Advertisement

ಜಿಲ್ಲೆಯ ಏಳು ವಿದ್ಯಾರ್ಥಿಗಳಿಗೆ ಟಾಪ್‌ ಟೆನ್‌ನಲ್ಲಿ ಸ್ಥಾನ

09:56 PM Apr 15, 2019 | Team Udayavani |

ಮಹಾನಗರ: ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶದಲ್ಲಿ ಕಳೆದ ವರ್ಷ ರಾಜ್ಯದಲ್ಲಿ ಪ್ರಥಮ ಸ್ಥಾನದಲ್ಲಿದ್ದ ದಕ್ಷಿಣ ಕನ್ನಡ ಜಿಲ್ಲೆ ಈ ಬಾರಿ ಶೇ. 90.91 ಫಲಿತಾಂಶದೊಂದಿಗೆ ದ್ವಿತೀಯ ಸ್ಥಾನಕ್ಕೆ ಕುಸಿದಿದೆ. ಶೇಕಡಾವಾರು ಪ್ರಮಾಣದಲ್ಲಿಯೂ ಕಳೆದ ವರ್ಷಕ್ಕಿಂತ (ಶೇ. 91.49 ) ಈ ಬಾರಿ ಇಳಿಕೆಯಾಗಿದೆ.

Advertisement

ವಾಣಿಜ್ಯ ವಿಭಾಗದಲ್ಲಿ ಮೊದಲ ಮೂರು ಸ್ಥಾನಗಳು ದ.ಕ. ಜಿಲ್ಲೆಯ ಪಾಲಾಗಿದ್ದು, ಮೂಡುಬಿದಿರೆ ಆಳ್ವಾಸ್‌ ಪ.ಪೂ. ಕಾಲೇಜಿನ ವಿದ್ಯಾರ್ಥಿನಿ ಓಲ್ವಿಟಾ ಅನ್ಸಿಲ್ಲಾ ಡಿ’ಸೋಜಾ, ಅಳಿಕೆ ಸತ್ಯಸಾಯಿ ಲೋಕಸೇವಾ ಪ.ಪೂ. ಕಾಲೇಜಿನ ಶ್ರೀಕೃಷ್ಣ ಶರ್ಮ ಕೆ. 596 ಅಂಕ ಗಳಿಸಿ ರಾಜ್ಯಕ್ಕೇ ಪ್ರಥಮ ಸ್ಥಾನ ಪಡೆದರೆ, ಕೊಡಿಯಾಲಬೈಲ್‌ ಕೆನರಾ ಪ.ಪೂ. ಕಾಲೇಜು ವಿದ್ಯಾರ್ಥಿನಿ ಶ್ರೀಯಾ ಶೆಣೈ 595 ಅಂಕ ಗಳಿಸಿ ರಾಜ್ಯಕ್ಕೆ ಎರಡನೇ ಸ್ಥಾನ ಗಳಿಸಿದ್ದಾರೆ. ಪುತ್ತೂರು ಸೈಂಟ್‌ ಫಿಲೋಮಿನ ಪ.ಪೂ. ಕಾಲೇಜಿನ ಸ್ವಸ್ತಿಕ್‌ ಪಿ. 594 ಅಂಕ ಗಳಿಸಿದ್ದಾರೆ.

ವಿಜ್ಞಾನ ವಿಭಾಗದಲ್ಲಿ ಪುತ್ತೂರು ವಿವೇಕಾನಂದ ಕಾಲೇಜಿನ ಜಾಗೃತಿ ಕೆ. ನಾಯಕ್‌ 592 ಅಂಕಗಳೊಂದಿಗೆ ರಾಜ್ಯಕ್ಕೆ ಮೂರನೇ ಸ್ಥಾನ ಪಡೆದರೆ, ಕೊಡಿಯಾಲಬೈಲ್‌ ಶಾರದಾ ವಿದ್ಯಾಲಯದ ವಿದ್ಯಾರ್ಥಿಗಳಾದ ಪ್ರಥಮ್‌ ಎನ್‌. ಮತ್ತು ಶಮಿತಾಕುಮಾರಿ ಎಸ್‌. 591 ಅಂಕಗಳೊಂದಿಗೆ ರಾಜ್ಯಕ್ಕೆ ನಾಲ್ಕನೇ ಸ್ಥಾನ ಗಳಿಸಿದ್ದಾರೆ.

