ಬೀದರ: ಕೋವಿಡ್ ಸಂಕಷ್ಟದ ನಡುವೆಯೂ ನಿರಂತರ ಅಧ್ಯಯನ, ಕಠಿಣ ಪರಿಶ್ರಮದ ಮೂಲಕ ವ್ಯಾಪಾರಿಯ ಪುತ್ರಿ ದ್ವಿತೀಯ ಪಿಯುಸಿಯಲ್ಲಿ ಶೇ.98.05ರಷ್ಟು ಅಂಕ ಗಳಿಸಿ ಜಿಲ್ಲೆಗೆ ಟಾಪರ್ ಆಗುವ ಮೂಲಕ ಅಮೋಘ ಸಾಧನೆ ಮಾಡಿದ್ದಾಳೆ. ಇದರೊಂದಿಗೆ ನೀಟ್‌ನಲ್ಲಿ ಉತ್ತಮ ರ್‍ಯಾಂಕ್ ಪಡೆದು ವೈದ್ಯಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸುವ ಕನಸಿಗೆ ರೆಕ್ಕೆ ಕಟ್ಟಿದ್ದಾಳೆ.
ಭಾಲ್ಕಿ ತಾಲೂಕಿನ ಕರಡ್ಯಾಳ್ ಚನ್ನಬಸವೇಶ್ವರ ಗುರುಕುಲದ ವಿದ್ಯಾರ್ಥಿನಿ ಸೃಷ್ಠಿ ಪ್ರಕಾಶ ಮಾಶೆಟ್ಟಿ ಸಾಧನೆ ಮಾಡಿದ ಪ್ರತಿಭಾನ್ವಿತೆ. ಎಸ್‌ಎಸ್ ಎಲ್‌ಸಿಯಲ್ಲಿಯೂ ಶೇ.98.6ರಷ್ಟು ಅಂಕ (ಭಾಲ್ಕಿ ಸತ್ಯಸಾಯಿ ಪಬ್ಲಿಕ್ ಸ್ಕೂಲ್) ಪಡೆದು ಉತ್ತಮ ಸ್ಥಾನ ಪಡೆದಿದ್ದ ಸೃಷ್ಠಿ ಈಗ ದ್ವಿತೀಯ ಪಿಯುಸಿಯಲ್ಲಿ 600ಕ್ಕೆ 591 ಅಂಕ ಗಳಿಸಿದ್ದಾಳೆ. ಭೌತಶಾಸ್ತ್ರ, ರಸಾಯನಶಾಸ್ತ್ರ, ಜೀವಶಾಸ್ತ್ರ ಮತ್ತು ಗಣಿತ ವಿಷಯಗಳಲ್ಲಿ 100ಕ್ಕೆ 100 ಅಂಕ, ಹಿಂದಿ 97 ಮತ್ತು ಇಂಗ್ಲಿಷ್‌ನಲ್ಲಿ 94 ಅಂಕ ಗಳಿಸಿದ್ದಾಳೆ.
ಭಾಲ್ಕಿ ಪಟ್ಟಣದ ನಿವಾಸಿಯಾಗಿರುವ ಸೃಷ್ಠಿ ತಂದೆ ಪ್ರಕಾಶ ವ್ಯಾಪಾರಿಯಾಗಿದ್ದರೆ, ತಾಯಿ ಗೃಹಿಣಿಯಾಗಿ ಮಕ್ಕಳ ಪಾಲನೆ ಮಾಡುತ್ತಿದ್ದಾರೆ. ಮೂವರು ಹೆಣ್ಣು ಮಕ್ಕಳು ಪ್ರತಿಭಾನ್ವಿತರಾಗಿದ್ದು, ಅಗ್ರ ಶ್ರೇಣಿಯಲ್ಲಿ ಸಾಧನೆ ಮಾಡಿದ್ದಾರೆ. ಹಿರಿಯ ಮಗಳು ಬಿಎಂಸಿ ಮುಗಿಸಿದ್ದರೆ, ಎರಡನೇ ಮಗಳು ಎಂಎಸ್‌ಸಿ ಓದುತ್ತಿದ್ದಾಳೆ. ಈಗ ಕಿರಿಯ ಪುತ್ರಿ ಜಿಲ್ಲೆಯಲ್ಲಿ ಅತಿ ಹೆಚ್ಚು ಅಂಕ ಪಡೆದಿರುವುದು ಪಾಲಕರಲ್ಲಿ ಸಂತಸ ಮೂಡಿಸಿದೆ.
