Advertisement

ಉತ್ತರದಲ್ಲೂ ಕಣ ಸಿದ್ಧ

03:22 AM Apr 04, 2019 | Team Udayavani |

ಹುಬ್ಬಳ್ಳಿ: ಎರಡನೇ ಹಂತದ ಚುನಾವಣೆ ಕದನಕ್ಕೆ ವೇದಿಕೆ ಸಜ್ಜಾಗಿದೆ. ಬಲಾಬಲ ಲೆಕ್ಕಾಚಾರದಡಿ ಅಭ್ಯರ್ಥಿಗಳನ್ನು ಅಖೈರುಗೊಳಿಸಲಾಗಿದೆ. ಪ್ರಚಾರ ಭರಾಟೆ ನಡುವೆಯೇ ಆರೋಪ-ಪ್ರತ್ಯಾರೋಪವೂ ಜೋರಾಗಿದೆ. ಬುಧವಾರ ಘಟಾಘಟಿ ನಾಯಕರು ಉಮೇದುವಾರಿಕೆ ಸಲ್ಲಿಸಿದ್ದಾರೆ.


Advertisement

ಹೈವೋಲ್ಟೆಜ್‌ ಕ್ಷೇತ್ರವಾಗಿ ಮಾರ್ಪಟ್ಟಿರುವ ಕಲಬುರಗಿ ಕ್ಷೇತ್ರದಲ್ಲಿ ಬಿಜೆಪಿ ಹುರಿಯಾಳಾಗಿ ಡಾ.ಉಮೇಶ್‌ ಜಾಧವ್‌ ಅವರು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ನೇತೃತ್ವದಲ್ಲಿ ಸುಮಾರು ನಾಲ್ಕು ಗಂಟೆಗಳ ಕಾಲ ಬೃಹತ್‌ ಮೆರವಣಿಗೆ ನಡೆಸಿ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.

ಕಾಂಗ್ರೆಸ್‌ನಿಂದ ಮಲ್ಲಿಕಾರ್ಜುನ ಖರ್ಗೆ ಗುರುವಾರ ಬಲ ಪ್ರದರ್ಶನದ ನಡುವೆ ಉಮೇದುವಾರಿಕೆಗೆ ಸಿದ್ಧತೆ ಮಾಡಿಕೊಂಡಿದ್ದಾರೆ. ಬೀದರ್‌ನಲ್ಲಿ ಬಿಜೆಪಿಯಿಂದ ಹಾಲಿ ಸಂಸದ ಭಗವಂತ ಖೂಬಾ, ಚಿಕ್ಕೋಡಿಯಲ್ಲಿ ಬಿಜೆಪಿಯಿಂದ ಅಣ್ಣಾ ಸಾಹೇಬ ಜೊಲ್ಲೆ, ಮೈತ್ರಿ ಅಭ್ಯರ್ಥಿಯಾಗಿ ಪ್ರಕಾಶ ಹುಕ್ಕೇರಿ, ಹಾವೇರಿಯಲ್ಲಿ ಡಿ.ಆರ್‌. ಪಾಟೀಲ ನಾಮಪತ್ರ ಸಲ್ಲಿಸಿದ್ದಾರೆ. ಬಿಜೆಪಿಯಿಂದ ಹಾಲಿ ಸಂಸದ ಶಿವಕುಮಾರ ಉದಾಸಿ ಗುರುವಾರ ಉಮೇದುವಾರಿಕೆ ಸಲ್ಲಿಸಲಿದ್ದಾರೆ. ಬೆಳಗಾವಿ ಕ್ಷೇತ್ರದಲ್ಲಿ ಈಗಾಗಲೇ ಮೈತ್ರಿ ಅಭ್ಯರ್ಥಿಯಾಗಿ ವಿ.ಎಸ್‌.ಸಾಧುನವರ ಕಣಕ್ಕಿಳಿದಿದ್ದು, ಗುರುವಾರ ಬಿಜೆಪಿಯಿಂದ ಹಾಲಿ ಸಂಸದ ನಾಮಪತ್ರ ಸಲ್ಲಿಸಲಿದ್ದಾರೆ.

ಶಿವಮೊಗ್ಗ ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿಯಾಗಿ ಮಧು ಬಂಗಾರಪ್ಪ ಅವರು ಸಿಎಂ ಕುಮಾರಸ್ವಾಮಿ, ಡಿ.ಕೆ.ಶಿವಕುಮಾರ ನೇತೃತ್ವದಲ್ಲಿ ನಾಮಪತ್ರ ಸಲ್ಲಿಸಿದ್ದಾರೆ.

