Advertisement

ಮೌಲ್ಯಮಾಪನ ಎಡವಟ್ಟು ಏರಿಕೆ: ದ್ವಿತೀಯ ಪಿಯು; ಮರುಮೌಲ್ಯಮಾಪನ ನಿರೀಕ್ಷೆಯೇ ಅಧಿಕ !

01:25 AM Sep 26, 2022 | Team Udayavani |

ಮಂಗಳೂರು: ದ್ವಿತೀಯ ಪಿಯು ಫಲಿತಾಂಶದಲ್ಲಿ ತೃಪ್ತಿ ಹೊಂದಿಲ್ಲದ ವಿದ್ಯಾರ್ಥಿ ಗಳು ಮರುಮೌಲ್ಯಮಾಪನಕ್ಕೆ ಅರ್ಜಿ ಹಾಕು ವುದು ಸಾಮಾನ್ಯ. ಆದರೆ ಈ ಸಂಖ್ಯೆ ವರ್ಷದಿಂದ ವರ್ಷಕ್ಕೆ ಏರುತ್ತಿರುವುದು ಗಂಭೀರ ಚರ್ಚೆಗೆ ಕಾರಣವಾಗಿದೆ.

Advertisement

ಈ ಬಾರಿ ಪ್ರಕಟಿತ ಅಂಕ ಗಳಿಗಿಂತ ಮರುಮೌಲ್ಯಮಾಪನದ ಬಳಿಕ ಅಂಕಗಳು ವ್ಯತ್ಯಾಸವಾದ ಸಂಖ್ಯೆಯಲ್ಲಿ ಏರಿಕೆಯಾಗಿದೆ. ಮರು ಮೌಲ್ಯ ಮಾಪನ ವಾದ ಬಳಿಕ ಬರೋಬ್ಬರಿ 2,047 ವಿದ್ಯಾರ್ಥಿ ಗಳಿಗೆ ಹೆಚ್ಚುವರಿ ಅಂಕ ದೊರೆತಿದ್ದರೆ, 2020 ರಲ್ಲಿ 2,318 ಮಂದಿಗೆ ದೊರಕಿತ್ತು. ಮೌಲ್ಯಮಾಪಕರ ಎಡವಟ್ಟಿನಿಂದ ಸಾವಿರಾರು ವಿದ್ಯಾರ್ಥಿಗಳ ಕೋರ್ಸ್‌ ಆಯ್ಕೆಗೆ ಹಿನ್ನಡೆಯಾಗಿತ್ತು.

ಈ ವರ್ಷ ಮರುಮೌಲ್ಯಮಾಪನಕ್ಕೆ ಹಾಕಿದ ವರ ಪೈಕಿ ವಿಜ್ಞಾನ ವಿಷಯದಲ್ಲಿ 4 ಅಂಕಗಳಿಗಿಂತ ಅಧಿಕ ಅಂಕವನ್ನು 558 (2020ರಲ್ಲಿ 472 ಮಂದಿ) ಮಂದಿ ಪಡೆದಿದ್ದರೆ, 4ಕ್ಕಿಂತ ಕಡಿಮೆ ಅಂಕ 291 (2020ರಲ್ಲಿ 182)ವಿದ್ಯಾರ್ಥಿಗಳ ಪಾಲಾಗಿದೆ. ಕಲಾ ಮತ್ತು ವಾಣಿಜ್ಯದಲ್ಲಿ 6ಕ್ಕಿಂತ ಅಧಿಕ ಅಂಕ 1,079 (2020ರಲ್ಲಿ 1540) ಮಂದಿಗೆ ದೊರೆತಿದೆ. 6ಕ್ಕಿಂತ ಕಡಿಮೆ 119 (2020ರಲ್ಲಿ 124) ಮಂದಿಯ ಪಾಲಾಗಿದೆ.

ಮೌಲ್ಯಮಾಪನದಲ್ಲಿ ವ್ಯತ್ಯಾಸ ಮಾಡಿದ ಮೌಲ್ಯಮಾಪಕರನ್ನು ಆ ಕಾರ್ಯದಿಂದ ತೆಗೆಯುವ ಬಗ್ಗೆ ಶಿಕ್ಷಣ ಇಲಾಖೆ ಒಂದೊಮ್ಮೆ ಚಿಂತನೆ ನಡೆಸಿತ್ತು. ಆದರೆ ಅದು ಪ್ರಸಕ್ತ ಸಂದರ್ಭ ಕಾರ್ಯಸಾಧುವಲ್ಲ ಎಂಬ ಕಾರಣದಿಂದ ಅನುಷ್ಠಾನವಾಗಿಲ್ಲ.

