Advertisement

ರಾಮನಗರದಲ್ಲಿ “ಕೈ’ಅಭ್ಯರ್ಥಿಗೆ ಹುಡುಕಾಟ

05:36 PM Jan 25, 2018 | Team Udayavani |

ರಾಮನಗರ: ರಾಮನಗರ ವಿಧಾನಸಭಾ ಕ್ಷೇತ್ರಕ್ಕೆ ಕಾಂಗ್ರೆಸ್‌ನಲ್ಲಿ ಸಮರ್ಥ ಅಭ್ಯರ್ಥಿಯ ಹುಡುಕಾಟ ಇನ್ನೂ ಮುಂದುವರಿದಿದೆ! ಕ್ಷೇತ್ರದ ಅಭ್ಯರ್ಥಿಗಳನ್ನೇ ಕಣಕ್ಕಿಳಿಸಿ ಎಂದು ಸ್ಥಳೀಯ ಕಾರ್ಯಕರ್ತರು ಪಕ್ಷದ ವರಿಷ್ಠರನ್ನು
ಒತ್ತಾಯಿಸುತ್ತಿದ್ದಾರೆ.

Advertisement

ಕಳೆದ ಚುನಾವಣೆ ವೇಳೆ ಸರ್ಕಾರಿ ಕೆಲಸ ತೊರೆದು ಕಾಂಗ್ರೆಸ್‌ ಅಭ್ಯರ್ಥಿಯಾಗಿ ಎಚ್‌.ಡಿ.ಕುಮಾರಸ್ವಾಮಿ ವಿರುದ್ಧ ಮರಿದೇವರು ಸ್ಪರ್ಧಿಸಿದ್ದರು. ಆದರೆ ಮರಿದೇವರು ಅವರ ಅಕಾಲಿಕ ಮರಣದಿಂದಾಗಿ ಅವರ ಸ್ಥಾನ ಶೂನ್ಯವಾಗಿದೆ. ಮರಿದೇವರು ನಿಧನದಿಂದಾಗಿ ಸ್ಥಳೀಯ ಕಾಂಗ್ರೆಸ್‌ ನೇಪಥ್ಯಕ್ಕೆ ಸರಿಯುವ ಸಾಧ್ಯತೆ ನಿಚ್ಚಳವಾಗಿತ್ತು. ಮಾಜಿ ಶಾಸಕ ಸಿ.ಎಂ.ಲಿಂಗಪ್ಪ ಅವರಿಗೆ ಎಂಎಲ್‌ಸಿ ಸ್ಥಾನವನ್ನು, ಮುಖಂಡ ಕೆ.ಶೇಷಾದ್ರಿ ಅವರಿಗೆ ಮೈಸೂರು ಎಲೆಕ್ಟ್ರಿಕಲ್‌
ಇಂಡಸ್ಟ್ರೀಸ್‌ ಲಿಮಿಟಡ್‌ನ‌ ಅಧ್ಯಕ್ಷ ಸ್ಥಾನವನ್ನು, ನಗರಸಭೆ ಮಾಜಿ ಅಧ್ಯಕ್ಷ ಸೈಯದ್‌ ಜಿಯಾವುಲ್ಲಾರಿಗೆ ಕೆಪಿಸಿಸಿ ಕಾರ್ಯದರ್ಶಿ ಸ್ಥಾನ ಮತ್ತು ಸ್ಥಳೀಯ ಇನ್ನು ಹಲವರಿಗೆ ನಿಗಮ, ಮಂಡಳಿಗಳಲ್ಲಿ ಮತ್ತು ಪಕ್ಷದಲ್ಲಿ ನಿರ್ದೇಶಕ, ಸದಸ್ಯ ಸ್ಥಾನಗಳನ್ನು ಕೊಟ್ಟು ರಾಮನಗರದಲ್ಲಿ ಕಾಂಗ್ರೆಸ್‌ ತನ್ನ ಬಲ ಚದುರಿ ಹೋಗದಂತೆ ಕಾಯ್ದುಕೊಂಡಿದೆ.

