ಹೊಸದಿಲ್ಲಿ: ಅದಾನಿ ಸಮೂಹದ ಷೇರು ಅಕ್ರಮಕ್ಕೆ ಸಂಬಂಧಿಸಿದ ಸಾಗರೋತ್ತರ ಕಂಪೆನಿಗಳಲ್ಲಿ ಸೆಬಿ ಮುಖ್ಯಸ್ಥೆ ಮಾಧವಿ ಬುಚ್ ಹಾಗೂ ಅವರ ಪತಿಯೇ ಪಾಲು ಹೊಂದಿದ್ದಾರೆ ಎಂಬ ಸ್ಫೋಟಕ ಮಾಹಿತಿಯನ್ನು ಅಮೆರಿಕದ ಶಾರ್ಟ್ ಸೆಲ್ಲರ್ ಸಂಸ್ಥೆ ಹಿಂಡನ್‌ಬರ್ಗ್ ರಿಸರ್ಚ್ ಬಹಿರಂಗಪಡಿಸಿದೆ.
ಶನಿವಾರ ರಾತ್ರಿ ಈ ಕುರಿತು 106 ಪುಟಗಳ ವರದಿ ಬಿಡುಗಡೆ ಮಾಡಿರುವ ಹಿಂಡನ್‌ಬರ್ಗ್, ಅದಾನಿಯ ಬೇನಾಮಿ ಕಂಪೆನಿಗಳಲ್ಲಿ ತಾವೇ ಷೇರುಗಳನ್ನು ಹೊಂದಿರುವ ಕಾರಣಕ್ಕೆ ಸೆಬಿ ಮುಖ್ಯಸ್ಥೆಯಾಗಿರುವ ಮಾಧವಿ ಬುಚ್, ಅದಾನಿ ಗ್ರೂಪ್ ವಿರುದ್ಧದ ಷೇರು ಅವ್ಯವಹಾರ ಕುರಿತು ಸರಿಯಾಗಿ ತನಿಖೆ ಮಾಡಿಲ್ಲ ಎಂದು ಆಪಾದಿಸಿದೆ.
ಹಿಂಡನ್‌ಬರ್ಗ್ ವರದಿಯ ಪ್ರಕಾರ, ಮಾಧವಿ ಬುಚ್ ಮತ್ತು ಅವರ ಪತಿ ಬರ್ಮುಡಾ ಮತ್ತು ಮಾರಿಷಸ್‌ನಲ್ಲಿರುವ ನಕಲಿ ಕಂಪೆನಿಗಳಲ್ಲಿ ಹೂಡಿಕೆಗಳನ್ನು ಹೊಂದಿದ್ದಾರೆ.
ವಿಶೇಷ ಎಂದರೆ, ಅದೇ ಸಂಸ್ಥೆಗಳನ್ನು ಗೌತಮ್ ಅದಾನಿ ಅವರ ಸಹೋದರ ವಿನೋದ್ ಅದಾನಿ ಅವರು ಹಣಕಾಸು ಮಾರುಕಟ್ಟೆಯನ್ನು ತಿರುಚಲು ಬಳಸಿಕೊಂಡಿದ್ದಾರೆ.
ಮಾಧವಿ 2017ರಲ್ಲಿ ಸೆಬಿಯ ಪೂರ್ಣಾವಧಿ ಸದಸ್ಯರಾಗುವ ಮುಂಚೆಯೇ ಅಂದರೆ 2015ರಲ್ಲಿ ಈ ಹೂಡಿಕೆಗಳನ್ನು ಮಾಡಲಾಗಿದ್ದು, 2022ರ ಮಾರ್ಚ್ ನಲ್ಲಿ ಅವರು ಸೆಬಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದರು. ಮಾಧವಿ ಸೆಬಿ ಅಧ್ಯಕ್ಷೆಯಾಗಿ ಅಧಿಕಾರ ಸ್ವೀಕರಿಸುವ ವಾರದ ಮುಂಚೆಯೇ ಎಲ್ಲ ಹೂಡಿಕೆಗಳನ್ನು ಅವರ ಪತಿ ತಮ್ಮ ಹೆಸರಿಗೆ ವರ್ಗಾಯಿಸಿಕೊಂಡಿದ್ದರು. ಮಾಧವಿ ಸೆಬಿ ಅಧ್ಯಕ್ಷೆಯಾಗುವುದಕ್ಕೆ ಈ ಯಾವುದೇ ವ್ಯವಹಾರ ಗಳು ಅಡ್ಡಿಯಾಗದಿರಲಿ ಎಂದು ಅವರು ಈ ರೀತಿಯಾಗಿ ಮಾಡಿದ್ದರು ಎಂದು ವರದಿ ತಿಳಿಸಿದೆ. ಈ ದಂಪತಿಯ ಹೂಡಿಕೆಯು ಸಂಕೀರ್ಣವಾಗಿದ್ದು ಮತ್ತು ಹಲವು ಹಂತಗಳಲ್ಲಿದೆ. ಹಾಗಾಗಿ, ಈ ಹೂಡಿಕೆಯ ಸಾಚಾತನದ ಬಗ್ಗೆ ಸಾಕಷ್ಟು ಅನುಮಾನಗಳು ಏಳುತ್ತವೆ ಎಂದು ಅದು ತಿಳಿಸಿದೆ.
ತನಿಖೆಗೆ ಒಳಪಟ್ಟಿರುವ ಅದಾನಿ ಕಂಪೆನಿಗಳಲ್ಲಿ ಈ ದಂಪತಿಗಳ ಹೂಡಿಕೆ ಇದ್ದ ಕಾರಣಕ್ಕೆ ಅದಾನಿ ಗ್ರೂಪ್ ವಿರುದ್ಧ ನ್ಯಾಯಸಮ್ಮತ ಕ್ರಮಕ್ಕೆ ಸೆಬಿ ಹಿಂದೇಟು ಹಾಕಿರಬಹುದು ಎಂದು ಆಪಾದಿಸಿದೆ.
ವರದಿಯಲ್ಲಿ ಏನಿದೆ?
ಬರ್ಮುಡಾ, ಮಾರಿಷಸ್‌ನ ಶೆಲ್ ಕಂಪೆನಿಗಳ ಮೂಲಕ ಅದಾನಿ ಗ್ರೂಪ್ ಷೇರು ಅಕ್ರಮ
ಅದಾನಿಯ ಅದೇ ಕಂಪೆನಿಗಳಲ್ಲಿ ಸೆಬಿ ಮುಖ್ಯಸ್ಥೆ ಮಾಧವಿ, ಪತಿಯಿಂದ ಹೂಡಿಕೆ
2015ರಲ್ಲೇ ಮಾಧವಿ ಬುಚ್ ದಂಪತಿಯಿಂದ ಹೂಡಿಕೆ
ಅದಾನಿ ಗ್ರೂಪ್ ಆರೋಪದ ವಿರುದ್ಧ ಸೆಬಿ ನ್ಯಾಯಸಮ್ಮತ ತನಿಖೆ ಮಾಡಿಲ್ಲ