Advertisement
ಉಚ್ಚಿಲ ಬೀಚ್‌ನಿಂದ ಸೋಮೇಶ್ವರ ಸಂಪರ್ಕಿಸುವ ಪೆರಿಬೈಲು ಬಳಿ ಸಮುದ್ರ ಕೊರೆತದಿಂದ ರಸ್ತೆ ಸಂಪರ್ಕ ಕಡಿತದ ಭೀತಿಯಲ್ಲಿದೆ. ಸಮುದ್ರ ಮತ್ತು ರಸ್ತೆ ನಡುವೆ ಇದ್ದ ಮರಗಳು ಧರಾಶಾಯಿಯಾಗಿವೆ. ವಿದ್ಯುತ್ ಕಂಬಗಳು ಸಮುದ್ರ ಪಾಲಾಗಿದೆ. ಶನಿವಾರ ಮೆಸ್ಕಾಂ ಇಲಾಖೆ ಬೀಚ್ ರಸ್ತೆಯ ಪೆರಿಬೈಲ್ ಬಳಿ ವಿದ್ಯುತ್ ಕಂಬಗಳನ್ನು ರಸ್ತೆಯ ಇನ್ನೊಂದು ಬದಿಗೆ ಸ್ಥಳಾಂತರಿಸಿದ್ದು, ಕಂಬಗಳಿಗೆ ಅಡ್ಡಿಯಾಗುವ ಗಾಳಿಮರಗಳನ್ನು ಕಡಿದಿದ್ದು, ಮಧ್ಯಾಹ್ನ ವರೆಗೆ ಬೀಚ್ ರಸ್ತೆಯನ್ನು ಮುಚ್ಚಲಾಗಿತ್ತು.
ಕೈಕೋ ಮತ್ತು ಕಿಲೆರಿಯಾ ನಗರದಲ್ಲಿ ಶನಿವಾರ ಸಮುದ್ರದ ಅಲೆಗಳು ಬಿರುಸುಗೊಂಡು 25ಕ್ಕೂ ಹೆಚ್ಚು ಮನೆಗಳು ನೀರಿನಿಂದ ಆವೃತವಾಗಿವೆ. ಸ್ಥಳೀಯ ಕೌನ್ಸಿಲರ್ ಮಹಮ್ಮದ್ ಮುಕ್ಕಚ್ಚೇರಿ ಮತ್ತು ಉಳ್ಳಾಲ ನಗರಸಭಾ ಪೌರಾಯುಕ್ತ ಸ್ಥಳಕ್ಕೆ ಆಗಮಿಸಿದ್ದು, ಅಗ್ನಿಶಾಮಕ ದಳದ ಸಿಬಂದಿ ನೀರನ್ನು ಪಂಪ್ ಮೂಲಕ ತೆರವುಗೊಳಿಸಿದರು. ಉಳ್ಳಾಲದಾದ್ಯಂತ ಸಮುದ್ರದ ಅಲೆಗಳು ಸುಮಾರು 50ಕ್ಕೂ ಹೆಚ್ಚು ಮನೆಗಳಿಗೆ ಅಪ್ಪಳಿಸಿದ್ದು, ಓಖೀ ಚಂಡಮಾರುತ ಸಂದರ್ಭದಲ್ಲಿ ಶೇ. 75 ಕುಸಿದಿದ್ದ ಆಲಿಯಬ್ಬ ಅವರ ಮನೆ ಶನಿವಾರ ಸಂಪೂರ್ಣ ಕುಸಿತಗೊಂಡಿದೆ. ಮೊಗವೀರಪಟ್ಣ ಬೀಚ್‌ನಲ್ಲಿ ಸಮುದ್ರದ ಕೊರೆತದಿಂದ ಬಹಳಷ್ಟು ಹಾನಿಯಾಗಿದೆ.ಸ್ಥಳಕ್ಕೆ ಉಳ್ಳಾಲ ನಗರ ಪೌರಾಯುಕ್ತೆ ವಾಣಿ ಆಳ್ವ, ಕೌನ್ಸಿಲರ್ ಮಹಮ್ಮದ್ ಮುಕ್ಕಚ್ಚೇರಿ, ಮೆಸ್ಕಾಂ ಎಡಬ್ಲೂ ದಯಾನಂದ್, ಜಿಲ್ಲಾ ಪಂಚಾಯತ್ ಸದಸ್ಯೆ ಧನಲಕ್ಷ್ಮೀ ಗಟ್ಟಿ, ತಾ.ಪಂ. ಸದಸ್ಯ ರವಿಶಂಕರ್, ಸ್ಥಳಿಯಾಡಳಿತ ಸಂಸ್ಥೆಗಳ ಅಧಿಕಾರಿಗಳು ಭೇಟಿ ನೀಡಿದರು. 1.7 ಮೀ. ಎತ್ತರದ ಅಲೆಗಳ ಸಾಧ್ಯತೆ
ಕಂದಾಯ ಇಲಾಖೆಯ ಪ್ರೊಬೆಷನರಿ ಸಹಾಯಕ ಆಯುಕ್ತ ಸಂತೋಷ್ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಜಿಲ್ಲಾಡಳಿತದ ಸೂಚನೆಯಂತೆ ಕರಾವಳಿಯಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಮುಂದಿನ ದಿನಗಳಲ್ಲಿ ಬೆಳಗ್ಗೆ 11ರಿಂದ ಮಧ್ಯಾಹ್ನ 3 ಗಂಟೆಯವರೆಗೆ 1.7 ಮೀ. ಎತ್ತರದ ಅಲೆಗಳು ಸಮುದ್ರ ತೀರಕ್ಕೆ ಅಪ್ಪಳಿಸುವ ಸಾಧ್ಯತೆಗಳಿವೆ. ಹೀಗಾಗಿ ಮುಂಜಾಗ್ರತ ಕ್ರಮವಾಗಿ ಎರಡು ಹಿಟಾಚಿಗಳನ್ನು ಸ್ಥಳದಲ್ಲೇ ಕಾರ್ಯಾಚರಣೆಗೆ ಇರಿಸಲಾಗಿದೆ. ಮನೆಗಳಿರುವ ಪ್ರದೇಶಗಳಲ್ಲಿ ಕಲ್ಲುಗಳನ್ನು ಹಾಕಲಾಗಿದೆ. ಒಂದು ಹಂತದ ಕಾಮಗಾರಿ ಮುಗಿದ ತತ್‌ಕ್ಷಣವೇ ಎಂಜಿನಿಯರುಗಳ ಸಲೆಹಯಂತೆ ರಸ್ತೆಯ ಭಾಗದಲ್ಲಿಯೂ ಕಲ್ಲುಗಳನ್ನು ಹಾಕುವ ಕೆಲಸ ಮಾಡಲಾಗುವುದು ಎಂದರು.