ಒಮ್ಮೊಮ್ಮೆ ಕೆಲ ಚಿತ್ರದ ಶೀರ್ಷಿಕೆಗಳೇ ಆ ಚಿತ್ರದೊಳಗಿನ ಗಟ್ಟಿತನ ಮತ್ತು ಅದರಲ್ಲಿರುವ ತಾಕತ್ತಿನ ಬಗ್ಗೆ ಹೇಳುತ್ತವೆ. ಇನ್ನೂ ಕೆಲವು ಚಿತ್ರಗಳ ಶೀರ್ಷಿಕೆಗಳು ಕುತೂಹಲ ಮೂಡಿಸಿದರೂ, ಚಿತ್ರ ಬಿಡುಗಡೆ ಬಳಿಕ ಆ ಕುತೂಹಲ ಮಾಯವಾಗಿರುತ್ತದೆ. ಕನ್ನಡದಲ್ಲಿ ಸದ್ಯದ ಮಟ್ಟಿಗೆ ವಿಭಿನ್ನ ಶೀರ್ಷಿಕೆ ಹೊತ್ತು ಬರುವ ಚಿತ್ರಗಳದ್ದೇ ಕೊಂಚ ಸುದ್ದಿ. ಆ ಸಾಲಿಗೆ “ಅರಬ್ಬಿ ಕಡಲ ತೀರದಲ್ಲಿ’ ಚಿತ್ರವೂ ಸೇರಿದೆ.
ಹಾಗಂತ, ಇದು ತನ್ನೊಳಗಿನ ತಾಕತ್ತನ್ನು ಹೇಳುತ್ತದೆಯೋ, ಅಲ್ಲಿರುವ ಗಟ್ಟಿತನವನ್ನು ತೋರಿಸುತ್ತದೆಯೋ ಎಂಬುದಕ್ಕೆ ಸಿನಿಮಾ ಬರುವವರೆಗೆ ಕಾಯಬೇಕು. ಹಾಗಂತ, ಬಹಳ ದಿನ ಕಾಯಬೇಕಿಲ್ಲ. ಮಾ.15 ರಂದು ಚಿತ್ರ ರಿಲೀಸ್ ಆಗುತ್ತಿದೆ. ಕೃಷ್ಣೇಗೌಡ ಅವರು ಈ ಚಿತ್ರದ ನಿರ್ಮಾಪಕರು. ಅಷ್ಟೇ ಅಲ್ಲ, ಬಹಳ ವರ್ಷಗಳ ಬಳಿಕ ಅವರೇ ಈ ಚಿತ್ರದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ.
ಇನ್ನು, ನಿರ್ದೇಶಕ ಉಮಾಕಾಂತ್ ಅವರಿಗೆ ಇದು ನಿರ್ದೇಶನದ 16 ನೇ ಚಿತ್ರ. ಸಿನಿಮಾ. ಈ ಚಿತ್ರದ ಶೀರ್ಷಿಕೆ ಕೇಳಿದೊಡನೆ, ಒಂದಷ್ಟು ಕುತೂಹಲ ಮೂಡಿಸುವುದು ನಿಜ. ಆ ಕುತೂಹಲ ಎಂಥದ್ದು ಎಂಬುದಕ್ಕೆ ಚಿತ್ರತಂಡ ಒಂದಷ್ಟೂ ಮಾಹಿತಿಯನ್ನು ಬಿಟ್ಟುಕೊಟ್ಟಿಲ್ಲ. ಆದರೆ, ಇದೊಂದು ನೈಜ ಘಟನೆ ಇಟ್ಟುಕೊಂಡು ಮಾಡಿದ ಸಿನಿಮಾ ಎಂಬುದಂತೂ ನಿಜ. ಈ ಕುರಿತು ಹೇಳುವ ನಿರ್ಮಾಪಕ ಕಮ್ ನಟ ಕೃಷ್ಣೇಗೌಡ, “ಇದು ಕೊಯಮತ್ತೂರು ಭಾಗದಲ್ಲಿ ನಡೆದ ಒಂದು ನೈಜ ಘಟನೆ ಇಟ್ಟುಕೊಂಡು ಮಾಡಿದ ಚಿತ್ರ.
