ಬಳ್ಳಾರಿ: ನೆರೆಯ ರಾಯಚೂರು ಜಿಲ್ಲೆ ಸಿಂಧನೂರು ಮೂಲದ 62 ವರ್ಷದ ವ್ಯಕ್ತಿಯೊಬ್ಬ ಕೋವಿಡ್ ಸೋಂಕಿಗೆ ಬಲಿಯಾಗಿದ್ದಾರೆ.
ಇದರೊಂದಿಗೆ ಜಿಲ್ಲೆಯಲ್ಲಿ ಕೋವಿಡ್ ಸೋಂಕಿಗೆ ಎರಡನೆಯ ಬಲಿಯಾಗಿದೆ
ಬೇರೆ ಕಾಯಿಲೆಯ ಚಿಕಿತ್ಸೆಗೆಂದು ಜೂನ್ 14ರಂದು ಶಸ್ತ್ರ ಚಿಕಿತ್ಸೆಗೆಂದು ವಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದ ಮೃತ ವ್ಯಕ್ತಿಯಲ್ಲಿ ಸೋಂಕಿನ ಲಕ್ಷಣ ಕಂಡುಬಂದಿತ್ತು. ಈ ಹಿನ್ನೆಲೆಯಲ್ಲಿ ಅವರನ್ನು ಐಸೋಲೇಷನ್‌ನಲ್ಲಿರಿಸಿ, ಗಂಟಲು ದ್ರವ ಪರೀಕ್ಷೆಗೆ ಕಳುಹಿಸಲಾಗಿತ್ತು.
ಈ ನಡುವೆ ಸೋಂಕಿನ ಲಕ್ಷಣ ಉಲ್ಬಣಿಸಿ ಜೂ.15ರಂದು ಆ ವ್ಯಕ್ತಿ ನಿಧನರಾದರು ಎಂಬ ಮಾಹಿತಿಯನ್ನು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಅವರು ತಿಳಿಸಿದ್ದಾರೆ.
ಇಂದು ಬಂದ ವರದಿಯಲ್ಲಿ ಮೃತ ವ್ಯಕ್ತಿಗೆ ಕೋವಿಡ್ ಇರುವುದು ದೃಢಪಟ್ಟಿದೆ. ಈ ವ್ಯಕ್ತಿಗೆ ಸೋಂಕು ತಗಲಿದ್ದ ಶಂಕೆ ಇದ್ದ ಹಿನ್ನೆಲೆಯಲ್ಲಿ ಆ ವ್ಯಕ್ತಿಯ ಶವವನ್ನು ಶವಾಗಾರದಲ್ಲಿ ಇರಿಸಲಾಗಿತ್ತು. ಇಂದು ಕೋವಿಡ್ ಮಾರ್ಗಸೂಚಿಯಂತೆ ಅವರ ಅಂತಿಮ ಸಂಸ್ಕಾರ ಮಾಡಲಾಗಿದೆ ಎಂದು ಜಿಲ್ಲಾದಿಕಾರಿ ಅವರು ತಿಳಿಸಿದರು.
ಇನ್ನು ಇಂದು ಜಿಲ್ಲೆಯಲ್ಲಿ ಒಟ್ಟಾರೆ 30 ಕೋವಿಡ್ ಪಾಸಿಟಿವ್ ಪ್ರಕರಣ ವರದಿಯಾಗಿದೆ. ಈ ಮೂಲಕ ಜಿಲ್ಲೆಯಲ್ಲಿನ ಒಟ್ಟು ಸೋಂಕಿತರ ಸಂಖ್ಯೆ 250ಕ್ಕೆ ಏರಿಕೆ ಆಗಿದೆ. ಈ ಪೈಕಿ ಜಿಂದಾಲ್‌ನ ಪ್ರಕರಣಗಳ ಸಂಖ್ಯೆ 146 ಆಗಿದೆ.
ಜಿಲ್ಲೆಯ ಹೊಸಪೇಟೆಯಲ್ಲಿ 2, ಸಂಡೂರು 10, ಬಳ್ಳಾರಿ 10, ಹಗರಿಬೊಮ್ಮನಹಳ್ಳಿ 5, ಸಿರುಗುಪ್ಪ 2, ಕೂಡ್ಲಿಗಿ 1 ಸೇರಿ ಜಿಲ್ಲೆಯಲ್ಲಿ ಒಟ್ಟು 30 ಹೊಸ ಪ್ರಕರಣಗಳು ಪತ್ತೆಯಾಗಿದ್ದು, ಈ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 250ಕ್ಕೆ ಏರಿಕೆಯಾದಂತಾಗಿದೆ.