Advertisement

ವಯಾಡಕ್ಟ್ ದುರಸ್ತಿಗೆ ತಂತ್ರಜ್ಞಾನಗಳ ಹುಡುಕಾಟ

12:31 PM Dec 15, 2018 | |

ಬೆಂಗಳೂರು: ಟ್ರಿನಿಟಿ ವೃತ್ತದ ಮೆಟ್ರೋ ಮಾರ್ಗದಲ್ಲಿ ಕಾಣಿಸಿಕೊಂಡ “ಶಿಥಿಲಗೊಂಡ ಕಾಂಕ್ರೀಟ್‌’ ದುರಸ್ತಿಗೆ ಸೂಕ್ತ ತಂತ್ರಜ್ಞಾನಗಳ ಹುಡುಕಾಟ ನಡೆಸಿರುವ ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿ), ಈ ಸಂಬಂಧ ಕ್ರಿಯಾಯೋಜನೆ ಸಿದ್ಧಪಡಿಸಲು ನಿರ್ಧರಿಸಿದೆ. ಕಾಂಕ್ರೀಟ್‌ ಶಿಥಿಲಗೊಂಡ ಜಾಗವನ್ನು ದುರಸ್ತಿಗೊಳಿಸಲು ನಮ್ಮ ಮುಂದೆ ಹಲವಾರು ಆಯ್ಕೆಗಳಿವೆ.

Advertisement

ಆದರೆ, ಅವುಗಳಲ್ಲಿ ಯಾವುದು ಉತ್ತಮ ಎನ್ನುವುದನ್ನು ನಿರ್ಧರಿಸಬೇಕಿದೆ. ಸಮಸ್ಯೆ ಮರುಕಳಿಸದಂತೆ ಶಾಶ್ವತವಾಗಿ ಗಟ್ಟಿಗೊಳಿಸಲು ಯಾವುದು ಸೂಕ್ತ ಎಂಬ ಬಗ್ಗೆ ದೆಹಲಿ ಮೆಟ್ರೋ ತಜ್ಞರು ಹಾಗೂ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ) ಸ್ಟ್ರಕ್ಚರಲ್‌ ಇಂಜಿನಿಯರ್‌ಗಳಿಂದ ಅಭಿಪ್ರಾಯ ಸಂಗ್ರಹಿಸಿ, ಕ್ರಿಯಾಯೋಜನೆ ರೂಪಿಸಲಾಗುವುದು ಎಂದು ಬಿಎಂಆರ್‌ಸಿ ವ್ಯವಸ್ಥಾಪಕ ನಿರ್ದೇಶಕ ಅಜಯ್‌ ಸೇಠ್ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಟ್ರಿನಿಟಿ ವೃತ್ತದ ಮೆಟ್ರೋ ವಯಾಡಕ್ಟ್‌ನ ಕೆಳಭಾಗದಲ್ಲಿರುವ ಡಯಾಫ್ರೆàಮ್‌ನಲ್ಲಿ ಹಾಕಿರುವ ಕಾಂಕ್ರೀಟ್‌ ಜೇನುಗೂಡು ಮಾದರಿಯಲ್ಲಿ ಶಿಥಿಲಗೊಂಡಿರುವುದು ಕಂಡುಬಂದಿದೆ. ಈ ರೀತಿಯ ಸಮಸ್ಯೆ ತುಂಬಾ ಅಪರೂಪವಾದರೂ ಅಸಾಮಾನ್ಯವಲ್ಲ. ಇದನ್ನು ದುರಸ್ತಿಗೊಳಿಸಲು ಹಲವು ಮಾದರಿಗಳಿವೆ. ತಜ್ಞರೊಂದಿಗೆ ಚರ್ಚಿಸಿ, ಸೂಕ್ತ ವಿಧಾನ ಆಯ್ಕೆ ಮಾಡಿ, ಸಂಸ್ಥೆಯೊಂದಕ್ಕೆ ಇದರ ಜವಾಬ್ದಾರಿ ವಹಿಸಲು ಉದ್ದೇಶಿಸಲಾಗಿದೆ.

ಇದಕ್ಕಾಗಿ ಕನಿಷ್ಠ ಒಂದು ವಾರ ಸಮಯ ಹಿಡಿಯುತ್ತದೆ. ದುರಸ್ತಿ ಸಂದರ್ಭದಲ್ಲಿ ಉದ್ದೇಶಿತ ಮಾರ್ಗದಲ್ಲಿ ಮಾತ್ರ ಅಂದರೆ, ಎಂ.ಜಿ. ರಸ್ತೆಯಿಂದ ಇಂದಿರಾನಗರ ನಡುವೆ ಸೇವೆ ಸ್ಥಗಿತಗೊಳ್ಳಲಿದೆ. ಹಾಗಾಗಿ, ಹೆಚ್ಚು ಪ್ರಯಾಣಿಕರಿಗೆ ಸಮಸ್ಯೆ ಆಗಬಾರದು ಎಂಬ ಕಾರಣಕ್ಕೆ ಕಡಿಮೆ ಪ್ರಯಾಣಿಕರು ಸಂಚರಿಸುವ ವಾರಾಂತ್ಯದ ದಿನಗಳಲ್ಲಿ ಈ ಕಾರ್ಯ ಕೈಗೆತ್ತಿಕೊಳ್ಳಲು ಉದ್ದೇಶಿಸಲಾಗಿದೆ ಎಂದು ಸ್ಪಷ್ಟಪಡಿಸಿದರು. 

ಸುರಕ್ಷತೆ ವಿಚಾರದಲ್ಲಿ ರಾಜಿ ಇಲ್ಲ: ಪ್ರಯಾಣಿಕರ ಸುರಕ್ಷತೆ ನಮ್ಮ ಮೊದಲ ಆದ್ಯತೆ. ಈ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ. ಈ ಸಣ್ಣ ಘಟನೆಯಿಂದ ಮೆಟ್ರೋ ಅಸುರಕ್ಷಿತ ಎಂಬ ನಿರ್ಧಾರಕ್ಕೆ ಬರುವುದು ತಪ್ಪು. ನಗರದ ಜನತೆ “ನಮ್ಮ ಮೆಟ್ರೋ’ದ ಮೇಲೆ ಸಂಪೂರ್ಣ ವಿಶ್ವಾಸ ಹೊಂದಿದ್ದಾರೆ. ಇದಕ್ಕೆ ಕಳೆದ ಮೂರು ದಿನಗಳಲ್ಲಿ ಪ್ರಯಾಣಿಕರ ಸಂಚಾರ ಎಂದಿನಂತೆ ಇರುವುದೇ ಸಾಕ್ಷಿ ಎಂದು ಸ್ಪಷ್ಟಪಡಿಸಿದರು.

Advertisement

ಆದಷ್ಟು ಕಡಿಮೆ ಅವಧಿಯಲ್ಲಿ ಇದನ್ನು ಮಾಡಿಮುಗಿಸಬೇಕು ಎಂಬ ಉದ್ದೇಶ ನಮಗೂ ಇದೆ. ಹಾಗಂತ, ತರಾತುರಿಯಲ್ಲಿ ಮಾಡುವ ಕೆಲಸ ಇದಲ್ಲ. ಯಾವುದೇ ಕಾರಣಕ್ಕೂ ಮರುಕಳಿಸದಂತೆ ಸಮರ್ಪಕವಾಗಿ ಮಾಡಬೇಕು ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು. ನಮ್ಮ ಗುರಿ ಮೊದಲು ದುರಸ್ತಿ ಕಾರ್ಯವನ್ನು ಪೂರ್ಣಗೊಳಿಸುವುದು. ಈ ಲೋಪಕ್ಕೆ ಹೊಣೆ ಯಾರು ಎಂಬುದರ ಪರಾಮರ್ಶೆ ನಂತರ ಮಾಡಲಾಗುವುದು ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಅಜಯ್‌ ಸೇಠ್ ಉತ್ತರಿಸಿದರು. 

