ಮೈಸೂರು: ಜಿಲ್ಲೆಯ ಶೈಕ್ಷಣಿಕ ಪ್ರಗತಿಯನ್ನು ಬಿಂಬಿಸುವ ಹಾಗೂ ವಿದ್ಯಾರ್ಥಿ ಜೀವನದ ಮಹತ್ತರ ತಿರುವು ಎಂದೇ ಪರಿಗಣಿಸಲಾಗಿರುವ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಗೊಂಡಿದ್ದು, ಮೈಸೂರು ಜಿಲ್ಲೆ 17ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ.
2016-17ನೇ ಸಾಲಿನಲ್ಲಿ 14ನೇ ಸ್ಥಾನ ಪಡೆದಿದ್ದ ಮೈಸೂರು ಈ ಬಾರಿ ಉತ್ತಮ ಫಲಿತಾಂಶ ಪಡೆಯುವ ಮೂಲಕ ಅಗ್ರ 10 ಸ್ಥಾನದಲ್ಲಿ ಗುರುತಿಸಿಕೊಳ್ಳುವ ನಿರೀಕ್ಷೆ ಹೊಂದಲಾಗಿತ್ತು. ಆದರೆ ಈ ಬಾರಿಯ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಜಿಲ್ಲೆಯು ಶೇ.66.77 ಸಾಧನೆಯೊಂದಿಗೆ 17ನೇ ಸ್ಥಾನ ಪಡೆದುಕೊಂಡಿದೆ.
ಕಳೆದ ಸಾಲಿಗೆ ಹೋಲಿಸಿದರೆ ಶೇಕಡವಾರು ಫಲಿತಾಂಶದಲ್ಲಿ ಶೇ.7.72 ಹೆಚ್ಚಾಗಿದ್ದರೂ, 17ನೇ ಸ್ಥಾನಕ್ಕೆ ಕುಸಿದಿದೆ. ಜಿಲ್ಲೆಯಲ್ಲಿ ಪರೀಕ್ಷೆ ಹಾಜರಾಗಿದ್ದ 36,991 ವಿದ್ಯಾರ್ಥಿಗಳಲ್ಲಿ 21,686 ಮಂದಿ ಉತ್ತೀರ್ಣರಾಗಿದ್ದಾರೆ. ಹೊಸಬರಲ್ಲಿ 19299, ಪುನರಾವರ್ತನೆ ವಿದ್ಯಾರ್ಥಿಗಳಲ್ಲಿ 2026, ಖಾಸಗಿ ವಿದ್ಯಾರ್ಥಿಗಳಲ್ಲಿ 361 ಮಂದಿ ಪಾಸಾಗಿದ್ದಾರೆ.
ಇನ್ನು ಎಂದಿನಂತೆ ಈ ಬಾರಿಯೂ ಜಿಲ್ಲೆಯಲ್ಲಿ ಬಾಲಕಿಯರೇ ಮೇಲುಗೈ ಸಾಧಿಸಿದ್ದು, ಒಟ್ಟಾರೆ ಬಾಲಕಿಯರು 12,522, ಬಾಲಕರು 91,64 ಮಂದಿ ಉತ್ತೀರ್ಣರಾಗಿದ್ದಾರೆ. ಪರೀಕ್ಷೆ ತೆಗೆದುಕೊಂಡಿದ್ದ 36,991 ವಿದ್ಯಾರ್ಥಿಗಳಲ್ಲಿ ಕಲಾವಿಭಾಗದ 4,884, ವಾಣಿಜ್ಯ ವಿಭಾಗದ 8,241, ವಿಜ್ಞಾನ ವಿಭಾಗದ 8,561 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಇವರಲ್ಲಿ ನಗರ ವಿಭಾಗದ 18861 ಮತ್ತು ಗ್ರಾಮೀಣ ವಿಭಾಗದ 2825 ಮಂದಿ ಪಾಸಾಗಿದ್ದಾರೆ.
