Advertisement

ಸಮುದ್ರ ನೀರು ಸಂಸ್ಕರಣೆ ಪ್ರಸ್ತಾವನೆ ಮೂಲೆಗುಂಪು?

11:07 AM Jun 03, 2019 | keerthan |

ಮಂಗಳೂರು: ಬಂಡವಾಳ ಹೂಡಲು ಕಂಪೆನಿಗಳು ಮುಂದೆ ಬಾರದೆ ಇರುವುದರಿಂದ ಮಂಗಳೂರು ನಗರಕ್ಕೆ ಸಮುದ್ರದ ನೀರನ್ನು ಶುದ್ಧೀಕರಿಸಿ ಪೂರೈಸುವ ಮಹತ್ವದ ಯೋಜನೆ ಮೂಲೆಗುಂಪಾಗುವ ಸಾಧ್ಯತೆ ಎದುರಾಗಿದೆ. ದುಬಾರಿ ಯೋಜನೆ ಎಂಬುದು ಇನ್ನೊಂದು ಕಾರಣ.

Advertisement

ನಗರದ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರವಾಗಿ ಸಮುದ್ರ ನೀರು ಸಂಸ್ಕರಿಸಿ ಸಿಹಿ ನೀರು ಪಡೆಯುವ ಬಗ್ಗೆ ಸುಮಾರು 3 ವರ್ಷಗಳ ಹಿಂದೆ ಪಾಲಿಕೆಯಲ್ಲಿ ಚರ್ಚೆಯಾಗಿತ್ತು. ಬಳಿಕ ನನೆಗುದಿಗೆ ಬಿದ್ದಿದ್ದ ಚಿಂತನೆ ಕವಿತಾ ಸನಿಲ್‌ ಮೇಯರ್‌ ಆದಾಗ ಮುನ್ನೆಲೆಗೆ ಬಂದಿತ್ತು. ಮಂಗಳೂರಿನಲ್ಲಿ ಈ ಪ್ರಾಜೆಕ್ಟ್ ಜಾರಿಗೊಳಿಸುವ ಸಾಧ್ಯಾ ಸಾಧ್ಯತೆ ಅಧ್ಯಯನಕ್ಕಾಗಿ ಕವಿತಾ ಸನಿಲ್‌ ನೇತೃತ್ವದ ತಂಡ ಚೆನ್ನೈಗೆ ತೆರಳಿದ್ದಲ್ಲದೆ ಪೂರಕ ವಾತಾವರಣ ಇದೆ ಎಂಬ ವರದಿಯನ್ನು ಸರಕಾರಕ್ಕೆ ಸಲ್ಲಿಸಿತ್ತು.

ಸಮುದ್ರ ನೀರು ಸಂಸ್ಕರಣೆ ಬಗ್ಗೆ ಸಚಿವ ಯು.ಟಿ. ಖಾದರ್‌ ಅವರು ಎಂಆರ್‌ಪಿಎಲ್‌, ಒಎನ್‌ಜಿಸಿ, ಎಂಸಿಎಫ್‌ ಪ್ರಮುಖರೊಂದಿಗೆ ಸಭೆ ನಡೆಸಿದ್ದರು. ಆದರೆ ಈ ಎಲ್ಲ ಕೈಗಾರಿಕೆಗಳಿಗೆ ಅವುಗಳದೇ ಆದ ಜಲಮೂಲ ಇರುವುದರಿಂದ ಯಾರೂ ಹೂಡಿಕೆಗೆ ಮುಂದೆ ಬಂದಿರಲಿಲ್ಲ. ಕೈಗಾರಿಕೆಗಳು ಬಂಡವಾಳ ಹೂಡಿದರೆ ಜನರಿಗೆ ಕಡಿಮೆ ವೆಚ್ಚದಲ್ಲಿ ನೀರು ಸರಬರಾಜು ಮಾಡಬಹುದು ಎಂಬ ಆಲೋಚನೆ ಜನಪ್ರತಿ ನಿಧಿಗಳ ಮುಂದಿತ್ತಾದರೂ ಕೈಗೂಡಲಿಲ್ಲ.

