Advertisement
ಋತುಮಾನದಲ್ಲಿ ಉಂಟಾಗುವ ಬದಲಾವಣೆಗಳಿಂದ ಪ್ರಚೋದನೆಗೊಂಡು ತಲೆದೋರುವ ಖಿನ್ನತೆ ಅಥವಾ SADಯು ಸಾಮಾನ್ಯವಾಗಿ ಚಳಿಗಾಲ ಆರಂಭವಾಗುವ ಸಂದರ್ಭದಲ್ಲಿ ಉಂಟಾಗುತ್ತದೆ. ಈ ಸಮಯದಲ್ಲಿ ಹಗಲಿನ ಅವಧಿ ಕಡಿಮೆ ಇರುವುದು ಮತ್ತು ಹಗಲು ಬೆಳಕು ಕಡಿಮೆ ಇರುವುದು ಮಿದುಳಿನಲ್ಲಿ ನರಗಳಿಗೆ ಸಂಬಂಧಿಸಿದ ರಾಸಾಯನಿಕಗಳಲ್ಲಿ ಬದಲಾವಣೆಗಳನ್ನು ಉಂಟು ಮಾಡುತ್ತಿದ್ದು, ಇದು ಖಿನ್ನತೆಯ ಲಕ್ಷಣಗಳನ್ನು ಉಂಟುಮಾಡುತ್ತವೆ ಎನ್ನಲಾಗಿದೆ. ನಿದ್ದೆಗೆ ಸಂಬಂಧಿಸಿದ “ಮೆಲಟೋನಿನ್’ ಹಾರ್ಮೋನ್ ಈ ಸ್ಥಿತಿಯ ಜತೆಗೆ ರೋಗಶಾಸ್ತ್ರೀಯ ಸಂಬಂಧ ಹೊಂದಿದೆ ಎನ್ನಲಾಗಿದೆ. ಕತ್ತಲಿಗೆ ಪ್ರತಿಸ್ಪಂದನೆಯಾಗಿ ಮಿದುಳಿನ ಪಿನಿಯಲ್ ಗ್ರಂಥಿಯಲ್ಲಿ ಈ ಹಾರ್ಮೋನ್ ಉತ್ಪಾದನೆಯಾಗುತ್ತದೆ. ಇದು ಸರ್ಕೇಡಿಯನ್ ರಿದಂ ಅಥವಾ ನಮ್ಮ ದೇಹದಲ್ಲಿ ಕಾರ್ಯವೆಸಗುವ ನಿದ್ದೆ-ಎಚ್ಚರಕ್ಕೆ ಸಂಬಂಧಿಸಿದ ಸಮಯ ಚಕ್ರವನ್ನು ಸರಿಯಾಗಿರಿಸಲು ಸಹಾಯ ಮಾಡುತ್ತದೆ. ಋತುಮಾನೀಯ ಖಿನ್ನತೆಯ ಸಂದರ್ಭದಲ್ಲಿ ಮೆಲಟೋನಿನ್ ಹಾರ್ಮೋನ್ ಮಟ್ಟ ಹೆಚ್ಚು ಕಡಿಮೆಯಾಗುವ ಮೂಲಕ ಸರ್ಕೇಡಿಯನ್ ರಿದಂನಲ್ಲಿ ವ್ಯತ್ಯಯವಾಗುತ್ತದೆ.
