Advertisement

ಕಳಪೆ ಫ‌ಲಿತಾಂಶಕ್ಕೆ ಕಾರಣ ಹುಡುಕಾಟ

11:09 AM Jul 16, 2020 | mahesh |

ಬೆಂಗಳೂರು : ದ್ವಿತೀಯ ಪಿಯುಸಿ ಫ‌ಲಿತಾಂಶದಲ್ಲಿ ಕನ್ನಡ ಮಾಧ್ಯಮ ಹಾಗೂ ಕಲಾವಿಭಾಗದ ಕಳಪೆ ಸಾಧನೆಗೆ ಏನು ಕಾರಣ ಎಂಬುದನ್ನು ಶೋಧಿಸುವ ಕಾರ್ಯ ಪಿಯು ಶಿಕ್ಷಣ ಇಲಾಖೆ ಆರಂಭಿಸಿದೆ. ಮಂಗಳವಾರ ಪ್ರಕಟವಾಗಿದ್ದ ದ್ವಿತೀಯ ಪಿಯುಸಿ ಫ‌ಲಿತಾಂಶದಲ್ಲಿ ಕನ್ನಡ ಮಾಧ್ಯಮದ ವಿದ್ಯಾರ್ಥಿ ಗಳು ನಿರೀಕ್ಷಿತ ಮಟ್ಟದಲ್ಲಿ ಸಾಧನೆ ಮಾಡಿಲ್ಲ. ಹಾಗೆಯೇ ಕಲಾ ವಿಭಾಗದ ವಿದ್ಯಾರ್ಥಿಗಳು ಅತ್ಯಂತ ಕಳಪೆ ಪ್ರದರ್ಶನ ತೋರಿರುವುದು ಸಾಬೀತಾಗಿತ್ತು. ಅಲ್ಲದೆ, ಇಂಗ್ಲಿಷ್‌ ಪರೀಕ್ಷೆಯಲ್ಲಿ ಅನುತ್ತೀರ್ಣರಾಗಿರುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿದೆ ಎಂದು ಹೇಳಲಾಗುತ್ತಿದೆ. ಇದಕ್ಕೆಲ್ಲ ಕಾರಣವೇನು ಎಂಬುದನ್ನು ಜಿಲ್ಲಾಮಟ್ಟದಿಂದ ವಿಶ್ಲೇಷಣಾ ವರದಿಗಳನ್ನು ತರಿಸಿಕೊಳ್ಳಲು ಇಲಾಖೆ ಕ್ರಮವಹಿಸಿದೆ.

Advertisement

ಪ್ರತಿ ವರ್ಷವೂ ಜಿಲ್ಲಾವಾರು ಫ‌ಲಿತಾಂಶದ ಪರಾಮರ್ಶೆ ನಡೆಯುತ್ತದೆ. ಈ ವರ್ಷ ಫ‌ಲಿತಾಂಶ ಕಡಿಮೆ ಬಂದಿರುವ ಕಾರಣವೇನು ಮತ್ತು ಮುಂದಿನ ವರ್ಷ ಏನೆಲ್ಲಾ ಸುಧಾರಣಾ ಕ್ರಮಗಳನ್ನು ಕೈಗೊಳ್ಳಬಹುದು ಎಂಬುದನ್ನು ಜಿಲ್ಲಾಮಟ್ಟದ ವರದಿ ಆಧರಿಸಿ ನಿರ್ಧರಿಸಲಾಗುತ್ತದೆ. ಅದರಂತೆ ಪಿಯು ಇಲಾಖೆಯ ಜಿಲ್ಲಾ ಉಪನಿರ್ದೇಶಕರ ಮೂಲಕವೇ ಜಿಲ್ಲಾವಾರು ಫ‌ಲಿತಾಂಶ ಹೇಗಿದೆ ಎಂಬುದರ ಮಾಹಿತಿ ಪಡೆಯಲಾಗುತ್ತದೆ ಎಂದು ಇಲಾಖೆಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಒಂದು ವಿಷಯ ಅಥವಾ ಒಂದು ವಿಭಾಗಕ್ಕೆ ಸಂಬಂಧಿಸಿದ ಮಾಹಿತಿಯಲ್ಲಿ ಇಡೀ ಜಿಲ್ಲೆಯ ಫ‌ಲಿತಾಂಶದ ಸಮಗ್ರ ಮಾಹಿತಿಯೂ ಲಿಖೀತ ರೂಪದಲ್ಲಿಯೇ ಬರಲಿದೆ. ಯಾವ ಯಾವ ವಿಷಯದಲ್ಲಿ ವಿದ್ಯಾರ್ಥಿಗಳ ಸಾಧನೆ ವಿಶ್ಲೇಷಣೆಯ ಜತೆಗೆ ಫ‌ಲಿತಾಂಶ ಹೆಚ್ಚಾಗಲು ಕಾರಣವೇನು ಮತ್ತು ಫ‌ಲಿತಾಂಶದಲ್ಲಿ ಇಳಿಮುಖವಾಗಲು ಕಾರಣವೇನು ಎಂಬುದು ಸಹಿತವಾಗಿ ಎಲ್ಲ ರೀತಿಯ ಮಾಹಿತಿಯು ಜಿಲ್ಲಾ ಹಂತದಿಂದ ಬರಲಿದೆ. ಶೂನ್ಯ ಸಂಪಾದನೆಯ ಕಾಲೇಜುಗಳ ಮತ್ತು ಶೂನ್ಯ ಸಂಪಾದನೆಗೆ ಕಾರಣವೇನು ಮತ್ತು ನೂರಕ್ಕೆ ನೂರು ಫ‌ಲಿತಾಂಶ ಬಂದಿರುವ ಕಾಲೇಜಿನಲ್ಲಿ ಅಳವಡಿಸಿಕೊಂಡಿರುವ ಕ್ರಮದ ಮಾಹಿತಿಯನ್ನು ಪಡೆಯಲಿದ್ದೇವೆ ಎಂದು ವಿವರ ನೀಡಿದರು.

