Advertisement
ಕೆಲವು ಸಿನಿಮಾಗಳನ್ನು ನೋಡಿ ಹೊರಬಂದಾಗ ಎರಡು ಗಂಟೆ ಏನು ನೋಡಿದೆವು ಎಂಬುದನ್ನು ರಿವೈಂಡ್ ಮಾಡಿಕೊಂಡರೂ ಕಣ್ಣ ಮುಂದೆ ಏನೂ ಬರೋದಿಲ್ಲ. ಆದರೆ, “ನಟಸಾರ್ವಭೌಮ’ ಸಿನಿಮಾ ನೋಡಿ ಹೊರಬಂದಾಗ ಸಾಕಷ್ಟು ಖುಷಿ ಕೊಡುವ ಅಂಶಗಳು, ಸನ್ನಿವೇಶಗಳು ರಿವೈಂಡ್ ಆಗುತ್ತವೆ. ಅದೇ “ನಟಸಾರ್ವಭೌಮ’ನ ಹೈಲೈಟ್. ಇದು ಔಟ್ ಆ್ಯಂಡ್ ಔಟ್ ಫ್ಯಾಮಿಲಿ ಎಂಟರ್‌ಟೈನರ್. ಚಿತ್ರದಲ್ಲಿ ಪುನೀತ್ ಒಂದು ಡೈಲಾಗ್ ಹೇಳುತ್ತಾರೆ, “ನಮಗೆ ಫ್ಯಾಮಿಲಿ ಆಡಿಯನ್ಸ್ ಜಾಸ್ತಿ’ ಎಂದು.
Related Articles
Advertisement
ಹಾಗಾಗಿಯೇ, ಅಭಿಮಾನಿಗಳು ಶಿಳ್ಳೆ ಹಾಕುವಂತಹ ಸಂಭಾಷಣೆಗಳು ಆಗಾಗ ನಾಯಕ ಸೇರಿದಂತೆ ಪ್ರತಿ ಪಾತ್ರಗಳ ಬಾಯಿಂದ ಬರುತ್ತಿರುತ್ತದೆ. ಚಿತ್ರದಲ್ಲಿ ಕಾಮಿಡಿ, ಫೈಟ್ಸ್, ಹಾಡು ಎಲ್ಲವೂ ಇದೆ. ಆದರೆ, ಯಾವುದೂ ಇಲ್ಲಿ ತುರುಕಿದಂತೆ ಭಾಸವಾಗುವುದಿಲ್ಲ. ಯಾವ ಪಾತ್ರಗಳಿಗೆ ಎಷ್ಟು ಮಾನ್ಯತೆ ಕೊಡಬೇಕೆಂಬ ಪಕ್ಕಾ ಲೆಕ್ಕಾಚಾರದೊಂದಿಗೆ ಸಿನಿಮಾವನ್ನು ಕಟ್ಟಿಕೊಟ್ಟ ಪರಿಣಾಮ ಇಲ್ಲಿ ಯಾವುದೂ ಅತಿ ಎನಿಸುವುದಿಲ್ಲ.
ಚಿತ್ರದ ಕೊನೆಯಲ್ಲಿ ಎಲ್ಲಾ ಅಂಶಗಳಿಗೂ ಸ್ಪಷ್ಟ ಉತ್ತರ ನೀಡಿ, ಪ್ರೇಕ್ಷಕರ ತಲೆಯಲ್ಲಿ ತಿರುಗುತ್ತಿದ್ದ ಪ್ರಶ್ನೆಗಳಿಗೆ ಉತ್ತರಿಸಲಾಗಿದೆ. ಇಡೀ ಸಿನಿಮಾ ಸುತ್ತುವುದು ನಾಯಕ ಪುನೀತ್ ರಾಜಕುಮಾರ್ ಸುತ್ತ. ಈ ಕಥೆಯೇ ನಾಯಕನಿಂದ ಹೆಚ್ಚಿನ ಪರ್‌ಫಾರ್ಮೆನ್ಸ್ ಬಯಸಿದೆ. ಅದನ್ನು ಪುನೀತ್ ತುಂಬಾ ಚೆನ್ನಾಗಿ ನಿರ್ವಹಿಸಿದ್ದಾರೆ ಕೂಡಾ. ಹಾರರ್, ಕಾಮಿಡಿ, ಫ್ಯಾಮಿಲಿ, ಮಾಸ್, ಕ್ಲಾಸ್ … ಹೀಗೆ ಎಲ್ಲಾ ಶೇಡ್‌ಗಳಿರುವ ಪಾತ್ರ ಅವರಿಗಿಲ್ಲಿ ಸಿಕ್ಕಿದೆ.
ಪುನೀತ್ ರಾಜಕುಮಾರ್ ಅವರ ಡ್ಯಾನ್ಸ್ ನೋಡೋದೇ ಒಂದು ಚೆಂದ. ಆ ಮಟ್ಟಿಗೆ ಅದ್ಭುತವಾಗಿ ಕುಣಿದಿದ್ದಾರೆ. ಉಳಿದಂತೆ ಚಿತ್ರದಲ್ಲಿ ಇಬ್ಬರು ನಾಯಕಿಯರು. ರಚಿತಾ ರಾಮ್ ಹಾಗೂ ಅನುಪಮಾ. ಚಿತ್ರದಲ್ಲಿ ರಚಿತಾ ಅವರಿಗೆ ಹೆಚ್ಚಿನ ದೃಶ್ಯಗಳಿಲ್ಲ. ಇದ್ದಷ್ಟು ಹೊತ್ತು ರಚಿತಾ ಇಷ್ಟವಾಗುತ್ತಾರೆ. ಅನುಪಮಾ ಚಿತ್ರದ ಕಥೆಯ ಕೇಂದ್ರ ಬಿಂದು. ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ.
ಹಿರಿಯ ನಟಿ ಬಿ.ಸರೋಜಾದೇವಿ ವಿಶೇಷ ಪಾತ್ರವೊಂದರಲ್ಲಿ ನಟಿಸಿದ್ದಾರೆ. ಉಳಿದಂತೆ ರವಿಶಂಕರ್, ಪ್ರಭಾಕರ್, ಚಿಕ್ಕಣ್ಣ, ಸಾಧುಕೋಕಿಲ ಸೇರಿದಂತೆ ಇತರರು ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ. ಇಮಾನ್ ಸಂಗೀತದ ಹಾಡುಗಳು ಇಷ್ಟವಾಗುತ್ತವೆ. ಛಾಯಾಗ್ರಾಹಕ ವೈದಿ ಕಣ್ಣಲ್ಲಿ “ನಟಸಾರ್ವಭೌಮ’ ಸುಂದರ.
ಚಿತ್ರ: ನಟಸಾರ್ವಭೌಮನಿರ್ಮಾಣ: ರಾಕ್‌ಲೈನ್ ವೆಂಕಟೇಶ್
ನಿರ್ದೇಶನ: ಪವನ್ ಒಡೆಯರ್
ತಾರಾಗಣ: ಪುನೀತ್‌ರಾಜಕುಮಾರ್, ರಚಿತಾ ರಾಮ್, ಅನುಪಮಾ, ಬಿ.ಸರೋಜಾದೇವಿ, ರವಿಶಂಕರ್, ಚಿಕ್ಕಣ್ಣ ಮತ್ತಿತರರು. * ರವಿಪ್ರಕಾಶ್ ರೈ