Advertisement

ದ.ಕ. ಜಿಲ್ಲೆಯಲ್ಲಿ ರಾಜ್ಯದ ಮೊದಲ “ಸೀ ಫ‌ುಡ್‌ ಹಬ್‌’

12:25 PM Jun 16, 2020 | sudhir |

ಮಂಗಳೂರು: ಮೀನು ಸಂಸ್ಕರಣೆ, ಮೌಲ್ಯವರ್ಧನೆ, ಮೀನುಗಾರಿಕೆ ಕ್ಷೇತ್ರದ ಬಲವರ್ಧನೆ ಮತ್ತು ಉದ್ಯೋಗ ಸೃಷ್ಟಿಯ ಉದ್ದೇಶದೊಂದಿಗೆ ರಾಜ್ಯದ ಮೊದಲ “ಸೀ ಫ‌ುಡ್‌ ಹಬ್‌’ನ್ನು ದ.ಕ. ಜಿಲ್ಲೆಯಲ್ಲಿ ಸ್ಥಾಪಿಸುವ ಪ್ರಕ್ರಿಯೆಗೆ ಚಾಲನೆ ದೊರೆತಿದೆ.
ಕೇಂದ್ರ ಆಹಾರ ಸಂಸ್ಕರಣ ಕೈಗಾರಿಕೆ ಸಚಿವಾಲಯದ “ಮೆಗಾ ಫ‌ುಡ್‌ ಹಬ್‌’ ಯೋಜನೆಯಡಿ ರಾಜ್ಯ ಮೀನುಗಾರಿಕೆ ನಿಗಮ (ಕೆಎಫ್ಡಿಸಿ)ದ ಮುಂದಾಳತ್ವದಲ್ಲಿ ಇದನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಇದಕ್ಕಾಗಿ ಕೇಂದ್ರ ಸರಕಾರ 50 ಕೋ.ರೂ. ಅನುದಾನ ನೀಡುತ್ತಿದೆ. ಮೀನಿನ ಉತ್ಪನ್ನಗಳಿಗೆ ಆದ್ಯತೆ ಕೊಟ್ಟು ಅನಂತರ ಇತರ ಆಹಾರ ಉತ್ಪನ್ನಗಳ ಸಂಸ್ಕರಣೆ, ಮೌಲ್ಯವರ್ಧನೆ, ರಫ್ತು ಇತ್ಯಾದಿ ಚಟುವಟಿಕೆಗಳಿಗೆ ಅವಕಾಶ ನೀಡುವುದು ಮೂಲ ಉದ್ದೇಶ ಎಂದು ಕೆಎಫ್ಡಿಸಿ ಅಧಿಕಾರಿಗಳು ತಿಳಿಸಿದ್ದಾರೆ.

Advertisement

50 ಎಕರೆ ಜಾಗ
ಹಬ್‌ಗೆ 50 ಎಕರೆ ಜಾಗ ಬೇಕಿದ್ದು, ಮೂಡುಬಿದಿರೆ ಅಥವಾ ಪುತ್ತೂರಿನಲ್ಲಿ ಲಭ್ಯವಾಗುವ ನಿರೀಕ್ಷೆ ಇದೆ. ಈ ಬಗ್ಗೆ ಈಗಾಗಲೇ ಮೀನುಗಾರಿಕೆ ಸಚಿವರು ಜಿಲ್ಲಾಧಿಕಾರಿಗೆ ಸೂಚನೆ ನೀಡಿದ್ದಾರೆ. ನವಮಂಗಳೂರು ಬಂದರು, ಮಂಗಳೂರು ವಿಮಾನ ನಿಲ್ದಾಣಕ್ಕೆ
ಸಮೀಪವಿರುವ ಸ್ಥಳಕ್ಕೆ ಆದ್ಯತೆ ನೀಡುವ ಸಾಧ್ಯತೆಗಳಿವೆ.

