ಸಾಗರ: ಜನತೆಗೆ ಸರಿಯಾದ ಮಾಹಿತಿ ನೀಡಿಲ್ಲ. ಪ್ರವಾಸೋದ್ಯಮ ಇಲಾಖೆ ಯೋಜನೆ ರೂಪಿಸುವಾಗ ಸ್ಥಳೀಯ ಗ್ರಾಪಂ ಸಂಬಂಧಿತ ಹಳ್ಳಿಗಳ ಜನರ ಜೊತೆ ಮಾತುಕತೆ ನಡೆಸಿಲ್ಲ. ಶರಾವತಿ ಲಿಂಗನಮಕ್ಕಿ ಯೋಜನೆಗಳಿಂದ ನಿರಾಶ್ರಿತರಾದ ರೈತರು ಇಲ್ಲಿದ್ದಾರೆ. ಪಕ್ಕದಲ್ಲಿ ಶರಾವತಿ ಅಭಯಾರಣ್ಯವಿದೆ. ನದಿಯ ಎರಡೂ ದಂಡೆಗಳಲ್ಲಿ ಅರಣ್ಯ ಭೂಮಿ ಇದೆ. ಅರಣ್ಯ, ಪರಿಸರ ಪರವಾನಗಿ ಇಲ್ಲದೇ ಯೋಜನೆ ಜಾರಿ ಮಾಡಿದರೆ ಅದು ಅಕ್ರಮ ಯೋಜನೆ ಆಗುತ್ತದೆ. ನದಿಯ ಎರಡೂ ದಂಡೆಗೆ ಗೋಡೆ ಕಟ್ಟುವ ಪ್ರಸ್ತಾವನೆ ಮೂರ್ಖತನದ್ದು ಎಂದು ವೃಕ್ಷಲಕ್ಷ ಆಂದೋಲನದ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಅಭಿಪ್ರಾಯ ವ್ಯಕ್ತಪಡಿಸಿದರು.
ತಾಲೂಕಿನ ಜೋಗ ಜಲಪಾತದ ಬಳಿಯ ಜೋಗಿಮಠ ಎಂಬಲ್ಲಿನ ಪ್ರಸ್ತಾಪಿತ ಸೀತಾಕಟ್ಟೆ ಅಣೆಕಟ್ಟು ಪ್ರದೇಶಕ್ಕೆ ಭೇಟಿ ನೀಡಿದ ವೃಕ್ಷಲಕ್ಷ ತಜ್ಞರ ತಂಡದ ನೇತೃತ್ವ ವಹಿಸಿ ವರ್ಷವಿಡೀ ಜೋಗ ಜಲಪಾತ ನೋಡಲು ಅನುಕೂಲವಾಗುವ ಅಣೆಕಟ್ಟು ನಿರ್ಮಿಸುವ ಖಾಸಗಿ ಕಂಪನಿಯ ಯೋಜನೆಯ ಪರಿಸರ ದುಷ್ಪರಿಣಾಮಗಳ ಬಗ್ಗೆ ಅಧ್ಯಯನ ನಡೆಸಿದ ನಂತರ ಅವರು ಮಾತನಾಡಿದರು.
ಜೋಗ ಅಭಿವೃದ್ಧಿ ಪ್ರಾಧಿಕಾರ ಪ್ರವಾಸೋದ್ಯಮ ಅಭಿವೃದ್ಧಿ ಹೆಸರಲ್ಲಿ ಜೋಗ ಜಲಪಾತ ನೈಸರ್ಗಿಕ ಪರಿಸ್ಥಿತಿಗೆ ಅಡ್ಡಿಪಡಿಸುವ ಕಾರ್ಯಕ್ಕೆ ಮುಂದಾಗಬಾರದು. ಜಲಪಾತದ ಮೇಲ್ಭಾಗದಲ್ಲಿ ಅಣೆಕಟ್ಟು, ಗೋಡೆ ನಿರ್ಮಾಣ, ಪೈಪ್‌ಲೈನ್ ನಿರ್ಮಾಣ, ವಿದ್ಯುತ್ ತಂತಿ ಮಾರ್ಗ ಇತ್ಯಾದಿ ಕಾಮಗಾರಿ ಸಲ್ಲದು. ಅರಣ್ಯ ನಾಶ, ತೀವ್ರ ಮಾನವ ಹಸ್ತಕ್ಷೇಪಕ್ಕೆ ಸರ್ಕಾರ ಮುಂದಾಗಬಾರದು.
ಬದಲಾಗಿ ಜೋಗ ಜಲಪಾತಕ್ಕೆ ನದಿಗೆ ಇನ್ನೂ ಹೆಚ್ಚು ನೀರು ಹರಿದು ಬರಲು ಶರಾವತಿ ಕಣಿವೆ ರಕ್ಷಣೆಗೆ, ಜಲಾಯನ ಅಭಿವೃದ್ಧಿಗೆ ಸರ್ಕಾರ, ಜೋಗ ಪ್ರಾಧಿಕಾರ ಮುಂದಾಗಬೇಕು ಎಂದು ಒತ್ತಾಯಿಸಿದರು.
ನಿಯೋಗದಲ್ಲಿ ಡಾ| ಟಿ.ವಿ. ರಾಮಚಂದ್ರ, ಡಾ| ಕೇಶವ ಕೊರ್ಸೆ, ಡಾ| ಸುಭಾಸ್ ಚಂದ್ರನ್, ವೆಂಕಟೇಶ ಕೆ. ಮತ್ತಿತರರು ಇದ್ದರು.