ಕೋವಿಡ್ ಸೋಂಕಿನ ಆಂತಕದ ನಡುವೆಯೂ ಸೃಷ್ಠಿ ಮಾಶೆಟ್ಟಿ, ಓದುನತ್ತ ಹೆಚ್ಚು ಗಮನ ಹರಿಸಿದ್ದಳು. ವಸತಿ ನಿಲಯದಲ್ಲೇ ಉಳಿದುಕೊಂಡು, ಪ್ರಾಧ್ಯಾಪಕರೊಂದಿಗೆ ಪಾಠದಲ್ಲಿ ತೊಂದರೆಗಳಿದ್ದರೆ ಸರಿಪಡಿಸಿಕೊಳ್ಳುವುದು, ಅಂದಿನ ಪಾಠವನ್ನು ಅಂದೇ ಅಭ್ಯಾಸ ಮಾಡಿರುವುದು ಗರಿಷ್ಠ ಅಂಕ ಸಾಧಿಸಲು ಸಾಧ್ಯವಾಗಿದೆ.
ಸದ್ಯ ಸಿಇಟಿ ಪರೀಕ್ಷೆ ಬರೆದಿರುವ ಸೃಷ್ಠಿ ಸಿಇಟಿಗೆ ತಯಾರಿ ಮಾಡಿಕೊಳ್ಳುತ್ತಿದ್ದು, ಉತ್ತಮ ರ್‍ಯಾಂಕ್ ಸಿಗಬಹುದೆಂಬ ನಿರೀಕ್ಷೆಯಲ್ಲಿದ್ದಾಳೆ. ಉತ್ತಮ ಅಂಕದೊಂದಿಗೆ ಮಗಳು ಜಿಲ್ಲೆಗೆ ರ್‍ಯಾಂಕ್ ಪಡೆದಿರುವುದು ಒಬ್ಬ ತಂದೆಯಾಗಿ ಮಗಳ ಸಾಧನೆಗೆ ಹೆಮ್ಮೆ ಎನಿಸುತ್ತದೆ. ಇದಕ್ಕೆ ಮಕ್ಕಳ ಆಕೆಯ ಪರಿಶ್ರಮದ ಜತೆಗೆ ಪ್ರಾಧ್ಯಾಪಕರು ಮತ್ತು ಹಿರೇಮಠ ಸಂಸ್ಥಾನದ ಪ್ರೋತ್ಸಾಹವೇ ಮುಖ್ಯ ಕಾರಣ. ಮಗಳ ಆಸೆಯಂತೆ ಎಂಬಿಬಿಎಸ್ ಓದಿಸುತ್ತೇನೆ ಎನ್ನುತ್ತಾರೆ ಸೃಷ್ಠಿ ತಂದೆ ಮಾಶೆಟ್ಟಿ.
ಪಿಯುಸಿಯಲ್ಲಿ ಶೇ.98ರಷ್ಟು ಅಂಕ ಬರಬಹುದೆಂಬ ವಿಶ್ವಾಸ ಇತ್ತು. ಆದರೆ, ಜಿಲ್ಲೆಗೆ ಟಾಪರ್ ಆಗುತ್ತೇನೆ ಎಂಬ ನಿರೀಕ್ಷೆ ಇರಲಿಲ್ಲ. ಅಂದಿನ ಪಾಠವನ್ನೇ ಅಂದೇ ಓದುತ್ತಿದೆ. ಅಂಕಗಳಿಗಾಗಿ ಎಂದೂ ಓದಬಾರದು, ಆತ್ಮ ತೃಪ್ತಿಗಾಗಿ ಓದಿದರೆ ಯಶಸ್ಸು ಸುಲಭವಾಗುತ್ತದೆ. ನನ್ನ ಸಾಧನೆಗೆ ಪ್ರಾಧ್ಯಾಪಕರು ಮತ್ತು ಹೆತ್ತವರ ಪ್ರೋತ್ಸಾಹ, ಬೆಂಬಲವೇ ಕಾರಣ. ನೀಟ್‌ನಲ್ಲಿ ಉತ್ತಮ ರ್‍ಯಾಂಕಿಂಗ್ ಪಡೆದು ವೈದ್ಯಳಾಗಿ ಗ್ರಾಮೀಣ ಜನರ ಸೇವೆ ಮಾಡಬೇಕೆಂಬ ಆಸೆ ಇದೆ.
–ಸೃಷ್ಠಿ ಪ್ರಕಾಶ ಮಾಶೆಟ್ಟಿ, ಟಾಪರ್ ವಿದ್ಯಾರ್ಥಿನಿ
-ಶಶಿಕಾಂತ ಬಂಬುಳಗೆ