Advertisement

ಸೀಟ್‌ ಬ್ಲಾಕಿಂಗ್‌ ದಂಧೆಯ ಕಡಿವಾಣಕ್ಕೆ ಅನುಷ್ಠಾನ ಅಚ್ಚುಕಟ್ಟಾಗಲಿ

03:41 PM Oct 08, 2020 | keerthan |

ವೃತ್ತಿಪರ ಶಿಕ್ಷಣ ಸಂಸ್ಥೆ ಅಥವಾ ಎಂಜಿನಿಯರಿಂಗ್‌ ಕಾಲೇಜುಗಳು ಹಾಗೂ ವಿದ್ಯಾರ್ಥಿಗಳಿಂದ ನಡೆಯುತ್ತಿರುವ ಸೀಟ್‌ ಬ್ಲಾಕಿಂಗ್‌ ದಂಧೆಗೆ ಕಡಿವಾಣ ಹಾಕಲು ರಾಜ್ಯ ಸರಕಾರ ಕರ್ನಾಟಕ ವೃತ್ತಿ ಶಿಕ್ಷಣ ಸಂಸ್ಥೆಗಳ (ಪ್ರವೇಶ ನಿಯಂತ್ರಣ ಮತ್ತು ಶುಲ್ಕ ನಿಗದಿ)-2006ರ ಕಾಯ್ದೆಗೆ ಈಗ ತಿದ್ದುಪಡಿ ತಂದಿದೆ. ತಿದ್ದುಪಡಿ ಕಾಯ್ದೆ-2020 ರಾಜ್ಯಪತ್ರವೂ ಪ್ರಕಟವಾಗಿದೆ.

Advertisement

ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸಿದ ಸಾಮಾನ್ಯ ಪ್ರವೇಶ ಪರೀಕ್ಷೆ(ಸಿಇಟಿ) ರ್‍ಯಾಂಕಿಂಗ್‌ ಮೂಲಕ ಸರಕಾರಿ ಕೋಟಾದಡಿ ಸೀಟು ಪಡೆದ ವಿದ್ಯಾರ್ಥಿಯು ಪ್ರಾಧಿಕಾರ ನಿಗದಿಪಡಿಸಿರುವ ಶುಲ್ಕ ಪಾವತಿಸಿ, ಸಂಬಂಧಪಟ್ಟ ಕಾಲೇಜಿಗೆ ನಿರ್ದಿಷ್ಟ ದಿನಾಂಕದೊಳಗೆ ದಾಖಲಾತಿ ಪಡೆಯಬೇಕು. ಒಂದೊಮ್ಮೆ ಕಾಲೇಜಿಗೆ ದಾಖಲಾತಿ ಪಡೆಯದೇ ಇದ್ದಲ್ಲಿ ಸೀಟು ಹಂಚಿಕೆಯ ಸಾಮಾನ್ಯ ಸುತ್ತು ಮುಗಿದ ಕೂಡಲೇ ಸೀಟನ್ನು ಪ್ರಾಧಿಕಾರಕ್ಕೆ ಹಿಂದಿರುಗಿಸಬೇಕು. ಇಲ್ಲವಾದರೆ ಪ್ರಾಧಿಕಾರದ

ಕಾರ್ಯಕಾರಿ ನಿರ್ದೇಶಕರು ಆ ಸೀಟನ್ನು ಮುಟ್ಟುಗೋಲು ಹಾಕಿಕೊಳ್ಳುತ್ತಾರೆ. ಅಲ್ಲದೆ, ನಿರ್ದಿಷ್ಟ ಸಮಯದೊಳಗೆ ಕಾಲೇಜಿಗೂ ಸೇರದೆ, ಸೀಟನ್ನು ಪ್ರಾಧಿಕಾರಕ್ಕೆ ವಾಪಸ್‌ ಮಾಡದೇ ಇದ್ದರೆ, ಅಭ್ಯರ್ಥಿಯು ಶುಲ್ಕದ 5 ಪಟ್ಟು ದಂಡ ಪಾವತಿಸಬೇಕು.

ಅಂದರೆ, ಸರಕಾರಿ ಕೋಟಾದ ಎಂಜಿನಿಯರಿಂಗ್‌ ಸೀಟಿಗೆ 58,000 ರೂ. ಶುಲ್ಕವಿದ್ದರೆ, 2.90 ಲಕ್ಷ ರೂ. ದಂಡ ಪಾವತಿಸಬೇಕಾಗುತ್ತದೆ. ಹಾಗೆಯೇ ಸೀಟು ಪಡೆದ ಅಭ್ಯರ್ಥಿಯು ಸಂಬಂಧಪಟ್ಟ ಕಾಲೇಜಿಗೆ ದಾಖಲಾಗದೇ ಇದ್ದಾಗ, ಕಾಲೇಜಿನ ಆಡಳಿತ ಮಂಡಳಿ ಅಥವಾ ಶಿಕ್ಷಣ ಸಂಸ್ಥೆ ಆ ಮಾಹಿತಿಯನ್ನು ಕ್ಲಪ್ತ ಸಮಯಕ್ಕೆ ಪ್ರಾಧಿಕಾರಕ್ಕೆ ನೀಡಬೇಕು. ಒಂದೊಮ್ಮೆ ಕಾಲೇಜಿನ ಆಡಳಿತ ಮಂಡಳಿ ಅಥವಾ ಶಿಕ್ಷಣ ಸಂಸ್ಥೆ ಅಭ್ಯರ್ಥಿ ಸಂಬಂಧಪಟ್ಟ ಕೋರ್ಸ್‌ಗೆ ಸೇರಿಕೊಳ್ಳದೇ ಇರುವ ಮಾಹಿತಿ ಪ್ರಾಧಿಕಾರಕ್ಕೆ ನೀಡದೇ, ಸೀಟು ಹಾಗೆಯೇ ಉಳಿದರೆ, ಆ ಸಂಸ್ಥೆಯೂ ವಿದ್ಯಾರ್ಥಿ ಶುಲ್ಕದ 5 ಪಟ್ಟು ದಂಡ ಪಾವತಿಸಬೇಕು. ಅಂದರೆ, 58 ಸಾವಿರ ರೂ. ಶುಲ್ಕವಿದ್ದರೆ, 2.90 ಲಕ್ಷ ದಂಡ ಪಾವತಿಸಬೇಕು ಎಂದು ತಿದ್ದುಪಡಿ ಕಾಯ್ದೆಯಲ್ಲಿ ಸ್ಪಷ್ಟವಾಗಿಸಿದೆ.

