Advertisement
ಪಿಯುಸಿ ವಿಜ್ಞಾನ ವಿಭಾಗದಲ್ಲಿ ಪ್ರಾಯೋಗಿಕ ತರಗತಿಗಳು ಅತೀ ಮುಖ್ಯ. ಥಿಯರಿಯ ಜತೆಗೆ ಪ್ರಾಯೋಗಿಕವಾಗಿ ವಿಜ್ಞಾನವನ್ನು ಓದಿದರಷ್ಟೇ ಸರಿಯಾಗಿ ಅರ್ಥೈಸಿಕೊಳ್ಳಲು ಸಾಧ್ಯ. ಈಗಾಗಲೇ ನಡೆದಿರುವ ದ್ವಿತೀಯ ಪಿಯುಸಿ ಪ್ರಾಯೋಗಿಕ ಪರೀಕ್ಷೆಯನ್ನು ವಿವಿಧ ಕಾರಣಕ್ಕೆ ಬರೆಯದ ವಿದ್ಯಾರ್ಥಿಗಳು ತಮಗೆ ಲಭ್ಯವಿರುವ ಕಾಲಾವಕಾಶದಲ್ಲಿ ಥಿಯರಿಗೆ ಹೆಚ್ಚಿನ ಆದ್ಯತೆ ನೀಡಿ ಓದಿ ಪರೀಕ್ಷೆ ಬರೆದು ಪಾಸಾಗಲು ಮುಕ್ತ ಅವಕಾಶವಿದೆ.
Related Articles
Advertisement
ಥಿಯರಿಯನ್ನು ಚೆನ್ನಾಗಿ ಬರೆದು 70ಕ್ಕೆ 70 ಅಂಕ ಪಡೆದರೆ ನೂರಕ್ಕೆ ನೂರು ಅಂಕ ಪಡೆಯಬಹುದು. ಥಿಯರಿಯಲ್ಲಿ ಕನಿಷ್ಠ 21 ಅಂಕ ಪಡೆಯದ ವಿದ್ಯಾರ್ಥಿಗಳು ಅನುತ್ತೀರ್ಣರಾಗುತ್ತಾರೆ.
ಏನಿದು 30 ಅಥವಾ 35? :
ವಿಜ್ಞಾನದ ಪ್ರಮುಖ ನಾಲ್ಕು ವಿಷಯದಲ್ಲಿ ಒಟ್ಟಾರೆ ವಿದ್ಯಾರ್ಥಿ ಗಳಿಸುವ ಕನಿಷ್ಠ ಅಂಕ 140ಕ್ಕಿಂತ ಹೆಚ್ಚಿರಬೇಕು. ಉದಾಹರಣೆಗೆ, ಭೌತಶಾಸ್ತ್ರದಲ್ಲಿ 40, ರಸಾಯನಶಾಸ್ತ್ರದಲ್ಲಿ 40, ಜೀವಶಾಸ್ತ್ರದಲ್ಲಿ 35 ಅಂಕ ಪಡೆದಿರುವ ವಿದ್ಯಾರ್ಥಿ ಗಣಿತದಲ್ಲಿ 30 ಅಂಕ ಪಡೆದರೂ ಉತ್ತೀರ್ಣನಾಗಬಹುದು. ಆದರೆ ಇದರಲ್ಲಿ ಎರಡು ವಿಷಯಗಳಲ್ಲಿ ಒಟ್ಟು 30ಕ್ಕಿಂತ ಕಡಿಮೆ ಅಂಕ ಪಡೆಯುವಂತಿಲ್ಲ. ಪಡೆದರೆ ಅನುತ್ತೀರ್ಣರಾಗುತ್ತಾರೆ ಎಂದು ಪಿಯುಸಿ ವಿಜ್ಞಾನ ವಿಷಯ ತಜ್ಞರಾದ ಗೋಪಾಲಕೃಷ್ಣ ಗೋರೆ ಮಾಹಿತಿ ನೀಡಿದ್ದಾರೆ.
ಹಾಜರಾತಿ ವಿನಾಯಿತಿ :
ಕೊರೊನಾಕ್ಕೆ ಮುನ್ನ ವಾರ್ಷಿಕ ಪರೀಕ್ಷೆ ಬರೆಯುವ ಪ್ರತೀ ವಿದ್ಯಾರ್ಥಿಗೂ ಹಾಜರಾತಿ ಕಡ್ಡಾಯ ಇತ್ತು. ಕೊರೊನಾ ಬಂದ ಅನಂತರ ತರಗತಿ ಹಾಜರಾತಿ ಕಡ್ಡಾಯ ಎಂಬ ನಿಯಮ ಸಡಿಲಿಸಲಾಗಿದೆ. ಶೈಕ್ಷಣಿಕ ತರಗತಿ ಆರಂಭವೇ ವಿಳಂಬವಾದದ್ದರಿಂದ ಈ ವರ್ಷವೂ ಹಾಜರಾತಿ ವಿನಾಯಿತಿಯನ್ನು ಮುಂದುವರಿಸಲಾಗಿದೆ. ಹಾಜರಾತಿ ಕಡಿಮೆ ಇದೆ ಎಂದು ವಿದ್ಯಾರ್ಥಿಗಳು ಪರೀಕ್ಷೆಯಿಂದ ಹೊರಗೆ ಉಳಿಯಬಾರದು ಎಂಬ ಕಾರಣಕ್ಕೆ ವಿನಾಯಿತಿ ನೀಡಲಾಗಿದೆ ಎಂದು ಪದವಿಪೂರ್ವ ಶಿಕ್ಷಣ ಇಲಾಖೆಯ ಪರೀಕ್ಷೆ ವಿಭಾಗದ ಉಪನಿರ್ದೇಶಕಿ ಶೈಲಜಾ ಸಿ.ಎಲ್. ಮಾಹಿತಿ ನೀಡಿದ್ದಾರೆ.
ಪ್ರಾಯೋಗಿಕ ಪರೀಕ್ಷೆ ಬರೆಯದೆ ಇರುವ ವಿದ್ಯಾರ್ಥಿಗಳು ಥಿಯರಿ ಪರೀಕ್ಷೆ ಬರೆದು ಉತ್ತೀರ್ಣರಾಗಬಹುದು. ವಿವಿಧ ಕಾರಣಕ್ಕೆ ಪ್ರಾಯೋಗಿಕ ಪರೀಕ್ಷೆ ಬರೆಯದವರು ಥಿಯರಿಯನ್ನು ಚೆನ್ನಾಗಿ ಬರೆದು ಶಿಕ್ಷಣ ಮುಂದುವರಿಸಲು ಅವಕಾಶವಿದೆ.-ಮಾರುತಿ, ಡಿಡಿಪಿಯು, ಉಡುಪಿ
- ರಾಜು ಖಾರ್ವಿ ಕೊಡೇರಿ