ಬೆಂಗಳೂರು: ಸ್ವಾತಂತ್ರ್ಯ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಆಶ್ರಯದಲ್ಲಿ ನಡೆಯುತ್ತಿರುವ “ಅಮೃತ ಭಾರತಿಗೆ ಕನ್ನಡದ ಆರತಿ” ಎರಡನೇ ಹಂತದ ಕಾರ್ಯಕ್ರಮ ನಾಳೆಯಿಂದ ಆರಂಭವಾಗಲಿದೆ.
ವಿಧಾನ ಪರಿಷತ್ ಚುನಾವಣೆ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಮೈಸೂರು, ಮಂಡ್ಯ, ಚಾಮರಾಜನಗರ, ಹಾಸನ, ಹಾವೇರಿ, ವಿಜಯಪುರ, ಗದಗ, ಬಾಗಲಕೋಟೆ, ಉತ್ತರ ಕನ್ನಡ, ಬೆಳಗಾವಿ, ಧಾರವಾಡ ಹಾಗೂ ಬಳ್ಳಾರಿ ಜಿಲ್ಲೆಯಲ್ಲಿ ಕಾರ್ಯಕ್ರಮಗಳು ನಡೆದಿರಲಿಲ್ಲ. ಈ ಹಿನ್ನೆಲೆಯಲ್ಲಿ ಜೂ 25ರಿಂದ ಈ ಜಿಲ್ಲೆಯ 35 ಸ್ಥಳಗಳಲ್ಲಿ ಅಮೃತ ಮಹೋತ್ಸವ ಕಾರ್ಯಕ್ರಮಗಳು ನಡೆಯುತ್ತವೆ ಎಂದು ಕನ್ನಡ- ಸಂಸ್ಕೃತಿ ಹಾಗೂ ಇಂಧನ ಖಾತೆ ಸಚಿವ ವಿ.ಸುನೀಲ್ ಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕೇಂದ್ರ ಗೃಹ ಸಚಿವರಿಗೆ ಆಹ್ವಾನ: ಆಗಸ್ಟ್ 9 ರಿಂದ 11 ರವರೆಗೆ ಅಮೃತ ಮಹೋತ್ಸವದ ಸಮಾರೋಪ ಕಾರ್ಯಕ್ರಮ ಬೆಂಗಳೂರಿನಲ್ಲಿ ನಡೆಯಲಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಈ ಕಾರ್ಯಕ್ರಮಕ್ಕೆ ಆಹ್ವಾನಿಸಲು ನಿರ್ಧರಿಸಲಾಗಿದ್ದು, ಇಲಾಖೆಯಿಂದ ಅಧಿಕೃತ ಆಹ್ವಾನ ನೀಡಲು ನಿರ್ಧರಿಸಲಾಗಿದೆ.
ಇದನ್ನೂ ಓದಿ:ಗಾಂಧಿ ಕುಟುಂಬದ ಬಗ್ಗೆ ಮಾತನಾಡುವ ನೈತಿಕತೆ ‘ವೋಟಿ ರವಿ’ಗಿಲ್ಲ: ಬಿ.ವಿ.ಶ್ರೀನಿವಾಸ
ಹೋರಾಟದ ನೆಲದಲ್ಲಿ: ಅದೇ ರೀತಿ ಸ್ವಾತಂತ್ರ್ಯ ಹೋರಾಟ ನಡೆದ ರಾಜ್ಯದ ಆಯ್ದ ಏಳು ಸ್ಥಳಗಳಲ್ಲಿ ಹೋರಾಟದ ನೆಲದಲ್ಲಿ ಒಂದು ದಿನ ಎಂಬ ಕಾರ್ಯಕ್ರಮ ಆಯೋಜಿಸಲಾಗಿದೆ. ಜುಲೈ ನಾಲ್ಕರಿಂದ ಕಾರ್ಯಕ್ರಮ ಆರಂಭವಾಗಲಿದ್ದು, ಹೈಸ್ಕೂಲ್ ಮೇಲ್ಪಟ್ಟ ವಿದ್ಯಾರ್ಥಿ ಗಳನ್ನು ಕಾರ್ಯಕ್ರಮಕ್ಕೆ ಹಾಗೂ ವಿವಿಧ ರಂಗಾಯಣಗಳಿಂದ ಆಯೋಜನರ ಮಾಡಿರುವ ವಿಶೇಷ ನಾಟಕ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿದೆ. ರಂಗಾಯಣಗಳು ರಚಿಸಿ, ನಿರ್ದೇಶಿಸಿರುವ ನಾಟಕಗಳನ್ನು ಖುದ್ದು ಸಚಿವರೇ ವೀಕ್ಷಿಸಲಿದ್ದಾರೆ. ಉಡುಪಿ ಯಕ್ಷರಂಗಾಯಣದ ನಾಟಕವನ್ನು ಸಚಿವರು ಈಗಾಗಲೇ ವೀಕ್ಷಿಸಿ ಮೆಚ್ಚುಗೆ ಸೂಚಿಸಿದ್ದು, ಶುಕ್ರವಾರ ಶಿವಮೊಗ್ಗ ರಂಗಾಯಣ ನಿರ್ದೇಶಿದ್ದ ನಾಟಕವನ್ನು ವೀಕ್ಷಿಸಿದರು.