ಮಾಧ್ಯಮ, ಸಂಶೋಧನೆ, ವಿಜ್ಞಾನ ಮುಂತಾದ ಕ್ಷೇತ್ರಗಳ ಪರಿಣತರಿಗೆ ಸುಲಭವಾಗಿ ಅಂಕಿ ಅಂಶಗಳ ಗುಚ್ಚ(ಡಾಟಾ ಸೆಟ್) ಸಿಗುವಂತೆ ಮಾಡಲು ಗೂಗಲ್ ಪ್ರತ್ಯೇಕ ಸರ್ಚ್ ಎಂಜಿನ್‌ಅನ್ನು ಬಿಡುಗಡೆಗೊಳಿಸಿದೆ. ಯಾವುದೇ ವಿಷಯವಾಗಿ ಸಂಶೋಧನೆ ನಡೆಸುವಾಗ, ಪ್ರಬಂಧ ಸಿದ್ಧಪಡಿಸುವಾಗ ಅಂಕಿ ಅಂಶಗಳ ಅಗತ್ಯ ಇರುತ್ತದೆ. ಹೊಸ ಸರ್ಚ್ ಎಂಜಿನ್ ಮೂಲಕ ಬಳಕೆದಾರ ಅಗತ್ಯ ಅಂಕಿ ಅಂಶಗಳನ್ನು ಸುಲಭವಾಗಿ ಪಡೆದುಕೊಳ್ಳಬಹುದು. ಯಾರು ಬೇಕಾದರೂ ಗೂಗಲ್‌ನ ಈ ನೂತನ ಸೌಲಭ್ಯವನ್ನು ಬಳಸಿಕೊಳ್ಳಬಹುದು. ಇಲ್ಲಿಯವರೆಗೆ ಅಂಕಿ ಅಂಶಗಳ ಗುಚ್ಚವನ್ನು ಇಂಟರ್‌ನೆಟ್‌ನಲ್ಲಿ ಪಡೆದುಕೊಳ್ಳುವುದು ಕಷ್ಟವಿತ್ತು. ಅಧಿಕೃತತೆ, ವಿಶ್ವಾಸಾರ್ಹತೆ ಮುಖ್ಯ ತಡೆಗೋಡೆಗಳಾಗಿದ್ದವು. “ಸರ್ಕಾರಿ ಜಾಲತಾಣಗಳಲ್ಲದೆ, ನೂರಾರು ಖಾಸಗಿ ಸಂಸ್ಥೆಗಳ ಮಾಹಿತಿ ಭಂಡಾರದಲ್ಲಿ ಅಧಿಕೃತ ಅಂಕಿ ಅಂಶಗಳ ಗುಚ್ಚ ಇವೆಯಾದರೂ ಲಕ್ಷಾಂತರ ಜಾಲತಾಣಗಳ ಮಧ್ಯ ಅವು ಬಳಕೆದಾರನಿಗೆ ಗೋಚರವಾಗುತ್ತಲೇ ಇರಲಿಲ್ಲ. ಈ ಸಮಸ್ಯೆಯನ್ನು ನಿವಾರಿಸುವುದು ಗೂಗಲ್‌ನ ಉದ್ದೇಶ’ ಎಂದಿದ್ದಾರೆ ಗೂಗಲ್ ವಿಜ್ಞಾನಿ ನತಾಶಾ ನಯ್.
ಈ ಹಿಂದೆಯೂ ಗೂಗಲ್ “ಗೂಗಲ್ ಸ್ಕಾಲರ್’ ಮೂಲಕ ಇಂಥದ್ದೇ ಪ್ರಯತ್ನಕ್ಕೆ ಮುಂದಾಗಿದ್ದನ್ನು ನೆನಪಿಸಿಕೊಳ್ಳಬಹುದು. ಅಂದಹಾಗೆ, ಜಾಲತಾಣಗಳು ಗೂಗಲ್‌ನ ಹೊಸ ಸರ್ಚ್ ಎಂಜಿನ್‌ನ ಕಣ್ಣಿಗೆ ಬೀಳಬೇಕೆಂದರೆ ಕೆಲವೊಂದಷ್ಟು ವಿವರಗಳನ್ನು ನಮೂದಿಸಿರಬೇಕಾಗುತ್ತದೆ. ಉದಾಹರಣೆಗೆ, ಅಂಕಿ ಸಂಖ್ಯಾ ಗುಚ್ಚವನ್ನು ಸಿದ್ಧಪಡಿಸಿದವರ ಹೆಸರು, ಪಬ್ಲಿಶ್ ಆದ ದಿನಾಂಕ, ಮಾಹಿತಿಯ ಮೂಲ, ಇತ್ಯಾದಿ… ಈ ಶಿಷ್ಟಾಚಾರವನ್ನು ಹಲವು ಜಾಲತಾಣಗಳು ವರ್ಷಗಳಿಂದ ಪಾಲಿಸಿಕೊಂಡು ಬರುತ್ತಿದೆಯಾದರೂ ಇಂಟರ್‌ನೆಟ್‌ನಾದ್ಯಂತ ಇದನ್ನು ಪ್ರಚುರ ಪಡಿಸಲು ಗೂಗಲ್ ಮುಂದಾಗಿದೆ. ಇದರಿಂದ ಗೂಗಲ್ ಸರ್ಚ್‌ನ ಬಳಕೆದಾರ ತಾನು ಬಯಸಿದ ಮಾಹಿತಿಯನ್ನು ಮೊದಲ ಪ್ರಯತ್ನದಲ್ಲಿಯೇ ಪಡೆಯುವುದು ಸುಲಭವಾಗುತ್ತದೆ.
toolbox.google.com/datasetsearch