ಈಗಾಗಲೇ ಬಿಜೆಪಿಯಿಂದ ಹಾಲಿ ಸಂಸದ ಬಿ.ವೈ.ರಾಘವೇಂದ್ರ ಉಮೇದುವಾರಿಕೆ ಸಲ್ಲಿಸಿದ್ದು ಜಿದ್ದಾಜಿದ್ದಿ ಏರ್ಪಟ್ಟಿದೆ. ಧಾರವಾಡ ಕ್ಷೇತ್ರದಲ್ಲಿ ಹಾಲಿ ಸಂಸದ ಪ್ರಹ್ಲಾದ ಜೋಶಿ ಬೃಹತ್‌ ಮೆರವಣಿಗೆ ನಡೆಸಿ ನಾಮಪತ್ರ ಸಲ್ಲಿಸಿದ ಬೆನ್ನಲ್ಲೇ, ಮೈತ್ರಿ ಅಭ್ಯರ್ಥಿಯಾಗಿ ಮಾಜಿ ಸಚಿವ ವಿನಯ ಕುಲಕರ್ಣಿ ಹೆಸರು ಘೋಷಣೆಯಾಗಿದ್ದರಿಂದ ಪೈಪೋಟಿ ಏರ್ಪಟ್ಟಿದೆ. ಬುಧವಾರ ನಾಮಪತ್ರ ಸಲ್ಲಿಸಲು ಸಜ್ಜಾಗಿದ್ದ ವಿನಯ ಕುಲಕರ್ಣಿ ಕೊನೆ ಗಳಿಗೆಯಲ್ಲಿ ಹಿಂದೆ ಸರಿದು ಬಿ ಫಾರ್ಮ್ ಜತೆಗೆ ಗುರುವಾರ ನಾಮಪತ್ರ ಸಲ್ಲಿಸುವುದಾಗಿ ಘೋಷಿಸಿದ್ದಾರೆ.

Advertisement

ದಾವಣಗೆರೆ ಕ್ಷೇತ್ರದಲ್ಲೂ ಕಾಂಗ್ರೆಸ್‌ ಟಿಕೆಟ್‌ ವಿಳಂಬ ಗೊಂದಲ ಏರ್ಪಟ್ಟಿದ್ದು ಮೈತ್ರಿ ಅಭ್ಯರ್ಥಿಯಾಗಿ ಮಂಜಪ್ಪ ಕಣಕ್ಕಿಳಿದಿದ್ದಾರೆ. ಈಗಾಗಲೇ ಬಿಜೆಪಿಯಿಂದ ಹಾಲಿ ಸಂಸದ ಜಿ.ಎಂ.ಸಿದ್ದೇಶ್ವರ, ಬಳ್ಳಾರಿಯಲ್ಲಿ ಬಿಜೆಪಿಯಿಂದ ದೇವೇಂದ್ರಪ್ಪ, ಮೈತ್ರಿ ಅಭ್ಯರ್ಥಿಯಾಗಿ ವಿ.ಎಸ್‌.ಉಗ್ರಪ್ಪ, ವಿಜಯಪುರ ಮೀಸಲು ಕ್ಷೇತ್ರದಲ್ಲಿ ಬಿಜೆಪಿಯಿಂದ ಹಾಲಿ ಸಂಸದ ರಮೇಶ ಜಿಗಜಿಣಗಿ, ಮೈತ್ರಿ ಅಭ್ಯರ್ಥಿಯಾಗಿ ಜೆಡಿಎಸ್‌ ಶಾಸಕ ದೇವಾನಂದ ಚವ್ಹಾಣ ಪತ್ನಿ ಸುನೀತಾ ಚವ್ಹಾಣ, ಬಾಗಲಕೋಟೆಯಲ್ಲಿ ಬಿಜೆಪಿಯಿಂದ ಹಾಲಿ ಸಂಸದ ಪಿ.ಸಿ.ಗದ್ದಿಗೌಡರ, ಮೈತ್ರಿ ಅಭ್ಯರ್ಥಿಯಾಗಿ ವೀಣಾ ಕಾಶಪ್ಪನವರ, ಉಡುಪಿ-ಚಿಕ್ಕಮಗಳೂರಿನಲ್ಲಿ ಬಿಜೆಪಿಯಿಂದ ಹಾಲಿ ಸಂಸದೆ ಶೋಭಾ ಕರಂದ್ಲಾಜೆ, ಮೈತ್ರಿ ಅಭ್ಯರ್ಥಿಯಾಗಿ ಪ್ರಮೋದ ಮಧ್ವರಾಜ್‌, ಕೊಪ್ಪಳದಲ್ಲಿ ಬಿಜೆಪಿ ಹಾಲಿ ಸಂಸದ ಸಂಗಣ್ಣ ಕರಡಿ, ಮೈತ್ರಿ ಅಭ್ಯರ್ಥಿಯಾಗಿ ರಾಜಶೇಖರ ಹಿಟ್ನಾಳ್‌ ಕಣಕ್ಕಿಳಿದಿದ್ದಾರೆ.

