ಮಥುರಾ: ಶ್ರೀರಾಮಜನ್ಮಭೂಮಿಯಾಗಿ ಅಯೋಧ್ಯೆಯನ್ನು ಗುರುತಿಸಿದ ರೀತಿಯಲ್ಲೇ ಶ್ರೀಕೃಷ್ಣನ ಜನ್ಮಭೂಮಿಯಾಗಿ ಮಥುರಾವನ್ನು ಅಭಿವೃದಿಟಛಿಪಡಿಸಲು ಉತ್ತರ ಪ್ರದೇಶ ಸರ್ಕಾರ ಮುಂದಾಗಿದೆ.
ಶ್ರೀಕೃಷ್ಣ ಬೆಳೆದದ್ದು ದ್ವಾರಕೆಯಲ್ಲಾದರೂ, ಹುಟ್ಟಿದ್ದು ಮಥುರಾದಲ್ಲಿ ಇದ್ದ ಕಂಸನ ಸೆರೆಮನೆಯಲ್ಲೇ ಎಂಬುದು ಎಲ್ಲರಿಗೂ ಗೊತ್ತು. ಮಹಾಭಾರತದಲ್ಲಿ ಪ್ರಮುಖವಾಗಿಯೇ ಗುರುತಿಸಿಕೊಂಡಿರುವ ಮಥುರಾ, ಆಧುನಿಕ ಕಾಲದಲ್ಲಿ ಅಷ್ಟೇನೂ ಮಹತ್ವ ಪಡೆದಿಲ್ಲ. ಈ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದಲ್ಲಿ ಅಧಿಕಾರದಲ್ಲಿರುವ ಯೋಗಿ ಆದಿತ್ಯನಾಥ್ ಸರ್ಕಾರ, ಮಥುರಾದಲ್ಲಿ
ಭಗವದ್ಗೀತಾ ಸಂಶೋಧನಾ ಕೇಂದ್ರ ತೆರೆಯಲು ಮುಂದಾಗಿದೆ. ಈ ಮೂಲಕ ಶ್ರೀ ಕೃಷ್ಣ ಜನ್ಮಸ್ಥಳಕ್ಕೆ ಐತಿಹಾಸಿಕ ಸ್ಥಾನಮಾನ ನೀಡಲು ಹೊರಟಿದೆ.
ಈ ಅಧ್ಯಯನ ಕೇಂದ್ರದಲ್ಲಿ ಭಗವದ್ಗೀತೆಯ ಸಾರದ ಜತೆಗೆ, ಗಾಯನ, ವಾದನ ಮತ್ತು ನೃತ್ಯಗಳನ್ನು ಹೇಳಿಕೊಡಲಾಗುತ್ತದೆ. ಅಂದರೆ ಶ್ರೀಕೃಷ್ಣ ಬದುಕಿದ್ದ ಕಾಲದಲ್ಲಿ ಮೇಳೈಸಿದ್ದ ಈ ಸಾಂಸ್ಕೃತಿಕ ಪ್ರಕಾರಗಳಿಗೆ ಉತ್ತೇಜನ ನೀಡಲು ಮುಂದಾಗಿದೆ.
ಮಥುರಾದಲ್ಲೇ ಆಯೋಜಿಸಲಾಗಿದ್ದ ಸರ್ಕಾರಿ ವಸ್ತು ಸಂಗ್ರಹಾಲಯದ 144ನೇ ವರ್ಷಾಚರಣೆಯ ವೇಳೆ ಮಾತನಾಡಿದ ಧಾರ್ಮಿಕ ಮತ್ತು ಸಾಂಸ್ಕೃತಿಕ ಇಲಾಖೆ ಸಚಿವ ಲಕ್ಷ್ಮೀ ನಾರಾಯಣ ಚೌಧರಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಇಡೀ ಜಗತ್ತಿನಲ್ಲೇ ಬ್ರಿಜ್ ಭಾಷೆಯಷ್ಟು ಸಿಹಿಯಾದ ಇನ್ನೊಂದು ಭಾಷೆ ಇಲ್ಲ. ವಿಶೇಷವೆಂದರೆ ಇದು ಜಗತ್ತಿಗೆ ಮಥುರಾ ಕೊಟ್ಟ
ಕಾಣಿಕೆ ಎಂದಿದ್ದಾರೆ. ಇದೇ ಮೊದಲಲ್ಲ: ಉತ್ತರ ಪ್ರದೇಶ ಸರ್ಕಾರ ಆರಂಭದಿಂದಲೂ ಭಗವದ್ಗೀತೆ ಪಠಣಕ್ಕೆ ಹೆಚ್ಚಿನ
ಪ್ರಾಶಸ್ತ್ಯ ನೀಡುತ್ತಾ ಬಂದಿದೆ. ಈ ವಿಚಾರದಲ್ಲಿ ಸಿಎಂ ಯೋಗಿ ವಿಶೇಷ ಆಸಕ್ತಿಯನ್ನೂ ಹೊಂದಿದ್ದಾರೆ.
ಈಗ ಸಂಶೋಧನಾ ಕೇಂದ್ರ ರಚನೆಗೆ ಮುಂದಾಗಿದ್ದರೂ, ಈ ಹಿಂದೆಯೇ ಎಲ್ಲ ಶಾಲೆಗಳಲ್ಲಿ ಗೀತೆ ಕುರಿತಂತೆ ಹಾಡುಗಾರಿಕೆಯ ಸ್ಪರ್ಧೆ ಏರ್ಪಡಿಸಬೇಕು ಎಂದು ಸುತ್ತೋಲೆ ಹೊರಡಿಸಿತ್ತು. ಅದೂ ಇದೇ ತಿಂಗಳ ಆರಂಭದಲ್ಲೇ ಎಲ್ಲ ಶಾಲೆಗಳಿಗೆ ತಲುಪಿತ್ತು. ಈ ಮೂಲಕ ಮಕ್ಕಳಲ್ಲಿ ಭಗವದ್ಗೀತೆ ಕಲಿಯುವಂತೆ ಮಾಡುವ ಪ್ರಯತ್ನ ನಡೆದಿತ್ತು.