Advertisement

ಮೆಟ್ರೋದಿಂದ ಗಿಡ ನೆಡಲು ಜಾಗ ಹುಡುಕಾಟ

10:25 AM Dec 20, 2019 | Suhan S |

ಬೆಂಗಳೂರು: “ನಗರದ ಮಧ್ಯೆ ಭಾಗದಲ್ಲಿ ಮರಗಳನ್ನು ಕಡಿದು, ಅದಕ್ಕೆ ಪ್ರತಿಯಾಗಿ ಮತ್ತೆಲ್ಲೋ ಗಿಡಗಳನ್ನು ನೆಡುವುದರಲ್ಲಿ ಅರ್ಥವಿಲ್ಲ. ತೆರವುಗೊಳಿಸಿದ ಜಾಗ ದಿಂದ ಹತ್ತಿರದ ಪ್ರದೇಶದಲ್ಲೇ ಗಿಡಗಳನ್ನು ನೆಡತಕ್ಕದ್ದು…’

Advertisement

“ನಮ್ಮ ಮೆಟ್ರೋ’ ಎರಡನೇ ಹಂತದ ಯೋಜನೆಗಾಗಿ ಮರಗಳ ತೆರವಿಗೆ ಸಜ್ಜಾಗುತ್ತಿರುವ ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ ಸಿಎಲ್‌)ಕ್ಕೆ ಹೀಗಂತ ಮರಗಳ ತಜ್ಞರ ಸಮಿತಿ ಸೂಚನೆ ನೀಡಿದೆ. ಸಾವಿರಾರು ಗಿಡಗಳನ್ನು ನೆಡಲು ನಗರದ ಹೃದಯ ಭಾಗದಲ್ಲೇ ಜಾಗ ಬೇಕಾಗುತ್ತದೆ. ಇದಕ್ಕಾಗಿ ನಿಗಮದ ಎಂಜಿನಿಯರ್‌ಗಳು ಹುಡುಕಾಟ ನಡೆಸಿದ್ದಾರೆ.

ಮೆಟ್ರೋ ಮಾರ್ಗ ಮತ್ತು ನಿಲ್ದಾಣಗಳ ನಿರ್ಮಾಣಕ್ಕಾಗಿ ಸುಮಾರು 620ಕ್ಕೂ ಅಧಿಕ ಮರಗಳ ತೆರವಿಗೆ ಪ್ರಸ್ತಾವನೆ ಸಲ್ಲಿಸಿದೆ. ಒಂದು ಮರ ಕಡಿದರೆ, ಅದಕ್ಕೆ ಪ್ರತಿಯಾಗಿ ಮೂರು ಗಿಡಗಳನ್ನು ನೆಡುವುದು ನಿಯಮ. ಅಂದರೆ ಅಂದಾಜು 1,800 ಗಿಡಗಳನ್ನು ನೆಡಬೇಕಾಗಿದೆ. ಮರಗಳ ತಜ್ಞರ ಪ್ರಕಾರ ಒಂದು ಎಕರೆಯಲ್ಲಿ 60ರಿಂದ 70 ಗಿಡಗಳನ್ನು ನೆಡಲು ಸಾಧ್ಯವಿದ್ದು, ಒಟ್ಟಾರೆ 30ರಿಂದ 40 ಎಕರೆ ಜಾಗದ ಅವಶ್ಯಕತೆ ಇದೆ. ಇದರ ಜತೆಗೆ 130ಕ್ಕೂ ಹೆಚ್ಚು ಮರಗಳನ್ನು ಸ್ಥಳಾಂತರಗೊಳಿಸಬೇಕಿದೆ. ಇದಕ್ಕಾಗಿ ನಗರದ ಹೃದಯಭಾಗದಲ್ಲಿರುವ ಉದ್ಯಾನಗಳು, ಕೆರೆ-ಕುಂಟೆಗಳು, ಶಾಲಾ-ಕಾಲೇಜು ಮೈದಾನ, ಐಟಿ ಕಂಪನಿಗಳ ಆವರಣಗಳಲ್ಲಿ ಜಾಗದ ಲಭ್ಯತೆ ಕುರಿತು ಬಿಎಂಆರ್‌ಸಿಎಲ್‌ ಅಧಿಕಾರಿಗಳು ಸಮೀಕ್ಷೆ ಕೈಗೆತ್ತಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸಾಧ್ಯಾಸಾಧ್ಯತೆಗಳ ಅಧ್ಯಯನ: ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿ ಸುಮಾರು 1,400 ಉದ್ಯಾನಗಳಿದ್ದು, ಈ ಪೈಕಿ 700- 800 ನಗರದ ಹೃದಯಭಾಗದಲ್ಲೇ ಇವೆ. ಇವುಗಳ ವಿಸ್ತೀರ್ಣ ಸರಾಸರಿ 4ರಿಂದ 5 ಎಕರೆ ಆಗಿದೆ. ಇದಲ್ಲದೆ, ಪಾಲಿಕೆಯ 168 ಹಾಗೂ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ)ದ 32 ಸೇರಿ 200 ಕೆರೆಗಳು ಇವೆ. ನೂರಾರು ಶಿಕ್ಷಣ ಸಂಸ್ಥೆಗಳನ್ನೂ ಕಾಣಬಹುದು. ಅಲ್ಲೆಲ್ಲಾ ಜಾಗದ ಲಭ್ಯತೆಗೆ ಅನುಗುಣವಾಗಿ ಗಿಡಗಳನ್ನು ನೆಡುವ ಬಗ್ಗೆ ಸಾಧ್ಯಾಸಾಧ್ಯತೆಗಳ ಅಧ್ಯಯನ ನಡೆಸಲಾಗುತ್ತಿದೆ ಎಂದು ನಿಗಮದ ಅಧಿಕಾರಿಯೊಬ್ಬರು “ಉದಯವಾಣಿ’ಗೆ ಮಾಹಿತಿ ನೀಡಿದರು.

