Advertisement

ಸೆಕೆಂಡ್‌ ಹಾಫ್ ಹಾಡುಗಳು

01:30 PM May 03, 2018 | Team Udayavani |

ಮೇ 1 ಕಾರ್ಮಿಕರ ದಿನ. ಕಾರ್ಮಿಕರು ಹಾಗೂ ರೈತರೊಬ್ಬರಿಂದ ಚಿತ್ರದ ಆಡಿಯೋ ಸಿಡಿ ಬಿಡುಗಡೆ ಮಾಡಿಸಬೇಕೆಂಬುದು “ಸೆಕೆಂಡ್‌ ಹಾಫ್’ ಚಿತ್ರದ ನಿರ್ಮಾಪಕ ನಾಗೇಶ್‌ ಅವರ ಆಸೆಯಾಗಿತ್ತಂತೆ. ಹಾಗಾಗಿ, ಕಲಾವಿದರ ಸಂಘದ ಸೆಕ್ಯುರಿಟಿ ವಿಭಾಗದವರು ಹಾಗೂ ರೈತರೊಬ್ಬರಿಂದ ಚಿತ್ರದ ಆಡಿಯೋ ಸಿಡಿ ಬಿಡುಗಡೆ ಮಾಡುವ ಮೂಲಕ ಪ್ರಚಾರ ಕೆಲಸಕ್ಕೆ ಚಾಲನೆ ಕೊಟ್ಟಿತು “ಸೆಕೆಂಡ್‌ ಹಾಫ್’ ಚಿತ್ರತಂಡ. ಇದೇ ಮೊದಲ ಸಲ ಹಾಡುಗಳನ್ನು ಬಿಡುಗಡೆ ಮಾಡಿದ ಖುಷಿ ಆ ಕಾರ್ಮಿಕರದ್ದು.
 
ಪ್ರಿಯಾಂಕ ಉಪೇಂದ್ರ ಅಭಿನಯಿಸಿರುವ ಈ ಚಿತ್ರ ಈಗ ಬಿಡುಗಡೆಗೆ ಸಿದ್ಧವಾಗಿದೆ. ಇದೇ ಮೊದಲ ಸಲ ಪ್ರಿಯಾಂಕ ಉಪೇಂದ್ರ ಅವರು ಪೊಲೀಸ್‌ ಪೇದೆಯಾಗಿ ನಟಿಸಿದ್ದಾರೆ. ಈ ಚಿತ್ರದ ಇನ್ನೂ ಒಂದು ವಿಶೇಷವೆಂದರೆ, ಉಪೇಂದ್ರ ಅವರ ಅಣ್ಣನ ಮಗ ನಿರಂಜನ್‌ ಚಿತ್ರದಲ್ಲಿ ನಟಿಸಿದ್ದಾರೆ. ಅಲ್ಲಿಗೆ ಚಿಕ್ಕಮ್ಮನೊಂದಿಗೆ ನಟಿಸಿದ ಖುಷಿ ನಿರಂಜನ್‌ ಅವರದು. ಇದಷ್ಟೇ ಅಲ್ಲ, ಉಪ್ಪಿ ಅವರು ನಿರಂಜನ್‌ ಹೆಜ್ಜೆ ಹಾಕಿರುವ ಹಾಡಿಗೆ ಧ್ವನಿಯಾಗಿದ್ದಾರೆ ಕೂಡ. ಅಲ್ಲಿಗೆ, ಉಪೇಂದ್ರ ಕುಟುಂಬದ ಮೂವರು “ಸೆಕೆಂಡ್‌ ಹಾಫ್’ ಚಿತ್ರದಲ್ಲಿ ತೊಡಗಿಸಿಕೊಂಡಂತಾಗಿದೆ.

Advertisement

ಅಂದಹಾಗೆ, ಇದೊಂದು ಕ್ರೈಮ್‌ ಥ್ರಿಲ್ಲರ್‌ ಚಿತ್ರ. ಯೋಗಿ ದೇವಗಂಗೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿರುವ ಮೂರು ಗೀತೆಗಳಿಗೆ ಯೋಗರಾಜ್‌ ಭಟ್‌ ಮತ್ತು ನಿರ್ದೇಶಕರ ಸಾಹಿತ್ಯವಿದೆ. ಉಪೇಂದ್ರ ಹಾಡೊಂದನ್ನು ಹಾಡಿದರೆ, ಪ್ರಿಯಾಂಕ ಉಪೇಂದ್ರ ಅವರ ಪರಿಚಯದ ಗೀತೆಗೆ ವಾರಿಜಾಶ್ರೀ ಹಾಡಿದ್ದಾರೆ. ಬಹುತೇಕ ನೈಜ ಘಟನೆಗಳು ಚಿತ್ರದ ಹೈಲೆಟ್‌ ಎಂಬುದು ನಿರ್ದೇಶಕರ ಮಾತು. ಇಲ್ಲಿ ಒಂದು ಅಪಘಾತ ಅಥವಾ ಅಪರಾಧಗಳು ನಡೆದಾಗ, ಅಲ್ಲಿ ಪೊಲೀಸ್‌ ಪಾತ್ರ ಮಹತ್ವ ವಹಿಸುತ್ತದೆ. ಅದೇ ನಿಟ್ಟಿನಲ್ಲಿ ಇಲ್ಲಿ ಕಥೆ ಸಾಗಲಿದೆ. ಪೊಲೀಸ್‌ ಪೇದೆಯೊಬ್ಬರ ಚಿತ್ರಣವನ್ನು ಇಲ್ಲಿ ಬಿಡಿಸಿಡಲಾಗುತ್ತದೆ ಎಂಬುದು ಚಿತ್ರತಂಡದ ಮಾತು.

ಹಲವಾರು ಚಿತ್ರಗಳಲ್ಲಿ ನಟಿಸಿದ ಪ್ರಿಯಾಂಕ ಉಪೇಂದ್ರ ಅವರಿಗೆ ಇಲ್ಲಿ ಮೊದಲ ಸಲ ಪೊಲೀಸ್‌ ಪೇದೆ ಪಾತ್ರ ನಿರ್ವಹಿಸಿರುವುದು ಖುಷಿ ಕೊಟ್ಟಿದೆಯಂತೆ. ಆ ಪಾತ್ರಕ್ಕೊಂದು ಗೌರವ ಇದೆ. ಸಾಕಷ್ಟು ಪೇದೆಗಳ ಹಾವ-ಭಾವ ನೋಡಿಕೊಂಡು ಆ ಪಾತ್ರ ಮಾಡಿದ್ದಾಗಿ ಹೇಳುತ್ತಾರೆ ಪ್ರಿಯಾಂಕ.

ನಾಯಕ ನಿರಂಜನ್‌ ಹಾಗು ನಾಯಕಿ ಸುರಭಿ ತಮ್ಮ ಪಾತ್ರ ಮತ್ತು ಚಿತ್ರ ಮೂಡಿಬಂದಿರುವ ಕುರಿತು ಮಾತು ಹಂಚಿಕೊಂಡರು.  ಗಾಯಕ ಕಮ್‌ ಸಂಗೀತ ನಿರ್ದೇಶಕ ಚೇತನ್‌ ಸೋಸ್ಕ ಹಾಡುಗಳ ಬಗ್ಗೆ ಹೇಳಿಕೊಂಡರು. ಅಂದು ಪ್ರಥಮ್‌ ಆಗಮಿಸಿ ಚಿತ್ರತಂಡಕ್ಕೆ ಶುಭ ಕೋರಿದರು.

Advertisement

Udayavani is now on Telegram. Click here to join our channel and stay updated with the latest news.

Next