Advertisement
ಭಾರತದಷ್ಟೇ ಜನಸಂಖ್ಯೆಯ ಗಾತ್ರ ಬರುವಂಥ 20 ದೇಶಗಳ ಒಟ್ಟಾರೆ ಪರಿಸ್ಥಿತಿಗೆ ಹೋಲಿಸಿದರೆ, ಆ ದೇಶಗಳಲ್ಲಿ ಭಾರತಕ್ಕಿಂತ 84 ಪಟ್ಟು ಅಧಿಕ ಪ್ರಕರಣಗಳು ಪತ್ತೆಯಾಗಿರುವುದೇ ಇದಕ್ಕೆ ಸಾಕ್ಷಿ.
Related Articles
Advertisement
ಎ.27ರಂದು ವಿಶ್ವ ಆರೋಗ್ಯ ಸಂಸ್ಥೆ (WHO) ನೀಡಿರುವ ದತ್ತಾಂಶದ ಪ್ರಕಾರ, ನಾವು ಈ 20 ದೇಶಗಳಲ್ಲಿನ ಸೋಂಕಿತರ ಸಂಖ್ಯೆಯನ್ನು ಭಾರತದಲ್ಲಿನ ಸೋಂಕಿತರ ಸಂಖ್ಯೆಯೊಂದಿಗೆ ಹೋಲಿಕೆ ಮಾಡಿ ನೋಡಿದೆವು. ಆಗ, ಭಾರತದ ಸೋಂಕಿತರಿಗೆ ಹೋಲಿಸಿದರೆ ಈ ದೇಶಗಳ ಒಟ್ಟಾರೆ ಸೋಂಕಿತರ ಪ್ರಮಾಣ ಶೇ.84ರಷ್ಟು ಹೆಚ್ಚಿರುವುದು ತಿಳಿದುಬಂದು. ಅಲ್ಲದೆ, ಈ ದೇಶಗಳು ಭಾರತಕ್ಕಿಂತ ಶೇ.200ರಷ್ಟು ಹೆಚ್ಚು ಸಾವುಗಳನ್ನು ಕಂಡಿವೆ ಎಂಬುದೂ ಗೊತ್ತಾಯಿತು ಎಂದಿದ್ದಾರೆ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ ಅಗರ್ವಾಲ್.
ಯಾವೆಲ್ಲ ದೇಶಗಳ ಲೆಕ್ಕ?: ಅಮೆರಿಕ, ಸ್ಪೇನ್, ಇಟಲಿ, ಯು.ಕೆ., ರಷ್ಯಾ, ಟರ್ಕಿ, ಜರ್ಮನಿ, ಫ್ರಾನ್ಸ್, ಇರಾನ್, ಬ್ರೆಜಿಲ್, ಬೆಲ್ಜಿಯಂ, ಕೆನಡಾ, ನೆದರ್ಲೆಂಡ್, ಸ್ವಿಜರ್ಲೆಂಡ್, ಪೆರು, ಪೋರ್ಚುಗಲ್, ಈಕ್ವೆಡಾರ್, ಸ್ವೀಡನ್, ಐರ್ಲೆಂಡ್ ಮತ್ತು ಸೌದಿ ಅರೇಬಿಯಾಗಳನ್ನು ಈ ಹೋಲಿಕೆಗೆ ಬಳಸಲಾಗಿದೆ.
ಏಕೆಂದರೆ, ಈ 20 ರಾಷ್ಟ್ರಗಳ ಒಟ್ಟು ಜನಸಂಖ್ಯೆಯನ್ನು ಲೆಕ್ಕ ಹಾಕಿದರೆ, ಭಾರತದ ಒಟ್ಟು ಜನಸಂಖ್ಯೆಗೆ ಸಮವಾಗುತ್ತದೆ. ಹೀಗಾಗಿಯೇ, ಈ ದೇಶಗಳ ಒಟ್ಟಾರೆ ಸೋಂಕಿತರೊಂದಿಗೆ ಭಾರತದ ಸೋಂಕಿನ ಸಂಖ್ಯೆಯನ್ನು ಹೋಲಿಕೆ ಮಾಡಲಾಗಿದೆ.
