ರಾಮನಗರ: ಜಿಲ್ಲೆಯಲ್ಲಿ ಗುರುವಾರ ದ್ವಿತೀಯ ಪಿಯುಸಿ ಇಂಗ್ಲಿಷ್ ಭಾಷೆ ಪರೀಕ್ಷೆ ಯಶಸ್ವಿಯಾಗಿ ನೆರೆವೇರಿದ್ದು, ಪದವಿ ಪೂರ್ವ ಶಿಕ್ಷಣ ಇಲಾಖೆ, ಜಿಲ್ಲಾಡಳಿತ ಮತ್ತು ತಾಲೂಕು ಆಡಳಿತ ಶ್ರಮಿಸಿವೆ. ಕೋವಿಡ್-19 ಭೀತಿಯ ನಡುವೆ ಸರ್ಕಾರ ಸೂಚಿಸಿದ ಎಲ್ಲ ಮುನ್ನೆಚ್ಚರಿಕೆ ಕ್ರಮ ಅನುಸರಿಸಿ, ದ್ವಿತೀಯ ಪಿಯು ಇಂಗ್ಲೀಷ್ ಪರೀಕ್ಷೆ ನಡೆಸಿದರು. ಪರೀಕ್ಷೆ ಅಕ್ರಮಗಳಿಗೆ ಅವಕಾಶವಾಗಲಿಲ್ಲ. ಹೀಗಾಗಿ ಡಿಬಾರ್ ಪ್ರಕರಣಗಳು ವರದಿಯಾಗಿಲ್ಲ.
488 ವಿದ್ಯಾರ್ಥಿಗಳು ಗೈರು: ಜಿಲ್ಲಾದ್ಯಂತ ಹರಡಿ ಕೊಂಡಿದ್ದ 12 ಪರೀಕ್ಷೆ ಕೇಂದ್ರಗಳಲ್ಲಿ 8,413 ವಿದ್ಯಾರ್ಥಿಗಳು ಪೈಕಿ 7925, ಅನ್ಯ ಜಿಲ್ಲೆಗಳ 264 ವಿದ್ಯಾರ್ಥಿಗಳ ಪೈಕಿ 244, ಮತ್ತು ಅನ್ಯ ರಾಜ್ಯ ಗಳ ಇಬ್ಬರು ವಿದ್ಯಾರ್ಥಿಗಳು ಪರೀಕ್ಷೆ ಬರೆದರು. 488 ವಿದ್ಯಾರ್ಥಿಗಳು ಗೈರಾಗಿದ್ದರು.
ಒಬ್ಬ ವಿದ್ಯಾರ್ಥಿನಿಗೆ ಅವಕಾಶವಿಲ್ಲ: ಜಿಲ್ಲೆಯ ಮಾಗಡಿಯಲ್ಲಿ ಒಬ್ಬ ವಿದ್ಯಾರ್ಥಿನಿಗೆ ಪರೀಕ್ಷೆ ಬರೆಯಲು ಅವಕಾಶವಾಗಲಿಲ್ಲ ಎಂದು ಪಿಯು ಡಿಡಿ ನರಸಿಂಹಮೂರ್ತಿ ತಿಳಿಸಿದರು. ಕಾರಣ ಆಕೆ ಮನೆಯಲ್ಲಿ ಒಬ್ಬರಿಗೆ ಕೋವಿಡ್-19 ಸೋಂಕು ಕಾಣಿಸಿಕೊಂಡಿದ್ದರಿಂದ ಉಳಿದ ವಿದ್ಯಾರ್ಥಿಗಳ ಆರೋಗ್ಯದ ಹಿತದೃಷ್ಟಿಯಿಂದ ಜಿಲ್ಲಾಧಿಕಾರಿಗಳ ಆದೇಶದನ್ವಯ ಈ ಕ್ರಮವಹಿಸ ಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರಾಮನಗರದಲ್ಲಿ ಕಂಟೈನ್‌ಮೆಂಟ್ ವಲಯ ದಿಂದ ಬಂದ ವಿದ್ಯಾರ್ಥಿಯನ್ನು ಪ್ರತ್ಯೇಕ ಕೊಠಡಿ ಯಲ್ಲಿ ಪರೀಕ್ಷೆ ಬರೆಸಲಾಗಿದೆ.
