Advertisement

ದ್ವಿತೀಯ ಪಿಯು ಪರೀಕ್ಷೆ: ಉತ್ತರ ಪತ್ರಿಕೆಗಳ ಮರುಮೌಲ್ಯಮಾಪನ ವ್ಯವಸ್ಥೆಯಲ್ಲಿ ಸುಧಾರಣೆ

07:50 PM Feb 09, 2023 | Team Udayavani |

ಬೆಂಗಳೂರು: ದ್ವಿತೀಯ ಪಿಯು ಮುಖ್ಯ ಪರೀಕ್ಷೆಯ ಉತ್ತರ ಪತ್ರಿಕೆ ಮರುಮೌಲ್ಯಮಾಪನ ವ್ಯವಸ್ಥೆಯಲ್ಲಿ ಸುಧಾರಣೆ ತರಲಾಗಿದ್ದು, ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳಿಗೆ ‘ಒಂದು ಅಂಕ’ ಹೆಚ್ಚು ಬಂದರೂ ಪರಿಗಣಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.

Advertisement

2023ರ ಮಾರ್ಚ್‌ನಲ್ಲಿ ನಡೆಯುವ ‘ವಾರ್ಷಿಕ ಪರೀಕ್ಷೆ’ಯಿಂದ ಈ ಹೊಸ ನಿಯಮ ಅನ್ವಯವಾಗಲಿದೆ.

ಹಾಲಿ ಇರುವ ನಿಯಮದ ಪ್ರಕಾರ, ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗೆ ಪತ್ರಿಕೆಯ ಒಟ್ಟು ಅಂಕದ ಶೇ.6ರಷ್ಟು ಅಂಕ ಅಥವಾ ಅದಕ್ಕಿಂತ ಹೆಚ್ಚು ಅಂಕಗಳು ಬಂದಲ್ಲಿ ಮಾತ್ರ ಪರಿಗಣಿಸಲಾಗುತ್ತಿತ್ತು. ಶೇ.6ಕ್ಕಿಂತ ಕಡಿಮೆ ಅಂಕಗಳು ಬಂದಲ್ಲಿ ಪರಿಗಣಿಸುತ್ತಿರಲಿಲ್ಲ.

ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಪ್ರತಿಯೊಂದು ಅಂಕವು ಮುಖ್ಯವಾಗುತ್ತದೆ. ಈ ಹಿನ್ನೆಲೆಯಲ್ಲಿ ‘ಒಂದು ಅಂಕ’ವನ್ನೂ ಪರಿಗಣಿಸುವ ‘ವಿದ್ಯಾರ್ಥಿ ಸ್ನೇಹಿ’ ಕ್ರಮವನ್ನು ರಾಜ್ಯ ಸರ್ಕಾರ ತೆಗೆದುಕೊಂಡಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಹಾಗೂ ಸಕಾಲ ಸಚಿವರು ಹಾಗೂ ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಸಿ. ನಾಗೇಶ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ಸಂಬಂಧ ಶೀಘ್ರದಲ್ಲೇ ‘ಕರ್ನಾಟಕ ಪದವಿಪೂರ್ವ ಶಿಕ್ಷಣ ರಾಜ್ಯ ಮಟ್ಟದ ಪಬ್ಲಿಕ್ ಪರೀಕ್ಷೆ ನಿಯಮಗಳು-1997’ಕ್ಕೆ ತಿದ್ದುಪಡಿ ತರಲು ಕ್ರಮ ವಹಿಸಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

Advertisement

ಇದನ್ನೂ ಓದಿ: ಮಹಿಳೆಯರೇ ಎಚ್ಚರವಹಿಸಿ: ಸೀರೆ ಜೊತೆ ಬೈಕ್ ಚಕ್ರಕ್ಕೆ ಸಿಲುಕಿದ ಮಹಿಳೆಯ ಕಾಲು

Advertisement

Udayavani is now on Telegram. Click here to join our channel and stay updated with the latest news.

Next