24 ಗಂಟೆಗಳಲ್ಲಿ 1,543 ಪ್ರಕರಣ: ದೇಶದಲ್ಲಿ 24 ಗಂಟೆಗಳ ಅವಧಿಯಲ್ಲಿ 51 ಮಂದಿ ಮೃತಪಟ್ಟಿದ್ದು, 1,543 ಹೊಸ ಪ್ರಕರಣಗಳು ಪತ್ತೆಯಾಗಿವೆ. ಪ್ರಕರಣಗಳು ದ್ವಿಗುಣಗೊಳ್ಳುವ ಪ್ರಮಾಣ 10.2 ದಿನಗಳಿಗೆ ಏರಿಕೆಯಾಗಿವೆ ಎಂದೂ ಅಗರ್ವಾಲ್ ಮಾಹಿತಿ ನೀಡಿದ್ದಾರೆ.
ಒಟ್ಟಾರೆ ಈವರೆಗೆ ಸುಮಾರು 7 ಸಾವಿರ ಮಂದಿ ಗುಣಮುಖರಾಗಿ ಮನೆಗಳಿಗೆ ತೆರಳಿದ್ದಾರೆ. ಕೇವಲ ಒಂದೇ ದಿನದಲ್ಲಿ 684 ರೋಗಿಗಳು ಗುಣಮುಖರಾಗಿದ್ದು, ಗುಣಮುಖರಾಗುವವರ ಪ್ರಮಾಣ ಶೇ.23.3ಕ್ಕೇರುವಂತಾಗಿದೆ. ಕಳೆದ 28 ದಿನಗಳಲ್ಲಿ ದೇಶದ 17 ಜಿಲ್ಲೆಗಳಲ್ಲಿ ಯಾವುದೇ ಹೊಸ ಪ್ರಕರಣ ಪತ್ತೆಯಾಗಿಲ್ಲ ಎಂದೂ ಅವರು ತಿಳಿಸಿದ್ದಾರೆ.
ಮಾದರಿ ಯಾವುದೂ ಇಲ್ಲ: ಕೋವಿಡ್ 19 ವೈರಸ್ ವ್ಯಾಪಿಸದಂತೆ ತಡೆಯಲು ಎಲ್ಲ ರೀತಿಯ ಕ್ರಮಗಳನ್ನೂ ಕೈಗೊಳ್ಳುತ್ತಿದ್ದೇವೆ. ಕೆಲವು ಪ್ರದೇಶಗಳಲ್ಲಿ ವ್ಯಾಪಿಸುವಿಕೆಗೆ ಕಡಿವಾಣ ಬಿದ್ದಿದೆ. ಇಲ್ಲಿ ಭಿಲ್ವಾರಾ, ಆಗ್ರಾ ಮಾದರಿ ಎಂಬ ಪ್ರಶ್ನೆಯೇ ಬರುವುದಿಲ್ಲ.
ಈ ರೀತಿಯ ಲೇಬಲ್ ಹಚ್ಚುವ ಮೊದಲು ಎಲ್ಲರೂ ಸ್ವಲ್ಪ ಎಚ್ಚರಿಕೆ ವಹಿಸಬೇಕಾಗುತ್ತದೆ ಎಂದು ಅಗರ್ವಾಲ್ ಹೇಳಿದ್ದಾರೆ. ಜತೆಗೆ, ರೋಗಿಯ ವರದಿ ನೆಗೆಟಿವ್ ಎಂದು ಬರುವವರೆಗೂ ಆತನ ಹೋಂ ಐಸೋಲೇಷನ್ ಮುಂದುವರಿಯುತ್ತದೆ ಎಂದಿದ್ದಾರೆ.
