Advertisement

ಎಸ್‌ಇಝಡ್‌ ನಿರ್ಮಾಣಕ್ಕೆ ಎರಡನೇ ಯತ್ನ

12:27 PM Nov 24, 2017 | |

ಬೆಂಗಳೂರು: ದೇಶದ ನಾಲ್ಕನೇ ಅತಿ ಹೆಚ್ಚು ಸರಕು ಸಾಗಣೆ ಸಾಮರ್ಥ್ಯ ಹೊಂದಿರುವ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಆವರಣದಲ್ಲಿ ಮುಕ್ತ ವ್ಯಾಪಾರ ವಲಯ ಅಥವಾ ವಿಶೇಷ ಆರ್ಥಿಕ ವಲಯ (ಎಸ್‌ಇಝಡ್‌) ಸ್ಥಾಪನೆಗೆ ಉದ್ದೇಶಿಸಿದ್ದು, ಈ ಸಂಬಂಧ ಸಾಧಕ-ಬಾಧಕಗಳ ಅಧ್ಯಯನ ನಡೆದಿದೆ. 

Advertisement

ಕಳೆದ ಮೂರು ವರ್ಷಗಳಿಂದ ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಸರಕು ಸಾಗಣೆ ಸಾಮರ್ಥ್ಯ ಏರುಗತಿಯಲ್ಲಿದೆ. ಇದರಿಂದ ರಾಜ್ಯದ ಒಟ್ಟಾರೆ ವೃದ್ಧಿ ದರ (ಜಿಡಿಪಿ)ದಲ್ಲಿ ಶೇ.11ರಷ್ಟು ಕಾರ್ಗೊ ವಹಿವಾಟಿನ ಪಾಲುದಾರಿಕೆ ಇದೆ.

ಈ ಹಿನ್ನೆಲೆಯಲ್ಲಿ “ಕಾರ್ಗೊ ಹಬ್‌’ ಆಗಿ ಪರಿವರ್ತಿಸುವ ನಿಟ್ಟಿನಲ್ಲಿ ಸುಮಾರು ನೂರು ಎಕರೆ ಜಾಗದಲ್ಲಿ ಎಸ್‌ಇಝಡ್‌ ನಿರ್ಮಾಣಕ್ಕೆ ಉದ್ದೇಶಿಸಲಾಗಿದೆ ಎಂದು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿಗಮದ (ವ್ಯಾಪಾರ ಅಭಿವೃದ್ಧಿ, ಮಾರುಕಟ್ಟೆ) ಉಪಾಧ್ಯಕ್ಷ ರಾಜ್‌ ಅಂದ್ರಾಡೆ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ವಿಮಾನ ನಿಲ್ದಾಣದಲ್ಲಿ ಎಸ್‌ಇಝಡ್‌ ನಿರ್ಮಾಣಕ್ಕೆ ಬಿಐಎಎಲ್‌ನ ಎರಡನೇ ಪ್ರಯತ್ನ ಇದಾಗಿದೆ. 2008ರಲ್ಲಿ ಎಸ್‌ಇಝಡ್‌ಗೆ ಕೇಂದ್ರ ಸರ್ಕಾರದ ಅನುಮೋದನೆ ದೊರಕಿತ್ತು. ಆದರೆ, ಈ ಯೋಜನೆ ಪ್ರಗತಿ ಕಾಣದ ಹಿನ್ನೆಲೆಯಲ್ಲಿ ನಂತರ ಆ ಅನುಮೋದನೆಯನ್ನು ರದ್ದುಪಡಿಸಲಾಗಿತ್ತು. 

5.7 ಲಕ್ಷ ಮೆ.ಟ. ನಿರೀಕ್ಷೆ: ಪ್ರಸ್ತುತ ನಿಲ್ದಾಣದಲ್ಲಿ ಏರ್‌ ಕಾರ್ಗೊ ಸಾಮರ್ಥ್ಯ ವಾರ್ಷಿಕ 3.5 ಲಕ್ಷ ಮೆಟ್ರಿಕ್‌ ಟನ್‌ ಇದ್ದು, ಕಳೆದ ವರ್ಷ 3.2 ಲಕ್ಷ ಮೆಟ್ರಿಕ್‌ ಟನ್‌ ಇತ್ತು. ಕಾರ್ಗೊ ವಾರ್ಷಿಕ ಪ್ರಗತಿ ದರ ಶೇ. 8ರಷ್ಟಿದೆ. ಮುಂದಿನ ಐದು ವರ್ಷಗಳಲ್ಲಿ ಸರಕು-ಸಾಗಣೆ ಸಾಮರ್ಥ್ಯ 5.7 ಲಕ್ಷ ಮೆಟ್ರಿಕ್‌ ಟನ್‌ ತಲುಪಲಿದೆ. ಈ ವ್ಯಾಪಾರ ವೃದ್ಧಿಗೆ ಹಲವು ಅವಕಾಶಗಳಿಗಾಗಿ ಹುಡುಕಾಟ ನಡೆದಿದೆ.