ಏನಿರುತ್ತದೆ?
ಮೀನು ಹಾಗೂ ಕಡಲಿನ ಆಹಾರ ಉತ್ಪನ್ನಗಳನ್ನು ಕೇಂದ್ರೀಕರಿಸಿ ಸೀ ಫ‌ುಡ್‌ ಹಬ್‌ ಸ್ಥಾಪನೆಯಾಗುತ್ತದೆ. ಕಡಲ ಆಹಾರೋತ್ಪನ್ನಗಳ ಸಂಗ್ರಹ, ಮೌಲ್ಯವರ್ಧನೆ, ಗುಣಮಟ್ಟ ಕಾಪಾಡುವುದು, ಆಹಾರದ ಗುಣಮಟ್ಟ ಪರೀಕ್ಷೆ ಹಾಗೂ ಇದಕ್ಕೆ ಪೂರಕ ಚಟುವಟಿಕೆಗಳು ಇಲ್ಲಿ ನಡೆಯಲಿವೆ. ಇದರ ಜತೆಗೆ ತರಕಾರಿ ಮತ್ತಿತರ ಆಹಾರ ವಸ್ತುಗಳ ಸಂಸ್ಕರಣೆ, ಮೌಲ್ಯವರ್ಧನೆಗೂ ಅವಕಾಶ ದೊರೆಯಲಿದೆ.

ಜಾಗ ಶೀಘ್ರ ಆಯ್ಕೆಗೆ ಸೂಚನೆ
ಪುತ್ತೂರು ಮತ್ತು ಮೂಡುಬಿದಿರೆ ಎರಡೂ ಕಡೆ “ಸೀ ಫ‌ುಡ್‌ ಹಬ್‌’ ಸ್ಥಾಪಿಸುವ ಪ್ರಸ್ತಾವ ಇದ್ದು, ಒಂದಕ್ಕೆ ಕೇಂದ್ರ ಸರಕಾರ ಅನುಮೋದನೆ ನೀಡಿದೆ. 50 ಎಕರೆ ಜಾಗ ಗುರುತಿಸಿದರೆ 50 ಕೋ.ರೂ. ಅನುದಾನ ನೀಡುವುದಾಗಿ ಸರಕಾರ ತಿಳಿಸಿದೆ. ಅಗತ್ಯ ಜಾಗ ಗುರುತಿಸಲು ಜಿಲ್ಲಾಧಿಕಾರಿಗೆ ಸೂಚನೆ ನೀಡಿದ್ದೇನೆ.
-ಕೋಟ ಶ್ರೀನಿವಾಸ ಪೂಜಾರಿ, ಬಂದರು ಮತ್ತು ಮೀನುಗಾರಿಕಾ ಸಚಿವರು

ರಫ್ತಿಗೂ ಉತ್ತೇಜನ
ನಮ್ಮ ರಾಜ್ಯದಲ್ಲಿ ಕೆಲವು ಜಾತಿಯ ಮೀನುಗಳು ಹೆಚ್ಚಿನ ಪ್ರಮಾಣದಲ್ಲಿ ರವಾನೆಯಾಗುತ್ತಿವೆ. ಹಬ್‌ ಸ್ಥಾಪನೆಯಾದರೆ ಇಲ್ಲಿನ ಎಲ್ಲ ಮೀನುಗಳಿಗೆ ಸ್ಥಳೀಯವಾಗಿಯೇ ಬೇಡಿಕೆ ಹೆಚ್ಚಾಗಲಿದೆ. ವಿದೇಶಕ್ಕೂ ನೇರ ರಫ್ತಿಗೆ ಅನುಕೂಲವಾಗಲಿದೆ.
-ದೊಡ್ಡಮುನಿ, ವ್ಯವಸ್ಥಾಪಕ ನಿರ್ದೇಶಕರು, ಕೆಎಫ್ಡಿಸಿ

Advertisement
Advertisement

Udayavani is now on Telegram. Click here to join our channel and stay updated with the latest news.

Next