ಕನ್ನಡದಲ್ಲಿ ಈಗಾಗಲೇ ಸಾಫ್ಟ್ವೇರ್ ಮಂದಿಯ ಆಗಮನವಾಗಿದೆ. ಆ ಪೈಕಿ ಒಂದಷ್ಟು ಮಂದಿ ಸಾಬೀತುಪಡಿಸಿದ್ದಾರೆ. ಅದರಂತೆ ಕಾರ್ಪೋರೇಟ್ ಕಂಪೆನಿಗಳಿಗೆ ಜಾಹಿರಾತು ನಿರ್ದೇಶಿಸುವ ಮೂಲಕ ಅನುಭವ ಪಡೆದ ಒಂದಷ್ಟು ಯುವ ನಿರ್ದೇಶಕರು ಬಂದಿದ್ದಾರೆ. ಆ ಸಾಲಿಗೆ ಈಗ ಸಮರ್ಥ್ ನಾಯಕ್ ಅವರೂ ಸೇರಿದ್ದಾರೆ. ಹೌದು, ಈವರೆಗೆ ಸುಮಾರು 300 ಕ್ಕೂ ಹೆಚ್ಚು ಕಾರ್ಪೋರೇಟ್ ಜಾಹೀರಾತುಗಳನ್ನು ನಿರ್ದೇಶನ ಮಾಡಿದ ಅನುಭವದ ಮೇಲೆ “ಮೋಕ್ಷ’ ಹೆಸರಿನ ಚಿತ್ರ ನಿರ್ದೇಶಿಸಿದ್ದಾರೆ.
ಆ ಚಿತ್ರ ಇನ್ನೇನು ಸೆನ್ಸಾರ್ ಅಂಗಳದಲ್ಲಿದ್ದು, ಇಷ್ಟರಲ್ಲೇ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗುತ್ತಿದೆ. ಈ ಚಿತ್ರದ ವಿಶೇಷವೆಂದರೆ, ಕಾರ್ಪೋರೇಟ್ ಜಗತ್ತಿನಲ್ಲಿ ಹಲವು ಗುಣಮಟ್ಟದ ಜಾಹಿರಾತುಗಳಲ್ಲಿ ಕೆಲಸ ಮಾಡಿದ ತಂಡವೇ ಇಲ್ಲೂ ಕೆಲಸ ಮಾಡಿದೆ. ಹಾಗಾಗಿ ಕನ್ನಡಕ್ಕೊಂದು ಗುಣಮಟ್ಟದ ಚಿತ್ರ ಕೊಡಬೇಕೆಂಬ ಉದ್ದೇಶದಿಂದ ಸಮರ್ಥ್ ತಮ್ಮ ತಂಡ ಕಟ್ಟಿಕೊಂಡು ಹೊಸ ಪ್ರಯತ್ನಕ್ಕಿಳಿದಿದ್ದಾರೆ. “ಮೋಕ್ಷ’ ಈಗಾಗಲೇ ಮುಗಿದಿದ್ದು, ಚಿತ್ರತಂಡ ರಾಜ್ಯೋತ್ಸವಕ್ಕೆ ಚಿತ್ರದ ಟೀಸರ್ ಬಿಡುಗಡೆ ಮಾಡಲು ತಯಾರಿ ಮಾಡಿಕೊಂಡಿದೆ.
ಇಲ್ಲಿ ಕಥೆಯೇ ನಾಯಕ ಮತ್ತು ನಾಯಕಿ ಎಂಬುದು ನಿರ್ದೇಶಕ ಸಮರ್ಥ್ ನಾಯಕ್ ಅವರ ಮಾತು. ಇದೊಂದು ಸಸ್ಪೆನ್ಸ್-ಥ್ರಿಲ್ಲರ್ ಚಿತ್ರ. ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ಮಾಣದ ಜವಾಬ್ದಾರಿಯನ್ನೂ ವಹಿಸಿಕೊಂಡಿರುವ ನಿರ್ದೇಶಕ ಸಮರ್ಥ್ ಹೇಳುವಂತೆ, “ಇಲ್ಲಿ ಸಸ್ಪೆನ್ಸ್ ಥ್ರಿಲ್ಲರ್ ಅಂಶಗಳಿವೆ. ಆದರೆ, ರೆಗ್ಯುಲರ್ ಮರ್ಡರ್ ಮಿಸ್ಟ್ರಿ ಅಂಶಗಳು ಇಲ್ಲಿ ಕಾಣೋದಿಲ್ಲ. ಪಕ್ಕಾ ಕಮರ್ಷಿಯಲ್ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ ಇದಾಗಿದ್ದು, ಇಲ್ಲಿ ಮಾಸ್ಕ್ಮ್ಯಾನ್ ಒಬ್ಬನ ವಿಚಿತ್ರ ಕಥೆ ಹೇಳುವ ಪ್ರಯತ್ನ ಮಾಡಲಾಗಿದೆ.