Related Articles
Advertisement
ಸಣ್ಣ ಸಣ್ಣ ಪ್ರಚೋದನೆಗಳಿಂದಲೂ ಕಿರಿಕಿರಿಗೊಳ್ಳುವುದು
ಹತಾಶೆ, ತಪ್ಪಿತಸ್ಥ ಅಥವಾ ಯಾವುದಕ್ಕೂ ಪ್ರಯೋಜನವಿಲ್ಲದ ಎಂಬ ಭಾವನೆ
ಸಾಮಾನ್ಯವಾಗಿ ಸಂತೋಷಪಡುವ ಚಟುವಟಿಕೆಗಳಲ್ಲಿ ಆಸಕ್ತಿ ಇಲ್ಲದಿರುವುದು
ಸಾಮಾಜಿಕವಾಗಿ ತೊಡಗಿ ಕೊಳ್ಳದಿರುವುದು ಮತ್ತು ಒಂಟಿಯಾಗಿರುವುದಕ್ಕೆ ಹೆಚ್ಚು ಇಷ್ಟಪಡುವುದು
ಚೈತನ್ಯ ಕುಂದಿದಂತಿರುವುದು, ಆಲಸಿಯಾಗಿರುವುದು
ಗಮನ ಕೇಂದ್ರೀಕರಿಸಲು ಮತ್ತು ಏಕಾಗ್ರಗೊಳ್ಳಲು ತೊಂದರೆ
ಆತ್ಮಹತ್ಯೆಯ ಆಲೋಚನೆಗಳು
ಹೆಚ್ಚು ಹಸಿವಾಗುವುದು ಮತ್ತು ತೂಕ ಹೆಚ್ಚಿಸಿಕೊಳ್ಳುವುದು
ಲೈಂಗಿಕ ಆಸಕ್ತಿಯ ಕೊರತೆ
ಇದನ್ನು ಈ ಕೆಳಕಂಡಂತೆಯೂ ಕರೆಯುತ್ತಾರೆ:
ಋತುಮಾನೀಯ ಖಿನ್ನತೆ – ಸೀಸನಲ್ ಡಿಪ್ರಶನ್ ಋತುಮಾನೀಯ ಸಂದರ್ಭದ ಖಿನ್ನತೆಯ ತೊಂದರೆ – ಡಿಪ್ರಸಿವ್ ಡಿಸಾರ್ಡರ್ ವಿದ್ ಸೀಸನಲ್ ಪ್ಯಾಟರ್ನ್
ವಿಂಟರ್ ಬ್ಲೂಸ್ – ಚಳಿಗಾಲದ ಆರಂಭದ ದಿನಗಳಲ್ಲಿ ತಲೆದೋರುವುದರಿಂದ ಈ ಹೆಸರು.
ಎಸ್‌ಎಡಿಯ ಇನ್ನೊಂದು ವಿಧ ಇದೆ. ಇದು:
SADಯ ತದ್ವಿರುದ್ಧ (ರಿವರ್ಸ್ ಎಸ್ ಎಡಿ)/ ಬೇಸಗೆಯ ಬೇಸರ (ಸಮ್ಮರ್ ಸ್ಯಾಡ್‌ನೆಸ್)/ ವಸಂತ ಆರಂಭದ ಎಸ್‌ಎಡಿ: ಚಳಿಗಾಲದ ಕೊನೆಯ ದಿನಗಳಲ್ಲಿ ಅಥವಾ ಬೇಸಗೆ/ ವಸಂತ ಋತುವಿನ ಆರಂಭದ ದಿನಗಳಲ್ಲಿ ಬೇಸರ, ಖಿನ್ನತೆ ತಲೆದೋರುತ್ತದೆ. ಆದರೆ ಈ ವಿಧವಾದ ತೊಂದರೆ ಕಾಣಿಸಿಕೊಳ್ಳುವುದು ಕಡಿಮೆ.
