ಶಿವಮೊಗ್ಗ : ಗಾಂಧಿ ಬಜಾರ್ ಮತ್ತು ಅದರ ಸುತ್ತಮುತ್ತಲಿರುವ ಏರಿಯಾಗಳನ್ನು ಸೀಲ್‌ಡೌನ್ ಮಾಡಿರುವ ಕ್ರಮ ಅವೈಜ್ಞಾನಿಕವಾಗಿದೆ ಎಂದು ಅಲ್ಲಿನ ನಿವಾಸಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ರಾಜ್ಯದ ಯಾವ ಜಿಲ್ಲೆಯಲ್ಲಿಯೂ ಕೂಡ ಲಾಕ್ ಡೌನ್ ಇರುವುದಿಲ್ಲ ಎಂದು ಹೇಳಿದ್ದರೂ ಶಿವಮೊಗ್ಗ ಮಹಾನಗರ ಪಾಲಿಕೆ ಮಾತ್ರ ಸೀಲ್‌ಡೌನ್ ಹೆಸರಿನಲ್ಲಿ ಕೆಲವು ವಾರ್ಡ್ ಗಳನ್ನು ಸಂಪೂರ್ಣ ಲಾಕ್‌ಡೌನ್ ಮಾಡಿರುವುದು ಅವೈಜ್ಞಾನಿಕವಾಗಿದೆ ಎಂದು ದೂರಿದ್ದಾರೆ.
ಹಾಗೆ ಮಾಡುವುದೇ ಆದರೆ ಯಾರ ಮನೆಯವರಿಗೆ ಕೋವಿಡ್ ಪಾಸಿಟಿವ್ ಬಂದಿರುತ್ತದೆಯೋ ಅಂತಹ ಮನೆಗಳನ್ನು ಮಾತ್ರ ಸೀಲ್‌ಡೌನ್ ಮಾಡಿದರೆ ಸಾಕು. ಅದರ ಬದಲು ಇವರು ಇಡೀ ಏರಿಯಾ ಅಥವಾ ವಾರ್ಡನ್ನೇ ಸೀಲ್‌ಡೌನ್ ಮಾಡುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿರುವ ನಿವಾಸಿಗಳು, ಈ ಕೊರೊನಾ – ಸೀಲ್ ಡೌನ್‌ನಲ್ಲಿಯೂ ಕೂಡಾ “ಅಕ್ರಮ’ ನಡೆಯುತ್ತಿರುವ ಶಂಕೆ ವ್ಯಕ್ತವಾಗಿದೆ ಎಂದು ದೂರಿದರು.
ಮುಂದೆ ಹಬ್ಬಗಳು ಸಾಲು ಸಾಲಾಗಿ ಬರುತ್ತವೆ. ಎಲ್ಲರೂ ಹಬ್ಬ ಮತ್ತಿತರ ಆರ್ಥಿಕ ಚಟವಟಿಕೆಗಳಲ್ಲಿ ತೊಡಗಬೇಕು. ವ್ಯಾಪಾರಸ್ಥರು ಈಗ ತಾನೇ ಚೇತರಿಕೆ ಕಾಣುತ್ತಿದ್ದಾರೆ. ಇಂತಹ ಸಮಯದಲ್ಲಿ ಮತ್ತೆ ಸೀಲ್‌ಡೌನ್ ಮಾಡಿದರೆ ವ್ಯಾಪಾರ- ವಹಿವಾಟಿಗೆ ತೊಂದರೆಯಾಗುತ್ತದೆ ಎಂದ ಅವರು, “ಹಿರಿಯರೊಬ್ಬರು’ ಇದನ್ನು ಪ್ರತಿಷ್ಟೆಯ ವಿಷಯವನ್ನಾಗಿಸಿಕೊಂಡು, “ಸೀಲ್ ಡೌನ್’ ಮಾಡಿದ್ದಾರೆ ಎಂದು ಶಂಕೆ ವ್ಯಕ್ತಪಡಿಸಿದರು. ಕೂಡಲೇ ಇಡೀ ಏರಿಯಾ ಅಥವಾ ವಾರ್ಡ್‌ಗಳನ್ನು ಸೀಲ್‌ಡೌನ್ ಮಾಡುವುದನ್ನು ಬಿಟ್ಟು ಸೀಮಿತ ರಸ್ತೆಯನ್ನು ಸೀಲ್‌ಡೌನ್ ಮಾಡಲಿ ಎಂದು ಆಗ್ರಹಿಸಿದ್ದಾರೆ.
ಈ ಸಂದರ್ಭದಲ್ಲಿ ಗಾಂಧಿ ಬಜಾರ್ ಸುತ್ತಮುತ್ತಲ ನಿವಾಸಿಗಳು ಇದ್ದರು.