Advertisement
ತೀವ್ರ ಗಾಳಿಯಿಂದಾಗಿ ಸೋಮವಾರವೂ ಟ್ರಾಲ್ ಬೋಟ್ ಮತ್ತು ಪಸೀನ್ ಮೀನುಗಾರಿಕಾ ದೋಣಿಗಳು ಮೀನುಗಾರಿಕೆಗೆ ತೆರಳಿಲ್ಲ. ಕೆಲವು ದಿನಗಳ ಹಿಂದೆ ಮೀನುಗಾರಿಕೆಗೆ ತೆರಳಿದ್ದ ಕೆಲವು ಬೋಟ್‌ಗಳು ಮಂಗಳೂರು ಹಳೆ ಬಂದರಿಗೆ ವಾಪಸಾಗಿವೆ. ಮೀನುಗಾರಿಕಾ ಬಂದರುಗಳಲ್ಲಿ 48 ಗಂಟೆಗಳ ಕಟ್ಟೆಚ್ಚರ ಘೋಷಿಸಿ, ನಂಬರ್ 2 ಸಿಗ್ನಲ್ ಹಾಕಿರುವುದು ಇನ್ನೂ ಜಾರಿಯಲ್ಲಿದೆ. ಚಂಡಮಾರುತದ ಕಾರಣ ಲಂಗರು ಹಾಕಿದ್ದ ಹೊರರಾಜ್ಯದ ಬೋಟುಗಳು ತಂತಮ್ಮ ಊರಿಗೆ ತೆರಳಿವೆ.
ಚಂಡಮಾರುತದಿಂದಾಗಿ ಲಕ್ಷದ್ವೀಪ ಪ್ರದೇಶದಲ್ಲಿ ನಾಪತ್ತೆ ಯಾಗಿದ್ದ “ಜಾವಾ ಹುಸೇನ್’ ಮಂಜಿ (ಮಿನಿ ನೌಕೆ) ಯಲ್ಲಿದ್ದ 8 ಮಂದಿಯನ್ನು ನೌಕಾ ಪಡೆಯವರು ಕವರತ್ತಿ ದ್ವೀಪದ 100 ನಾಟಿಕಲ್ ಮೈಲು ದೂರ ಸಮುದ್ರದಲ್ಲಿ ರಕ್ಷಿಸಿದ್ದಾರೆ. ಮಂಜಿಯಲ್ಲಿದ್ದ ಎಲ್ಲ ಸಿಬಂದಿ ತಮಿಳುನಾಡಿನವರು. ಅವರಲ್ಲಿ ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅವರನ್ನು ಕವರತ್ತಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಮಂಜಿ ನ. 28ರಂದು ಮಂಗಳೂರಿ ನಿಂದ ಸರಕು ಹೇರಿಕೊಂಡು ಲಕ್ಷ ದ್ವೀಪಕ್ಕೆ ಹೊರಟಿತ್ತು. ಲಕ್ಷದ್ವೀಪಕ್ಕೆ ತಲಪುವಷ್ಟರಲ್ಲಿ ಚಂಡಮಾರುತ ಬೀಸಿದ್ದ ರಿಂದ ಗಾಳಿಗೆ ಸಿಲುಕಿ ನಾಪತ್ತೆಯಾಗಿತ್ತು. ಈ ಮಂಜಿ ನಲ್ಲಿ ಇದ್ದವರು ಮಂಗಳೂರಿನ ಲಕ್ಷದ್ವೀಪ ವ್ಯಾಪಾರಿಗಳ ಸಂಘಟನೆ ಸಂಪರ್ಕಿಸಿ ತಮ್ಮ ಸಂಕಷ್ಟ ತಿಳಿಸಿದ್ದರು. ಬಳಿಕ ಅವರ ಸಂಪರ್ಕ ಕಡಿತಗೊಂಡಿದ್ದು, ಈಗ ನೌಕಾ ಪಡೆಯವರು ಎಲ್ಲ 8 ಮಂದಿಯನ್ನು ರಕ್ಷಿಸಿದ್ದಾರೆ. ಮಂಜಿಯನ್ನು ಅಲ್ಲಿಯೇ ಉಪೇಕ್ಷಿಸಲಾಗಿದೆ. ಚಂಡಮಾರುತ ಪ್ರಭಾವ: ಬೀಚ್ ರೂಪವೇ ಬದಲು!
ಸುರತ್ಕಲ್: ಒಖಿ ಚಂಡಮಾರುತ ಕಡಲುಬ್ಬರಕ್ಕೆ ಕಾರಣವಾಗಿದ್ದು ಮಾತ್ರವಲ್ಲ ಇದರಿಂದ ಸಮುದ್ರದ ರೂಪವೇ ಬದಲಾಗಿದೆ. ಸಮುದ್ರ ದಂಡೆಗಳು ಆಳ ವಾಗಿವೆ. ಸುರತ್ಕಲ್‌ನ ಎನ್‌ಐಟಿಕೆ ಬೀಚ್ ಬಳಿ ಸಮುದ್ರ ದಂಡೆಯಲ್ಲೂ
ಆಳ ಹೊಂಡ ವಾಗಿದೆ. ಮೂರ್‍ನಾಲ್ಕು ವರ್ಷ ಹಿಂದೆ ಹಾಕಲಾದ ಎಂಆರ್‌ಪಿಎಲ್ ಪೈಪ್‌ಲೈನ್ ಮೇಲಿನ ಮರಳು ಕೊರೆದು ಹೋಗಿದ್ದು, ಕಿಡಿಗೇಡಿಗಳು ಆ ಪೈಪ್‌ಗೆ ಬೆಂಕಿ ಹಚ್ಚುವ ಪ್ರಯತ್ನ ನಡೆಸಿದ್ದಾರೆ. ಹಡಗಿನ ಅವಶೇಷವೊಂದು ಕೂಡ ಈ ಭಾಗದಲ್ಲಿ ದಡಕ್ಕೆ ಬಂದಿದೆ.
