Advertisement
ಎಲ್‌ಜಿಬಿಟಿ ಸಮುದಾಯಕ್ಕೂ ತನ್ನದೇ ಆದ ಹಕ್ಕುಗಳಿವೆ ಎಂದು ಮೊದಲು ಹೇಳಿದ್ದು ದೆಹಲಿ ಹೈಕೋರ್ಟ್. 2009ರಲ್ಲೇ ಈ ಸಂಬಂಧ ತೀರ್ಪು ನೀಡಿದ್ದ ಅದು ಸಲಿಂಗಕಾಮ ಅಪರಾಧವಲ್ಲ ಎಂದಿತ್ತು. ಈ ಮೂಲಕ ದೆಹಲಿ ಹೈಕೋರ್ಟ್ ಎಲ್‌ಜಿಬಿಟಿ ಸಮುದಾಯದ 140 ವರ್ಷಗಳ ಕಾಯುವಿಕೆಗೆ ಒಂದು ಅಂತ್ಯ ಹಾಡಿತ್ತು. ಆದರೆ, ದೆಹಲಿ ಹೈಕೋರ್ಟ್‌ನ ಈ ತೀರ್ಪನ್ನು 2013ರಲ್ಲಿ ರದ್ದು ಮಾಡಿದ್ದ ಸುಪ್ರೀಂ ಕೋರ್ಟ್ ಸಲಿಂಗ ಕಾಮ ಅಪರಾಧವೆಂದು ಘೋಷಿಸಿ ಎಲ್‌ಜಿಬಿಟಿ ಸಮುದಾಯದ ಮೇಲೆ ಬರೆ ಎಳೆದಿತ್ತು. ಅಲ್ಲದೆ ಇಂಥ ಕಾನೂನುಗಳನ್ನು ಸಂಸತ್ ರೂಪಿಸಬೇಕು ಎಂದು ಹೇಳಿ ಕೈತೊಳೆದುಕೊಂಡಿತ್ತು.
ಸುಪ್ರೀಂ ಕೋರ್ಟ್, “ಈಗ ಕಾಲ ಬದಲಾಗಿದ್ದು, ಇಂದಿನ ಪರಿಸ್ಥಿತಿಗೆ ತಕ್ಕಂತೆ, ಸಂವಿಧಾನದಲ್ಲಿ ನೀಡಿರುವ ಹಾಗೆ ಎಲ್ಲರಿಗೂ ಸಮಾನವಾಗಿ ಮೂಲಭೂತ ಹಕ್ಕು ಸಿಗುವಂತೆ ಮಾಡಬೇಕು ಎಂಬ ಉದ್ದೇಶದಿಂದ ಸಲಿಂಗ ಕಾಮ ಅಪರಾಧವಲ್ಲ ಎಂಬ ನಿರ್ಧಾರಕ್ಕೆ ಬರಲಾಗಿದೆ’ ಎಂದೂ
ಹೇಳಿದೆ. ತೀರ್ಪಿನ ವೇಳೆ ಪಂಚಪೀಠದಲ್ಲಿದ್ದ ನ್ಯಾಯಮೂರ್ತಿಗಳು ಉಲ್ಲೇಖೀಸಿರುವ ಅಂಶಗಳು ಗಮನ ಸೆಳೆಯುತ್ತಿವೆ. ಅದರಲ್ಲೂ ಇದೇ ಮೊದಲ ಬಾರಿಗೆ ಸಂವಿಧಾನ ಪೀಠದಲ್ಲಿ ಕುಳಿತು ತೀರ್ಪು ಬರೆದಿರುವ ನ್ಯಾ.ಇಂದು ಮಲ್ಲೋತ್ರಾ ಅವರು, ಇತಿಹಾಸ ಎಲ್‌ಜಿಬಿಟಿ ಸಮುದಾಯ ಮತ್ತು ಅವರ ಕುಟುಂಬದವರ ಕ್ಷಮೆ ಕೇಳಬೇಕು ಎಂದಿದ್ದಾರೆ. ಅಂದಿನಿಂದಲೂ ಇವರನ್ನು ಸಾಮಾಜಿಕವಾಗಿ ಕೆಟ್ಟದಾಗಿ ನೋಡುತ್ತಿದ್ದ ಸಮಾಜ ಉಳಿದವರಂತೆ ವಾಸಿಸಲು ಬಿಡಲೇ ಇಲ್ಲ. ಅವರನ್ನು ಮನುಷ್ಯರಂತೆಯೂ ನೋಡಲಿಲ್ಲ ಎಂದು ವಿಷಾದಿಸಿದ್ದಾರೆ. ನ್ಯಾ. ಇಂದು ಮಲ್ಲೋತ್ರಾ ಅವರ ಈ ಅಂಶ ಪರಿಗಣಿಸುವಂಥದ್ದಾಗಿದೆ. ಇಂದಿಗೂ ಸಮಾಜದಲ್ಲಿ ಎಲ್‌ಜಿಬಿಟಿ ಸಮುದಾಯದವರನ್ನು ಕೆಟ್ಟದಾಗಿ ನೋಡಿದ್ದೂ ಅಲ್ಲದೇ, ಅವರ ವಿರುದ್ಧ ಅಪರಾಧ ಪ್ರಕರಣಗಳನ್ನು ದಾಖಲಿಸುವ ಕೆಲಸವೂ ಆಗುತ್ತಿತ್ತು. ಸಾಮಾಜಿಕ ನೋವಿನ ನಡುವೆ, ಅಪರಾಧಿಗಳಂತೆ ಬದುಕುವ ಅನಿವಾರ್ಯತೆಗೆ ಈ ಸಮುದಾಯ ಸಿಲುಕಿತ್ತು. ಈಗ ಇಂಥ ನೋವುಗಳಿಗೆ ವಿರಾಮ ಹಾಡಿರುವ ಕೋರ್ಟ್ ಇವರಿಗೂ ಒಂದು ಗೌರವಯುತವಾದ ಬಾಳ್ವೆ ಇದೆ ಎಂದು ತೋರಿಸಿ ಕೊಟ್ಟಂತಾಗಿದೆ.
Related Articles
ತೀರ್ಪು ಕೊಟ್ಟಾಗಿದೆ, ಆದರೆ, ಇಂಥ ಸಂಬಂಧವುಳ್ಳವರನ್ನು ಇನ್ನು ಮುಂದಾದರೂ ಸಮಾಜ ಗೌರವಯುತವಾಗಿ ನೋಡುವುದನ್ನು ಕಲಿಯಬೇಕು. ಜತೆಗೆ ಸುಪ್ರೀಂ ಕೋರ್ಟ್ ಹೇಳಿದ ಹಾಗೆ, ಈ ಬಗ್ಗೆ ಅರಿವು ಮೂಡಿಸುವ ಕೆಲಸವೂ ಸರ್ಕಾರಗಳು ಮತ್ತು ಮಾಧ್ಯಮಗಳ ಕಡೆಯಿಂದ ಆಗಬೇಕು.
Advertisement