ಜಿಲ್ಲೆಗೆ ಪ್ರಥಮ ಸ್ಥಾನ: 2017-18ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಮೈಸೂರಿನ ಸದ್ವಿದ್ಯಾ ಪಿಯು ಕಾಲೇಜಿನ ಎಸ್.ಅನುದೀಪ್, ಗೋಪಾಲಸ್ವಾಮಿ ಪಿಯು ಕಾಲೇಜಿನ ಆಕಾಂಕ್ ಎ.ಮಂಜುನಾಥ್ ವಿಜ್ಞಾನ ವಿಭಾಗದಲ್ಲಿ 600ಕ್ಕೆ 590 ಅಂಕ ಪಡೆಯುವ ಮೂಲಕ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಾರೆ. ಎಸ್.ಅನುದೀಪ್ ಭೌತಶಾಸ್ತ್ರ- 100, ರಸಾಯನಶಾಸ್ತ್ರ-100, ಗಣಿತ- 100, ಜೀವಶಾಸ್ತ್ರ- 100, ಸಂಸ್ಕೃತ-100, ಇಂಗ್ಲಿಷ್- 90 ಅಂಕ ಗಳಿಸಿದ್ದಾರೆ.
ಇನ್ನು ಗೋಪಾಲಸ್ವಾಮಿ ಪಿಯು ಕಾಲೇಜಿನ ವಿದ್ಯಾರ್ಥಿ ಆಕಾಂû… ಎ.ಮಂಜುನಾಥ್ ಕನ್ನಡ- 98, ಇಂಗ್ಲಿಷ್- 96, ಭೌತಶಾಸ್ತ್ರ- 99, ರಸಾಯನಶಾಸ್ತ್ರ- 100, ಗಣಿತ- 98, ಜೀವಶಾಸ್ತ್ರ- 99 ಅಂಕ ಪಡೆದಿದ್ದಾರೆ. ಉಳಿದಂತೆ ವಿಜಯ ವಿಠಲ ಪಿಯು ಕಾಲೇಜಿನ ಶೀತಲ್ ಕೆ.ಆತ್ರೇಯ ವಿಜ್ಞಾನ ವಿಭಾಗದಲ್ಲಿ 600ಕ್ಕೆ 588 ಅಂಕಗಳನ್ನು ಪಡೆದು ಕಾಲೇಜಿಗೆ ಪ್ರಥಮ ಸ್ಥಾನ ಗಳಿಸಿದ್ದಾರೆ.
ವೈದ್ಯನಾಗುವ ಆಸೆ
ಪ್ರತಿದಿನ ಮೂರ್‍ನಾಲ್ಕು ಗಂಟೆ ಓದುತ್ತಿದ್ದೆ, ಪರೀಕ್ಷೆ ಸಮಯದಲ್ಲಿ ಏಳು ಗಂಟೆ ಓದಲು ಶುರು ಮಾಡಿದ್ದೇನೆ. ಶಿಕ್ಷಕರು ಕೊಟ್ಟ ಎಲ್ಲ ಸಲಹೆಗಳಂತೆ ಸತತ ಅಭ್ಯಾಸದಲ್ಲಿ ತೊಡಗಿದ್ದು ನೆರವಾಯಿತು. ಪೋಷಕರು, ಶಿಕ್ಷಕರ ವಾರ್ಗದರ್ಶನ ಸಹಾಯವಾಯಿತು. ವೈದ್ಯಕೀಯ ಕ್ಷೇತ್ರ ಆರಿಸಿಕೊಳ್ಳುವ ಆಸೆಯಿದೆ. ಸಿಇಟಿ ಫಲಿತಾಂಶ ಬಂದ ಬಳಿಕ ಅದನ್ನು ನಿರ್ಧಾರ ಮಾಡುವೆ. ರಾಜ್ಯದಲ್ಲಿ ಮೊದಲ ಮೂರು ಸ್ಥಾನದಲ್ಲಿ ಯಾವುದಾದರೂ ಒಂದನ್ನ ಪಡೆಯುವ ಆಸೆ ಇತ್ತು. ಆದರೆ, ಜಿಲ್ಲೆಗೆ ಪ್ರಥಮ ಸ್ಥಾನ ಬಂದಿದ್ದು ತುಂಬಾ ಖುಷಿಯಾಗಿದೆ.
-ಅನುದೀಪ್, ಜಿಲ್ಲೆಗೆ ಪ್ರಥಮ ಸ್ಥಾನ