ಜೆಡಿಎಸ್‌ ಭದ್ರಕೋಟೆ: ರಾಮನಗರ ರಾಜಕರಣದಲ್ಲಿ ಎಚ್‌.ಡಿ.ದೇವೇಗೌಡರ ಪ್ರವೇಶಾನಂತರ ರಾಮನಗರ ಜೆಡಿಎಸ್‌ ಭದ್ರಕೋಟೆ ಎಂದೇ ಬಿಂಬಿತವಾಗಿದೆ. ಜೆಡಿಎಸ್‌ ಪ್ರಭಾವ ಕುಗ್ಗಿಸಿ ಕಾಂಗ್ರೆಸ್‌ ಬಾವುಟ ಹಾರಿಸುವ ಪ್ರಯತ್ನಗಳು ಪಕ್ಷದ ಹೈಕಮಾಂಡ್‌ ಮಾಡಿರಲೇ ಇಲ್ಲ! ಹೊರಗಿನ ವ್ಯಕ್ತಿಗಳಿಗೆ ಮಣೆ ಹಾಕಿ ಪಕ್ಷದ ಅಧೋಗತಿಗೆ ಸ್ವಯಂ ಹೈಕಮಾಂಡ್‌ ಕಾರಣವಾಗಿತ್ತು ಎಂಬುದು ಸ್ಥಳೀಯ ಕಾಂಗ್ರೆಸ್ಸಿಗರ ಮನದಾಳದ ಮಾತು. 

 ಕಳೆದ ಚುನಾವಣೆಯಲ್ಲಿ ಸ್ಥಳೀಯ ಅಭ್ಯರ್ಥಿ ಮರಿದೇವರು ಅವರನ್ನು ಕಣಕ್ಕಿಳಿಸಿದ್ದರಿಂದ ಕಾಂಗ್ರೆಸ್‌ ಇಲ್ಲಿ ಪುನಃಶ್ಚೇತನಗೊಂಡಿದೆ. ಹೀಗಾಗಿಯೇ ನಗರಸಭೆಯಲ್ಲಿಯೂ ಕಾಂಗ್ರೆಸ್‌ ಆಡಳಿತ ಸ್ಥಾಪಿಸಲು ಸಾಧ್ಯವಾಗಿದೆ ಎಂದು ಕಾಂಗ್ರೆಸ್ಸಿಗರ ವಿಶ್ಲೇಷಣೆ. 
 
ಕ್ಷೇತ್ರದಲ್ಲೇ ಅರ್ಹ ಅಭ್ಯರ್ಥಿಗಳಿದ್ದಾರೆ: ಮುಂಬರುವ ಚುನಾವಣೆಗೆ ಹೊರಗಿನ ಅಭ್ಯರ್ಥಿಗಳಿಗೆ ಮಣೆ ಹಾಕುವುದು ಬೇಡ ಎಂದು ಕಾಂಗ್ರೆಸ್‌ ಕಾರ್ಯಕರ್ತರು ಪಕ್ಷದ ವರಿಷ್ಠರಿಗೆ ಪದೇ ಪದೆ ಮನವಿ ಮಾಡಿಕೊಳ್ಳುತ್ತಿದ್ದಾರೆ. ರಾಮನಗರ
ವಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿಸಲು ಕ್ಷೇತ್ರದಲ್ಲಿ ಮುಖಂಡರ ಕೊರತೆ ಏನಿಲ್ಲ. ಸೈಯದ್‌ ಜಿಯಾವುಲ್ಲಾ (ನಗರಸಭೆ ಮಾಜಿ ಅಧ್ಯಕ್ಷ) , ಕೆ.ಶೇಷಾದ್ರಿ (ರಾ-ಚ ಪ್ರಾಧಿಕಾರದ ಮಾಜಿ ಅಧ್ಯಕ್ಷ) ಶಾಸಕ ಸ್ಥಾನಕ್ಕೆ ಅರ್ಹರಿದ್ದಾರೆ ಎಂದು ಮುಖಂಡರ ಗಮನ ಸೆಳೆದಿದ್ದಾರೆ.  ಆದರೆ ಈ ಇಬ್ಬರು ನಾಯಕರು ಇಲ್ಲಿಯವರೆಗೂ ತಾವು ಆಕಾಂಕ್ಷಿಗಳು ಎಂದು ಹೇಳಿಕೊಂಡಿಲ್ಲ. ಅವರ ಅಭಿಮಾನಿಗಳು ಅವರನ್ನು ಪ್ರೊಪೋಸ್‌ ಮಾಡುತ್ತಿದ್ದಾರೆ. 

