Advertisement

ಬೀದರ್: ಕೋವಿಡ್ ವೈರಸ್ ಗೆ ಎರಡನೇ ಬಲಿ ; ಜಿಲ್ಲೆಯನ್ನು ಕಾಡುತ್ತಿದೆ ತಬ್ಲಿಘಿ, ಮುಂಬಯಿ ನಂಟು

08:21 AM May 16, 2020 | Hari Prasad |

ಬೀದರ್: ಜಿಲ್ಲೆಯಲ್ಲಿ ತಲ್ಲಣ ಮೂಡಿಸುತ್ತಿರುವ ಕೋವಿಡ್ ಸೋಂಕಿಗೆ ಎರಡನೇ ಬಲಿ ಆಗಿದೆ. ಆದರೆ ಈ ವಿಚಾರ ಇದೀಗ ತಡವಾಗಿ ಬೆಳಕಿಗೆ ಬಂದಿದೆ.

Advertisement

ಇನ್ನೊಂದೆಡೆ ದೆಹಲಿ, ಮುಂಬೈ ಬಳಿಕ ಈಗ ಜಿಲ್ಲೆಗೆ ಹೈದ್ರಾಬಾದ್ ಕಂಟಕ ಶುರುವಾಗಿದ್ದು, ಶುಕ್ರವಾರ ಬಾಲಕಿ ಸೇರಿ ಜಿಲ್ಲೆಯಲ್ಲಿ ಮತ್ತೆ 7 ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ. ಈ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಈಗ 56 ಕ್ಕೆ ಏರಿಕೆಯಾಗಿದೆ.

ತೀವ್ರ ಉಸಿರಾಟದ ತೊಂದರೆಯಿಂದ ಬ್ರಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದ ಹುಮನಾಬಾದ್ ತಾಲೂಕಿನ ಚಿಟಗುಪ್ಪಾ ಗ್ರಾಮದ 50 ವರ್ಷದ ಪಿ- 1041 ಸಂಖ್ಯೆಯ ರೋಗಿ ಮೇ 12ರಂದು ಸಾವನ್ನಪ್ಪಿದ್ದರು.

ಅವರ ಗಂಟಲು ದ್ರವ ಮಾದರಿ ಪರೀಕ್ಷಾ ವರದಿ ಶುಕ್ರವಾರ ಬಂದಿದ್ದು, ಕೋವಿಡ್ ಸೊಂಕು ಇದ್ದಿರುವುದು ದೃಢಪಟ್ಟಿದೆ. ಮೇ 2ರಂದು ಬೀದರನ ಓಲ್ಡ್ ಸಿಟಿಯ 82 ವರ್ಷದ ನಿವಾಸಿ (ಪಿ-590) ಈ ಮಹಾಮಾರಿಗೆ ಮೊದಲ ಬಲಿಯಾಗಿದ್ದರು.

ಕೇವಲ ಬೀದರ್ ನ ಒಂದು ಭಾಗಕ್ಕಷ್ಟೇ ಕಾಡುತ್ತಿದ್ದ ಸೋಂಕು ಈಗ ಜಿಲ್ಲೆಯ ಹಳ್ಳಿಗಳಿಗೂ ವ್ಯಾಪಿಸುತ್ತಿರುವುದು ಜನರಲ್ಲಿ ತೀವ್ರ ಆತಂಕವನ್ನುಂಟು ಮಾಡುತ್ತಿದೆ. ಜತೆಗೆ ಜಿಲ್ಲೆಗೆ ತಬ್ಲೀಘಿ ಮತ್ತು ಮುಂಬೈನ ನಂಟು ದೊಡ್ಡ ಕಂಟಕವಾಗಿ ಕಾಡುತ್ತಿದೆ.

Advertisement

ಶುಕ್ರವಾರದ ಪಾಸಿಟಿವ್ ಪ್ರಕರಣಗಳಲ್ಲಿ ಐದು ಸೋಂಕಿತರು ತಬ್ಲೀಘಿಗಳ ಮತ್ತು ಒಂದು ಕೇಸ್ ಮುಂಬೈನ್ ಸಂಪರ್ಕ ಇರುವುದು ಖಾತ್ರಿ ಆಗಿದೆ.

