Advertisement

ಪಥ ಬದಲಿಸಿದ ನಕ್ಸಲರಿಗಾಗಿ ಪೊಲೀಸರಿಂದ ಶೋಧ

01:00 AM Mar 11, 2019 | Harsha Rao |

ಕುಂದಾಪುರ: ಒಂದಷ್ಟು ಕಾಲ ತಣ್ಣಗಿದ್ದ ನಕ್ಸಲ್‌ ಚಟುವಟಿಕೆ ಮತ್ತೆ ಗರಿಗೆದರಿದಂತಿದೆ. ಕೇರಳದ ವಯನಾಡಿನ ರೆಸಾರ್ಟ್‌ ಒಂದರಲ್ಲಿ ನಕ್ಸಲ್‌ ಮುಖಂಡ ಸಿ.ಪಿ. ಜಲೀಲ್‌ ಎಂಬಾತನನ್ನು ಎನ್‌ಕೌಂಟರ್‌ ಮೂಲಕ ಬುಧವಾರ ರಾತ್ರಿ ಕೊಲ್ಲಲಾಗಿದ್ದು, ಜತೆಗಿದ್ದ ನಕ್ಸಲರು ಕರ್ನಾಟಕದ ಕಡೆಗೆ ಬಂದಿರಬಹುದು ಎಂಬ ಶಂಕೆ ಮೂಡಿದೆ. ಜತೆಗಿದ್ದ‌
ವರು ಬೆಳ್ತಂಗಡಿಯವರೇ ಎಂಬ ಅನುಮಾನವೂ ಪೊಲೀಸ್‌ ಮೂಲಗಳಲ್ಲಿ ಮೂಡಿದೆ. 

Advertisement

ಚಟುವಟಿಕೆ 
ಆಂಧ್ರದಲ್ಲಿ ಹುಟ್ಟಿ ಕರ್ನಾಟಕದಲ್ಲಿ ಬೇರುಬಿಟ್ಟಿದ್ದ ನಕ್ಸಲ್‌ ಚಟುವಟಿಕೆ ಕೇರಳಕ್ಕೆ ಹಬ್ಬಿತ್ತು. ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ಹೆಸರಿನಲ್ಲಿ ಒಕ್ಕಲೆಬ್ಬಿಸುತ್ತಾರೆ ಎಂಬ ನೆವದಿಂದ ಆದಿವಾಸಿಗಳ ವಿಶ್ವಾಸ ಗಿಟ್ಟಿಸಿ ಸರಕಾರದ ವಿರುದ್ಧ ಎತ್ತಿಕಟ್ಟಿ ನಕ್ಸಲ್‌ ಚಳವಳಿಗೆ ಸೇರುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದರು. ಅವರ ಬಣ್ಣದ ಮಾತಿಗೆ ಮರುಳಾಗಿ ಬೆಳ್ತಂಗಡಿ ತಾಲೂಕಿನ ಕೆಲವರು ನಕ್ಸಲರಾಗಿ ಜೀವ ಕಳೆದುಕೊಂಡರು. ಉಳಿದವರು ತಲೆಮರೆಸಿ
ಕೊಂಡರು. ನಕ್ಸಲ್‌ ವಿರೋಧಿ ಪಡೆಯ ಕಾರ್ಯ ತೀವ್ರತೆಯಿಂದ ನಕ್ಸಲರ ಸಂಖ್ಯಾಬಲ ಕಡಿಮೆಯಾಯಿತು.

ನಾಡಿನ ಬೆಂಬಲವೂ ಕಡಿಮೆಯಾಯಿತು. ಹೊಸದಾಗಿ ಸಂಘಟನೆಗೆ ಸೇರುವವರೇ ಇಲ್ಲವೆಂದಾಗ ನಕ್ಸಲರಿಗೆ ವಲಸೆ ಅನಿವಾರ್ಯವಾಯಿತು. ಅವರು ಮಡಿಕೇರಿ ಮೂಲಕ ಕೇರಳ ಸೇರಿಕೊಂಡರು.

ಮುರಿದುಬಿದ್ದ ಮಾತುಕತೆ
ನಕ್ಸಲರ ಮನವೊಲಿಸಿ ಮುಖ್ಯವಾಹಿನಿಗೆ ಕರೆತರುವ ಪ್ರಯತ್ನ ಈ ಹಿಂದಿನ ರಾಜ್ಯ ಸರಕಾರದ ಮೂಲಕ ನಡೆಸಲಾಗಿತ್ತು. ಅದರ ನೇತೃತ್ವ ವಹಿಸಿದ್ದ ಗೌರಿ ಲಂಕೇಶ್‌ ಹತ್ಯೆ ಬಳಿಕ ಆ ಪ್ರಯತ್ನವೂ ಹಿನ್ನಡೆಕಂಡಿದೆ. ಆದರೆ ಕೇರಳದಲ್ಲಿ ನಕ್ಸಲ್‌ ಬೇರು ಸಕ್ರಿಯವಾಗುತ್ತಿರುವ ಹಿನ್ನೆಲೆಯಲ್ಲಿ ಕಾರ್ಯಾಚರಣೆ ಬಿರುಸುಗೊಂಡಿತ್ತು. ಒಂದು ತಿಂಗಳ ಹಿಂದೆ ರಾಷ್ಟ್ರೀಯ ತನಿಖಾ ದಳದವರು ಉಡುಪಿ -ಚಿಕ್ಕಮಗಳೂರು ಜಿಲ್ಲಾ ಗಡಿ, ಮೈಸೂರು ಜಿಲ್ಲಾ ಗಡಿ ಭಾಗದಲ್ಲಿ ತನಿಖೆ ನಡೆಸಿದ್ದರು. ಇದರಲ್ಲಿ ಪ್ರಮುಖವಾಗಿ ಬೆಳ್ತಂಗಡಿಯ ನಕ್ಸಲ್‌ ನಾಯಕಿ ಸುಂದರಿಯ ತಂಡದ ಹುಡುಕಾಟವೂ ನಡೆದಿತ್ತು. ಅದಾಗಿ ತಿಂಗಳಲ್ಲಿ ಎನ್‌ಕೌಂಟರ್‌ ನಡೆದಿದೆ. ಹಾಗಾಗಿ ನಕ್ಸಲರು ಕೇರಳ ಬಿಟ್ಟು ಕರ್ನಾಟಕ ತಲುಪಿರುವ ಕುರಿತು ಶೋಧ ನಡೆಸಲಾಗುತ್ತಿದೆ.

