Advertisement

ರಾಜ್ಯದ ಮೊದಲ ‘ಸಮುದ್ರ ನೀರು ಸಂಸ್ಕರಣಾ ಘಟಕ’ಕಾಮಗಾರಿ ಆರಂಭ

03:25 AM Nov 13, 2018 | Karthik A |

ಮಹಾನಗರ : ನಗರದ ತಣ್ಣೀರುಬಾವಿಯಲ್ಲಿ ರಾಜ್ಯದ ಮೊದಲ ಸಮುದ್ರ ನೀರು ಸಂಸ್ಕರಣಾ ಘಟಕ (ಡಿಸಲೈನೇಶನ್‌ ಪ್ಲಾಂಟ್‌) ನಿರ್ಮಾಣ ಕಾಮಗಾರಿ ಈಗಾಗಲೇ ಚುರುಕು ಪಡೆದುಕೊಂಡಿದೆ. ಈ ಮೂಲಕ ಸಮುದ್ರದ ಉಪ್ಪು ನೀರನ್ನು ಸಂಸ್ಕರಿಸಿ ಕೈಗಾರಿಕೆಗಳಿಗೆ ನೀಡುವ ಮಹಾನ್‌ ಯೋಜನೆಗೆ ಜೀವಕಳೆ ಬಂದಂತಾಗಿದೆ. ಪ್ರತಿ ದಿನ 5 ಮಿಲಿಯನ್‌ ಗ್ಯಾಲನ್‌ ನೀರು ಉತ್ಪಾದಿಸಬಲ್ಲ ಸಾಮರ್ಥ್ಯದ ಡಿಸಲೈನೇಶನ್‌ ಸ್ಥಾವರದ ನಿರ್ಮಾಣ ಕಾರ್ಯ ಇಲ್ಲಿ ನಡೆಸಲಾಗುತ್ತಿದ್ದು, 2020ರ ವೇಳೆಗೆ ಈ ಯೋಜನೆ ಪೂರ್ಣ ಮಟ್ಟದಲ್ಲಿ ಕಾರ್ಯಾರಂಭಿಸುವ ನಿರೀಕ್ಷೆ ಇದೆ. 

Advertisement

ಸದ್ಯ ಎಂಆರ್‌ಪಿಎಲ್‌ ತನಗೆ ಬೇಕಾದ ನೀರನ್ನು ನೇತ್ರಾವತಿ ನದಿಯಿಂದ ಪಡೆದುಕೊಳ್ಳುವುದಲ್ಲದೆ ಕಾವೂರು ಒಳಚರಂಡಿ ಸಂಸ್ಕರಣಾ ಘಟಕದಿಂದಲೂ ತನ್ನ ಸ್ಥಾವರದ ವಿವಿಧ ಘಟಕಗಳಿಗೆ ಬೇಕಾದ ಜಲವನ್ನು ಹೊಂದಾಣಿಕೆ ಮಾಡಿಕೊಳ್ಳುತ್ತಿದೆ. ಪ್ರಸ್ತುತ ಎಂಆರ್‌ಪಿಎಲ್‌ 2.5 ಎಂಜಿಡಿಯಷ್ಟು ಒಳಚರಂಡಿ ಸಂಸ್ಕರಿತ ನೀರನ್ನು ಪಡೆಯುತ್ತಿದೆ. ಒಟ್ಟು ಪ್ರತಿ ದಿನ ಕಂಪೆನಿಗೆ 14 ಮಿಲಿಯನ್‌ ಗ್ಯಾಲನ್‌ ನೀರು ಬೇಕಾಗುತ್ತದೆ.

2020ರ ವೇಳೆ ಕಾಮಗಾರಿ ಪೂರ್ಣ
ಒಂದು ವೇಳೆ ಡಿಸಲೈನೇಶನ್‌ ಘಟಕ ಕಾರ್ಯಾರಂಭಿಸಿದರೆ ನದಿ ನೀರಿನ ಮೇಲೆ ಅವಲಂಬನೆ ಕಡಿಮೆಯಾಗುತ್ತದೆ. ಆ ನೀರನ್ನು ನಗರದ ಜನತೆಯ ಕುಡಿ ಯುವ ನೀರಿಗಾಗಿಯೇ ಬಳಸಬಹುದು ಎನ್ನು ವುದು ಯೋಜನೆಯ ಉದ್ದೇಶ. ರಿವರ್ಸ್‌ ಒಸ್ಮೋಸಿಸ್‌ ತಂತ್ರಜ್ಞಾನದ ಮೂಲಕ ನೀರನ್ನು ಸಂಸ್ಕರಣಗೊಳಿಸಿ, ಶುದ್ಧೀಕರಿಸಿ ಪೈಪ್‌ಲೈನ್‌ ಮೂಲಕ ಸರಬರಾಜು ಮಾಡುವ ಯೋಜನೆ ಇದು. ಯೋಜನೆ ಟೆಂಡರ್‌ ಹಂತದಲ್ಲಿದ್ದು, 2020ರ ಮೇ ವೇಳೆಗೆ ಸ್ಥಾವರ ಕೆಲಸ ಪೂರ್ಣಗೊಂಡು ಕಾರ್ಯಾರಂಭಿಸಬೇಕು ಎನ್ನುವ ಗುರಿ ಇರಿಸಿಕೊಳ್ಳಲಾಗಿದೆ.

