ಮುಂಬೈ: ಗುರುವಾರ ನಡೆದ ಮಹಿಳಾ ಪ್ರೀಮಿಯರ್ ಲೀಗ್ ಟಿ20 ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ತಂಡ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 11 ರನ್‌ಗಳಿಂದ ಜಯ ಗಳಿಸಿತು. ಇದು ಗುಜರಾತ್ ಆಡಿದ 6ನೇ ಪಂದ್ಯದಲ್ಲಿ ಲಭಿಸಿದ 2ನೇ ಜಯ. ಗೆಲುವಿನ ಲೆಕ್ಕಾಚಾರದಲ್ಲಿ ಕೂಟದಲ್ಲೇ 2ನೇ ಬಲಿಷ್ಠ ತಂಡವೆನಿಸಿಕೊಂಡಿರುವ ಡೆಲ್ಲಿಗೆ 2ನೇ ಸೋಲು.
ಮೊದಲು ಬ್ಯಾಟ್ ಮಾಡಿದ ಗುಜರಾತ್ ಜೈಂಟ್ಸ್ 20 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು 147 ರನ್ ಗಳಿಸಿತು. ಇದನ್ನು ಬೆನ್ನತ್ತಿದ ಬಲಿಷ್ಠ ಡೆಲ್ಲಿ 18.4 ಓವರ್‌ಗಳಲ್ಲಿ 136 ರನ್‌ಗಳಿಗೆ ಆಲೌಟಾಯಿತು. ಗುಜರಾತ್ ತನ್ನ ಸಾಂ ಕ ಬೌಲಿಂಗ್ ಮೂಲಕ ಡೆಲ್ಲಿಯನ್ನು ನಿಯಂತ್ರಿಸಿತು. ಕಿಮ್ ಗಾರ್ಥ್, ತನುಜಾ ಕನ್ವರ್, ಆಶ್ಲೆ ಗಾರ್ಡನರ್ ತಲಾ 2 ವಿಕೆಟ್ ಪಡೆದರು. ಡೆಲ್ಲಿ ಪರ ಮರಿಜಾನ್ ಕಾಪ್ 36 ರನ್ ಗಳಿಸಿದರು.
ಗುಜರಾತ್ ಉತ್ತಮ ಮೊತ್ತ: ಮೊದಲು ಬ್ಯಾಟ್ ಮಾಡಿದ ಗುಜರಾತ್ ಪರ ಆರಂಭಿಕ ಆಟಗಾರ್ತಿ ಲಾರಾ ವೋಲ್ವಾರ್ಟ್, ಆಶ್ಲೆ ಗಾರ್ಡನರ್ ಅರ್ಧಶತಕ ಸಿಡಿಸಿದರು. ವೋಲ್ವಾರ್ಟ್ 45 ಎಸೆತಗಳಲ್ಲಿ 6 ಬೌಂಡರಿ, 1 ಸಿಕ್ಸರ್ ನೆರವಿನಿಂದ 57 ರನ್ ಚಚ್ಚಿದರು. ಇವರಿಗಿಂತ ಆಶ್ಲೆ ಗಾರ್ಡನರ್ ವೇಗವಾಗಿ ಆಡಿದರು. ಇವರು ಕೇವಲ 33 ಎಸೆತಗಳಲ್ಲಿ 9 ಬೌಂಡರಿಗಳ ನೆರವಿನಿಂದ 51 ರನ್ ಚಚ್ಚಿದರು. ಇವರಿಬ್ಬರೂ ಅಗತ್ಯವಾಗಿದ್ದ ಸಂದರ್ಭದಲ್ಲಿ ಸಿಡಿದಿದ್ದರಿಂದ ತಂಡದ ಮೊತ್ತ 150ರ ಸನಿಹಕ್ಕೆ ತಲುಪಿತು. ಇನ್ನು ಹರ್ಲೀನ್ ದೇವಲ್ 31 ರನ್ ಬಾರಿಸಿದರು. ಅದಕ್ಕಾಗಿ 33 ಎಸೆತಗಳನ್ನು ಬಳಸಿಕೊಂಡು ಬಹಳ ನಿಧಾನಿಯೆನಿಸಿದರು. ಡೆಲ್ಲಿ ಪರ ಜೆಸ್ ಜೊನಾಸೆನ್ 38 ರನ್ ನೀಡಿ 2 ವಿಕೆಟ್ ಪಡೆದರು. ಮರಿಜಾನ್ ಕಾಪ್, ಅರುಂಧತಿ ರೆಡ್ಡಿ ತಲಾ 1 ವಿಕೆಟ್‌ಗಳನ್ನು ಪಡೆದರು.
ಸಂಕ್ಷಿಪ್ತ ಸ್ಕೋರ್: ಗುಜರಾತ್ ಜೈಂಟ್ಸ್ 20 ಓವರ್, 147/4 (ಲಾರಾ ವೋಲ್ವಾರ್ಟ್ 57, ಆಶ್ಲೆ ಗಾರ್ಡನರ್ 51, ಜೆಸ್ ಜೊನಾಸೆನ್ 38ಕ್ಕೆ 2). ಡೆಲ್ಲಿ 18.4 ಓವರ್, 136 (ಮರಿಜಾನ್ ಕಾಪ್ 36, ಗಾರ್ಥ್ 18ಕ್ಕೆ 2, ಗಾರ್ಡನರ್ 19ಕ್ಕೆ 2).