Advertisement
ಕೊರೊನಾ ವಯಸ್ಸಾದವರಲ್ಲಿ ಹೆಚ್ಚಾಗಿರುತ್ತದೆ ಹಾಗೂ ಬೇರೆ ಕಾಯಿಲೆಗಳು ಇದ್ದವರು ಮತ್ತು ವಯಸ್ಸಾದವರು ಮಾತ್ರ ಸಾವಿಗೀಡಾಗುತ್ತಾರೆ ಎಂಬ ಭಾವನೆ ಜನರಲ್ಲಿದೆ. ಅದಕ್ಕೆ ವಿರುದ್ಧವಾದ ವಿದ್ಯಮಾನ ಈಗ ಕಂಡು ಬರುತ್ತದೆ. ಎರಡನೇ ಅಲೆಗೆ ಹೆಚ್ಚು 20ರಿಂದ 40 ವರ್ಷದ ಯುವಜನರೇ ಹೆಚ್ಚಾಗಿ ಬಲಿಯಾಗುತ್ತಿದ್ದಾರೆ. ಅಲ್ಲದೆ, ಯಾವುದೇ ಆನಾರೋಗ್ಯ ಇಲ್ಲದಿದ್ದವರೂ ತೀವ್ರ ಉಸಿರಾಟ ಸಮಸ್ಯೆ ಕಾಣಿಸಿಕೊಂಡು ಸಾವಿಗೀಡಾಗುತ್ತಿದ್ದಾರೆ ಎನ್ನುತ್ತಾರೆ ವೈದ್ಯರು.
ಕೊರೊನಾ ವಾರ್ ರೂಂ ಅಂಕಿಅಂಶ ಪ್ರಕಾರ, ಮೊದಲ ಅಲೆಗೆ ಹೋಲಿಸದರೆ ಎರಡನೇ ಅಲೆಯು ಯುವಜನತೆಯನ್ನೇ ಹೆಚ್ಚು ಕಾಡುತ್ತಿದೆ. ಮೊದಲ ಅಲೆಯಲ್ಲಿ 20ರಿಂದ 40 ವರ್ಷದ ಯುವಜನತೆ ಶೇ. 40ಕ್ಕಿಂತ ಕಡಿಮೆ ಇದ್ದರು. ಈಗ ಅದು ಶೇ. 50ಕ್ಕೆ ಹೆಚ್ಚಳವಾಗಿದೆ. ಮೊದಲ ಅಲೆಯ ಸಾವಿನಲ್ಲಿ ಯುವಜನತೆ ಪಾಲು ಶೇ. 5ರಷ್ಟಿತ್ತು. ಈ ಬಾರಿ ಶೇ.6ಕ್ಕೆ ಹೆಚ್ಚಳವಾಗಿದೆ. ಕಳೆದ ಒಂದು ವಾರದಲ್ಲಿ ಶೇ. 8ರಷ್ಟು ವರದಿಯಾಗುತ್ತಿದೆ.
Related Articles
ಯುವ ಜನತೆ ಮನೆಯಿಂದ ಹೊರಗಿದ್ದು ಹೆಚ್ಚು ಚಟುವಟಿಕೆ ಗಳಲ್ಲಿರುತ್ತಾರೆ. ಹೀಗಾಗಿ ಬೇಗ ಸೋಂಕು ತಗಲುತ್ತದೆ. ಮೊದಲ ಅಲೆಯಲ್ಲಿ 3 ತಿಂಗಳು ಲಾಕ್‌ಡೌನ್ ಇತ್ತು. ಅಲ್ಲದೆ, ಸೋಂಕಿನ ಭಯವೂ ಹೆಚ್ಚಿತ್ತು. ಈಗಲೂ ವರ್ಕ್ ಫ್ರಂ ಹೋಂ ಮಾಡುವುದರಿಂದ ಸೋಂಕನ್ನು ನಿಯಂತ್ರಿಸಬಹುದು ಎನ್ನುತ್ತಾರೆ ಮಣಿಪಾಲ್ ಆಸ್ಪತ್ರೆಗಳ ಅಧ್ಯಕ್ಷ ಡಾ| ಸುದರ್ಶನ್ ಬಲ್ಲಾಳ್.