ಯಾರವರು?
ಜಲೀಲ್‌ ಮತ್ತು ತಂಡದವರು ರೆಸಾರ್ಟ್‌ ಒಂದಕ್ಕೆ ಹೋಗಿ ಆಹಾರ ಹಾಗೂ ಹಣಕ್ಕಾಗಿ ಒತ್ತಾಯಿಸಿದಾಗ ಅವರು ಪೊಲೀಸರಿಗೆ ನೀಡಿದ ಮಾಹಿತಿಯಂತೆ ಶೋಧ ಕಾರ್ಯ ನಿರತವಾಗಿದ್ದ ವಿಶೇಷ ದಳದವರು ಎನ್‌ಕೌಂಟರ್‌ ನಡೆಸಿದ್ದಾರೆ. ಆಗ ಆತನ ಜತೆಗೆ ನಾಲ್ವರು ಇದ್ದರು ಎನ್ನಲಾಗಿದೆ. ಅವರು ದಟ್ಟ ಕಾಡಿನಲ್ಲಿ ತಲೆಮರೆಸಿಕೊಂಡಿದ್ದು ಕರ್ನಾಟಕದವರೆಯೋ ಅಥವಾ ಕೇರಳ ಮೂಲದವರೋ ಎಂದು ತಿಳಿದಿಲ್ಲ. 2018ರಲ್ಲಿ ಶಿರಾಡಿಯಲ್ಲಿ ಶಸ್ತ್ರಧಾರಿಗಳು ಮನೆ ಮನೆಗೆ ಭೇಟಿ ನೀಡಿದ್ದರು. ಇದೇ ತಂಡ ಕೊಡಗು ಗಡಿಭಾಗದ ಕೇರಳದ ಕೊಯ್ನಾಡಿನಲ್ಲಿ ಇದ್ದುದು ಎನ್ನಲಾಗಿದೆ. 

Advertisement

ಶೋಧ ನಡೆಯುತ್ತಿದೆ
ನಕ್ಸಲರು ಕೇರಳದಿಂದ ಬೇರೆ ಕಡೆಗೆ ಹೋಗಿರುವ ಕುರಿತು ಮಾಹಿತಿ ಬಂದಿದೆ. ಅದಕ್ಕಾಗಿ ಉಡುಪಿ ಜಿಲ್ಲೆಯಲ್ಲಿ ಹೈ ಅಲರ್ಟ್‌ ಘೋಷಿಸಲಾಗಿದೆ. ಕಂಟ್ರೋಲ್‌ ರೂಂ ಮೂಲಕ ಮಾಹಿತಿ ಸಂಗ್ರಹ, ಚೆಕ್‌ಪೋಸ್ಟ್‌ ಮುಖಾಂತರ ವಾಹನ ತಪಾಸಣೆ ಮಾಡಲಾಗುತ್ತಿದೆ. ಶೋಧ ಕಾರ್ಯವೂ ಕೈಗೊಳ್ಳಲಾಗುತ್ತಿದೆ. ನಾಗರಿಕರು ಭಯಪಡುವ ಅಗತ್ಯವಿಲ್ಲ.
 - ನಿಶಾ ಜೇಮ್ಸ್‌, ಉಡುಪಿ ಎಸ್‌ಪಿ

ಶೋಧಕಾರ್ಯ
ಎರಡು ದಿನಗಳಿಂದ ಮಡಿಕೇರಿ, ಎಚ್‌ಡಿ ಕೋಟೆ, ಮೈಸೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಎಎನ್‌ಎಫ್ ತಂಡ ಬಿರುಸಿನ ಶೋಧಕಾರ್ಯದಲ್ಲಿ ತೊಡಗಿದೆ. ಉಡುಪಿ ಹಾಗೂ ದ.ಕ. ಜಿಲ್ಲೆಯಲ್ಲೂ ಕಟ್ಟೆಚ್ಚರ ವಹಿಸಲಾಗಿದೆ. ಪೊಲೀಸರು ಹೈ ಅಲರ್ಟ್‌ ಘೋಷಿಸಿದ್ದಾರೆ. ವಾಹನ ತಪಾಸಣೆ, ಚೆಕ್‌ಪೋಸ್ಟ್‌ ರಚನೆ, ಶೋಧ ನಡೆಸಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next