ಕಾರವಾರ: ಸೀಬರ್ಡ್ ನೌಕಾನೆಲೆಯಲ್ಲಿ ವಿಮಾನ ಬಳಕೆಗೆ ಬೇಕಾಗುವ 2000 ಮೀ. ಉದ್ದದ ರನ್‌ವೇ ನಿರ್ಮಾಣಕ್ಕೆ ನೌಕಾನೆಲೆ ಬಳಿ ಭೂಮಿ ಇದೆ. ಆದರೆ ನಾಗರಿಕ ವಿಮಾನಯಾನ ಸೌಲಭ್ಯಕ್ಕೆ ಬಳಸಲು ಇನ್ನೂ 1000 ಮೀಟರ್ ರನ್‌ವೇ ವಿಸ್ತರಿಸಬೇಕಿದ್ದು, 2025ರ ವೇಳೆಗೆ ಕಾರ್ಯಾರಂಭ ಮಾಡಲಿದೆ ಎಂದು ಐಎನ್‌ಎಸ್ ಕದಂಬ ನೌಕಾನೆಲೆ ಕಮಾಂಡರ್ ಮಹೇಶ್ ಸಿಂಗ್ ಹೇಳಿದರು.
ಗುರುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸೀಬರ್ಡ್ ನೌಕಾನೆಲೆ ವಿಮಾನ ನಿಲ್ದಾಣದಲ್ಲಿ ನಾಗರಿಕ ವಿಮಾನಯಾನಕ್ಕೆ ಬಳಸಿಕೊಳ್ಳಲು ರಕ್ಷಣಾ ಇಲಾಖೆ ಸಮ್ಮಿತಿಸಿದೆ. ನೌಕಾನೆಲೆ ದಕ್ಷಿಣ ಭಾಗದಲ್ಲಿ ವಿಮಾನ ನಿಲ್ದಾಣ ಬರಲಿದೆ. 2025ಕ್ಕೆ ಸೀಬರ್ಡ್ ವಿಮಾನ ನಿಲ್ದಾಣ ಕಾರ್ಯಾರಂಭ ಮಾಡಲಿದೆ. ಅಲ್ಲದೇ ವಿಮಾನಯಾನ ಟರ್ಮಿನಲ್, ಸಿವಿಲ್ ಸ್ಟೇಶನ್‌ಗಳ ನಿರ್ಮಾಣಕ್ಕೆ 40 ಎಕರೆ ಭೂಮಿ ಬೇಕು. ಇದನ್ನು ರಾಜ್ಯ ಸರ್ಕಾರವೇ ಖಾಸಗಿಯವರಿಂದ ಪಡೆದು ವ್ಯವಸ್ಥೆ ಮಾಡಿಕೊಳ್ಳಬೇಕಾಗುತ್ತದೆ. ವಿಮಾನ ನಿಲ್ದಾಣ ನಿರ್ಮಾಣದ ನಂತರ ಕಾರವಾರದ ಚಿತ್ರಣವೇ ಬದಲಾಗಲಿದೆ. ಪ್ರವಾಸೋದ್ಯಮ ಸೇರಿದಂತೆ ವಿಶ್ವದ ಇತರೆ ಭಾಗಗಳ ಜೊತೆ ಕಾರವಾರ ಬೆಸೆದುಕೊಳ್ಳಲಿದೆ ಎಂದರು.
ಏರ್‌ಕ್ರಾಫ್ಟ್ ಮ್ಯೂಜಿಯಂ: ಏರ್‌ಕ್ರಾಫ್ಟ್ ಮ್ಯೂಜಿಯಂ ಸ್ಥಾಪನೆಗೆ ನೌಕಾನೆಲೆ ಸಹಕಾರ ಎಂದರೆ ನಾವು ಬಳಸದೇ ಇರುವ ಏರ್ ಕ್ರಾಫ್ಟ್‌ನ್ನು ಉಚಿತವಾಗಿ ಜಿಲ್ಲಾಡಳಿತಕ್ಕೆ, ರಾಜ್ಯ ಸರ್ಕಾರಕ್ಕೆ ನೀಡಬಹುದು. ಆದರೆ ಮ್ಯೂಜಿಯಂ ಸ್ಥಾಪನೆಗೆ ಬೇಕಾಗುವ 12 ಕೋಟಿ ರೂ.ಗಳನ್ನು ನೇವಿ ಕೊಡುವುದು ಕಷ್ಟ. ಇದನ್ನು ರಾಜ್ಯ ಸರ್ಕಾರ ನಿಭಾಯಿಸಬೇಕು. ಕಾರವಾರ ಕಡಲತೀರದಲ್ಲಿ ಯುದ್ಧನೌಕೆ ಮ್ಯೂಜಿಯಂ ಬಳಿ ಸ್ಥಾಪಿಸಲು ಉದ್ದೇಶಿಸಲಾಗಿದ್ದ ವಿಮಾನ ಮ್ಯೂಜಿಯಂಗೆ ಜಿಲ್ಲಾಡಳಿತ 2 ಕೋಟಿ ರೂ. ಮಾತ್ರ ವಿನಿಯೋಗ ಮಾಡಲು ಸಾಧ್ಯ. ಉಳಿದ ವೆಚ್ಚ ನೌಕಾನೆಲೆಯವರೇ ಭರಿಸಿ ಎಂದು ನೌಕಾನೆಲೆಗೆ ಪತ್ರ ಬರೆದಿದೆ. ಈ ಸಂಬಂಧ ನಾವು ನೇವಿಯ ಪಶ್ಚಿಮ ವಲಯದ ಮುಖ್ಯಸ್ಥರಿಗೆ ಪತ್ರ ಬರೆದಿದ್ದೇವೆ ಎಂದರು.