Advertisement

ಈ ನಿಟ್ಟಿನಲ್ಲಿ ಮುಕ್ತ ವ್ಯಾಪಾರ ವಲಯ ಅಥವಾ ವಿಶೇಷ ಆರ್ಥಿಕ ವಲಯ ಕೂಡ ಒಂದಾಗಿದೆ. ಇದು ವಿಮಾನ ನಿಲ್ದಾಣ ವಿಸ್ತರಣೆ ಯೋಜನೆಯ ಭಾಗವಾಗಿದೆ ಎಂದೂ ಅವರು ಸ್ಪಷ್ಟಪಡಿಸಿದರು. ಅದರಲ್ಲೂ ಮುಖ್ಯವಾಗಿ ಈ “ಮುಕ್ತ ವ್ಯಾಪಾರ ವಲಯ’ದಲ್ಲಿ ಮೆಡಿಕಲ್‌ ಕಿಟ್‌ ತಯಾರು ಮಾಡಿ, ರಫ್ತು ಮಾಡುವ ಉದ್ದೇಶ ಹೊಂದಲಾಗಿದೆ. ಸದ್ಯ ಈ ಮೆಡಿಕಲ್‌ ಕಿಟ್‌ ಸಂಯುಕ್ತ ರಾಷ್ಟ್ರಗಳಲ್ಲಿ ಸಿದ್ಧಗೊಂಡು, ಬೇರೆ ಬೇರೆ ದೇಶಗಳಿಗೆ ಪೂರೈಕೆ ಆಗುತ್ತಿದೆ.

ಈ ಕಿಟ್‌ಗೆ ಸಂಬಂಧಿಸಿದ ಶೇ. 40ರಷ್ಟು ವಸ್ತುಗಳು ಭಾರತದಿಂದಲೇ ಸರಬರಾಜು ಆಗುತ್ತದೆ. ಹೀಗಿರುವಾಗ, ಇದನ್ನು ಇಲ್ಲಿಯೇ ತಯಾರು ಮಾಡುವ ಬಗ್ಗೆ ಚಿಂತನೆ ನಡೆದಿದೆ ಎಂದು ಬಿಐಎಎಲ್‌ ಅಧಿಕಾರಿಗಳು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಆಲ್‌ ಇಂಡಿಯಾ ಸ್ಯಾಟ್ಸ್‌ ಏರ್‌ಪೋರ್ಟ್‌ ಸರ್ವಿಸಸ್‌ ಪ್ರೈ.ಲಿ., ಸಹಾಯಕ ಪ್ರಧಾನ ವ್ಯವಸ್ಥಾಪಕ ಪ್ರತೀಕ್‌ ಮೆಹ¤ ಉಪಸ್ಥಿತರಿದ್ದರು.

ಅಂತಾರಾಷ್ಟ್ರೀಯ ಕೊರಿಯರ್‌ ಕೌಂಟರ್‌: “ಇ-ವಾಣಿಜ್ಯ’ ವಹಿವಾಟು ವೃದ್ಧಿಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಆವರಣದಲ್ಲಿ ಈ ಸಂಬಂಧ ಪ್ರತ್ಯೇಕ ಅಂತಾರಾಷ್ಟ್ರೀಯ ಕೊರಿಯರ್‌ ಕೌಂಟರ್‌ ತೆರೆಯಲು ಉದ್ದೇಶಿಸಲಾಗಿದೆ.

ಸುಮಾರು 9 ಎಕರೆ ಜಾಗವನ್ನು ಇದಕ್ಕಾಗಿ ಮೀಸಲಿಡಲಾಗಿದೆ. ಪ್ರಸ್ತುತ ತಿಂಗಳಿಗೆ ಸಾವಿರ ಟನ್‌ನಷ್ಟು ನಿರ್ವಹಣೆ ಮಾಡಲಾಗುತ್ತಿದೆ. ಈ ಪ್ರತ್ಯೇಕ ಕೋರಿಯರ್‌ ಕೌಂಟರ್‌ನಿಂದ ವಾರ್ಷಿಕ 60ರಿಂದ 70 ಸಾವಿರ ಕೋರಿಯರ್‌ ನಿರ್ವಹಣೆ ಮಾಡಬಹುದು ಎಂದು ನಿರೀಕ್ಷಿಸಲಾಗಿದೆ. 

ತಾಜಾತನ ಕಾಪಾಡಲು ಕೂಲ್‌ ಟ್ರಾಲಿ: ಬೇಗ ಹಾಳಾಗುವ ಹೂವು, ಹಣ್ಣು, ತರಕಾರಿ ಮತ್ತಿತರ ಸರಕುಗಳ ಸಾಗಣೆಗೆ ಏರ್‌ ಇಂಡಿಯಾ ಸ್ಯಾಟ್ಸ್‌ ಏರ್‌ಪೋರ್ಟ್‌ ಸರ್ವಿಸಸ್‌ ಪ್ರೈ.ಲಿ., “ಕೂಲ್‌ ಟ್ರಾಲಿ’ ಪರಿಚಯಿಸಿದೆ.

ಈ ನೂತನ ಟ್ರಾಲಿಯಲ್ಲಿ ಸಾಮಾನ್ಯ ಟ್ರಾಲಿಗಿಂತ ತಾಪಮಾನ 6 ಡಿಗ್ರಿ ಸೆಲ್ಸಿಯಸ್‌ ಕಡಿಮೆ ಇರುತ್ತದೆ. ಅಂದರೆ, ಶೈತ್ಯಾಗಾರದಲ್ಲಿ ಇದ್ದ ಉಷ್ಣಾಂಶ ಕೂಲ್‌ ಟ್ರಾಲಿಯಲ್ಲಿರುತ್ತದೆ. ಇದರಿಂದ ಬೇಗ ಹಾಳಾಗುವಂತಹ ಉತ್ಪನ್ನಗಳನ್ನು ಸುರಕ್ಷಿತವಾಗಿ ವಿಮಾನಗಳಿಗೆ ಸಾಗಿಸಲು ಅನುಕೂಲವಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next