ಫಲಿತಾಂಶ ಕುಸಿತಕ್ಕೆ ಸಚಿವ ಸುರೇಶ್‌ ಕುಮಾರ್‌ ಕಾರಣ
ಈ ಬಾರಿ ದ್ವಿತೀಯ ಪಿಯುಸಿ ಫಲಿತಾಂಶ ಕುಸಿತಕ್ಕೆ ಸಚಿವ ಸುರೇಶ್‌ ಕುಮಾರ್‌ ಕಾರಣರಾಗಿದ್ದು ಇದರ ಹೊಣೆಯನ್ನು ಅವರೇ ಹೊರಬೇಕು ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. ಈ ಕುರಿತು ಟ್ವೀಟ್‌ ಮಾಡಿರುವ ಅವರು, ಪಿಯುಸಿ ಉಪನ್ಯಾಸಕರ ಹುದ್ದೆಗೆ 2018ರಲ್ಲಿ ಬರೆದಿದ್ದ ಪರೀಕ್ಷೆಯಲ್ಲಿ ಉತ್ತೀರ್ಣರಾದ 1298 ಅಭ್ಯರ್ಥಿಗಳ ಆಯ್ಕೆಪಟ್ಟಿ ಅಂತಿಮವಾಗಿತ್ತು. ಆದರೆ, ಸಚಿವ ಸುರೇಶ್‌ ಕುಮಾರ್‌ ಮಧ್ಯೆಪ್ರವೇಶಿಸಿ ಸ್ಥಳ ನಿಯುಕ್ತಿ ಕೌನ್ಸಿಲಿಂಗ್‌ ಪ್ರಕ್ರಿಯೆ ಸ್ಥಗಿತಗೊಳಿಸಿ ಅಭ್ಯರ್ಥಿಗಳ ಜೊತೆಗೆ ವಿದ್ಯಾರ್ಥಿಗಳಿಗೂ ಅನ್ಯಾಯ ಮಾಡಿದ್ದಾರೆ. ದ್ವಿತೀಯ ಪಿಯುಸಿ ಫಲಿತಾಂಶ ಕುಸಿಯಲು ಉಪನ್ಯಾಸಕರ ಕೊರತೆ ಕೂಡಾ ಕಾರಣವಾಗಿದ್ದು, ಇದರ ಹೊಣೆಯನ್ನು ಪಿಯುಸಿ ಉಪನ್ಯಾಸಕರ ನೇಮಕಾತಿ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಿರುವ ಸುರೇಶ್‌ ಕುಮಾರ್‌ ಹೊರಬೇಕು ಎಂದು ಒತ್ತಾಯಿಸಿದ್ದಾರೆ.