ಥರ್ಮ ಲ್ ಸ್ಕ್ರೀನಿಂಗ್: ಎಲ್ಲ 12 ಪರೀಕ್ಷಾ ಕೇಂದ್ರ ಗಳಲ್ಲೂ ಆರೋಗ್ಯ ಸಹಾಯಕರು ಪ್ರತಿ ವಿದ್ಯಾ ರ್ಥಿಯನ್ನು ಥರ್ಮಲ್ ಸ್ಕ್ರೀನಿಂಗ್‌ಗೆ ಒಳಪಡಿಸಿ ದ ನಂತರವಷ್ಟೇ ಪರೀಕ್ಷಾ ಕೇಂದ್ರದೊಳಗೆ ಬಿಡಲಾಯಿತು. ಹ್ಯಾಂಡ್ ಸ್ಯಾನಿಟೈಸರ್ ವ್ಯವಸ್ಥೆಯಿತ್ತು. ಕಳೆದ ವರ್ಷಗಳಿಗಿಂತ ಹೆಚ್ಚಿನ ಕೊಠಡಿ ಪರೀಕ್ಷೆಗೆ ಬಳಸಿಕೊಳ್ಳಲಾಗಿದೆ. ಸಾಮಾಜಿಕ ಅಂತರ ಕಾಯ್ದುಕೊಂಡಿದ್ದರಿಂದ ಹೆಚ್ಚಿನ ಕೊಠಡಿಗಳ ಅವಶ್ಯಕತೆ ಬಿದ್ದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪರೀಕ್ಷಾ ಅಕ್ರಮಗಳಿಗೆ ಅವಕಾಶವಾಗದಂತೆ ಎಲ್ಲ ಪರೀಕ್ಷಾ ಕೇಂದ್ರ ಗಳ ಸುತ್ತ 200 ಮೀ. ವ್ಯಾಪ್ತಿಯಲ್ಲಿ 144 ಸೆಕ್ಷನ್ ಜಾರಿಯಲ್ಲಿತ್ತು. ಡಿಡಿಪಿಯು ನರಸಿಂಹ ಮೂರ್ತಿಯ ಅವರು, ರಾಮನಗರ ಮತ್ತು ಚನ್ನಪಟ್ಟಣ ತಾಲೂಕಿನ ಪ್ರತಿ ಪರೀಕ್ಷಾ ಕೇಂದ್ರಗಳಿಗೆ ಭೇಟಿ ಕೊಟ್ಟು ಪರಿಶೀಲನೆ ನಡೆಸಿದರು.
ಆರಂಭದಲ್ಲಿ ಸಾಮಾಜಿಕ ಅಂತರ ಮಾಯ!: ಪ್ರತಿ ಪರೀಕ್ಷೆ ಕೇಂದ್ರದಲ್ಲೂ 700ರಿಂದ 800 ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ವ್ಯವಸ್ಥೆ ಮಾಡಲಾಗಿತ್ತು. ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಕಡ್ಡಾಯ ಎಂದು ಈ ಮೊದಲೆ ತಿಳಿವಳಿಕೆಮೂಡಿಸಿದ್ದರು. ಪರೀಕ್ಷೆ ಬರೆಯುವ ಧಾವಂತದಲ್ಲಿ ವಿದ್ಯಾರ್ಥಿಗಳು ಸಾಮಾಜಿಕ ಅಂತರ ಮರೆತರು. ಇನ್ನೊಂದೆಡೆ ಒಂದೆರೆಡು ಪರೀಕ್ಷಾ ಕೇಂದ್ರ ಹೊರತು ಪಡಿಸಿ ಉಳಿದ ಕೇಂದ್ರಗಳ ಸಿಬ್ಬಂದಿ ಸಹ ಈ ಬಗ್ಗೆ ಅವರಲ್ಲಿ ಎಚ್ಚರಿಕೆ ಮೂಡಿಸಲಿಲ್ಲ. ಬೆಳಿಗ್ಗೆ 9 ಗಂಟೆಗೆ ಬಂದ ವಿದ್ಯಾರ್ಥಿಗಳು ಗುಂಪುಗುಂಪಾಗಿ ಚರ್ಚೆ ನಡೆಸಿದ್ದು, ತಾವು ಪರೀಕ್ಷೆ ಬರೆಯಬೇಕಾದ ಕೊಠಡಿ ಸಂಖ್ಯೆಯನ್ನು ಹುಡುಕುವ ಪ್ರಯತ್ನದಲ್ಲಿ ಸಾಮಾಜಿಕ ಅಂತರ ಮರೆತರು. ಪರೀಕ್ಷೆ ನಂತರವೂ ಈ ನಿಯಮ ಗಾಳಿಗೆ ತೂರಿದರು.