ಒಬ್ಬ ಮಾಸ್ಕ್ ಮ್ಯಾನ್ ಇಡೀ ಕಥೆಯ ಆಕರ್ಷಣೆ. ಅವನ ಜೊತೆಗೆ ಒಬ್ಬ ಹುಡುಗ, ಹುಡುಗಿಯ ನಡುವಿನ ಪ್ರೇಮ ಪುರಾಣವೂ ಇಲ್ಲಿದೆ. ಚಿತ್ರದುದ್ದಕ್ಕೂ ಆ ಮಾಸ್ಕ್ಮ್ಯಾನ್ ಮೂಡಿಸುವ ಅಚ್ಚರಿಗಳು, ಊಹಿಸಲಾಗದಂತೆ ಕೊಡುವ ಟ್ವಿಸ್ಟ್‌ಗಳು, ಬರುವ ಪ್ರತಿ ಪಾತ್ರದ ಭಾವನೆಗಳ ತೊಳಲಾಟ, ಹುಚ್ಚು ಪ್ರೀತಿ, ದ್ವೇಷ, ಅಸೂಯೆ, ಒಂಟಿತನ, ಹತಾಶೆ ಮತ್ತು ಸಂಬಂಧಗಳ ಘರ್ಷಣೆ ಇತ್ಯಾದಿ ವಿಷಯಗಳು ಚಿತ್ರದ ಜೀವಾಳ ಎಂಬುದು ಸಮರ್ಥ್ ಮಾತು. ನಾಯಕ ಮೋಹನ್ ಧನ್‌ರಾಜ್‌ಗೆ ಆರಾಧ್ಯ ಲಕ್ಷ್ಮಣ್ ನಾಯಕಿ. ಇವರಿಗೆ ಇದು ಮೊದಲ ಚಿತ್ರ.
ಸುಮಾರು 70 ದಿನಗಳ ಕಾಲ ಬೆಂಗಳೂರು, ಹಾಸನ, ಕಾರವಾರ, ಗೋಕಾಕ್, ಗೋವಾ ಸಮೀಪದ ಹಲವು ಸ್ಥಳಗಳಲ್ಲಿ ಚಿತ್ರೀಕರಣ ಮಾಡಲಾಗಿದೆ. ಚಿತ್ರಕ್ಕೆ ಗುರುಪ್ರಶಾಂತ್ ರೈ, ಹಾಲಿವುಡ್‌ನ ಜೋನ್ ಜೋಸೆಫ್ ಹಾಗು ಕಿರಣ್ ಹಂಪಾಪುರ ಛಾಯಾಗ್ರಹಣ ಮಾಡಿದರೆ, ಕಿಶನ್ ಮೋಹನ್ ಹಾಗು ಸಚಿನ್ ಬಾಲು ಸಂಗೀತವಿದೆ. ಜಯಂತ್ ಕಾಯ್ಕಿಣಿ ಹಾಗು ಕುಮಾರ್ ದತ್ ಅವರ ಸಾಹಿತ್ಯವಿದೆ. ದೀಪಕ್ ದೊಡ್ಡೇರ, ಅನುರಾಧ ಭಟ್ ಹಾಡಿದ್ದಾರೆ. ಚಿತ್ರದಲ್ಲಿ ತಾರಕ್ ಪೊನ್ನಪ್ಪ ತನಿಖಾಧಿಕಾರಿ ಪಾತ್ರ ಮಾಡಿದ್ದಾರೆ. ಉಳಿದಂತೆ ಭೂಮಿ, ಪ್ರಶಾಂತ್ ನಟನ ಇತರರು ನಟಿಸಿದ್ದಾರೆ.