Advertisement

ಇತ್ಯರ್ಥವಾಗದ ಸೀಟು ಹಂಚಿಕೆ ಬಿಕ್ಕಟ್ಟು

12:52 AM Mar 10, 2019 | Team Udayavani |

ಬೆಂಗಳೂರು: ಕಾಂಗ್ರೆಸ್‌ ಜತೆಗಿನ ಸೀಟು ಹಂಚಿಕೆಯಲ್ಲಿ ಯಾವ್ಯಾವ ಕ್ಷೇತ್ರ ತಮಗೆ ಸಿಗಲಿದೆ ಎಂಬ ನಿರೀಕ್ಷೆಯಲ್ಲಿರುವ ಜೆಡಿಎಸ್‌ ಇನ್ನೂ ಚುನಾವಣೆ ಸಿದಟಛಿತೆಯನ್ನೇ ಆರಂಭಿಸಿಲ್ಲ. ಚುನಾವಣೆಗಾಗಿ ಲೋಕಸಭೆ, ವಿಧಾನಸಭೆ ಕ್ಷೇತ್ರಾವಾರು, ಬೂತ್‌ ಮಟ್ಟದ ಯಾವುದೇ ಸಮಿತಿಯೂ ಇದುವರೆಗೂ ನೇಮಕಗೊಂಡಿಲ್ಲ. ಈ ಕುರಿತ ಕಾರ್ಯಕರ್ತರು, ಮುಖಂಡರ ಪ್ರಶ್ನೆಗೆ ಸೀಟು ಹಂಚಿಕೆಯಾಗಲಿ ಆಮೇಲೆ ನೋಡೋಣ ಎಂಬ ಉತ್ತರ ದೊರೆಯುತ್ತಿದೆ.

Advertisement

ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ರಚಿಸಿದ್ದ ಬೂತ್‌ ಸಮಿತಿಯೂ ವಿಸರ್ಜನೆ ಯಾದಂತಾಗಿದ್ದು, ಸೋಷಿಯಲ್‌
ಮೀಡಿಯಾ ವಿಭಾಗವೂ ಸಕ್ರಿಯವಾಗಿಲ್ಲ. ಹೀಗಾಗಿ, ಜೆಡಿಎಸ್‌ ಅಭ್ಯರ್ಥಿಗಳು ಪಕ್ಕಾ ಆಗಿರುವ ಮಂಡ್ಯ, ಹಾಸನ, ಶಿವಮೊಗ್ಗ ಕ್ಷೇತ್ರಗಳಲ್ಲಿ ಒಂದಷ್ಟು ಚಟುವಟಿಕೆ ಬಿಟ್ಟರೆ ಬೇರೆ ಎಲ್ಲ ಕ್ಷೇತ್ರಗಳಲ್ಲೂ ನಾಯಕರ ಸೂಚನೆಗಾಗಿ ಕಾಯುವಂತಾಗಿದೆ.

ಸಂಕ್ರಾಂತಿ ನಂತರ ಲೋಕಸಭೆ ಚುನಾವಣೆಗಾಗಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ.ದೇವೇಗೌಡರು ಹಾಗೂ ರಾಜ್ಯಾಧ್ಯಕ್ಷ ಎಚ್‌.ವಿಶ್ವನಾಥ್‌ ಅವರು ರಾಜ್ಯ ಪ್ರವಾಸದ ರೂಪು-ರೇಷೆ ನಿಗದಿಪಡಿಸಿದ್ದರಾದರೂ ಆಪರೇಷನ್‌ ಕಮಲ ಹಿನ್ನೆಲೆಯಲ್ಲಿ ಸಮ್ಮಿಶ್ರ ಸರ್ಕಾರದ ಅಸ್ತಿತ್ವಕ್ಕೆ ಧಕ್ಕೆಯುಂಟಾಗುವ ಬೆಳವಣಿಗೆಗಳು ನಡೆದ ಹಿನ್ನೆಲೆಯಲ್ಲಿ ರಾಜ್ಯಪ್ರವಾಸಕ್ಕೆ “ಬ್ರೇಕ್‌’ ಬಿದ್ದಿತ್ತು.