ಮುಂಬೈನಿಂದ ಬಂದಿರುವ ಬಸವಕಲ್ಯಾಣ ತಾಲೂಕಿನ ಧನ್ನೂರ(ಕೆ) ಗ್ರಾಮದ ವ್ಯಕ್ತಿಗೆ ಸೋಂಕು ತಗುಲಿದೆ. ಚಿಟಗುಪ್ಪ ಮತ್ತು ಧನ್ನೂರ (ಕೆ) ಗ್ರಾಮಗಳನ್ನು ಕಂಟೈನ್ಮೆಂಟ್ ಝೋನ್ ಆಗಿ ಘೋಷಿಸಿ ಲಾಕ್‌ಡೌನ್ ಮಾಡಲಾಗಿದೆ.

ನಗರದ ಕಂಟೈನ್ಮೆಂಟ್ ಝೋನ್ ನಲ್ಲಿ ಕೋವಿಡ್ ಆರ್ಭಟ ಹೆಚ್ಚಳಗೊಂಡಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ರ‍್ಯಾಂಡಮ್ ಪರೀಕ್ಷೆ ಶುರು ಮಾಡಿರುವುದರಿಂದ ಕಳೆದ ಐದು ದಿನಗಳಿಂದ ಪ್ರತಿ ದಿನ ಸೋಂಕಿತರು ಪತ್ತೆಯಾಗುತ್ತಿದ್ದಾರೆ.

ಜಿಲ್ಲೆಯಲ್ಲಿ ಈ ಐದು ದಿನಗಳಲ್ಲಿ 32 ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ. ಇದು ಜಿಲ್ಲೆಯ ಜನರಲ್ಲಿ ಆತಂಕ ಹೆಚ್ವಿಸುವಂತೆ ಮಾಡಿದರೆ, ಸೋಂಕು ನಿಯಂತ್ರಣಕ್ಕೆ ಸಮರ ನಡೆಸುತ್ತಿರುವ ಜಿಲ್ಲಾಡಳಿತಕ್ಕೆ ದೊಡ್ಡ ತಲೆ ನೋವಾಗಿ ಪರಿಣಮಿಸಿದೆ.

14 ವರ್ಷದ ಪಿ-990 ರೋಗಿಯು ಪಿ-936ರ, 10 ವರ್ಷದ ಪಿ-991 ರೋಗಿಯು ಪಿ-937ರ ಸಂಪರ್ಕ, 24 ವರ್ಷದ ಪಿ-999, 46 ವರ್ಷದ ಪಿ- 1037 ಮತ್ತು 38 ವರ್ಷದ ಪಿ-1043 ಸಂಖ್ಯೆ ರೋಗಿಯು ಕಂಟೈನ್ಮೆಂಟ್ ಝೋನ್ ಸಂಪರ್ಕದಿಂದ ಸೋಂಕಿಗೆ ಒಳಗಾಗಿದ್ದರೆ, 52 ವರ್ಷದ ಪಿ- 1041 ರೋಗಿ ಹೈದ್ರಾಬಾದ್ ಮತ್ತು 36 ವರ್ಷದ ಪಿ- 1042 ರೋಗಿಯು ಮುಂಬೈ ಸಂಪರ್ಕದಿಂದ ಸೋಂಕಿಗೆ ಒಳಗಾಗಿದ್ದಾರೆ ಎಂದು ಆರೋಗ್ಯ ಇಲಾಖೆ ಹೆಲ್ತ್ ಬುಲೇಟಿನ್ ತಿಳಿಸಿದೆ.

ಜಿಲ್ಲೆಯಲ್ಲಿ ಈಗ ಒಟ್ಟಾರೆ 56 ಪಾಸಿಟಿವ್ ಪ್ರಕರಣಗಳು ವರದಿ ಆದಂತಾಗಿದೆ. ಅದರಲ್ಲಿ ಎರಡು ಸಾವು ಸಂಭವಿಸಿದ್ದರೆ 15 ಜನರು ಡಿಸ್ಚಾರ್ಜ್ ಆಗಿದ್ದು, ಇನ್ನೂ 39 ಜನರು ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next