ಹಾಗಂತ, ನೈಜ ಘಟನೆಯೇ ಚಿತ್ರದಲ್ಲಿಲ್ಲ. ಸಿನಿಮಾಗೆ ಏನೆಲ್ಲಾ ಬೇಕೋ ಅದನ್ನು ಬದಲಾವಣೆ ಮಾಡಿಕೊಂಡು ಹೊಸಬಗೆಯ ಕಥೆ ಹೇಳುವ ಪ್ರಯತ್ನ ಮಾಡಲಾಗಿದೆ’ ಎಂಬುದು ಕೃಷ್ಣೇಗೌಡ ಅವರ ಮಾತು. “ಹಲವು ವರ್ಷಗಳ ಬಳಿಕ ಇಲ್ಲಿ ಬಣ್ಣ ಹಚ್ಚಿದ್ದೇನೆ. ಸೈಕೋ ಪಾತ್ರ ಮೂಲಕ ಕಾಣಿಸಿಕೊಳ್ಳುತ್ತಿದ್ದೇನೆ. ಇದು ನನ್ನ ಚಿತ್ರ ಅಂತ ಹೇಳುತ್ತಿಲ್ಲ. ಇದರ ಮೇಲೆ ನಂಬಿಕೆ ಇದೆ. ಇಲ್ಲಿರುವ ಪಾತ್ರಗಳು, ತಾಣಗಳು ಎಲ್ಲವೂ ಕಥೆಗೆ ಪೂರಕವಾಗಿವೆ.
ನನಗೆ ತೃಪ್ತಿ ಎನಿಸುವ ಸಿನಿಮಾವೊಂದನ್ನು ಕಟ್ಟಿಕೊಡಬೇಕೆಂಬ ಆಸೆ ಇತ್ತು. ಅದು ಈ ಮೂಲಕ ಈಡೇರಿದೆ. ಈ ಚಿತ್ರ ಮಾಡಿದ್ದು ನನಗೆ ಆತ್ಮತೃಪ್ತಿ ಇದೆ’ ಎಂಬುದು ಕೃಷ್ಣೇಗೌಡ ಹೇಳಿಕೆ. ನಿರ್ದೇಶಕ ಉಮಾಕಾಂತ್ ಅವರಿಲ್ಲಿ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ ಮಾಡಿದ್ದಾರಂತೆ. ಹೊಸತರಹದ ಚಿತ್ರ ಮಾಡಬೇಕು ಅಂತ ಯೋಚಿಸುತ್ತಿದ್ದಾಗ, ಅವರು ಒಂದಷ್ಟು ವಿದೇಶಿಯ ಸಸ್ಪೆನ್ಸ್ ಚಿತ್ರಗಳನ್ನು ನೋಡಿದ್ದಾರೆ.
ಕೊನೆಗೆ, ಹೊಸದೊಂದು ಕಾನ್ಸೆಪ್ಟ್ ಹೊಳೆದದ್ದೇ ತಡ, ಈ ಚಿತ್ರ ಶುರುಮಾಡಿದ್ದಾರೆ. ಆ ಹೊಸ ಕಾನ್ಸೆಪ್ಟ್ ಹೇಗಿರುತ್ತೆ ಎಂಬುದಕ್ಕೆ ಸಿನಿಮಾ ನೋಡಬೇಕು. ಇಲ್ಲಿ ವೈಷ್ಣವಿ ನಾಯಕಿಯಾಗಿದ್ದಾರೆ. ಅವರದು ನರ್ಸ್ ಕಮ್ ಜರ್ನಲಿಸ್ಟ್ ಪಾತ್ರವಂತೆ. ಈ ಚಿತ್ರ ಅವರಿಗೊಂದು ಒಳ್ಳೆಯ ಗಿಫ್ಟ್ ಅಂತೆ. ರಂಜಿತಾರಾವ್ ಕೂಡ ಇನ್ನೊಬ್ಬ ನಾಯಕಿಯಾಗಿದ್ದು, ಅವರಿಗಿದು ಮೊದಲ ಅನುಭವ. ಸಿನಿಮಾ ಎದುರು ನೋಡುತ್ತಿರುವ ಅವರಿಗೆ ಭಯ, ಖುಷಿ ಎರಡೂ ಇದೆಯಂತೆ.