ಆಂಧ್ರದ ವಿಶಾಖಪಟ್ಟಣದಲ್ಲಿ ಅಲ್ಲಿನ ಸರ್ಕಾರ 14 ಕೋಟಿ ವೆಚ್ಚದಲ್ಲಿ ವಿಮಾನ ಮ್ಯೂಜಿಯಂ ಸ್ಥಾಪಿಸಿತು. ಅದರ ವಾರ್ಷಿಕ ನಿರ್ವಹಣೆ 2.8 ಕೋಟಿ ಆಗುತ್ತದೆ. ಹಾಗೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬಂದಿದ್ದರಿಂದ ನಿರ್ಮಾಣಕ್ಕೆ ವೆಚ್ಚವಾದ ಹಣ ಒಂದೇ ವರ್ಷದಲ್ಲಿ ಸಂಗ್ರಹವಾಯಿತು. ಅಲ್ಲಿ ಪ್ಲೇನ್ ಮ್ಯೂಜಿಯಂ ಜೊತೆ ಡಿಸ್ನಿ ಲ್ಯಾಂಡ್, ಹೋಟೆಲ್, ಸಿನಿಮಾ ಮಂದಿರ ಸಹ ಇವೆ. ಹಾಗಾಗಿ ಪ್ರವಾಸಿಗರು ಇಡೀ ದಿನವನ್ನು ಪ್ಲೇನ್ ಮ್ಯೂಜಿಯಂ ಸುತ್ತ ಕಳೆಯುತ್ತಾರೆ ಎಂದರು.
ತುಂಬಾ ವಿಸ್ತಾರ ಕಲ್ಪನೆಯಲ್ಲಿ ಸ್ಥಾಪನೆಯಾದ ಮ್ಯೂಜಿಯಂ ಅದಾಗಿದ್ದು, ಆ ರೀತಿ ಸ್ಥಳಾವಕಾಶ ಇರುವಲ್ಲಿ ಗಗನ ಯಾನದ ಮ್ಯೂಜಿಯಂ ಸ್ಥಾಪನೆಗೆ ರಾಜ್ಯ ಸರ್ಕಾರ ಮುಂದೆ ಬಂದರೆ ಬಳಸದೇ ಬಿಟ್ಟ ವಿಮಾನವನ್ನು ಮ್ಯೂಜಿಯಂನಲ್ಲಿ ಇಡಲು ಉಚಿತವಾಗಿ ನೀಡಲಾಗುವುದು ಎಂದರು.
ಕಾರವಾರ ಕಡಲತೀರದಲ್ಲಿ ಯುದ್ಧನೌಕೆ ಮ್ಯೂಜಿಯಂ ಬಳಿ ಸ್ಥಾಪಿಸಲು ಉದ್ದೇಶಿಸಲಾಗಿದ್ದ ವಿಮಾನ ಮ್ಯೂಜಿಯಂಗೆ ಜಿಲ್ಲಾಡಳಿತ 2 ಕೋಟಿ ರೂ. ಮಾತ್ರ ವಿನಿಯೋಗ ಮಾಡಲು ಸಾಧ್ಯ. ಉಳಿದ ವೆಚ್ಚ ನೌಕಾನೆಲೆಯವರೇ ಭರಿಸಿ ಎಂದು ನೌಕಾನೆಲೆಗೆ ಪತ್ರ ಬರೆದಿದೆ. ಈ ಸಂಬಂಧ ನಾವು ನೇವಿಯ ಪಶ್ಚಿಮ ವಲಯದ ಮುಖ್ಯಸ್ಥರಿಗೆ ಪತ್ರ ಬರೆದಿದ್ದೇವೆ.
•ಮಹೇಶ್ ಸಿಂಗ್ ಕದಂಬ ನೌಕಾನೆಲೆ ಕಮಾಂಡರ್