ಬೇಸಗೆಯ ಖಿನ್ನತೆಯನ್ನು ಹೊಂದಿರುವವರು ಈ ಕೆಳಗಿನ ಲಕ್ಷಣಗಳನ್ನು ಹೊಂದಿರಬಹುದು:
ಆತಂಕ
ಕಿರಿಕಿರಿಗೊಳ್ಳುವುದು, ಸಿಟ್ಟಾಗುವುದು
ಹಸಿವಿಲ್ಲದಿರುವಿಕೆ ಮತ್ತು ತೂಕ ಕಳೆದುಕೊಳ್ಳುವುದು
ನಿದ್ದೆ ಹೋಗಲು ತೊಂದರೆ
ಕೈಕಾಲುಗಳು ಭಾರವಾದಂತೆ ಅನಿಸುವುದು
ಈ ತೊಂದರೆ ಕಾಣಿಸಿಕೊಳ್ಳುವ ವರ್ಷದ ನಿರ್ದಿಷ್ಟ ಅವಧಿಯಲ್ಲಿ ಎಸ್‌ಎಡಿಯ ಲಕ್ಷಣಗಳು ಒಮ್ಮೆ ಉಂಟಾಗಿ ಕಡಿಮೆಯಾದ ಬಳಿಕ ಮತ್ತೆ ಮೇನಿಯಾ ಅಥವಾ ಹೈಪೊಮೇನಿಯಾ ಎಪಿಸೋಡ್ ಆಗಿ ಪುನರಾವರ್ತನೆ ಕಾಣುತ್ತದೆ, ಇದು ಮೇಜರ್ ಡಿಪ್ರಸಿವ್ ಡಿಸಾರ್ಡರ್‌ನ ಒಂದು ಉಪ ವಿಧವಾಗಿದೆ ಎಂದು ನಂಬಲಾಗಿದೆ. ಡಿಪ್ರಸಿವ್ ಡಿಸಾರ್ಡರ್ ವರ್ಷದ ಯಾವುದೇ ಅವಧಿಯಲ್ಲಿಯೂ ಕಂಡುಬರಬಹುದಾಗಿದೆ, ಆದರೆ ಎಸ್‌ಎಡಿ ವರ್ಷದ ನಿರ್ದಿಷ್ಟ ಸಮಯದಲ್ಲಿ ಅಂದರೆ ಚಳಿಗಾಲ ಹತ್ತಿರವಾಗುವಾಗ ಆರಂಭಗೊಂಡು ವಸಂತ ಕಾಲಿಡುವಾಗ ಪರಿಹಾರವಾಗುತ್ತದೆ. ಪ್ರತೀ ವರ್ಷವೂ ಇದೇ ರೀತಿಯಲ್ಲಿ ಪುನರಾವರ್ತನೆಗೊಳ್ಳುವುದನ್ನು ಕಾಣಬಹುದಾಗಿದೆ. ಆತಂಕ, ಹೆಚ್ಚು ನಿದ್ದೆ, ಹೆಚ್ಚು ಆಹಾರ ಸೇವಿಸುವುದು ಇತ್ಯಾದಿ ಲಕ್ಷಣಗಳು ಖಿನ್ನತೆಯ ಲಕ್ಷಣಗಳಿಗಿಂತ ಭಿನ್ನವಾಗಿವೆ. ಈ ಲಕ್ಷಣಗಳ ತೀವ್ರತೆ ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತದೆ.
ಎಸ್‌ಎಡಿಯ ರೋಗಶಾಸ್ತ್ರೀಯತೆ ಖಚಿತವಾಗಿ ತಿಳಿಯದೆ ಇದ್ದರೂ ಅಧ್ಯಯನಗಳು ಕೆಳಕಂಡ ಅಪಾಯಾಂಶಗಳನ್ನು ತೋರಿಸಿಕೊಟ್ಟಿವೆ:
ವಂಶಪಾರಂಪರ್ಯವಾಗಿರುವುದು ಕಂಡುಬಂದಿದೆ
ಮಹಿಳೆಯರಲ್ಲಿ ಹೆಚ್ಚು ಕಂಡುಬರುತ್ತದೆ ಲಿಂಗಾನುಪಾತ ವ್ಯತ್ಯಯ 2:1ರಿಂದ 9:1ರ ವರೆಗೆ ಕಂಡುಬರುತ್ತದೆ
ಶೇಕಡಾ 10ರಿಂದ 20ರಷ್ಟು ಪುನರಾವರ್ತಿತ ಖಿನ್ನತೆಯ ಪ್ರಕರಣಗಳು ಋತುಮಾನೀಯ ಬದಲಾವಣೆಗಳನ್ನು ಹೊಂದಿಕೊಂಡಿರುತ್ತವೆ.