ನಾವು ಆಕಾಂಕ್ಷಿಗಳು…: ಜಿಲ್ಲಾ ಕಾಂಗ್ರೆಸ್‌ ಉಪಾಧ್ಯಕ್ಷ ಮತ್ತು ಮಾಜಿ ಶಾಸಕ ಸಿ.ಎಂ.ಲಿಂಗಪ್ಪ ಅವರ ಪುತ್ರ ಎಲ್‌.ಚಂದ್ರಶೇಖರ್‌ ಮತ್ತು ಜಿಪಂ ಮಾಜಿ ಅಧ್ಯಕ್ಷ ಇಕ್ಬಾಲ್‌ ಹುಸೇನ್‌ ರಾಮನಗರ ವಿಧಾನಸಭಾ ಕ್ಷೇತ್ರಕ್ಕೆ
ಆಕಾಂಕ್ಷಿಗಳು ಎಂದು ಪಕ್ಷಕ್ಕೆ ಭಿನ್ನವಿಸಿಕೊಂಡಿದ್ದಾರೆ.

Advertisement

ಇವರಿಬ್ಬರು ರಾಮನಗರ ವಿಧಾನಸಭಾ ಕ್ಷೇತ್ರದ ನಿವಾಸಿಗಳಲ್ಲ!  ಆದರೆ ಇಬ್ಬರೂ ಕೈಗೆಟುಕುವ ಅಭ್ಯರ್ಥಿಗಳು
ಎಂಬುದೇ ಸಮಾಧಾನ ಎಂದು ಕಾಂಗ್ರೆಸ್‌ ಕಾರ್ಯಕರ್ತರು ಪ್ರತಿಕ್ರಿಯಿಸಿದ್ದಾರೆ. ಸದ್ಯ ಈ ಎರಡು ಹೆಸರು ರೇಸ್‌ನಲ್ಲಿವೆ. ಜಿಲ್ಲೆಯ ಮಟ್ಟಿಗೆ ಕಾಂಗ್ರೆಸ್‌ ಹೈಕಮಾಂಡ್‌ ಆಗಿರುವ ಡಿಕೆ ಬ್ರದರ್ ಯಾರಿಗೆ ಟಿಕೆಟ್‌ ಕೊಡ್ತಾರೋ ಕಾದು
ನೋಡಬೇಕಾಗಿದೆ. 

ಡಿಕೆಶಿ ನೇತೃತ್ವದಲ್ಲಿ ಕಾಂಗ್ರೆಸ್‌ ಪ್ರಮುಖರಗೌಪ್ಯ ಸಭೆ: ಅಭ್ಯರ್ಥಿಯ ಬಗ್ಗೆ ಚರ್ಚೆ 
 ರಾಮನಗರ:
ಇಲ್ಲಿನ ಕ್ಷೇತ್ರಕ್ಕೆ ಕಾಂಗ್ರೆಸ್‌ ಅಭ್ಯರ್ಥಿಯ ಹೆಸರು ಅಂತಿಮಗೊಳಿಸಲು ಸೋಮವಾರ ಬಿಡದಿ ಬಳಿಯ ಐಕಾನ್‌ ನರ್ಸಿಂಗ್‌ ಕಾಲೇಜಿನಲ್ಲಿ ರಹಸ್ಯ ಸಭೆ ನಡೆದಿತ್ತು ಎಂದು ವಿಶ್ವಾಸನೀಯ ಮೂಲಗಳು ತಿಳಿಸಿವೆ. ಕ್ಷೇತ್ರಾದ್ಯಂತ ನೂರು ಪ್ರಮುಖ ಕಾರ್ಯ ಕರ್ತರು ಸಭೆಯಲ್ಲಿ ಭಾಗವಹಿಸಿದ್ದರು. ಜಿಲ್ಲೆಯ ಮಟ್ಟಿಗೆ ಕಾಂಗ್ರೆಸ್‌ ಹೈಕಮಾಂಡ್‌ ಆಗಿರುವ ಸಚಿವ ಡಿ.ಕೆ. ಶಿವಕುಮಾರ್‌ ಖುದ್ದು ಹಾಜರಿದ್ದು ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಿದ್ದಾರೆ. 