ಬಜೆಟ್‌ ನಂತರ ದೇವೇಗೌಡರು ಲೋಕಸಭೆವಾರು ಸಭೆಗೆ ಚಾಲನೆ ನೀಡಿದರಾದರೂ ಹಳೇ ಮೈಸೂರು ಭಾಗದ ಕ್ಷೇತ್ರಗಳಿಗೆ ಮಾತ್ರ ಅದು ಸೀಮಿತವಾಗಿತ್ತು. ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿಯವರು ಸಹ ಹಳೇ ಮೈಸೂರು ಭಾಗದ ಕ್ಷೇತ್ರಗಳ ಸಭೆ ನಡೆಸಿದರು. ಅದು ಬಿಟ್ಟರೆ ಬೇರೆ ಯಾವುದೇ ಚಟುವಟಿಕೆ ಇನ್ನೂ ಆರಂಭಗೊಂಡಿಲ್ಲ ರಾಜ್ಯಾಧ್ಯಕ್ಷ ಎಚ್‌.ವಿಶ್ವನಾಥ್‌ ಅವರು ಖುದ್ದು ಹೈದರಾಬಾದ್‌ ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಏಕಾಂಗಿಯಾಗಿಯೇ ಪ್ರವಾಸ ಮಾಡುತ್ತಿದ್ದಾರೆ. ಆದರೆ, ಲೋಕಸಭೆ ಚುನಾವಣೆಗೆ ಏನು ಮಾಡಬೇಕು? ಯಾವ ರೀತಿಯ ಕಾರ್ಯತಂತ್ರ ಎಂಬುದು ಅವರಿಗೂ ಇನ್ನೂ ಸ್ಪಷ್ಟತೆ ಇದ್ದಂತಿಲ್ಲ. ಪ್ರಚಾರ ಸಮಿತಿ ಅಧ್ಯಕ್ಷರನ್ನಾಗಿ ವೈ.ಎಸ್‌.ವಿ.ದತ್ತಾ ಅವರನ್ನು ನೇಮಕ ಮಾಡಲಾಗಿದೆಯಾದರೂ ಅವರಿಗೂ ಪೂರ್ಣ ಪ್ರಮಾಣದ ಹೊಣೆಗಾರಿಕೆ ವಹಿಸಿದಂತಿಲ್ಲ. ಜಿಲ್ಲಾಘಟಕ, ರಾಜ್ಯ ಘಟಕಗಳಿಗೂ ಇನ್ನೂ ಪದಾಧಿಕಾರಿಗಳ ನೇಮಕವೂ ಪೂರ್ತಿ ಆಗಿಲ್ಲ. ಹೀಗಾಗಿ, ಪಕ್ಷದ ಮಟ್ಟದಲ್ಲೂ ನಾಯಕರ ಆದೇಶಕ್ಕೆ ಕಾಯುವಂತಾಗಿದೆ. ಮಾ.8 ರಿಂದ 15 ರವರೆಗೆ ದಿನಕ್ಕೆ 3-4 ವಿಧಾನಸಭೆ ಕ್ಷೇತ್ರಗಳಂತೆ ಸಭೆಗಳನ್ನು ಜೆಪಿ ಭವನದಲ್ಲಿ ನಡೆಸಲು ತೀರ್ಮಾನಿಸಲಾಗಿತ್ತು. ಆದರೆ, ಅದನ್ನು ಮುಂದೂಡಲಾಗಿದೆ.