Advertisement
ನಿರ್ಲಕ್ಷ್ಯವೇ ಕಾರಣಸಾವಿಗೀಡಾದ 63 ಯುವಜನತೆಯಲ್ಲಿ 50 ಮಂದಿಗೆ ಯಾವುದೇ ಅನಾರೋಗ್ಯದ ಹಿನ್ನೆಲೆ ಇಲ್ಲ. ಅವರು ತಡವಾಗಿ ಆಸ್ಪತ್ರೆಗೆ ಆಗಮಿಸುತ್ತಿರುವುದೇ ಕಾರಣ ಎಂದು ವೈದ್ಯರು ಹೇಳುತ್ತಿದ್ದಾರೆ. ಸೋಂಕಿನ ಲಕ್ಷಣ ಕಾಣಿಸಿಕೊಂಡಾಗ ಪರೀಕ್ಷೆ ಮಾಡಿಸಿಕೊಳ್ಳದೆ ಮನೆ ಮದ್ದು ಸೇವಿಸುತ್ತಾರೆ. ಕಡಿಮೆಯಾಗದಿದ್ದರೆ ಔಷಧಾಲಯಲಗಳ (ಮೆಡಿಕಲ್ ಶಾಪ್) ಮೊರೆ ಹೋಗುತ್ತಾರೆ. ಆಗಲೂ ಕಡಿಮೆಯಾಗದಿದ್ದರೆ ಮಾತ್ರ ಆಸ್ಪತ್ರೆಗಳಿಗೆ ಬರುತ್ತಾರೆ. ಅಷ್ಟರಲ್ಲಿ ಕೆಮ್ಮು, ಜ್ವರ ತೀವ್ರಗೊಂಡಿರುತ್ತದೆ. ಅದರಲ್ಲೂ ಕೆಮ್ಮಿನಿಂದ ಶ್ವಾಸಕೋಶ ಸಾಕಷ್ಟು ಹಾನಿಯಾಗಿರುತ್ತದೆ. ಹೀಗಾಗಿ, ಉಸಿರಾಟ ಸಮಸ್ಯೆಯಿಂದ ಸಾವಿಗೀಡಾಗುತ್ತಾರೆ ಎನ್ನುತ್ತಾರೆ ರಾಜೀವ್ ಗಾಂಧಿ ಎದೆರೋಗಗಳ ಆಸ್ಪತ್ರೆ ನಿರ್ದೇಶಕ ಡಾ| ಸಿ. ನಾಗರಾಜ್. ಯುವಕರಿಗೆ ತಜ್ಞರ ಸಲಹೆಗಳು
– ವರ್ಕ್‌ಫ್ರಂ ಹೋಂಗೆ ಆದ್ಯತೆ ಇರಲಿ. ಸೋಂಕನ್ನು ಇನ್ನೊಬ್ಬರಿಂದ ಮುಚ್ಚಿಡಬೇಡಿ. ಜನರಿಂದ ದೂರವಿರಿ.
– ಹೆಚ್ಚು ಓಡಾಡುವ ನಿಮ್ಮಿಂದ ನಿಮ್ಮ ಕುಟುಂಬಸ್ಥರು/ ಸ್ನೇಹಿತರಿಗೆ ಹರಡುತ್ತದೆ. ಆದ್ದರಿಂದ ನಿಮ್ಮೊಂದಿಗೆ ನಿಮ್ಮವರನ್ನೂ ಕಾಪಾಡಿಕೊಳ್ಳಿ.
– ಕೊರೊನಾ ಸೋಂಕು ಎಂದಾದರೆ ಆಸ್ಪತ್ರೆ, ಹೋಂ ಐಸೊಲೇಷನ್ ಆಗಬೇಕು ಎಂದು ಭಾವಿಸಿ ನಿರ್ಲಕ್ಷ್ಯ ಮಾಡಬೇಡಿ.
– ಸೋಂಕಿನ ಲಕ್ಷಣ ನಿರ್ಲಕ್ಷ್ಯ ಬೇಡ, ಕೆಮ್ಮು ಹೆಚ್ಚಿದ್ದರೆ ಹಾಗೂ ಸ್ಯಾಚುರೇಷನ್ ಪ್ರಮಾಣ ಶೇ. 90ಕ್ಕೂ ಕಡಿಮೆ ಇದ್ದರೆ ಆಸ್ಪತ್ರೆಗೆ ದಾಖಲಾಗಬೇಕು.
– ವ್ಯಾಯಾಮ, ರೋಗನಿರೋಧಕ ಶಕ್ತಿ ಹೆಚ್ಚಿಸುವ ಆಹಾರಕ್ರಮ ಪಾಲಿಸಿ. – ಜಯಪ್ರಕಾಶ್ ಬಿರಾದಾರ್