ಏಳು ನಗರಗಳಲ್ಲಿ ಸೋಂಕು ಪ್ರಮಾಣ ಹೆಚ್ಚುರಾಷ್ಟ್ರ ರಾಜಧಾನಿ ಹೊಸದಿಲ್ಲಿ, ಮುಂಬಯಿ ಹಾಗೂ ಅಹಮದಾಬಾದ್ ನಗರಗಳು ದೇಶದ ಅತಿ ಹೆಚ್ಚು ಸೋಂಕು ಪ್ರಕರಣಗಳು ದಾಖಲಾಗಿರುವ ನಗರಗಳಲ್ಲಿ ಸ್ಥಾನ ಪಡೆದಿವೆ ಎಂದು ನೀತಿ ಆಯೋಗದ ಮುಖ್ಯಸ್ಥ ಅಮಿತಾಭ್ ಕಾಂತ್ ತಿಳಿಸಿದ್ದಾರೆ. ‘ಈ 15 ನಗರಗಳಲ್ಲಿ ಏಳು ನಗರಗಳಲ್ಲಿ ಸೋಂಕಿತರ ಪ್ರಮಾಣ ಅತ್ಯಧಿಕವಾಗಿದೆ. ಅವುಗಳೆಂದರೆ, ಹೈದರಾಬಾದ್ (ತೆಲಂಗಾಣ), ಪುಣೆ (ಮಹಾರಾಷ್ಟ್ರ), ಜೈಪುರ (ರಾಜಸ್ಥಾನ), ಇಂದೋರ್ (ಮಧ್ಯಪ್ರದೇಶ), ಅಹ್ಮದಾಬಾದ್ (ಗುಜರಾತ್) ಹಾಗೂ ಮುಂಬಯಿ (ಮಹಾರಾಷ್ಟ್ರ) ಹಾಗೂ ದೆಹಲಿ’ ಎಂದು ಅವರು ತಿಳಿಸಿದ್ದಾರೆ. ಇನ್ನುಳಿದಂತೆ, ಇದೇ ಪಟ್ಟಿಯಲ್ಲಿರುವ ವಡೋದರಾ (ಗುಜರಾತ್), ಕರ್ನೂಲು (ಆಂಧ್ರಪ್ರದೇಶ), ಭೋಪಾಲ್ (ಮಧ್ಯಪ್ರದೇಶ), ಜೋಧ್‌ಪುರ (ರಾಜಸ್ಥಾನ), ಆಗ್ರಾ (ಉತ್ತರ ಪ್ರದೇಶ), ಥಾಣೆ (ಮಹಾರಾಷ್ಟ್ರ), ಚೆನ್ನೈ (ತಮಿಳುನಾಡು) ಹಾಗೂ ಸೂರತ್ (ಗುಜರಾತ್) ತುಂಬಾ ಆಪತ್ತಿನ ಪರಿಸ್ಥಿತಿ ಎದುರಿಸುತ್ತಿವೆ ಎಂದು ಕಾಂತ್ ತಿಳಿಸಿದ್ದಾರೆ. ಭಾರತಕ್ಕೆ ಎಡಿಬಿ 11,300 ಕೋಟಿ ಸಾಲ
ಕೋವಿಡ್ 19 ವೈರಸ್ ವಿರುದ್ಧದ ಹೋರಾಟದಲ್ಲಿ ಭಾರತಕ್ಕೆ ಸಾಥ್ ನೀಡಿರುವ ಏಷ್ಯನ್ ಡೆವಲಪ್ ಮೆಂಟ್ ಬ್ಯಾಂಕ್(ಎಡಿಬಿ) 11,300 ಕೋಟಿ ರೂ. ಮೊತ್ತವನ್ನು ಸಾಲದ ರೂಪದಲ್ಲಿ ನೀಡುವುದಾಗಿ ಮಂಗಳವಾರ ಘೋಷಿಸಿದೆ. ಸೋಂಕಿಗೆ ಕಡಿವಾಣ ಮತ್ತು ತಡೆ, ಬಡವರು ಹಾಗೂ ಆರ್ಥಿಕವಾಗಿ ದುರ್ಬಲವಾಗಿರುವ ವಲಯಗಳಿಗೆ ಸಾಮಾಜಿಕ ರಕ್ಷಣೆ ಒದಗಿಸುವುದು ಸೇರಿದಂತೆ ಪ್ರಮುಖ ಆದ್ಯತೆಗಳಿಗೆ ನೆರವಾಗಲೆಂದು ಈ ಮೊತ್ತವನ್ನು ನೀಡುತ್ತಿರುವುದಾಗಿ ಎಡಿಬಿ ತಿಳಿಸಿದೆ. ಇಂಥದ್ದೊಂದು ಸಂಕಷ್ಟದ ಕಾಲದಲ್ಲಿ ಭಾರತದ ಹೋರಾಟಕ್ಕೆ ಬೆಂಬಲ ನೀಡಲು ನಾವು ಸದಾ ಸಿದ್ಧರಿದ್ದೇವೆ ಎಂದು ಬ್ಯಾಂಕ್ ಮುಖ್ಯಸ್ಥ ಮಸಾಟ್ಸುಗು ಅಸಕಾವಾ ಹೇಳಿದ್ದಾರೆ. ಎಂಎನ್‌ಸಿಗಳ ಸ್ವಾಗತಕ್ಕೆ ಸಜ್ಜಾಗಿ
ಕೋವಿಡ್ 19 ವೈರಸ್ ಮೂಲ ಸ್ಥಾನವಾದ ಚೀನಾವನ್ನು ತೊರೆಯಲು ಅಲ್ಲಿ ಬೀಡುಬಿಟ್ಟಿದ್ದ ಅನೇಕ ಬಹುರಾಷ್ಟ್ರೀಯ ಕಂಪನಿಗಳು ಮನಸ್ಸು ಮಾಡಿವೆ. ಅವೆಲ್ಲವನ್ನೂ ನಮ್ಮ ರಾಜ್ಯಗಳತ್ತ ಸೆಳೆಯಲು ಸರ್ವರೀತಿಯ ಪ್ರಯತ್ನಗಳನ್ನು ಮಾಡಬೇಕು’ ಎಂದು ಪ್ರಧಾನಿ ನರೇಂದ್ರ ಮೋದಿ, ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಕರೆ ನೀಡಿದ್ದಾರೆ. ಸೋಮವಾರ ಮುಖ್ಯಮಂತ್ರಿಗಳ ಜತೆಗಿನ ವಿಡಿಯೋ ಕಾನ್ಫರೆನ್ಸ್ ವೇಳೆ ಪ್ರಧಾನಿ ಈ ಅಂಶ ಪ್ರಸ್ತಾಪಿಸಿದ್ದಾರೆ. ‘ನಿಮಗೇ (ಸಿಎಂಗಳು) ತಿಳಿದಿರುವಂತೆ ಅನೇಕ ಉದ್ಯಮಗಳು ಚೀನಾವನ್ನು ತೊರೆಯಲು ಸಜ್ಜಾಗಿವೆ. ನಮ್ಮಲ್ಲಿ ಉತ್ತಮ ಬೇಡಿಕೆಯುಳ್ಳ ಮಾರುಕಟ್ಟೆ ವ್ಯವಸ್ಥೆಯಿದೆ. ಸಾಲದ್ದಕ್ಕೆ ಅಗಾಧವಾದ ಮಾನವ ಶಕ್ತಿಯಿದೆ. ಇದರ ಜೊತೆಗೆ, ಸೂಕ್ತ ಮೂಲಸೌಕರ್ಯಗಳನ್ನು ಕಲ್ಪಿಸಿಕೊಟ್ಟರೆ ಚೀನಾದಿಂದ ಕಾಲ್ತೆಗೆಯುವ ಬಹುತೇಕ ಎಲ್ಲಾ ಕಂಪನಿಗಳು ನಮ್ಮಲ್ಲಿ ನೆಲೆಯೂರುವಂತೆ ಮಾಡಬಹುದು’ ಎಂದು ಹೇಳಿದ್ದಾರೆ.