ನೀರಿನ ಸಮಸ್ಯೆ ಪರಿಹರಿಸುವ ಪ್ರಯತ್ನ
ಜಿಲ್ಲೆಯಲ್ಲಿ ಜನವರಿ ಬಳಿಕ ನೀರಿನ ಸಮಸ್ಯೆ ಕಾಣಿಸಿಕೊಳ್ಳುವುದು ಸಾಮಾನ್ಯ. ಈ ಕಾರಣದಿಂದ ಒತ್ತಡ ಆಗಬಾರದು ಎಂಬ ನೆಲೆಯಿಂದ ಉಪ್ಪುನೀರು ಸಂಸ್ಕರಣಾ ಘಟಕ ನೆರವಾಗಲಿದೆ. ನೇತ್ರಾವತಿ ನದಿ ಮೇಲಿನ ಒತ್ತಡ ಕಡಿಮೆ ಮಾಡುವ ಉದ್ದೇಶದಿಂದಲೇ ಈ ಬೃಹತ್‌ ಯೋಜನೆ ಕೈಗೆತ್ತಿಕೊಳ್ಳಲಾಗಿದೆ ಎನ್ನುವುದು ಎಂಆರ್‌ಪಿಎಲ್‌ ಅಭಿಪ್ರಾಯ. ನವಮಂಗಳೂರು ಬಂದರು ಮಂಡಳಿಗೆ (ಎನ್‌ಎಂಪಿಟಿ) ಸೇರಿದ ಜಾಗವನ್ನು ಈ ಯೋಜನೆಗಾಗಿ ಬಳಸಿಕೊಳ್ಳಲಾಗಿದೆ. ಜಾಮ್‌ನಗರ, ತಮಿಳುನಾಡು ಮುಂತಾದೆಡೆ ಉಪ್ಪುನೀರು ಸಂಸ್ಕರಣಾ ಘಟಕಗಳಿವೆ. ಗಲ್ಫ್ ರಾಷ್ಟ್ರಗಳಲ್ಲೂ ಇದೆ. ಇದೇ ಶೈಲಿಯಂತೆ ಸಂಸ್ಕರಣಾ ಘಟಕ ರೂಪುಗೊಳ್ಳುವ ನಿರೀಕ್ಷೆಯಿದೆ.

ಎನ್‌ಎಂಪಿಟಿಗೆ ಸೇರಿದ ಜಾಗವನ್ನು ತಣ್ಣೀರುಬಾವಿ ಬಳಿ ಎಂಆರ್‌ಪಿಲ್‌ ಪ್ರಶಸ್ತ ಎಂದು ತೀರ್ಮಾನಿಸಿ ಪಡೆದುಕೊಂಡಿದೆ. ಎನ್‌ಎಂಪಿಟಿಗೆ ಸೇರಿದ ಅತಿಥಿಗೃಹ ಇದ್ದ ಜಾಗವನ್ನು ಈಗ ಸಮತಟ್ಟುಗೊಳಿಸಿ ಸ್ಥಾವರಕ್ಕಾಗಿ ಅಭಿವೃದ್ಧಿ ಪಡಿಸಲಾಗುತ್ತಿದೆ. ಅದಕ್ಕಾಗಿ, ಎನ್‌ಎಂಪಿಟಿಯವರಿಗೆ ಬೇರೆ ಜಾಗವನ್ನು ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.

Advertisement

ಪಾಲಿಕೆಗೆ ಮನಸ್ಸಿಲ್ಲ!
ಎರಡು ವರ್ಷಗಳ ಹಿಂದೆ ಮಂಗಳೂರಿನಲ್ಲಿ ಕುಡಿಯುವ ನೀರಿನ ಕೊರತೆ ಎದುರಾದ ಸಂದರ್ಭ ಕಡಲಿನ ಉಪ್ಪು ನೀರನ್ನು ಸಂಸ್ಕರಿಸಿ ಕೈಗಾರಿಕೆಗಳಿಗೆ ಬಳಸುವ ಬಗ್ಗೆ ಚಿಂತನೆ ನಡೆದಿತ್ತು. ಹಲವು ಬಾರಿ ಸಭೆ ನಡೆಸಿದ ಅನಂತರ ಎಂಆರ್‌ಪಿಎಲ್‌ ಈ ವಿಚಾರದಲ್ಲಿ ಯೋಚನೆ ನಡೆಸಿ, ಕೊನೆಗೂ ಯೋಜನೆಗೆ ಅನುಮೋದನೆ ಪಡೆದುಕೊಂಡಿದೆ. ಆದರೆ ಪಾಲಿಕೆ ವತಿಯಿಂದ ಇಂತಹುದೇ ಯೋಜನೆ ಕೈಗೆತ್ತಿಕೊಳ್ಳುವ ಬಗ್ಗೆ ಅಧ್ಯಯನ ಪ್ರವಾಸ ಮಾಡಿದೆಯೇ ಹೊರತು, ಯೋಜನೆ ಅನುಷ್ಠಾನಕ್ಕೆ ಇನ್ನೂ ಮೂರ್ತ ರೂಪ ದೊರಕಿಲ್ಲ. ಕೆಲವು ನಗರಗಳಲ್ಲಿ ಈಗಾಗಲೇ ಅನುಷ್ಠಾನವಾಗಿರುವ ಈ ಯೋಜನೆ ಪಾಲಿಕೆ ಮಾತ್ರ ಅನುಷ್ಠಾನ ಮಾಡುವ ಬಗ್ಗೆ ಮನಸ್ಸು ಮಾಡಿದಂತಿಲ್ಲ!

Advertisement

Udayavani is now on Telegram. Click here to join our channel and stay updated with the latest news.

Next