ಪಠ್ಯಪುಸ್ತಕ ವಿತರಿಸಲು ಸೂಚನೆ
ಬೆಂಗಳೂರು: ಸರ್ಕಾರಿ, ಅನುದಾನಿತ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ವಿದ್ಯಾರ್ಥಿಗಳಿಗೆ ಮುಂದಿನ ಶೈಕ್ಷಣಿಕ ವರ್ಷದ ಉಚಿತ ಪಠ್ಯಪುಸ್ತಕವನ್ನು ವಿತರಿಸುವಂತೆ ಕರ್ನಾಟಕ ಪಠ್ಯಪುಸ್ತಕ ಸಂಘ ನಿರ್ದೇಶಿಸಿದೆ. 2020-21ನೇ ಸಾಲಿಗೆ ಅಗತ್ಯವಿರುವ ಎಲ್ಲ ಪಠ್ಯಪುಸ್ತಕಗಳನ್ನು ಕರ್ನಾಟಕ ಪಠ್ಯಪುಸ್ತಕ ಸಂಘದಿಂದ ಈಗಾಗಲೇ ಮುದ್ರಣ ಮಾಡಿ, ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಕಳುಹಿಸಲಾಗಿದೆ. ಕೋವಿಡ್ ಹಿನ್ನೆಲೆಯಲ್ಲಿ ಶಾಲಾರಂಭ ಆಗದೇ ಇರುವುದರಿಂದ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ಉಚಿತ ಪಠ್ಯಪುಸ್ತಕ, ಅಭ್ಯಾಸ ಪುಸ್ತಕ ಹಾಗೂ ದಿನಚರಿಗಳನ್ನು ಕೂಡಲೇ ಶಾಲಾ ಹಂತಕ್ಕೆ ವಿತರಿಸಲು ಕ್ಷೇತ್ರ ಶಿಕ್ಷಣಾಧಿಕಾರಿಗಳು ಕ್ರಮ ತೆಗೆದು ಕೊಳ್ಳಬೇಕು. ಶಾಲಾಹಂತದಲ್ಲಿ ತರಗತಿವಾರು ವಿದ್ಯಾರ್ಥಿಗಳ ಪೋಷಕರನ್ನು ಸಣ್ಣ ಸಣ್ಣ ಗುಂಪುಗಳಲ್ಲಿ ಶಾಲೆಗೆ ಕರೆಸಿ, ಪುಸ್ತಕಗಳನ್ನು ವಿತರಿಸಲು ಸೂಕ್ತ ಕ್ರಮ ತೆಗೆದುಕೊಳ್ಳಲು ಮುಖ್ಯಶಿಕ್ಷಕಿಗೆ ನಿರ್ದೇಶನ ನೀಡಲಾಗಿದೆ. ಯಾವುದೇ ವಿದ್ಯಾರ್ಥಿ ಎಲ್ಲ ಪಠ್ಯಪುಸ್ತಕ ಸೌಲಭ್ಯದಿಂದ
ವಂಚಿತರಾಗದಂತೆ ಕ್ರಮ ತೆಗೆದುಕೊಳ್ಳಬೇಕು. ಉಚಿತ ಪಠ್ಯಪುಸ್ತಕಗಳ ವಿತರಣೆಯಲ್ಲಿ ಯಾವುದೇ ವ್ಯತ್ಯಾಸ ಅಥವಾ ದುರುಪಯೋಗ ಹಾಗೂ ವಿಳಂಬವಾದರೆ ಸಂಬಂಧಪಟ್ಟ ಅಧಿಕಾರಿಗಳೇ ಇದಕ್ಕೆ ನೇರ ಹೊಣೆಯಾಗಿರುತ್ತಾರೆ ಎಂದು ಎಚ್ಚರಿಕೆ ನೀಡಿದೆ. ಪ್ರಗತಿಯ ವರದಿಯನ್ನು ಪಠ್ಯಪುಸ್ತಕ ಸಂಘದ ಆಯಾ ಜಿಲ್ಲಾ ನೋಡಲ್‌ ಅಧಿಕಾರಿಗಳ ಮೂಲಕ ಕೇಂದ್ರ ಕಚೇರಿಗೆ ಸಲ್ಲಿಸಬೇಕು ಎಂದು ಜಿಲ್ಲಾ ಉಪನಿರ್ದೇಶಕರಿಗೆ ಸೂಚನೆ ನೀಡಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next