ಹೊಂದಾಣಿಕೆಯಾಗುತ್ತಾ?: ಈ ಮಧ್ಯೆ, ಕಾಂಗ್ರೆಸ್‌-ಜೆಡಿಎಸ್‌ ನಡುವೆ ಸಮ್ಮಿಶ್ರ ಸರ್ಕಾರ ರಚನೆಯಾದ ನಂತರ ಲೋಕಸಭೆ ಚುನಾವಣೆಗೆ ಒಟ್ಟಿಗೆ ಹೋಗುವುದು ಖಚಿತವಾಗಿತ್ತಾದರೂ ಇನ್ನೂ ಬಹುತೇಕ ಕ್ಷೇತ್ರ ಗಳಲ್ಲಿ ಎರಡೂ ಪಕ್ಷಗಳ ಕಾರ್ಯಕರ್ತರು-ಮುಖಂಡರ ನಡುವೆ ಹೊಂದಾಣಿಕೆ ಕಷ್ಟವಾಗುತ್ತಿದೆ. ಹಾಸನ, ಮಂಡ್ಯ, ಶಿವಮೊಗ್ಗದಲ್ಲೂ ಆ ಸಮಸ್ಯೆಯಿದೆ. ಜೆಡಿಎಸ್‌ ಬಯಸುತ್ತಿರುವ ಬೆಂಗಳೂರು ಉತ್ತರ, ಮೈಸೂರು, ತುಮಕೂರು, ಚಿಕ್ಕಬಳ್ಳಾಪುರ, ಉತ್ತರ ಕನ್ನಡ, ಉಡುಪಿ- ಚಿಕ್ಕಮಗಳೂರು, ವಿಜಯಪುರ, ಬೀದರ್‌ ಕ್ಷೇತ್ರಗಳಲ್ಲಿಯೂ ಪರಿಸ್ಥಿತಿ ಬೇರೆಯೇ ಇದೆ. ಕೆಲವು ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಬಲ ಹೆಚ್ಚಾಗಿದ್ದರೆ, ಕೆಲವು ಕ್ಷೇತ್ರಗಳಲ್ಲಿ ಜೆಡಿಎಸ್‌ ಬಲ ಹೆಚ್ಚಾಗಿದೆ. ನಾಯಕರ ಹಂತದಲ್ಲಿ ಒಟ್ಟಾಗಿ ಹೋಗಿ ಎಂದು ಸಂದೇಶ ನೀಡಿದರೂ ತಳಮಟ್ಟದಲ್ಲಿ ಹೊಂದಾಣಿಕೆ ಕಷ್ಟವಾಗಿದೆ.

Advertisement

ಎರಡೂ ಪಕ್ಷಗಳು ಒಮ್ಮತವಾಗಿಯೇ ಸೀಟು ಹೊಂದಾಣಿಕೆ ಮಾಡಿಕೊಂಡರೂ ಮನಃಪೂರ್ವಕವಾಗಿ ಕಾಂಗ್ರೆಸ್‌ನವರು ಜೆಡಿಎಸ್‌ ಪರ, ಜೆಡಿಎಸ್‌ನವರು ಕಾಂಗ್ರೆಸ್‌ ಅಭ್ಯರ್ಥಿ ಪರ ಕೆಲಸ ಮಾಡುತ್ತಾರಾ ಎಂಬ ಅನುಮಾನವೂ ಇದೆ. ಯಾವ್ಯಾವ ಪಕ್ಷಕ್ಕೆ ಯಾವ ಕ್ಷೇತ್ರ, ಯಾರು ಅಭ್ಯರ್ಥಿ ಎಂಬುದು ನಿಶ್ಚಯವಾದ ನಂತರವಷ್ಟೇ ಇದಕ್ಕೆ ಉತ್ತರ ದೊರೆಯಲಿದೆ.

ಸೀಟು ಹಂಚಿಕೆ ಪ್ರಕ್ರಿಯೆ ಪೂರ್ಣಗೊಂಡ ನಂತರ ಸ್ಪಷ್ಟತೆ ದೊರೆಯಲಿದ್ದು, ವ್ಯವಸ್ಥಿತವಾಗಿ ಚುನಾವಣೆ ಕೆಲಸವೂ ಚುರುಕಾಗಲಿದೆ. ಸಚಿವರು, ಶಾಸಕರು, ಹಾಗೂ ಮಾಜಿ ಶಾಸಕರಿಗೆ ಕ್ಷೇತ್ರಾವಾರು ಹೊಣೆಗಾರಿಕೆಯೂ ನೀಡಲಾಗುತ್ತದೆ. ನಮ್ಮ ಪಕ್ಷದ ಕಾರ್ಯಕರ್ತರು, ಮುಖಂಡರು ಮಾನಸಿಕವಾಗಿ ಚುನಾವಣೆ ಎದುರಿಸಲು ಸಜ್ಜಾಗಿದ್ದಾರೆ.
● ವೈ.ಎಸ್‌.ವಿ.ದತ್ತಾ, ಜೆಡಿಎಸ್‌ ಪ್ರಚಾರ ಸಮಿತಿ ಅಧ್ಯಕ್ಷ

ಎಸ್‌. ಲಕ್ಷ್ಮೀ ನಾರಾಯಣ 

Advertisement

Udayavani is now on Telegram. Click here to join our channel and stay updated with the latest news.

Next