ಉಡುಪಿ: ದ್ವಿತೀಯ ಪಿಯುಸಿ ಇಂಗ್ಲಿಷ್ ಪರೀಕ್ಷೆ ಇಂದು ಉಡುಪಿಯಲ್ಲಿ ಕೋವಿಡ್-19 ಮುಂಜಾಗ್ರತೆಯ ಸುರಕ್ಷತೆಯೊಂದಿಗೆ ಆರಂಭವಾಗಿದೆ.
ಇಂದು ಆರಂಭಗೊಂಡ ಪರೀಕ್ಷೆಗೆ ಮುನ್ನೆಚ್ಚರಿಕಾ ಕ್ರಮವಾಗಿ ಪರೀಕ್ಷಾ ಕೊಠಡಿ ಪ್ರವೇಶಿಸುವ ಮೊದಲು ಥರ್ಮಲ್ ಸ್ಕ್ರೀನಿಂಗ್, ಸ್ಯಾನಿಟೈಜರ್ ಬಳಕೆ ಹಾಗು ಮಾಸ್ಕ ಕಡ್ಡಾಯ ಗೊಳಿಸಲಾಗಿದೆ. ಪರೀಕ್ಷೆ ಬರೆಯುವ ಸಂದರ್ಭದಲ್ಲಿ ಸಾಮಾಜಿಕ ಅಂತರವನ್ನು ಕಾಯಲಾಗಿದೆ. ಪರೀಕ್ಷೆ ಆರಂಭವಾಗುವ ಮೊದಲೇ ಪರೀಕ್ಷಾಸ್ಥಳವನ್ನ ಸ್ಯಾನಿಟೈಸರ್ ಮಾಡಲಾಗಿತ್ತು.
ಉಡುಪಿ ಜಿಲ್ಲೆಯ ಕೋಟ ವಿವೇಕ ವಿದ್ಯಾಸಂಸ್ಥೆಯ ಪಿಯುಸಿ ಪರೀಕ್ಷಾ ಕೇಂದ್ರದಲ್ಲಿ ಗುರುವಾರ 568 ವಿದ್ಯಾರ್ಥಿಗಳು ಆಂಗ್ಲಭಾಷಾ ಪರೀಕ್ಷೆಗೆ ಹಾಜರಾಗಿದ್ದಾರೆ.
ಆರಂಭಿಕವಾಗಿ ಪರೀಕ್ಷಾ ಕೇಂದ್ರದಲ್ಲಿ ಸಾಮಾನ್ಯ ಆರೋಗ್ಯ ತಪಾಸಣೆ, ವಿದ್ಯಾರ್ಥಿಯ ಪ್ರಾಥಮಿಕ ಮಾಹಿತಿಗಳನ್ನು ಕಲೆ ಹಾಕುವ ಕಾರ್ಯ ನಡೆಯಿತು.
ಸುಮಾರು 500 ವಿದ್ಯಾರ್ಥಿಗಳು ಸ್ವಂತ ವಾಹನಗಳಲ್ಲಿ ಪರೀಕ್ಷಾ ಕೇಂದ್ರಕ್ಕೆ ಆಗಮಿಸಿದ್ದು ಕೇವಲ 8 ಮಂದಿ ಮಾತ್ರ ಸರಕಾರಿ ಬಸ್ಸ್ ಸೌಲಭ್ಯ ಬಳಸಿಕೊಂಡಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಹೆತ್ತವರೇ ಮಕ್ಕಳನ್ನು ಪರೀಕ್ಷಾ ಕೇಂದ್ರದ ತನಕ ತಲುಪಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಕಾಲೇಜಿನ ಉಪನ್ಯಾಸಕರು, ಆಶಾ, ಆರೋಗ್ಯ ಕಾರ್ಯಕರ್ತರು ಸ್ವಯಂ ಸೇವಕರಾಗಿ ಸೇವೆ ಸಲ್ಲಿಸಿದರು.