ನಿರ್ವಹಣೆಗೆ 800 ಕೋಟಿ ರೂ.
ಇದು ಒಟ್ಟು 400 ಕೋಟಿ ರೂ. ಬಂಡವಾಳ ಬೇಕಾಗುವ ದುಬಾರಿ ಯೋಜನೆ. ಅಲ್ಲದೆ ನಿರ್ವಹಣೆ ಮತ್ತು ಕಾರ್ಯಾಚರಣೆಗೆ 800 ಕೋಟಿ ರೂ. ಖರ್ಚಾಗುತ್ತದೆ. ಘಟಕ ಸ್ಥಾಪನೆಗೊಂಡರೂ ಜನರ ಮೇಲೆ ಹೊರೆ ಬೀಳುತ್ತದೆ. ಈಗ ತಿಂಗಳಿಗೆ 60 ರೂ. ಇರುವ ನೀರಿನ ಶುಲ್ಕ, ಘಟಕ ಸ್ಥಾಪನೆಯಾದಲ್ಲಿ 1,000-1,500 ರೂ. ಮೀರುವ ಸಾಧ್ಯತೆ ಇದೆ.

ಚೆನ್ನೈಯಲ್ಲಿ ಕಂಪೆನಿ ಬಂಡವಾಳ
ಚೆನ್ನೈಯಲ್ಲಿ ಈಗಾಗಲೇ ಸೀ ವಾಟರ್‌ ಡಿಸಲೈನೇಶನ್‌ ಪ್ಲಾಂಟ್‌ ಕಾರ್ಯ ನಿರ್ವಹಿಸುತ್ತಿದೆ. ಅಲ್ಲಿ ಕೈಗಾರಿಕೆಗಳು ಹೆಚ್ಚಿರುವುದರಿಂದ ಅವು ಇದರ ನೀರನ್ನೇ ಬಳಸುತ್ತಿವೆ. ಸಂಸ್ಕರಣೆ ಮಾಡುವ ಕಂಪೆನಿಯೇ ನೇರ ಹೂಡಿಕೆ ಮಾಡಿ ಕೈಗಾರಿಕೆ ಮತ್ತು ಜನರಿಂದ ನಿಗದಿತ ನೀರಿನ ಶುಲ್ಕವನ್ನು ಸಂಗ್ರಹಿಸುತ್ತಿದೆ.

Advertisement

3 ವರ್ಷಗಳಿಂದ ಚರ್ಚೆ
ಹಿಂದೆ ಜಿಲ್ಲಾಧಿಕಾರಿಯಾಗಿದ್ದ ಎ.ಬಿ. ಇಬ್ರಾಹಿಂ 2016ರ ಮೇ 25ರಂದು ಮಂಗಳೂರಿನ ಕೈಗಾರಿಕೆಗಳ ಪ್ರಮುಖರ ಸಭೆ ಕರೆದು ಸಮುದ್ರದ ನೀರು ಸಂಸ್ಕರಣೆ ಬಗ್ಗೆ ಕಾರ್ಯಯೋಜನೆ ಕುರಿತು ಚರ್ಚಿಸಿದ್ದರು. ಆಗಿನ ನಗರಾಭಿವೃದ್ಧಿ ಸಚಿವ ಆರ್‌. ರೋಷನ್‌ ಬೇಗ್‌ ಆಸಕ್ತಿ ತೋರಿಸಿ, ಪಾಲಿಕೆ ಸದಸ್ಯರು ಮತ್ತು ಅಧಿಕಾರಿಗಳ ತಂಡ ಚೆನ್ನೈಗೆ ಭೇಟಿ ನೀಡಿ ಪರಿಶೀಲಿಸುವಂತೆ ಸಲಹೆ ಮಾಡಿದ್ದರು. ಅನಂತರ ಏನೂ ಆಗಿರಲಿಲ್ಲ. ಕವಿತಾ ಸನಿಲ್‌ ಮೇಯರ್‌ ಆಗಿದ್ದಾಗ ಈ ಪ್ರಸ್ತಾವನೆಗೆ ಮರುಜೀವ ಬಂದು ತಂಡ ಅಧ್ಯಯನಕ್ಕಾಗಿ ತೆರಳಿತ್ತು.

