ಬೆಂಗಳೂರು: “ಮುಖ್ಯಮಂತ್ರಿ ಕೊಟ್ಟ ಭರವಸೆ ಉಳಿಸಿ ಕೊಳ್ಳುತ್ತಾರೆ’ ಎಂಬ ಆಗ್ರಹಗಳ ನಡುವೆಯೇ ಸಂಪುಟ ವಿಸ್ತರಣೆಗಾಗಿ ಪಕ್ಷದ ವರಿಷ್ಠರ ಹಸಿರು ನಿಶಾನೆ ಪಡೆಯಲು ಸಿಎಂ ಯಡಿಯೂರಪ್ಪ ಹರಸಾಹಸ ಪಡುತ್ತಿದ್ದಾರೆ. ಸಂಪುಟ ವಿಸ್ತರಣೆ ಸಂಬಂಧ ಪಟ್ಟಿಯೊಂದಿಗೆ ದಿಲ್ಲಿಗೆ ತೆರಳಿರುವ ಮುಖ್ಯಮಂತ್ರಿ, ಗುರುವಾರ ರಾತ್ರಿ ಪಕ್ಷದ ರಾಷ್ಟ್ರೀಯ ನಾಯಕರಾದ ಜೆ.ಪಿ. ನಡ್ಡಾ ಮತ್ತು ಅಮಿತ್ ಶಾ ಜತೆ ಮಾತುಕತೆ ನಡೆಸಿದರು. ಆದರೆ ಅದು ಪೂರ್ಣಗೊಂಡಿಲ್ಲ. ಶುಕ್ರವಾರ ಮಧ್ಯಾಹ್ನ ಮತ್ತೆ ಮಾತುಕತೆ ನಡೆಯಲಿದೆ. ವರಿಷ್ಠರ ಒಪ್ಪಿಗೆ ದೊರೆತರೆ ರವಿವಾರ ಸಂಪುಟ ವಿಸ್ತರಣೆ ಮಾಡಲಾಗುವುದು ಎಂದು ತಮ್ಮ ಆಪ್ತರಿಗೆ ತಿಳಿಸಿದ್ದಾರೆ. ಇನ್ನೊಂದೆಡೆ, ಸಚಿವಾಕಾಂಕ್ಷಿಗಳ ಒತ್ತಡ ಹೆಚ್ಚುತ್ತಲೇ ಇದೆ. ಒಂದೆಡೆ ಉಪಚುನಾವಣೆಯಲ್ಲಿ ಸೋತಿರುವ ಎಚ್. ವಿಶ್ವನಾಥ್ ಹಾಗೂ ಎಂಟಿಬಿ ನಾಗರಾಜ್ ಅವರು, ಸಿಎಂ ಕೊಟ್ಟ ಮಾತನ್ನು ಉಳಿಸಿ ಕೊಳ್ಳು ತ್ತಾರೆ ಎಂಬ ಭರವಸೆ ಇದೆ ಎಂದು ಹೇಳಿದರೆ, ಚಾಮರಾಜನಗರ ಸಂಸದ ಶ್ರೀನಿವಾಸ ಪ್ರಸಾದ್ ಅವರೂ ಇದೇ ಧಾಟಿಯಲ್ಲಿ ಮಾತನಾಡಿದ್ದಾರೆ.
ಬೆಂಗಳೂರು ಜಂಜಾಟ
ಬೆಂಗಳೂರಿನಿಂದ ಅರ ವಿಂದ ಲಿಂಬಾವಳಿ ಸಂಪುಟಕ್ಕೆ ಸೇರಲು ಕೇಂದ್ರದ ನಾಯಕರು ಆರ್‌ಎಸ್‌ಎಸ್ ನಾಯಕರ ಮೂಲಕ ಒತ್ತಡ ಹೇರುತ್ತಿದ್ದಾರೆ. ಆದರೆ ಉಪ ಚುನಾವಣೆಯಲ್ಲಿ ಗೆಲುವು ಸಾಧಿಸಿರುವ ಎಸ್.ಟಿ. ಸೋಮಶೇಖರ್, ಬೈರತಿ ಬಸವ ರಾಜ್, ಗೋಪಾಲಯ್ಯ ಅವರಿಗೆ ಸಂಪುಟದಲ್ಲಿ ಅವಕಾಶ ಕೊಡಬೇಕಿದೆ. ಈಗಾಗಲೇ ಬೆಂಗಳೂರಿನಿಂದ ಮೂವರು ಸಚಿವರು ಇದ್ದು ಈ ಸಂಖ್ಯೆ 6ಕ್ಕೆ ತಲುಪುತ್ತದೆ.
ರಾಜರಾಜೇಶ್ವರಿ ನಗರ ಉಪ ಚುನಾವಣೆ ಬಾಕಿ ಇದ್ದು ಅಲ್ಲಿ ಮುನಿರತ್ನ ಗೆಲುವು ಸಾಧಿಸಿದರೆ ಅವರಿಗೂ ಸಂಪುಟದಲ್ಲಿ ಅವಕಾಶ ಕೊಡಬೇಕಾಗುತ್ತದೆ. ಅರವಿಂದ ಲಿಂಬಾವಳಿಗೂ ಕೊಟ್ಟರೆ 8 ಮಂದಿ ಸಚಿವರಾಗುತ್ತಾರೆ. ಹೀಗಾಗಿ ಇದು ತಲೆನೋವಾಗಿ ಪರಿಣಮಿಸಿದೆ. ಅರವಿಂದ ಲಿಂಬಾವಳಿಗೆ ಅವಕಾಶ ಕೊಡಬೇಕಾದರೆ ಹಾಲಿ ಇರುವ ಸಚಿವರನ್ನು ತೆಗೆಯಬೇಕಾಗಬಹುದು.