ಮರುಮೌಲ್ಯಮಾಪನ ವೇಳೆ ವಿದ್ಯಾರ್ಥಿಗೆ 6 ಅಂಕಗಳಿಗಿಂತ ಅಧಿಕ ಅಂಕ ದೊರೆತರೆ ಮಾತ್ರ ಅದನ್ನು ಸೇರ್ಪಡೆ ಮಾಡಲಾಗುತ್ತಿದೆ. ಆದರೆ ಅರ್ಧ ಅಂಕ ದೊರೆತರೂ ಆ ಅಂಕವನ್ನು ಸೇರ್ಪಡೆ ಮಾಡಬೇಕು ಎಂಬ ಕೂಗು ಇನ್ನೂ ಜಾರಿಗೆ ಬಂದಿಲ್ಲ.

Advertisement

ಮೌಲ್ಯಮಾಪನದಲ್ಲಿ ತೊಂದರೆ ಆದರೆ ದೊಡ್ಡ ನಷ್ಟ. ಅಂತಹ ಮೌಲ್ಯಮಾಪಕರಿಗೆ ವಿಧಿಸುವ ದಂಡದ ಮೊತ್ತವನ್ನು ಏರಿಸಲು ನಿರ್ಧರಿಸಲಾಗಿದೆ. ಈ ಬಾರಿ ಮರುಮೌಲ್ಯಮಾಪನಕ್ಕೆ ಹಾಕಿದ ಎಲ್ಲ ಪತ್ರಿಕೆಗಳನ್ನು ಗುರುತು ಮಾಡಿಕೊಂಡು ಮೌಲ್ಯಮಾಪನ ಮಾಡಿದವರ ಪಟ್ಟಿಯನ್ನು ತಯಾರಿಸಲು ನಿರ್ಧರಿಸಲಾಗಿದೆ.
– ಬಿ.ಸಿ. ನಾಗೇಶ್‌, ಸಚಿವರು, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ

ಮರುಮೌಲ್ಯಮಾಪನಕ್ಕೆ ಅರ್ಜಿ ಹಾಕುವವರ ಸಂಖ್ಯೆ ಪ್ರಸ್ತುತ ಅಧಿಕವಿದೆ. ಮೌಲ್ಯಮಾಪನದ ವೇಳೆ ಒತ್ತಡದಿಂದ ಕೆಲವೊಮ್ಮೆ ಅಂಕ ವ್ಯತ್ಯಾಸವಾಗಬಹುದು. ಆದರೆ ಮರುಮೌಲ್ಯಮಾಪನದ ವೇಳೆ ಇದನ್ನು ಹೆಚ್ಚು ಗಮನ ನೀಡಿ ಪರಿಶೀಲಿಸಲಾಗುತ್ತದೆ.
– ಕೆ.ಎನ್‌. ಗಂಗಾಧರ ಆಳ್ವ, ಅಧ್ಯಕ್ಷರು, ಪದವಿ ಪೂರ್ವ ಕಾಲೇಜು ಸಂಘ, ದ.ಕ.

ಮೌಲ್ಯಮಾಪನಕ್ಕೆ ಸಲ್ಲಿಕೆಯಾದ ಮನವಿ
2020 ವಾರ್ಷಿಕ ಪರೀಕ್ಷೆ 12118
2020 ಪೂರಕ ಪರೀಕ್ಷೆ 2519
2021: ಕೊರೊನಾ ಕಾರಣ ಪರೀಕ್ಷೆ ನಡೆದಿಲ್ಲ
2021: ಪೂರಕ ಪರೀಕ್ಷೆ 960
2022 ವಾರ್ಷಿಕ ಪರೀಕ್ಷೆ: 13848

-ದಿನೇಶ್‌ ಇರಾ

 

Advertisement

Udayavani is now on Telegram. Click here to join our channel and stay updated with the latest news.

Next