ಬಿಎಂಆರ್‌ಸಿಎಲ್‌, ಈ ಹಿಂದೆ ಮೆಟ್ರೋ ಯೋಜನೆಗಾಗಿ ತೆರವುಗೊಳಿಸುವ ಮರಗಳಿಗೆ ಪ್ರತಿಯಾಗಿ ಗಿಡಗಳನ್ನು ನೆಡಲು ಬಿಬಿಎಂಪಿಗೆ ಇಂತಿಷ್ಟು ಹಣ ನೀಡುತ್ತಿತ್ತು. ಕೆಲ ದಿನಗಳ ನಂತರ ಪಾಲಿಕೆಯು ಗಿಡ ನೆಟ್ಟಿರುವುದು ಹಾಗೂ ಅದರಲ್ಲಿ ಜೀವಂತವಾಗಿರುವ ಗಿಡಗಳ ಬಗ್ಗೆ ವರದಿ ಸಲ್ಲಿಸುತ್ತಿತ್ತು. ಈಗ ಅದರ ಜವಾಬ್ದಾರಿ ನಿಗಮದ ಮೇಲೆ ಬಿದ್ದಿದೆ. ಆದರೆ, ಹೊಸ ವ್ಯವಸ್ಥೆಯಲ್ಲಿ ಜಾಗ ದೊರೆತರೂ, ಅಲ್ಲಿ ನೆಡುವ ಗಿಡಗಳ ನಿರ್ವಹಣೆಯನ್ನೂ ಮಾಡಬೇಕಾಗುತ್ತದೆ. ಹಾಗಾಗಿ, ಆ ಹೊಣೆಯನ್ನು ಸರ್ಕಾರೇತರ ಸಂಸ್ಥೆಗೆ ವಹಿಸಬೇಕೋ ಅಥವಾ ಆಯಾ ಸ್ಥಳೀಯ ವಾರ್ಡ್‌ ಕಚೇರಿ ಸುಪರ್ದಿಗೆ ನೀಡಬೇಕೋ ಎಂಬುದನ್ನೂ ನಿರ್ಧರಿಸಬೇಕಿದೆ ಎಂದೂ ಅವರು ತಿಳಿಸಿದರು.

Advertisement

ಕಂಪನಿಗಳ ಸಹಕಾರ: ಸ್ಥಳಾಂತರಿಸಲು ಉದ್ದೇಶಿಸಿದ ಮರಗಳನ್ನು ನೆಡಲು ಜಾಗದ ಕೊರತೆ ಇಲ್ಲ. ಇದಕ್ಕಾಗಿ ಐಟಿ-ಬಿಟಿ ಕಂಪನಿಗಳು, ಶಿಕ್ಷಣ ಸಂಸ್ಥೆಗಳು ಮುಂದೆಬಂದಿವೆ. ಇನ್ಫೋಸಿಸ್‌, ಬಾಗ್ಮೆನೆ ಟೆಕ್‌ ಪಾರ್ಕ್‌ ಸೇರಿದಂತೆ ಹಲವು ಸಾಫ್ಟ್ವೇರ್‌ ಕಂಪನಿಗಳ ಆವರಣದಲ್ಲಿ ಮರಗಳನ್ನು ತಂದು ಟ್ರಾನ್ಸ್‌ಪ್ಲಾಂಟೇಷನ್‌ ಮಾಡುವಂತೆ ಮನವಿ ಮಾಡಿವೆ. ಅಲ್ಲದೆ ಕೆಲವು ಶಿಕ್ಷಣ ಸಂಸ್ಥೆಗಳೂ ಆಸಕ್ತಿ ತೋರಿಸಿದ್ದು, ನಿರ್ವಹಣೆ ಕೂಡ ತಾವೇ ಮಾಡುವುದಾಗಿ ಒಪ್ಪಿಕೊಂಡಿವೆ ಎಂದು ನಿಗಮದ ಎಂಜಿನಿಯರೊಬ್ಬರು ಮಾಹಿತಿ ತಿಳಿಸಿದರು.

