Advertisement

ಎರಡನೇ ಹಂತದ ಕೋವಿಡ್ ಲಸಿಕೆ : ಕರ್ನಾಟಕದಲ್ಲಿ ಮೊದಲ ದಿನ 2,643 ಮಂದಿಗೆ ಚುಚ್ಚುಮದ್ದು

07:10 AM Mar 02, 2021 | Team Udayavani |

ಹೊಸದಿಲ್ಲಿ/ಬೆಂಗಳೂರು: ದೇಶಾದ್ಯಂತ ಎರಡನೇ ಹಂತದ ಕೊರೊನಾ ಲಸಿಕೆ ನೀಡಿಕೆ ಆರಂಭವಾಗಿದ್ದು, ಮೊದಲ ದಿನವೇ ಪ್ರಧಾನಿ ಮೋದಿ, ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ಗೃಹ ಸಚಿವ ಅಮಿತ್‌ ಶಾ, ವಿದೇಶಾಂಗ ಸಚಿವ ಜೈಶಂಕರ್‌, ಎನ್‌ಸಿಪಿ ನಾಯಕ ಶರದ್‌ ಪವಾರ್‌, ಸಿಎಂಗಳಾದ ನಿತೀಶ್‌ ಕುಮಾರ್‌, ನವೀನ್‌ ಪಟ್ನಾಯಕ್‌ ಸಹಿತ ಗಣ್ಯಾತಿಗಣ್ಯರು ಲಸಿಕೆ ಪಡೆದಿದ್ದಾರೆ.
ಕರ್ನಾಟಕದಲ್ಲೂ ಕೈಗಾರಿಕೆ ಸಚಿವ ಜಗದೀಶ್‌ ಶೆಟ್ಟರ್‌, ಇನ್ಫೋಸಿಸ್‌ ಸಂಸ್ಥಾಪಕ ನಾರಾಯಣ ಮೂರ್ತಿ ಮತ್ತು ಸುಧಾಮೂರ್ತಿ ದಂಪತಿ, ಹಲವಾರು ಶಾಸಕರು, ರಾಜಕಾರಣಿಗಳು ಮೊದಲ ದಿನವೇ ಲಸಿಕೆ ಪಡೆದಿದ್ದಾರೆ.

Advertisement

2ನೇ ಹಂತ ಆರಂಭ
2ನೇ ಹಂತದ ಲಸಿಕೆ ನೀಡಿಕೆ ಸೋಮವಾರ ಆರಂಭವಾಗಿದೆ. ಈ ಹಂತದಲ್ಲಿ 60 ವರ್ಷ ದಾಟಿದ ಹಿರಿಯರು ಮತ್ತು 45 ವರ್ಷ ಮೀರಿದ ರೋಗ ಪೀಡಿತರು ಲಸಿಕೆ ಪಡೆಯಲಿದ್ದಾರೆ.

ಸೋಮವಾರ ಬೆಳಗ್ಗೆ ಪ್ರಧಾನಿ ಮೋದಿ ಅವರು ದಿಲ್ಲಿಯ ಏಮ್ಸ್‌ನಲ್ಲಿ ಲಸಿಕೆ ಪಡೆದರು. ಕೇರಳ ಮತ್ತು ಪುದುಚೇಯನಿವೇದಾ ಮತ್ತು ರೋಸಮ್ಮ ಅನಿಲ್‌ ಎಂಬಿಬ್ಬರು ನರ್ಸ್‌ಗಳು ಅವರಿಗೆ ಲಸಿಕೆಯ ಚುಚ್ಚುಮದ್ದು ನೀಡಿದರು. “ಇಂದು ಲಸಿಕೆಯ ಮೊದಲ ಡೋಸ್‌ ಪಡೆದಿದ್ದೇನೆ. ಕೊರೊನಾ ವಿರುದ್ಧ ಹೋರಾಟದಲ್ಲಿ ನಮ್ಮ ವೈದ್ಯರು ಮತ್ತು ವಿಜ್ಞಾನಿಗಳ ಸಾಧನೆ ಗಮನಾರ್ಹ. ಅರ್ಹರೆಲ್ಲರೂ ದಯವಿಟ್ಟು ಲಸಿಕೆ ಪಡೆದುಕೊಳ್ಳಿ. ಈ ಮೂಲಕ ನಾವೆಲ್ಲರೂ ಸೇರಿ ಕೊರೊನಾ ವಿರುದ್ಧ ಹೋರಾಡೋಣ’ ಎಂದು ಪ್ರಧಾನಿ ಟ್ವೀಟ್‌ ಮಾಡಿದ್ದಾರೆ.

ಇಂದು ಸುಪ್ರೀಂ ಜಡ್ಜ್ಗಳಿಗೆ ಲಸಿಕೆ
ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಗಳು ಮತ್ತು ಅವರ ಕುಟುಂಬ ಸದಸ್ಯರು ಮಂಗಳವಾರ ಲಸಿಕೆ ಪಡೆಯಲಿದ್ದಾರೆ. ಇದಕ್ಕಾಗಿ ಕೋರ್ಟ್‌ ಆವರಣದಲ್ಲೇ ವ್ಯವಸ್ಥೆ ಕಲ್ಪಿಸಲಾಗಿ. ಜಡ್ಜ್ ಗಳೂ ಲಭ್ಯವಿರುವ ಲಸಿಕೆಯನ್ನೇ ಪಡೆಯಬೇಕಾಗಿದೆ. ಇವರಿಗೂ ಆಯ್ಕೆಯ ಅವಕಾಶ ನೀಡಿಲ್ಲ ಎಂದು ಆರೋಗ್ಯ ಸಚಿವಾಲಯ ಸ್ಪಷ್ಟಪಡಿಸಿದೆ.