Related Articles
ಒಖೀ ಚಂಡಮಾರುತವು ಕಳೆದ 6 ತಾಸುಗಳಲ್ಲಿ ಮಧ್ಯಪೂರ್ವ ಅರಬಿ ಸಮುದ್ರದಲ್ಲಿ 13 ಕಿ.ಮೀ. ವೇಗದಲ್ಲಿ ಉತ್ತರ ದಿಕ್ಕಿನತ್ತ ಸಾಗಿ ಮುಂಬಯಿ- ಸೂರತ್ ನೈಋತ್ಯ ದಿಕ್ಕಿನಲ್ಲಿ ಕೇಂದ್ರೀಕೃತವಾಗಿದೆ. ಇದು ಮತ್ತಷ್ಟು ಈಶಾನ್ಯಕ್ಕೆ ಸಾಗಿ ಡಿ.5ರ ಮಧ್ಯರಾತ್ರಿ ವೇಳೆಗೆ ಸೂರತ್ ಮತ್ತು ಮಹಾರಾಷ್ಟ್ರ ಕರಾವಳಿಗೆ ಬೀಸುವ ಸಾಧ್ಯತೆ ಇದೆ. ದಕ್ಷಿಣ ಗುಜರಾತ್ ಮತ್ತು ಉತ್ತರ ಮಹಾರಾಷ್ಟ್ರದ ಕರಾವಳಿಯಲ್ಲಿ ಡಿ. 4ರಿಂದ 6ರ ತನಕ ಮೀನುಗಾರರು ಸಮುದ್ರಕ್ಕೆ ಇಳಿಯ ಬಾರ ದೆಂದು ಸೂಚಿಸಲಾಗಿದೆ. ಹಾಗಿದ್ದರೂ ಕರ್ನಾಟಕದ ಕರಾವಳಿಯಲ್ಲಿ ಅಲೆಗಳ ಅಬ್ಬರ ಇರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮತ್ತು ರಾಷ್ಟ್ರೀಯ ಸಾಗರ ಮಾಹಿತಿ ಸೇವಾ ಕೇಂದ್ರದ ಜಂಟಿ ಪ್ರಕಟನೆ ತಿಳಿಸಿದೆ.
Advertisement
10 ಅಡಿವರೆಗೆ ಅಲೆ ಎರಡೂ ಸಂಸ್ಥೆಗಳು ಸಂಭಾವ್ಯ ಅಲೆಗಳ ಎತ್ತರ ವನ್ನು ಹೇಳಿದ್ದು ಕಾಸರಗೋಡು-ಕರ್ನಾಟಕ ಕರಾವಳಿ ಯಲ್ಲಿ ಅಲೆ 10 ಅಡಿ ವರೆಗೆ ಇರಲಿದೆ ಎಂದು ಹೇಳಿದೆ. ಇದರ ಪರಿಣಾಮ ಮಂಗಳವಾರವೂ ಮುಂದು ವರಿಯುವ ಸಾಧ್ಯತೆ ಇದೆ ಎಂದು ಎಚ್ಚರಿಸಲಾಗಿದೆ. ಮೀನಿನ ಕೊರತೆ: ಬೆಲೆ ಹೆಚ್ಚಳ
ಮೀನುಗಾರಿಕೆಗೆ ತೆರಳಿದವರು ಅರ್ಧದಲ್ಲೇ ವಾಪಸ್ಸಾದ್ದರಿಂದ ಮೀನುಗಾರರಿಗೆ ಅಪಾರ ನಷ್ಟ ವಾಗಿದೆ. ಗಾಳಿಯ ರಭಸಕ್ಕೆ ಬಲೆಗಳಿಗೆ ಹಾನಿಯಾಗಿದೆ. ಮೀನುಗಾರಿಕೆ ಸ್ಥಗಿತಗೊಂಡಿದ್ದರಿಂದ ಕಳೆದ 2-3 ದಿನಗಳಿಂದ ಮೀನಿನ ಕೊರತೆ ಕಂಡುಬಂದಿದೆ. ಬೆಲೆಯೂ ಹೆಚ್ಚಾಗಿದೆ. ಶನಿವಾರ ರಾತ್ರಿ ಕಡಲು ಉಕ್ಕೇರಿದ ಉಳ್ಳಾಲ, ಸೋಮೇಶ್ವರ, ಉಚ್ಚಿಲ ತೀರ ಪ್ರದೇಶಕ್ಕೆ ಮೀನುಗಾರಿಕಾ ಇಲಾಖೆಯ ಅಧಿಕಾರಿ ಮಹೇಶ್ ಕುಮಾರ್ ಅವರು ಸೋಮವಾರ ಭೇಟಿ ನೀಡಿ ಪರಿಶೀಲಿಸಿದರು.