ವಿಳಂಬದಿಂದ ಕಾರ್ಯ ಅಪೂರ್ಣ:  ಇತ್ತ ಮಾರ್ಗ ನಿರ್ಮಾಣಕ್ಕೆ ಟೆಂಡರ್‌ ಕಂಪನಿಗಳಿಂದ ಭೂಮಿ ಹಸ್ತಾಂತರಕ್ಕೆ ಒತ್ತಡ ಬರುತ್ತಿದೆ. ನಿಯಮದ ಪ್ರಕಾರ ಟೆಂಡರ್‌ ಪ್ರಕ್ರಿಯೆ ಪೂರ್ಣಗೊಂಡ 90 ದಿನಗಳಲ್ಲಿ ಭೂಮಿ ಹಸ್ತಾಂತರಿಸಬೇಕಿತ್ತು. ಆದರೆ, ಈಗ ನಾಲ್ಕು ತಿಂಗಳು ಕಳೆದರೂ ಈ ಕಾರ್ಯ ಪೂರ್ಣಗೊಂಡಿಲ್ಲ. ಪರಿಣಾಮ ಯೋಜನೆ ವಿಳಂಬದಲ್ಲಿ ಇದು ಪರಿಣಮಿಸುತ್ತಿದೆ. ಗೊಟ್ಟಿಗೆರೆ-ನಾಗವಾರ ನಡುವಿನ ಒಟ್ಟಾರೆ 21 ಕಿ.ಮೀ. ಉದ್ದದ ಮಾರ್ಗದಲ್ಲಿ ಸುಮಾರು 620 ಮರಗಳು ತೆರವುಗೊಳಿಸಬೇಕಿದೆ. ಇದರಲ್ಲಿ 300ಕ್ಕೂ ಅಧಿಕ ಮರಗಳು ಪ್ಯಾಕೇಜ್‌ 2 ಮತ್ತು 3 (ವೆಲ್ಲಾರ-ಶಿವಾಜಿನಗರ ಹಾಗೂ ಶಿವಾಜಿನಗರ-ಪಾಟರಿ ಟೌನ್‌)ರಲ್ಲಿ ಬರುವ ಐದು ನಿಲ್ದಾಣಗಳಲ್ಲೇ ಇವೆ.

ಜ. 2ರಿಂದ 12ರವರೆಗೆ ಮೆಟ್ರೋ ಸೇವೆ:  “ನಮ್ಮ ಮೆಟ್ರೋ’ ಮಧ್ಯರಾತ್ರಿ 12ರವರೆಗಿನ ಸೇವೆಯು ಹೊಸ ವರ್ಷದ ಮೊದಲ ದಿನದಿಂದ ಆರಂಭಗೊಳ್ಳುವುದಿಲ್ಲ. ನಿರ್ವಹಣೆಗೆ ಸಂಬಂಧಿಸಿದ ತಾಂತ್ರಿಕ ಕಾರಣಗಳ ಹಿನ್ನೆಲೆಯಲ್ಲಿ ಹೊಸ ವರ್ಷದ ಮೊದಲ ದಿನ ಅಂದರೆ 2020ರ ಜ. 1ರ ಬದಲಿಗೆ ಜ. 2ರಿಂದ ನಿತ್ಯ ಮಧ್ಯರಾತ್ರಿ 12ರವರೆಗೆ ಮೆಟ್ರೋ ಸೇವೆ ಪ್ರಯಾಣಿಕರಿಗೆ ಲಭ್ಯವಾಗಲಿದೆ ಎಂದು ಬಿಎಂಆರ್‌ಸಿಎಲ್‌ ವ್ಯವಸ್ಥಾಪಕ ನಿರ್ದೇಶಕ ಅಜಯ್‌ ಸೇಠ್ ಸ್ಪಷ್ಟಪಡಿಸಿದ್ದಾರೆ. ಮೆಜೆಸ್ಟಿಕ್‌ನ ನಾಡಪ್ರಭು ಕೆಂಪೇಗೌಡ ಮೆಟ್ರೋ ಇಂಟರ್‌ಚೇಂಜ್‌ನಿಂದ ಏಕಕಾಲದಲ್ಲಿ ಮಧ್ಯರಾತ್ರಿ 12ಕ್ಕೆ ನಾಲ್ಕೂ ಮೆಟ್ರೋ ರೈಲುಗಳು ಹೊರಡಲಿವೆ.

 

-ವಿಜಯಕುಮಾರ್‌ ಚಂದರಗಿ

Advertisement

Udayavani is now on Telegram. Click here to join our channel and stay updated with the latest news.

Next