ಉಳ್ಳಾಲ: ದೇರಳಕಟ್ಟೆಯ ಖಾಸಗಿ ಕಾಲೇಜಿನ ಪಿಎಚ್‌ಡಿ ವಿದ್ಯಾರ್ಥಿನಿ ಚೈತ್ರಾ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಮಿಷನರ್ ಮಾರ್ಗದರ್ಶನದಲ್ಲಿ ಉಳ್ಳಾಲ ಪೊಲೀಸ್ ಠಾಣೆಯ ಅಧಿಕಾರಿಗಳನ್ನೊಳಗೊಂಡ ಪೊಲೀಸರ ತಂಡ ಬೆಂಗಳೂರಿನಲ್ಲಿ ತನಿಖೆಯನ್ನು ಚುರುಕುಗೊಳಿಸಿದೆ.
ನಾಪತ್ತೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಉಳ್ಳಾಲ ಪ್ರಖಂಡ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳದ ಮುಖಂಡರು ದಕ್ಷಿಣ ಉಪವಿಭಾಗ ಸಹಾಯಕ ಪೊಲೀಸ್ ಆಯುಕ್ತೆ ಧನ್ಯಾ ನಾಯಕ್ ಅವರಿಗೆ ಮನವಿ ಸಲ್ಲಿಸಿದೆ.
ಪಿಎಚ್‌ಡಿ ಸಂಶೋಧನ ವಿದ್ಯಾರ್ಥಿನಿಯಾಗಿದ್ದ ಚೈತ್ರಾ ಫೆ. 17ರಂದು ಮಾಡೂರಿನ ಬಾಡಿಗೆ ಮನೆಯಿಂದ ಸ್ಕೂಟರ್‌ನಲ್ಲಿ ಹೊರಟು ಸುರತ್ಕಲ್‌ನಲ್ಲಿ ಸ್ಕೂಟರ್ ತ್ಯಜಿಸಿ ನಾಪತ್ತೆಯಾಗಿದ್ದಳು. ಆರಂಭದಲ್ಲಿ ಸಾಮಾನ್ಯ ನಾಪತ್ತೆ ಪ್ರಕರಣ ಎಂದು ಪರಿಗಣಿಸಿದ್ದ ಪೊಲೀಸರು ನಾಪತ್ತೆ ಪ್ರಕರಣ ದಾಖಲಿಸಿ ಶೋಧ ಕಾರ್ಯ ನಡೆಸಿದ್ದರು. ಆದರೆ ಚೈತ್ರಾ ನಾಪತ್ತೆಯ ಹಿಂದೆ ಡ್ರಗ್ ಪೆಡ್ಲರ್ ಯುವಕನ ಕೈವಾಡವಿದೆ ಎಂದು ಹಿಂದೂ ಸಂಘಟನೆಗಳು ಪ್ರತಿಭಟನೆ ನಡೆಸುವ ಬೆದರಿಕೆ ಹಾಕಿದಾಗ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿ ಆಕೆಯ ಮೊಬೈಲ್ ಲೊಕೇಷನ್ ಆಧಾರದಲ್ಲಿ ಬೆಂಗಳೂರು ಕಡೆ ತೆರಳಿರುವ ಮಾಹಿತಿಯನ್ನು ಕಲೆ ಹಾಕಿದ್ದರು. ಈ ನಡುವೆ ಆಕೆ ಮೆಜೆಸ್ಟಿಕ್‌ನಿಂದ ಬಸ್ ಇಳಿದು ಹೋಗಿರುವ ಮಾಹಿತಿ ಸಿಸಿಟಿವಿಯಲ್ಲಿ ಪತ್ತೆ ಹಚ್ಚಿದ್ದ ಪೊಲೀಸರು ಬೆಂಗಳೂರು ವ್ಯಾಪ್ತಿಯಲ್ಲಿ ಆಕೆಯ ಶೋಧ ಕಾರ್ಯವನ್ನು ಚುರುಕುಗೊಳಿಸಿದ್ದು, ಇನ್ನೆರಡು ದಿನಗಳಲ್ಲಿ ಆಕೆಯನ್ನು ಪತ್ತೆ ಹಚ್ಚುವ ಭರವಸೆಯನ್ನು ಪೊಲೀಸರು ಇಟ್ಟುಕೊಂಡಿದ್ದಾರೆ.
ಯುವಕನೂ ನಾಪತ್ತೆ
ಈ ನಡುವೆ ಡ್ರಗ್ ಪೆಡ್ಲರ್ ಆಗಿದ್ದು, ಚೈತ್ರಾಳೊಂದಿಗೆ ಸಂಪರ್ಕವಿದ್ದ ಪುತ್ತೂರು ಮೂಲದ ಯುವಕನೂ ನಾಪತ್ತೆಯಾಗಿದ್ದು ಆತನ ಮೊಬೈಲ್ ಸ್ವಿಚ್ ಆಫ್ ಆಗಿದೆ. ಇಬ್ಬರೂ ಒಂದೇ ಕಡೆ ವಾಸವಾಗಿದ್ದಾರಾ ಅಥವಾ ಪೊಲೀಸರಿಂದ ತಪ್ಪಿಸಿಕೊಂಡು ಬೇರೆ ಬೇರೆ ಕಡೆ ಅವಿತುಕೊಂಡಿರುವ ಕುರಿತು ಉಳ್ಳಾಲ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಎಸಿಪಿಗೆ ಮನವಿ
ಉಳ್ಳಾಲ ಪ್ರಖಂಡ ವಿಶ್ವಹಿಂದೂ ಪರಿಷತ್ ಮತ್ತು ಬಜರಂಗದಳದ ಮುಖಂಡರು ಗುರುವಾರ ಎಸಿಪಿ ಧನ್ಯಾ ಅವರನ್ನು ಭೇಟಿಯಾಗಿ ನಾಪತ್ತೆ ಪ್ರಕರಣದ ಹಿಂದೆ ಇರುವವರನ್ನು ಪತ್ತೆಹಚ್ಚಬೇಕು, ಚೈತ್ರಾಗೆ ಡ್ರಗ್ಸ್ ನೀಡಿ ಆಕೆಯನ್ನು ಅಪಹರಿಸಿದ್ದು, ಈ ಲವ್ ಜೆಹಾದ್ ಹಿಂದಿನ ಶಕ್ತಿಗಳನ್ನು ಬಂಧಿಸಿಬೇಕು ಮತ್ತು ಡ್ರಗ್ಸ್ ಹಾವಳಿಗೆ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿದ್ದಾರೆ.
ಪುತ್ತಿಲ ಭೇಟಿ
ಈ ನಡುವೆ ಪುತ್ತೂರು ಮೂಲದ ಪುತ್ತಿಲ ಪರಿವಾರದ ನಾಯಕ ಅರುಣ್ ಕುಮಾರ್ ಪುತ್ತಿಲ ಉಳ್ಳಾಲ ಪೊಲೀಸ್ ಠಾಣೆಗೆ ಆಗಮಿಸಿ ತನಿಖೆಗೆ ಸಂಬಂಧಿಸಿದಂತೆ ಇನ್ ಸ್ಪೆಕ್ಟರ್ ಬಾಲಕೃಷ್ಣ ಎಚ್.ಎನ್. ಅವರೊಂದಿಗೆ ಚರ್ಚಿಸಿ ತನಿಖೆಯನ್ನು ಚುರುಕು ಗೊಳಿಸುವಂತೆ ಮನವಿ ಮಾಡಿದ್ದಾರೆ.