ಖಾಸಗಿ ವೃತ್ತಿಪರ ಅಥವಾ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ನಡೆಯುತ್ತಿರುವ ಸೀಟ್‌ ಬ್ಲಾಕಿಂಗ್‌ ದಂಧೆಗೆ ಕಡಿವಾಣ ಹಾಕಲು ಸರಕಾರ ಉತ್ತಮ ನಿರ್ಧಾರ ತೆಗೆದುಕೊಂಡಿದೆ. ಇದರ ಅನುಷ್ಠಾನವೂ ಅಷ್ಟೇ ಮುಖ್ಯವಾಗಿದೆ. ಸೀಟು ಹಂಚಿಕೆಯ ಅನಂತರ ನಿರಂತವಾಗಿ ಮೇಲ್ವಿಚಾರಣೆ ಮಾಡುವ ಕಾರ್ಯವೂ

Advertisement

ಆಗಬೇಕು. ಸರಕಾರಿ ಕೋಟಾದಡಿ ಸೀಟು ಪಡೆದು, ಆ ಸೀಟಿಗೆ ಅಭ್ಯರ್ಥಿ ದಾಖಲಾಗದೇ ಇದ್ದರೂ, ದಾಖಲಾಗಿದ್ದಾರೆ ಎಂದು ಸುಳ್ಳು ಮಾಹಿತಿ ನೀಡಿ, ಅನಂತರ ಅದನ್ನು ಮ್ಯಾನೇಜ್‌ಮೆಂಟ್‌ ಕೋಟಾದ ಸೀಟುಗಳಾಗಿ ಪರಿವರ್ತಿಸಿ, ದುಬಾರಿ ಶುಲ್ಕದಡಿ ಬೇರೆ ಅಭ್ಯರ್ಥಿಗಳನ್ನು ದಾಖಲಿಸಿಕೊಳ್ಳುವ ಪ್ರವೃತ್ತಿ ಕಳೆದ ಅನೇಕ ವರ್ಷಗಳಿಂದ ನಡೆಯುತ್ತಲೇ ಇದೆ. ಇದಕ್ಕೆ ಸಂಪೂರ್ಣ ಕಡಿವಾಣ ಬೀಳಬೇಕು ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸರಕಾರಿ ಕೋಟಾದಡಿ ಸೀಟು ಸಿಗುವಂತೆ ಮಾಡಬೇಕು. ಅನುಷ್ಠಾನದಲ್ಲಿ ಲೋಪವಾದರೆ, ಸೀಟ್‌ ಬ್ಲಾಕಿಂಗ್‌ ದಂಧೆಗೆ ಕಡಿವಾಣ ಹಾಕುವುದು ಕಷ್ಟ. ಇದಕ್ಕಾಗಿ ವೃತ್ತಿಪರ ಶಿಕ್ಷಣ ಸಂಸ್ಥೆಗಳು ಪರ್ಯಾಯ ಮಾರ್ಗ ಸೃಷ್ಟಿಸದಂತೆಯೂ ಎಚ್ಚರ ವಹಿಸಿಬೇಕು. ಇನ್ನು ವೈದ್ಯಕೀಯ ಸೀಟಿನ ವಿಚಾರದಲ್ಲೂ ಬ್ಲಾಕಿಂಗ್‌ ದಂಧೆ ಜೋರಾಗಿದೆ. ಕಾರಣ, ವೈದ್ಯಕೀಯ ಸೀಟುಗಳಿಗೆ ಬೇಡಿಕೆ ಹೆಚ್ಚಿದೆ. ಸೀಟಿನ ಪ್ರಮಾಣ ಕಡಿಮೆ ಇರುವುದರಿಂದ  ಸೀಟ್‌ ಬ್ಲಾಕಿಂಗ್‌ ಮೂಲಕ ಇನ್ನಷ್ಟು ಬೇಡಿಕೆ ಹೆಚ್ಚಿಸಿ, ದುಬಾರಿ ಶುಲ್ಕಕ್ಕೆ ಸೀಟು ಮಾರಾಟವಾಗುತ್ತದೆ. ಇದಕ್ಕೂ ಸರಕಾರ ಕಡಿವಾಣ ಹಾಕಲೇಬೇಕು. ತಿದ್ದುಪಡಿ ಕಾಯ್ದೆಯಲ್ಲಿ ದುಬಾರಿ ದಂಡ ವಿಧಿಸಲು ನಿಯಮ ರೂಪಿಸಿರುವುದು ಸ್ವಾಗತಾರ್ಹವಾಗಿದೆ

Advertisement

Udayavani is now on Telegram. Click here to join our channel and stay updated with the latest news.

Next