ಯಳಂದೂರು: ತಾಲೂಕಿನ ಪ್ರಮುಖ ಪ್ರವಾಸಿ ತಾಣ, ಪುಣ್ಯ ಕ್ಷೇತ್ರವೂ ಆದ ಬಿಳಿಗಿರಿರಂಗನಬೆಟ್ಟಕ್ಕೆ ನಾಡಿನಾದ್ಯಂತ ಲಕ್ಷಾಂತರ ಪ್ರವಾಸಿಗರು ಭೇಟಿ ನೀಡುತ್ತಾರೆ. ಇಂತಹ ಸ್ಥಳದಲ್ಲಿ ಸಮರ್ಪಕ ಕುಡಿ ಯುವ ನೀರಿನ ವ್ಯವಸ್ಥೆ ಮಾಡದಿರುವುದು ಅಧಿಕಾರಿ ಗಳ ನಿರ್ಲಕ್ಷ್ಯಕ್ಕೆ ಹಿಡಿತ ಕೈಗನ್ನಡಿಯಾಗಿದೆ.
ಬೆಟ್ಟದಲ್ಲಿ ಒಂದು ಶುದ್ಧ ಕುಡಿಯುವ ನೀರಿನ ಘಟಕವಿಲ್ಲ. ಜತೆಗೆ ಇಲ್ಲಿರುವ ಕುಡಿಯುವ ನೀರಿನ ತೊಟ್ಟಿಗಳು ಪಾಚಿ ಕಟ್ಟಿ, ಸುತ್ತಲೂ ಕೊಳಚೆ ನೀರು ನಿಂತಿದೆ. ಈ ನೀರು ಕುಡಿಯಲು ನಗರ ಪ್ರದೇಶದಿಂದ ಬರುವ ಪ್ರವಾಸಿಗರು ಹಿಂದೇಟು ಹಾಕುತ್ತಾರೆ. ಇತ್ತ ಪಂಚಾಯ್ತಿಯು ಗಮನಹರಿಸುತ್ತಿಲ್ಲ. ಇದರಿಂದ ಈ ನೀರನ್ನು ಕುಡಿಯಲು ಭಕ್ತರು, ಪ್ರವಾಸಿಗರು ಹಿಂದೇಟು ಹಾಕುತ್ತಾರೆ. ಇಲ್ಲಿ ಆಗಾಗ ವಿದ್ಯುತ್ ವ್ಯತ್ಯಯ ಆಗುತ್ತಿರುತ್ತದೆ. ಇಲ್ಲಿ ಕರೆಂಟ್‌ನ ಸಮಸ್ಯೆಯಾದರೆ ಕುಡಿಯುವ ನೀರಿಗೆ ಪರದಾಡುವ ಸಂಭವ ಹೆಚ್ಚಾಗಿದೆ. ಇತ್ತ ಪ್ಲಾಸ್ಟಿಕ್ ಬಾಟಲ್ ನೀರನ್ನು ಸೇವಿಸೋಣ ಎಂದರೆ ಅದಕ್ಕೂ ನಿಷೇಧ ಹೇರಲಾಗಿದೆ. ಇದರಿಂದ ಪ್ರವಾಸಿಗರು ಪರದಾಡುವಂತೆ ಆಗಿದೆ.
ಗ್ರಾಪಂನಿಂದ ಶುದ್ಧ ಕುಡಿಯುವ ನೀರಿಲ್ಲ: ಬಿಳಿಗಿರಿ ರಂಗನಬೆಟ್ಟ ಪ್ರತ್ಯೇಕ ಪಂಚಾಯ್ತಿ ಆಗಿ ಹಲವು ವರ್ಷಗಳೇ ಕಳೆದಿವೆ. ಇದೊಂದು ಪ್ರಸಿದ್ಧ ಪ್ರವಾಸಿ ತಾಣವಾಗಿದೆ. ಪ್ರಕೃತಿಯನ್ನು ವೀಕ್ಷಿಸಲು, ಇಲ್ಲಿರುವ ಪುರಾತನ ಬಿಳಿಗಿರಿರಂಗನಾಥಸ್ವಾಮಿ ದೇಗುಲ, ಸ್ವಾಮಿ ದರ್ಶನ ಪಡೆಯಲು ದಿನನಿತ್ಯ ಸಾವಿರಾರು ಭಕ್ತರು ಇಲ್ಲಿಗೆ ಭೇಟಿ ನೀಡುತ್ತಾರೆ. ಆದರೆ, ಅವರಿಗೆ ಸೂಕ್ತ ಸೌಲಭ್ಯವಿಲ್ಲ.