ಡಿಪಿಆರ್‌ ತಯಾರಿಸಲು ಹೇಳಲಾಗಿದೆ
ಸಮುದ್ರದ ನೀರನ್ನು ಸಂಸ್ಕರಿಸಿ ಸಿಹಿ ನೀರು ಪಡೆಯುವ ಯೋಜನೆಗೆ ಅಧಿಕ ಖರ್ಚು ತಗಲುತ್ತದೆ. ಅಲ್ಲದೆ ಕೈಗಾರಿಕೆಗಳೂ ಹೂಡಿಕೆ ಮಾಡಲು ಮುಂದೆ ಬರುತ್ತಿಲ್ಲ. ಹೀಗಾಗಿ ಸದ್ಯ ಈ ಯೋಜನೆ ಬಗ್ಗೆ ಆಸಕ್ತಿ ತಳೆಯಲಾಗುತ್ತಿಲ್ಲ. ಸರಕಾರವೇ ಹೂಡಿಕೆ ಮಾಡಿ ಜನರಿಗೆ 100 ರೂ.ಗಳಲ್ಲಿ ನೀರು ಒದಗಿಸಲು ಸಾಧ್ಯವೇ ಎಂಬ ಬಗ್ಗೆ ಡಿಪಿಆರ್‌ ಸಿದ್ಧಪಡಿಸಲು ಅಧಿಕಾರಿಗಳಿಗೆ ಹೇಳಲಾಗಿದೆ.
-ಯು.ಟಿ. ಖಾದರ್‌, ಜಿಲ್ಲಾ ಉಸ್ತುವಾರಿ ಸಚಿವರು

ಸರಕಾರಕ್ಕೆ ಬರೆಯಲಾಗಿದೆ
ಚೆನ್ನೈಯಲ್ಲಿ ಸಮುದ್ರ ನೀರು ಸಂಸ್ಕರಣ ಘಟಕದ ಅಧ್ಯಯನ ನಡೆಸಿ ಮಂಗಳೂರಲ್ಲಿಯೂ ಅದನ್ನು ನಿರ್ಮಿಸಲು ಅನುಕೂಲ ಇದೆ ಎಂಬ ಬಗ್ಗೆ ಸರಕಾರಕ್ಕೆ ಬರೆಯಲಾಗಿದೆ. ನನ್ನ ಮೇಯರ್‌ ಅವಧಿಯ ಕೊನೆಯ ತಿಂಗಳಲ್ಲಿ ಈ ಪ್ರಕ್ರಿಯೆ ನಡೆದಿದೆ. ಅನಂತರ ಏನಾಯಿತು, ತಿಳಿದಿಲ್ಲ.
-ಕವಿತಾ ಸನಿಲ್‌, ಮಾಜಿ ಮೇಯರ್‌

ಲೀಟರ್‌ಗೆ 8 ರೂ.!
ಸಮುದ್ರದ ನೀರನ್ನು ಕುಡಿಯುವ ನೀರಾಗಿ ಮಾರ್ಪಡಿಸುವ ಯೋಜನೆ ಬಗ್ಗೆ ಪಾಲಿಕೆಯಿಂದ ಪ್ರಸ್ತಾವನೆ ಕಳಿಸಿಕೊಟ್ಟ ಬಗ್ಗೆ ನನಗೆ ಮಾಹಿತಿ ಇಲ್ಲ. ಆದರೆ ಇದರ ಸಾಧ್ಯಾಸಾಧ್ಯತೆಗಳ ಬಗ್ಗೆ ವೈಯಕ್ತಿಕವಾಗಿ ವಿಷಯ ತಜ್ಞರೊಂದಿಗೆ ಮಾತನಾಡಿ ವರದಿ ತಯಾರಿಸಿದ್ದೇನೆ. ಸಮುದ್ರದ ನೀರನ್ನು ಸಿಹಿ ನೀರಾಗಿ ಪರಿವರ್ತಿಸಿ ಉಪಯೋಗಿಸಿದರೆ ಲೀಟರ್‌ಗೆ 8 ರೂ.ಗಳವರೆಗೂ ದರ ತಗಲುತ್ತದೆ. ಇದು ಜನಸಾಮಾನ್ಯರಿಗೆ ಹೊರೆಯಾಗಬಹುದು. ಅದಕ್ಕಾಗಿ ಸದ್ಯಈ ವಿಚಾರ ಬಾಕಿ ಇದೆ.
ಡಿ. ವೇದವ್ಯಾಸ ಕಾಮತ್‌, ಶಾಸಕರು

ಧನ್ಯಾ ಬಾಳೆಕಜೆ

Advertisement

Udayavani is now on Telegram. Click here to join our channel and stay updated with the latest news.

Next