ನವದೆಹಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ದೆಹಲಿ ಕ್ಯಾಬಿನೆಟ್ ಸಚಿವ ಮತ್ತು ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕ ರಾಜ್ ಕುಮಾರ್ ಆನಂದ್ ಅವರ ನಿವಾಸದ ಮೇಲೆ ದಾಳಿ ನಡೆಸಿ ದಾಖಲೆಗಳ ಶೋಧ ನಡೆಸುತ್ತಿದೆ.
ಅಷ್ಟು ಮಾತ್ರವಲ್ಲದೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖಾ ಸಂಸ್ಥೆ ದೆಹಲಿಯ ಒಂಬತ್ತು ಸ್ಥಳಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸಿದೆ.
ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ರಾಜ್ ಕುಮಾರ್ ಭಾಗಿಯಾಗಿರುವ ಶಂಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಅಧಿಕಾರಿಗಳು ದೆಹಲಿಯ ಸಿವಿಲ್ ಲೈನ್ಸ್ ಪ್ರದೇಶದಲ್ಲಿನ ಸಚಿವರ ಮನೆಗಳು ಮತ್ತು ಇತರ ಕೆಲವು ಸ್ಥಳಗಳ ಮೇಲೆ ದಾಳಿ ನಡೆಸಲಾಗುತ್ತಿದೆ ಎಂದು ಇಡಿ ಮೂಲಗಳನ್ನು ಉಲ್ಲೇಖಿಸಿ ಪಿಟಿಐ ವರದಿ ಮಾಡಿದೆ.
57 ವರ್ಷದ ಆನಂದ್ ಅವರು ಪಟೇಲ್ ನಗರದಿಂದ ಶಾಸಕರಾಗಿದ್ದಾರೆ ಮತ್ತು ಆಪ್ ನೇತೃತ್ವದ ದೆಹಲಿ ಸರ್ಕಾರದಲ್ಲಿ ಸಮಾಜ ಕಲ್ಯಾಣ ಮತ್ತು ಎಸ್ ಸಿ/ಎಸ್ ಟಿ ಕಲ್ಯಾಣ ಸಚಿವರಾಗಿದ್ದಾರೆ.
ದೆಹಲಿ ಮುಖ್ಯಮಂತ್ರಿ ಮತ್ತು ಆಪ್ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರು ಮದ್ಯ ನೀತಿ ಹಗರಣದಲ್ಲಿ ಇಡಿ ಮುಂದೆ ಹಾಜರಾಗುವ ಕೆಲವೇ ಗಂಟೆಗಳ ಮೊದಲು ಆನಂದ್ ಅವರ ಮನೆಯಲ್ಲಿ ದಾಳಿಗಳು ನಡೆದಿವೆ. ಕೇಜ್ರಿವಾಲ್ ಅವರ ಸಹೋದ್ಯೋಗಿ ಮತ್ತು ದೆಹಲಿಯ ಮಾಜಿ ಉಪ ಸಚಿವ ಮನೀಶ್ ಸಿಸೋಡಿಯಾ ಈಗಾಗಲೇ ಇದೇ ಪ್ರಕರಣದಲ್ಲಿ ಕಂಬಿ ಹಿಂದೆ ಬಿದ್ದಿದ್ದಾರೆ. ಮತ್ತೊಬ್ಬ ಆಪ್ ನಾಯಕ ಹಾಗೂ ದೆಹಲಿಯ ಮಾಜಿ ಸಚಿವ ಸಂಜಯ್ ಸಿಂಗ್ ಕೂಡ ಮದ್ಯ ನೀತಿ ಪ್ರಕರಣದಲ್ಲಿ ಜೈಲಿನಲ್ಲಿದ್ದಾರೆ.
ಇದನ್ನೂ ಓದಿ: RBI ನೂತನ ಕಾರ್ಯನಿರ್ವಾಹಕ ನಿರ್ದೇಶಕರಾಗಿ ಮನೋರಂಜನ್ ಮಿಶ್ರಾ ನೇಮಕ