ನಾಲ್ಕೈದು ಕಡೆ ಶುದ್ಧ ನೀರು ಒದಗಿಸಬೇಕು: ಬಸ್ ನಿಲ್ದಾಣ, ದೇಗುಲದ ಬಳಿ, ತೇರಿನ ಬೀದಿ, ಗಂಗಾಧ ರೇಶ್ವರ ದೇಗುಲದ ಬಳಿ ಇರುವ ಸರ್ಕಲ್‌ನಲ್ಲಿ ಶುದ್ಧ ಕುಡಿಯುವ ನೀರಿನ ಘಟಕವನ್ನು ನಿರ್ಮಿಸಿ ಭಕ್ತರಿಗೆ ಅನುಕೂಲ ಮಾಡಿಕೊಡಬೇಕು ಎಂಬುದು ಭಕ್ತರಾದ ಗೋವಿಂದ, ರಮ್ಯಾ, ರಕ್ಷಿತಾರ ಆಗ್ರಹವಾಗಿದೆ.
ಬೆಟ್ಟಕ್ಕೆ ಪ್ರತಿವಾರ ದೇಶವಿದೇಶಗಳಿಂದಲೂ ಪ್ರವಾಸಿಗರು ಭೇಟಿ ನೀಡುತ್ತಾರೆ. ಆದರೆ, ಇಲ್ಲಿ ಯಾವುದೇ ಶುದ್ಧ ಕುಡಿಯುವ ನೀರಿನ ಘಟಕಗಳು ಇಲ್ಲ. ಬಾಟಲಿ ನೀರು ಮಾರಾಟಕ್ಕೆ ನಿಷೇಧ ಹೇರಲಾಗಿದೆ. ಹಾಗಾಗಿ ಬರುವ ಪ್ರವಾಸಿಗರು ಕುಡಿಯಲು ನೀರು ಇಲ್ಲದೆ ಪ್ರಯಾಸ ಪಡುವ ಸ್ಥಿತಿ ನಿರ್ಮಾಣವಾಗಿದೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ವಹಿಸಬೇಕು.
-ವೆಂಕಟೇಶ್, ಸ್ಥಳೀಯ ನಿವಾಸಿ
ಬಿಆರ್‌ಟಿ ಹುಲಿರಕ್ಷಿತ ಅರಣ್ಯ ಪ್ರದೇಶ ವಾಗಿದೆ. ಇದು ಪ್ಲಾಸ್ಟಿಕ್ ನಿಷೇಧ ಪ್ರದೇಶವಾಗಿ ಘೋಷಿಸಲಾಗಿದೆ. ಇಲ್ಲಿಗೆ ಭೇಟಿ ನೀಡುವ ಪ್ರವಾಸಿಗರನ್ನು ಚೆಕ್ ಪೋಸ್ಟ್‌ನಲ್ಲೇ ಪರಿಶೀಲಿಸಿ ಪ್ಲಾಸ್ಟಿಕ್ ಬಾಟಲಿ ಕೊಂಡೊಯ್ಯದಂತೆ ಜಾಗೃತಿ ಮೂಡಿಸಲಾಗುತ್ತಿದೆ. ಈಗಾಗಲೇ ಇಲ್ಲಿನ ಗ್ರಾಪಂ, ದೇಗುಲದ ಆಡಳಿತ ಮಂಡಳಿಗೆ ಕುಡಿಯುವ ನೀರಿನ ಸೌಲಭ್ಯಕ್ಕೆ ಒದಗಿಸಲು ಮೌಖೀಕವಾಗಿ ಮನವಿ ಮಾಡಿದ್ದೇವೆ.
-ನಾಗೇಂದ್ರ ನಾಯಕ, ಆರ್‌ಎಫ್ಒ ಯಳಂದೂರು ವಲಯ
-ಫೈರೋಜ್ ಖಾನ್