ಮಗನ ವಿರುದ್ಧ ತಂದೆಯ ನಾಮಪತ್ರ!
ಕೊಪ್ಪಳ ಲೋಕಸಭೆ ಕ್ಷೇತ್ರದಲ್ಲಿ ಮಗನ ವಿರುದ್ಧವೇ ತಂದೆ ನಾಮಪತ್ರ ಸಲ್ಲಿಸಿದ್ದಾರೆ! ಕಾಂಗ್ರೆಸ್‌ನಿಂದ ರಾಜಶೇಖರ ಹಿಟ್ನಾಳ್‌ ಕಣಕ್ಕಿಳಿದಿದ್ದು, ಬಿಜೆಪಿಯಿಂದ ಸಂಗಣ್ಣ ಸ್ಪರ್ಧಿಸಿದ್ದಾರೆ. ಪುತ್ರನಿಗೆ ಟಿಕೆಟ್‌ ಕೊಡಿಸುವಲ್ಲಿ ಶ್ರಮಿಸಿದ್ದ ಕಾಂಗ್ರೆಸ್‌ ಮಾಜಿ ಜಿಲ್ಲಾಧ್ಯಕ್ಷ ಬಸವರಾಜ ಹಿಟ್ನಾಳ ಬುಧವಾರ ಮಗನ ವಿರುದ್ಧವೇ ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿ ಅಚ್ಚರಿ ಮೂಡಿಸಿದ್ದಾರೆ. ಆದರೆ, ಇದೊಂದು ಮುಂಜಾಗ್ರತ ಕ್ರಮ. ಪುತ್ರ ರಾಜಶೇಖರ ಹಿಟ್ನಾಳ ಮೊದಲ ಬಾರಿಗೆ ಲೋಕಸಭಾ ಚುನಾವಣಾ ಕಣಕ್ಕಿಳಿದಿದ್ದಾರೆ. ಹೀಗಾಗಿ ನಾಮಪತ್ರ ಸಲ್ಲಿಸಿದ ವೇಳೆ ಏನಾದರೂ ಹೆಚ್ಚು ಕಡಿಮೆಯಾಗಿ ತಿರಸ್ಕೃತವಾಗುವ ಸಾಧ್ಯತೆ ಇರುತ್ತದೆ. ಈ ಮುಜುಗರ ತಪ್ಪಿಸಿಕೊಳ್ಳಲು ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆ ಮಾಡಲಾಗಿದೆ ಎನ್ನಲಾಗಿದೆ.

ತಿಣುಕಾಡಿ ಟಿಕೆಟ್‌ ಪಡೆದ
ವಿನಯ್‌ಗೆ ಕಷ್ಟದ ಸ್ವಾಗತ!
ಅಲ್ಪಸಂಖ್ಯಾತರಿಗೆ ಮೀಸಲಾಗಿದ್ದ ಧಾರವಾಡ ಲೋಕಸಭೆ ಕ್ಷೇತ್ರ ಕಾಂಗ್ರೆಸ್‌ ಟಿಕೆಟ್‌ನ್ನು ಕೊನೆಗೂ ವಿನಯ ಕುಲಕರ್ಣಿ ಗುದ್ದಾಡಿ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ, ಟಿಕೆಟ್‌ ನೀಡಿಕೆಯಲ್ಲಿ ಆಗಿರುವ ವಿಳಂಬವನ್ನು ಸರಿಪಡಿಸಿಕೊಳ್ಳುವುದೇ ಪಕ್ಷ ಹಾಗೂ ಅಭ್ಯರ್ಥಿಗೆ ಸವಾಲಾಗಿ ಪರಿಣಮಿಸಿದೆ. ಶಾಕೀರ್‌ ಸನದಿ ಅವರಿಗೆ ಕೊನೆ ಗಳಿಗೆಯಲ್ಲಿ ಟಿಕೆಟ್‌ ನಿರಾಕರಿಸಿದ್ದಕ್ಕೆ ಮುನಿಸಿಕೊಂಡಿರುವ ಮುಸ್ಲಿಂ ಸಮುದಾಯದ ಮುಖಂಡರು ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕುಂದಗೋಳ ಶಾಸಕ ಶಿವಳ್ಳಿ ಅಗಲಿಕೆ, ಟಿಕೆಟ್‌ ಘೋಷಣೆ ವಿಳಂಬ, ಸ್ಥಳೀಯ ಮುಖಂಡರ ಅಸಹಕಾರ ವಿನಯ ಕುಲಕರ್ಣಿ ಅವರಿಗೆ ತೊಡರಾಗುವ ಸಾಧ್ಯತೆ ಇದೆ. ಅಲ್ಲದೇ, ಐದು ವಿಧಾನಸಭೆ ಕ್ಷೇತ್ರಗಳಲ್ಲಿ ಬಿಜೆಪಿ ಶಾಸಕರೇ ಇರುವುದರಿಂದ ಕಾಂಗ್ರೆಸ್‌ ಬಲ ಕುಗ್ಗಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next