ಬೆಂಗಳೂರು: ಬುಧವಾರದಿಂದ ನಡೆಯಲಿರುವ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗೆ ಸಕಲ ಸಿದ್ಧತೆ ಮಾಡಿಕೊಂಡಿರುವ ಪದವಿಪೂರ್ವ ಶಿಕ್ಷಣ ಇಲಾಖೆ, ಪರೀಕ್ಷಾ ಕೇಂದ್ರದ ಭದ್ರತೆಗಾಗಿ ಮುಖ್ಯ ಅಧೀಕ್ಷಕರು, ಜಂಟಿ ಮುಖ್ಯ ಅಧೀಕ್ಷಕರು, ವಿಶೇಷ ವಿಚಕ್ಷಣ ದಳ, ಜಿಲ್ಲಾ ಮತ್ತು ತಾಲೂಕು ಮಟ್ಟದ ವಿಚಕ್ಷಣ ದಳ ರಚನೆ ಮಾಡಿದ್ದು, ಇದಕ್ಕಾಗಿ ಸುಮಾರು 3500 ಅಧಿಕಾರಿ, ಸಿಬ್ಬಂದಿ ನೇಮಕ ಮಾಡಿದೆ.
ಮಾರ್ಚ್ 4ರಿಂದ ಮಾ.23ರವರೆಗೆ ನಡೆಯಲಿರುವ ದ್ವಿತೀಯ ಪಿಯುಸಿ ಪರೀಕ್ಷೆಗೆ 561530 ಹೊಸ ವಿದ್ಯಾರ್ಥಿ ಗಳು, 90992 ಪುನರಾವರ್ತಿತ ವಿದ್ಯಾರ್ಥಿಗಳು ಹಾಗೂ 27976 ಖಾಸಗಿ ವಿದ್ಯಾರ್ಥಿಗಳು ಸೇರಿ 680498 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದಾರೆ. ಇದರಲ್ಲಿ 338702 ಹುಡುಗರು, 341796 ಹುಡುಗಿಯರು ಸೇರಿದ್ದಾರೆ. ಕಲಾ ವಿಭಾಗದಲ್ಲಿ 201659, ವಾಣಿಜ್ಯ ವಿಭಾಗದಲ್ಲಿ 261833 ಹಾಗೂ ವಿಜ್ಞಾನ ವಿಭಾಗದಲ್ಲಿ 217006 ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದು, ಬಹುತೇಕ ಎಲ್ಲ ವಿದ್ಯಾರ್ಥಿಗಳು ತಮ್ಮ ಕಾಲೇಜಿನ ಮೂಲಕವೇ ಪರೀಕ್ಷೆ ಪ್ರವೇಶ ಪತ್ರವನ್ನು ಪಡೆದುಕೊಂಡಿದ್ದಾರೆ.
ರಾಜ್ಯದ 1016 ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆಯನ್ನು ಲೋಪವಿಲ್ಲದೇ ನಡೆಸುವ ನಿಟ್ಟಿನಲ್ಲಿ ಕೊಠಡಿ ಮೇಲ್ವಿ ಚಾರಕರು, ಮುಖ್ಯ ಅಧೀಕ್ಷಕರು, ಜಂಟಿ ಮುಖ್ಯ ಅಧೀ ಕ್ಷಕರು, ವಿಶೇಷ ವಿಚಕ್ಷಣ ದಳ, ಜಿಲ್ಲಾ ಮತ್ತು ತಾಲೂಕು ಮಟ್ಟದ ವಿಚಕ್ಷಣ ದಳ ರಚನಾ ಕಾರ್ಯ ಪೂರ್ಣ ಗೊಂಡಿದೆ. ಭದ್ರತೆಗಾಗಿ 3498 ಸಿಬ್ಬಂದಿ, ಅಧಿಕಾರಿ ನೇಮಕ ಮಾಡಲಾಗಿದೆ. ಯಾವ ದಳದವರು ಯಾವ ಯಾವ ಕೇಂದ್ರಗಳಿಗೆ ಭೇಟಿ ನೀಡಬೇಕು,
ಭೇಟಿ ಸಂದರ್ಭದಲ್ಲಿ ಪರಿಶೀಲಿಸಬೇಕಾದ ಅಂಶಗಳ ಬಗ್ಗೆಯೂ ಈಗಾಗಲೇ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ ಎಂದು ಪಿಯು ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ. ಜಿಲ್ಲಾಮಟ್ಟದಲ್ಲಿ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಪರೀಕ್ಷೆಯ ಭದ್ರತೆಗೆ ಸಂಬಂಧಿಸಿದಂತೆ ಎಲ್ಲ ರೀತಿಯ ಚರ್ಚೆ ಹಾಗೂ ಭದ್ರತಾ ಕ್ರಮ ತೆಗೆದುಕೊಳ್ಳಲಾಗಿದೆ. ಪರೀಕ್ಷಾ ದಿನದಂದು ಪ್ರಶ್ನೆ ಪತ್ರಿಕೆ ಮತ್ತು ಉತ್ತರ ಪತ್ರಿಕೆಯನ್ನು ಜಿಲ್ಲಾ ಖಜಾನೆಯಿಂದ ಪರೀಕ್ಷಾ ಕೇಂದ್ರಕ್ಕೆ ಕೊಂಡೊಯ್ಯುವ ವಾಹನಕ್ಕೆ ಜಿಪಿಎಸ್ ಅಳವಡಿಸಲಾಗುವುದು,
ವಾಹನದ ಟ್ರ್ಯಾಕಿಂಗ್ ಜತೆಗೆ, ಎಲ್ಲ ಪರೀಕ್ಷಾ ಕೇಂದ್ರಕ್ಕೆ ಹಾಕಿರುವ ಸಿಸಿ ಟಿವಿಯ ನಿರ್ವಹಣೆ ಮತ್ತು ಮೇಲ್ವಿಚಾರಣೆಯನ್ನು ಜಿಲ್ಲಾಧಿಕಾರಿ ಕಚೇರಿ ಯಿಂದಲೇ ನಿರ್ವಹಿಸಲಾಗುತ್ತದೆ. ಮಲ್ಲೇಶ್ವರದಲ್ಲಿರುವ ಪಿಯು ಇಲಾಖೆಯ ಕೇಂದ್ರ ಕಚೇರಿಯಲ್ಲಿರುವ ಸ್ಟ್ರಾಂಗ್ ರೂಂನಲ್ಲೂ ಮೇಲ್ವಿಚಾರಣೆ ನಡೆಸಲಾಗುತ್ತದೆ. ಯಾವುದೇ ರೀತಿಯ ಅಕ್ರಮಕ್ಕೆ ಅವಕಾಶ ಇಲ್ಲದಂತೆ ಪರೀಕ್ಷೆ ನಡೆಯ ಲಿದೆ ಎಂದು ಅಧಿಕಾರಿ ವಿವರ ನೀಡಿದರು.