ಪ್ರಯಾಣಿಕರ ಸಂಚಾರ ಎಂದಿನಂತಿದೆ: ಟ್ರಿನಿಟಿಯಲ್ಲಾದ ಘಟನೆ ನಂತರ ಪ್ರಯಾಣಿಕರ ಸಂಖ್ಯೆಯಲ್ಲಿ ಯಾವುದೇ ಇಳಿಮುಖವಾಗಿಲ್ಲ. ಜನ ಸಂಚಾರ ಎಂದಿನಂತಿದೆ ಎಂದು ಬಿಎಂಆರ್‌ಸಿ ವ್ಯವಸ್ಥಾಪಕ ನಿರ್ದೇಶಕ ಅಜಯ್‌ ಸೇಠ್ ಸ್ಪಷ್ಟಪಡಿಸಿದರು. ಕಳೆದ ವಾರಕ್ಕೆ ಹೋಲಿಸಿದರೆ, ಈ ವಾರ ಪ್ರಯಾಣಿಕರ ಸಂಖ್ಯೆ ಹೆಚ್ಚಿದೆ. ಶುಕ್ರವಾರ 3.81 ಲಕ್ಷ ಜನ ಸಂಚರಿಸಿದ್ದಾರೆ. ನವೆಂಬರ್‌ ತಿಂಗಳಲ್ಲಿ ಮೆಟ್ರೋದಲ್ಲಿ ಓಡಾಡಿದ ಪ್ರಯಾಣಿಕರ ಸಂಖ್ಯೆ ಸರಾಸರಿ 3.60 ಲಕ್ಷ ಎಂದು ಮಾಹಿತಿ ನೀಡಿದರು. 

ಉಚಿತ ಬಸ್‌ ಸೇವೆ: ಇನ್ನು ದುರಸ್ತಿ ಕಾರ್ಯ ಸಂದರ್ಭದಲ್ಲಿ ಸೇವೆಯಲ್ಲಿ ವ್ಯತ್ಯಯ ಉಂಟಾಗುವುದರಿಂದ ಪ್ರಯಾಣಿಕರ ಅನುಕೂಲಕ್ಕಾಗಿ ಬಿಎಂಆರ್‌ಸಿಯು ಉಚಿತವಾಗಿ ಬಿಎಂಟಿಸಿ ಬಸ್‌ ಸೇವೆ ಕಲ್ಪಿಸಲಿದೆ. ಮೆಟ್ರೋ ಸೇವೆ ವ್ಯತ್ಯಯ ಆಗುವ ದಿನದಂದು ದುರಸ್ತಿ ಕಾರ್ಯ ನಡೆಯುವ ಮಾರ್ಗದಲ್ಲಿ ಅಂದರೆ ಎಂ.ಜಿ.ರಸ್ತೆ-ಇಂದಿರಾನಗರ ನಡುವೆ ಮಾತ್ರ ಈ ಉಚಿತ ಬಸ್‌ ಸೌಲಭ್ಯ ಇರಲಿದೆ ಎಂದೂ ಅವರು ಅಜಯ್‌ ಸೇಠ್ ಸ್ಪಷ್ಟಪಡಿಸಿದರು. 

ಗಂಟೆಗೆ 10 ಕಿ.ಮೀ. ವೇಗ!: “ನಮ್ಮ ಮೆಟ್ರೋ’ ರೈಲು ಸೇವೆ ಎಂದಿನಂತೆ ಇರಲಿದೆ. ಆದರೆ, ಟ್ರಿನಿಟಿ ನಿಲ್ದಾಣದ ಸಮೀಪ ಮಾತ್ರ ರೈಲಿನ ವೇಗಮಿತಿ ಕಡಿಮೆ ಇರಲಿದೆ. ಬೈಯಪ್ಪನಹಳ್ಳಿಯಿಂದ ಟ್ರಿನಿಟಿಗೆ ಬರುವ ಮಾರ್ಗದಲ್ಲಿ ಮೆಟ್ರೋ ವೇಗ ಗಂಟೆಗೆ 30 ಕಿ.ಮೀ. ಹಾಗೂ ಟ್ರಿನಿಟಿಯಿಂದ ಬೈಯಪ್ಪನಹಳ್ಳಿ ಕಡೆಗೆ ತೆರಳುವ ಮಾರ್ಗದಲ್ಲಿ ರೈಲಿನ ವೇಗ ಗಂಟೆಗೆ 10 ಕಿ.ಮೀ.ಗೆ ತಗ್ಗಲಿದೆ ಎಂದು ಅಜಯ್‌ ಸೇಠ್ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next