ಬಹುತೇಕ ಕಾರ್ಯಕರ್ತರು ಸ್ಥಳೀಯ ಅಭ್ಯರ್ಥಿಯನ್ನೇ ಕಣಕ್ಕಿಳಿಸಿ ಎಂದು ಅಭಿಪ್ರಾಯಗಳನ್ನು ಮಂಡಿಸಿದ್ದಾರೆ ಎಂದು
ಗೊತ್ತಾಗಿದೆ. ಜಿಲ್ಲಾ ಕಾಂಗ್ರೆಸ್‌ ಉಪಾಧ್ಯಕ್ಷ ಎಲ್‌. ಚಂದ್ರಶೇಖರ್‌ ಮತ್ತು ಜಿಪಂ ಮಾಜಿ ಅಧ್ಯಕ್ಷ ಇಕ್ಬಾಲ್‌ ಹುಸೇನ್‌ ತಾವು ಟಿಕೆಟ್‌ ಆಕಾಂಕ್ಷಿಗಳು ಎಂದು ಮುಂದೆ ಬಂದಿದ್ದಾರೆ. ಎಲ್‌. ಚಂದ್ರಶೇಖರ್‌ ರಾಮನಗರ ತಾಲೂಕು ಮೂಲದವರು, ರಾಜಕೀಯ ಹಿನ್ನೆಲೆ ಉಳ್ಳವರು ಆಗಿರುವುದರಿಂದ ಇವರ ಹೆಸರನ್ನೇ ಪರಿಗಣಿಸಿ ಎಂದು ಆಗ್ರಹಿಸಿದ್ದಾರೆ. ಇನ್ನು ಕೆಲವರು ಇಕ್ಬಾಲ್‌ ಹುಸೇನ್‌ ಕನಕಪುರ ತಾಲೂಕಿನವರಾದರು, ಅಲ್ಪಸಂಖ್ಯಾತರಿಗೆ ಟಿಕೆಟ್‌ ಕೊಟ್ಟಂತಾಗುತ್ತದೆ ಮತ್ತು ಜಿಪಂ ಅಧ್ಯಕ್ಷರಾಗಿ ಗುರುತಿಸಿಕೊಂಡಿದ್ದಾರೆ. ಅವರಿಗೆ ಟಿಕೆಟ್‌ ಕೊಡಿ ಎಂದು ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. 

ಕೊನೆಗೆ ಇಬ್ಬರ ಪೈಕಿ ಒಬ್ಬರ ಹೆಸರನ್ನು ಅಖೈರು ಮಾಡುವ ಹೊಣೆಯನ್ನು ಸಚಿವ ಡಿ.ಕೆ. ಶಿವಕುಮಾರ್‌ ಅವರ ಮೇಲೆ ಕಾಂಗ್ರೆಸ್‌ ಮುಖಂಡರು ಹೊರೆಸಿದ್ದಾರೆ. ಮಾಜಿ ಶಾಸಕ ಸಿ.ಎಂ.ಲಿಂಗಪ್ಪ ಮತ್ತು ಕೆಪಿಸಿಸಿ ಕಾರ್ಯದರ್ಶಿ
ಸೈಯದ್‌ ಜಿಯಾವುಲ್ಲಾ ಅವರ ಸಹಕಾರ ಪಡೆಯುವಂತೆಯೂ ಕಾರ್ಯಕರ್ತರು ಸಲಹೆ ನೀಡಿದ್ದಾರೆ. ಸದ್ಯದಲ್ಲೇ ರಾಮನಗರ ಕ್ಷೇತ್ರದ ಅಭ್ಯರ್ಥಿಯನ್ನು ಘೋಷಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

„ ಬಿ.ವಿ.ಸೂರ್ಯ ಪ್ರಕಾಶ್‌

Advertisement

Udayavani is now on Telegram. Click here to join our channel and stay updated with the latest news.

Next