ನರ್ಸ್‌ಗಳ ಬಳಿ ಮೋದಿ ಹಾಸ್ಯ
ತಮಗೆ ಲಸಿಕೆ ನೀಡುವ ನರ್ಸ್‌ಗಳ ಅಂಜಿಕೆ ದೂರ ಮಾಡಲು ಮೋದಿ ಹಾಸ್ಯ ಚಟಾಕಿ ಹಾರಿಸಿದರು. ಲಸಿಕೆ ಚುಚ್ಚಿದ ಬಳಿಕ, “ಲಸಿಕೆ ಕೊಟ್ಟು ಬಿಟ್ಟಿರಾ, ಗೊತ್ತಾಗಲೇ ಇಲ್ಲ’ ಎಂದರು. ಅನಂತರ, “ರಾಜಕಾರಣಿಗಳು ದಪ್ಪ ಚರ್ಮದವರು, ಹೀಗಾಗಿ ನೀವು ಪಶುಗಳಿಗೆ ಉಪಯೋಗಿಸುವ ದಪ್ಪನೆಯ ಸೂಜಿ ಬಳಸಲು ಉದ್ದೇಶಿಸಿದ್ದೀರಾ’ ಎಂದು ಪ್ರಶ್ನಿಸಿ ನರ್ಸ್‌ ಗ ಳ ಮುಖದಲ್ಲಿ ನಗು ಮೂಡಿಸಿದರು.

Advertisement

ರಾಜ್ಯದಲ್ಲೂ ಚಾಲನೆ
ಕರ್ನಾಟಕದಲ್ಲೂ ಸೋಮವಾರ 2ನೇ ಹಂತದ ಲಸಿಕೆ ಕಾರ್ಯಕ್ರಮ ಆರಂಭವಾಯಿತು. 2,269 ಹಿರಿಯ ನಾಗರಿಕರು, 374 ಮಂದಿ ರೋಗಪೀಡಿತರು ಸೇರಿ ಒಟ್ಟು 2,643 ಮಂದಿ ಲಸಿಕೆ ಪಡೆದಿದ್ದಾರೆ.

ಕೆಲವೆಡೆ ತಾಂತ್ರಿಕ ಸಮಸ್ಯೆಯಿಂದ ಒಂದೆರಡು ತಾಸು ತಡವಾಗಿ ಆರಂಭವಾಯಿತು. ಕೆಲವೆಡೆ ಕೋವಿನ್‌ ಪೋರ್ಟಲ್‌ ಸ್ಥಗಿತಗೊಂಡು ಅಭಿಯಾನ ಆರಂಭವಾಗಲಿಲ್ಲ. ಸ್ಥಳದಲ್ಲಿ ನೋಂದಣಿ ಇಲ್ಲದೆ ಲಸಿಕೆ ಪಡೆಯಲು ಬಂದಿದ್ದವರಿಗೆ ನಿರಾಸೆಯಾಯಿತು. ಹೀಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಲಸಿಕೆ ಪಡೆಯಲು ಸಾಧ್ಯವಾಗಲಿಲ್ಲ. ಇದು ಬಿಟ್ಟರೆ ಆನ್‌ಲೈನ್‌ ನೋಂದಣಿಯಾದವರಿಗೆ ಬಹುತೇಕ ಆಸ್ಪತ್ರೆಗಳಲ್ಲಿ ಯಶಸ್ವಿಯಾಗಿ ಲಸಿಕೆ ನೀಡಲಾಯಿತು. ಲಸಿಕೆ ಪಡೆದವರಲ್ಲಿ ಅಡ್ಡಪರಿಣಾಮ ಪ್ರಕರಣಗಳು ವರದಿಯಾಗಿಲ್ಲ.

ಕೊರೊನಾ ಲಸಿಕೆ ಪಡೆದಿರುವುದು ಮಾನಸಿಕವಾಗಿ ನೆಮ್ಮದಿ ತಂದಿದೆ. ಎರಡನೇ ಅಲೆಯ ಭಯ ಇತ್ತು. ಇದೇ ಸಂದರ್ಭದಲ್ಲಿ ಲಸಿಕೆ ಸಿಕ್ಕಿರುವುದು ಖುಷಿಯಾಗಿದೆ. ಯಾವುದೇ ಅಡ್ಡಪರಿಣಾಮಗಳು ಕಾಣಿಸಿಕೊಂಡಿಲ್ಲ.
– ರಾಜಲಕ್ಷ್ಮೀ (62), ಲಸಿಕೆ ಪಡೆದವರು

ಪ್ರಧಾನಿಯೇ ಲಸಿಕೆ ಪಡೆದಿದ್ದಾರೆ. ವದಂತಿಗಳಿಗೆ ಆಸ್ಪದ ನೀಡದೆ ಲಸಿಕೆ ಹಾಕಿಸಿಕೊಳ್ಳಿ. ರಾಜ್ಯದಲ್ಲಿ 60 ವರ್ಷ ಮೇಲ್ಪಟ್ಟವರು 50 ಲಕ್ಷ, ಇತರ ರೋಗಗಳಿರುವ 45 ವರ್ಷ ದಾಟಿದವರು 16 ಲಕ್ಷ ಜನರಿದ್ದಾರೆ. ಇವರಿಗೆಲ್ಲ ಲಸಿಕೆ ನೀಡಲಾಗುವುದು.

-ಡಾ| ಕೆ.ಸುಧಾಕರ್‌, ಆರೋಗ್ಯ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next