ಬೈಪೋಲಾರ್ ಡಿಸಾರ್ಡರ್, ನಿರ್ದಿಷ್ಟವಾಗಿ ಬೈಪೋಲಾರ್ 2 ಡಿಸಾರ್ಡರ್‌ನಲ್ಲಿ ಕೂಡ ಕಂಡುಬರುತ್ತದೆ
ಉತ್ತರ ಯುರೋಪ್ ಮತ್ತು ಐಸ್‌ಲ್ಯಾಂಡ್ ಬಿಟ್ಟು ಉತ್ತರ ಅಟ್ಲಾಂಟಿಕ್‌ನಂತಹ ಪ್ರದೇಶಗಳಲ್ಲಿ ಚಳಿಗಾಲದ ಖಿನ್ನತೆ ಹೆಚ್ಚು ಕಂಡುಬರುತ್ತದೆ
ಭಾರತದಂತಹ ದೇಶಗಳಲ್ಲಿ ಬೇಸಗೆಯ ಖಿನ್ನತೆ ಹೆಚ್ಚು ಕಂಡುಬರುತ್ತದೆ
ಸೆರಟೋನಿನ್ ಅನಿಯಮಿತವಾಗಿರುತ್ತದೆ ಮೆಲಟೋನಿನ್ ಅಸಮತೋಲನ ಕಂಡುಬರುತ್ತದೆ
ವಿಟಮಿನ್ ಡಿ ಕೊರತೆ ಇರುತ್ತದೆ.
ಪರಿಹಾರ
ಸೂರ್ಯನ ಬಿಸಿಲಿಗೆ ಹೆಚ್ಚು ಒಡ್ಡಿಕೊಳ್ಳುವುದು, ಬೆಳಕಿನ ಚಿಕಿತ್ಸೆ, ಔಷಧ ಚಿಕಿತ್ಸೆ, ಮನೋಶಾಸ್ತ್ರೀಯ ಚಿಕಿತ್ಸೆ ಮತ್ತು ಹೆಚ್ಚುವರಿ ಜೀವ ಶೈಲಿ ಬದಲಾವಣೆಗಳಿಂದ ಚಿಕಿತ್ಸೆಗೆ ಒಳಪಡಿಸಲಾಗುತ್ತದೆ.
ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳುವಿಕೆ: ಮನೆಯಿಂದ ಹೊರಗೆ ಹೆಚ್ಚು ಕಾಲ ಕಳೆಯುವುದು ಅಥವಾ ಕಿಟಕಿಯ ಬಳಿ ಇದ್ದು ಸೂರ್ಯನ ಕಿರಣಗಳಿಗೆ ಒಡ್ಡಿಕೊಳ್ಳುವುದರಿಂದ ಲಕ್ಷಣಗಳನ್ನು ಸ್ವಲ್ಪ ಮಟ್ಟಿಗೆ ಕಡಿಮೆ ಮಾಡಿಕೊಳ್ಳಬಹುದು.
ಬೆಳಕಿನ ಚಿಕಿತ್ಸೆ: ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳುವ ಚಿಕಿತ್ಸೆಯಿಂದ ಹೆಚ್ಚು ಪರಿಣಾಮ ಉಂಟಾಗದಿದ್ದರೆ ವಿಶೇಷವಾದ ಫ್ಲೊರೊಸೆಂಟ್ ಬೆಳಕಿಗೆ ದಿನದ ನಿರ್ದಿಷ್ಟ ಸಮಯದಲ್ಲಿ ನಿಯಮಿತವಾಗಿ ಒಡ್ಡಿಕೊಳ್ಳುವುದು ಚಿಕಿತ್ಸಾತ್ಮಕ ಪರಿಣಾಮ ಬೀರುವುದು ತಿಳಿದುಬಂದಿದೆ. ತಲೆನೋವು, ಕಣ್ಣಿಗೆ ಒತ್ತಡ ಮತ್ತು ಸೈಕೊಮೋಟರ್ ಎಜಿಟೇಶನ್ ಇದರ ಅಡ್ಡ ಪರಿಣಾಮಗಳಾಗಿವೆ.
