ಖಾರ್ವಿ ಕೊಡೇರಿ

Advertisement

Udayavani is now on Telegram. Click here to join our channel and stay updated with the latest news.

Next