ಶೇಕಡಾವಾರು
ಫಲಿತಾಂಶದಲ್ಲಿ ಇಳಿಕೆ
ದ.ಕ. ಜಿಲ್ಲೆಯಲ್ಲಿ ಈ ಶೈಕ್ಷಣಿಕ ಸಾಲಿನಲ್ಲಿ ಒಟ್ಟು 19,153 ಮಂದಿ ವಿದ್ಯಾರ್ಥಿಗಳು ಮತ್ತು 18,916 ವಿದ್ಯಾರ್ಥಿನಿಯರು ಸೇರಿ ಒಟ್ಟು 38,069 ಮಂದಿ ಪರೀಕ್ಷೆ ಬರೆದಿದ್ದು, 33,088 ಮಂದಿ ಉತ್ತೀರ್ಣರಾಗಿದ್ದಾರೆ. ಈ ಪೈಕಿ 34,650 ಮಂದಿ ಮೊದಲ ಬಾರಿ ಪರೀಕ್ಷೆ ಬರೆದವರು ಹಾಗೂ 2,334 ಮಂದಿ ಖಾಸಗಿ, 1085 ಮಂದಿ ಪುನರಾವರ್ತಿತ ಅಭ್ಯರ್ಥಿಗಳಾಗಿದ್ದಾರೆ. ಉತ್ತೀರ್ಣರಾದ ಒಟ್ಟು ವಿದ್ಯಾರ್ಥಿಗಳ ಪೈಕಿ 27,750 ಮಂದಿ ವಿದ್ಯಾರ್ಥಿಗಳು ಆಂಗ್ಲ ಮಾಧ್ಯಮದವರಾದರೆ, 5,338 ಮಂದಿ ಕನ್ನಡ ಮಾಧ್ಯಮ ವಿದ್ಯಾರ್ಥಿಗಳು. 2017ರಲ್ಲಿ ಜಿಲ್ಲೆಯ ಪಿಯುಸಿ ಫಲಿತಾಂಶ ಶೇ. 89.92 ಆಗಿದ್ದರೆ, 2018ರಲ್ಲಿ ಶೇ. 91.49 ಫಲಿತಾಂಶ ಪಡೆದಿತ್ತು. ಆದರೆ ಈ ಬಾರಿ ಶೇ. 90.91 ಫಲಿತಾಂಶ ಜಿಲ್ಲೆಗೆ ಬಂದಿದ್ದು, ಶೇಖಡಾವಾರು ಫಲಿತಾಂಶದಲ್ಲಿ ಇಳಿಕೆಯಾಗಿದೆ.

ನಗರ/ಗ್ರಾಮಾಂತರ
ನಗರ ಪ್ರದೇಶದ 25,408 ಮಂದಿ ವಿದ್ಯಾರ್ಥಿಗಳು ಪರೀಕ್ಷೆಗೆ ಕುಳಿತಿದ್ದು, 22,736 ಮಂದಿ ಪಾಸಾಗಿ ಶೇ. 89.48 ಫಲಿತಾಂಶ ಬಂದಿದೆ. ಗ್ರಾಮಾಂತರ ಪ್ರದೇಶದ 12,661 ಮಂದಿಯ ಪೈಕಿ 10,352 ಮಂದಿ ಉತ್ತೀರ್ಣರಾಗಿ ಶೇ. 81.76 ಫಲಿತಾಂಶ ಬಂದಿದೆ.

Advertisement

ಹುಡುಗಿಯರೇ ಮೇಲುಗೈ
ಫಲಿತಾಂಶದಲ್ಲಿ ಪ್ರತಿ ವರ್ಷದಂತೆ ಈ ಬಾರಿಯೂ ಹುಡುಗಿಯರೇ ಮೇಲುಗೈ ಸಾಧಿಸಿದ್ದಾರೆ. ಪರೀಕ್ಷೆ ಬರೆದ 18,916 ಮಂದಿ ವಿದ್ಯಾರ್ಥಿನಿಯರ ಪೈಕಿ 17,140 ಮಂದಿ ಉತ್ತೀರ್ಣರಾಗಿದ್ದಾರೆ. 19,153 ಮಂದಿ ಹುಡುಗರು ಹಾಜರಾಗಿದ್ದು, 15,948 ಮಂದಿ ಪಾಸಾಗಿದ್ದಾರೆ.

ವಿಭಾಗವಾರು ಫಲಿತಾಂಶ
ಕಲಾ ವಿಭಾಗದಲ್ಲಿ ಪರೀಕ್ಷೆಗೆ ಹಾಜರಾದ 4,831 ವಿದ್ಯಾರ್ಥಿಗಳ ಪೈಕಿ 3,762 ಮಂದಿ ಉತ್ತೀರ್ಣರಾಗಿ ಶೇ. 77.87 ಫಲಿತಾಂಶ ದಾಖಲಾಗಿದೆ. ವಾಣಿಜ್ಯ ವಿಭಾಗದಲ್ಲಿ 16,526 ಮಂದಿ ಪರೀಕ್ಷೆ ಬರೆದಿದ್ದು, ಅವರಲ್ಲಿ 14,347 ಮಂದಿ ಉತ್ತೀರ್ಣರಾಗಿ ಶೇ. 86.81 ಫಲಿತಾಂಶ ಬಂದಿದೆ. ವಿಜ್ಞಾನ ವಿಭಾಗದಲ್ಲಿ 16,712 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 14,979 ಮಂದಿ ತೇರ್ಗಡೆ ಹೊಂದಿ ಶೇ. 89.63 ಫಲಿತಾಂಶ ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next