ಔಷಧ ಚಿಕಿತ್ಸೆ: ಈ ಹಿಂದಿನ ಚಿಕಿತ್ಸೆಯ ಇತಿಹಾಸ, ಅನಾರೋಗ್ಯದ ತೀವ್ರತೆ, ಸುರಕ್ಷೆ, ವೆಚ್ಚ, ಸಹಿಸುವಿಕೆ ಮತ್ತು ರೋಗಿಯ ಆಯ್ಕೆಗಳನ್ನು ಆಧರಿಸಿ ಆ್ಯಂಟಿಡಿಪ್ರಸೆಂಟ್ ಚಿಕಿತ್ಸೆ ನೀಡಲಾಗುತ್ತದೆ. ವೈದ್ಯರ ಶಿಫಾರಸಿನ ಮೇರೆಗೆ ನೀಡಲಾಗುವ ಈ ಔಷಧಗಳು ಮಿದುಳಿನ ರಾಸಾಯನಿಕ ಅಸಮತೋಲನವನ್ನು ಸರಿಪಡಿಸಲು ಸಹಾಯ ಮಾಡುತ್ತವೆ. ಈ ಔಷಧಗಳನ್ನು ತೆಗೆದುಕೊಳ್ಳುವ ಸಂದರ್ಭದಲ್ಲಿ ವೈದ್ಯರ ಸಲಹೆಯನ್ನು ಪಾಲಿಸುವುದು ಅತೀ ಮುಖ್ಯವಾಗಿದೆ.
ಮನೋಶಾಸ್ತ್ರೀಯ ಚಿಕಿತ್ಸೆಯಲ್ಲಿ ಗ್ರಹಣೇಂದ್ರಿಯ ಸಂಬಂಧಿ ವರ್ತನಾತ್ಮಕ ಚಿಕಿತ್ಸೆ, ವೈಯಕ್ತಿಕ ಚಿಕಿತ್ಸೆ, ನೆರವಿನ ಚಿಕಿತ್ಸೆ, ಕುಟುಂಬ ಕೇಂದ್ರಿತ ಚಿಕಿತ್ಸೆಗಳು ಸೇರಿವೆ. ಜೀವನ ಶೈಲಿ ಬದಲಾವಣೆಗಳಲ್ಲಿ ಆರೋಗ್ಯಪೂರ್ಣವಾದ ಸಮತೋಲಿತ ಆಹಾರ ಸೇವನೆ, ನಿದ್ದೆ ಸರಿಯಾಗಿ ಮಾಡುವುದು, ನೈಸರ್ಗಿಕ ಸೂರ್ಯನ ಬೆಳಕಿಗೆ ದಿನವೂ ಒಡ್ಡಿಕೊಳ್ಳುವುದು, ಮನೆಯೊಳಗೆ ಕೂಡ ಹೆಚ್ಚು ಶುಭ್ರವಾದ ಬೆಳಕಿರುವಂತೆ ಮಾಡುವುದು, ಮನೆ ಮತ್ತು ಉದ್ಯೋಗ ಸ್ಥಳದಲ್ಲಿ ಹೆಚ್ಚು ಬೆಳಕಿರುವಂತೆ ನೋಡಿಕೊಳ್ಳುವುದು, ಒತ್ತಡದ ಸನ್ನಿವೇಶಗಳನ್ನು ಆದಷ್ಟು ಕಡಿಮೆ ಮಾಡಿಕೊಳ್ಳುವುದು, ನಿಯಮಿತವಾಗಿ ವ್ಯಾಯಾಮ ಮಾಡುವುದು, ಮನೋಲ್ಲಾಸದ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವುದು, ಸಂಗೀತ ಮತ್ತು ಕಲಾ ಚಿಕಿತ್ಸೆ, ಕುಟುಂಬ ಸದಸ್ಯರು ಮತ್ತು ಆಪ್ತರ ಜತೆಗೆ ನಿಮ್ಮ ಭಾವನಾತ್ಮಕ ಬದಲಾವಣೆಗಳ ಕುರಿತು ಹೆಚ್ಚು ಮುಕ್ತವಾಗಿ ಹೇಳಿಕೊಂಡು ಅಗತ್ಯ ಬಿದ್ದಾಗ ಸಹಾಯ ಪಡೆದುಕೊಳ್ಳುವುದು ಸೇರಿವೆ.