ಪಣಂಬೂರು : ಬೈಕಂಪಾಡಿ ಕೈಗಾರಿಕಾ ವಲಯದಲ್ಲಿರುವ ಸೀ ಫುಡ್ ಫ್ಯಾಕ್ಟರಿಯಲ್ಲಿ ಅಮೋನಿಯಾ ಸೋರಿಕೆಯಾಗಿ 26 ಮಂದಿ ಕಾರ್ಮಿಕರು ಅಸ್ವಸ್ಥಗೊಂಡ ಘಟನೆ ಮಂಗಳವಾರ ಬೆಳಗ್ಗೆ ಸಂಭವಿಸಿದೆ.
ಘಟನೆ ಸಂದರ್ಭ ಸುಮಾರು 80 ಮಂದಿ ಕೆಲಸಗಾರರಿದ್ದು, ಕಣ್ಣು ಉರಿ, ಉಸಿರಾಟದ ಸಮಸ್ಯೆ ಮತ್ತಿತರ ಲಕ್ಷಣಗಳು ಕಂಡು ಬಂದವು. ತತ್‌ಕ್ಷಣ ಮುಕ್ಕದ ಖಾಸಗಿ ಆಸ್ಪತ್ರೆಯ ಐಸಿಯುಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು.
ಕೋಲ್ಡ್ ಸ್ಟೋರೇಜ್‌ನಿಂದ ಹರಿಯುವ ಅಮೋನಿಯಾ ಪೈಪ್‌ಲೈನ್‌ನಲ್ಲಿ ಬಿರುಕು ಉಂಟಾದ ಕಾರಣ ಸೋರಿಕೆ ಆರಂಭವಾಯಿತು. ತತ್‌ಕ್ಷಣ ಹಿರಿಯ ಅಧಿಕಾರಿಗಳು ಅಗ್ನಿಶಾಮಕ ಇಲಾಖೆಗೆ ಮಾಹಿತಿಯನ್ನು ನೀಡಿದರು. ಕದ್ರಿ, ಪಾಂಡೇಶ್ವರ ವಿಭಾಗದ ಅಗ್ನಿಶಾಮಕ ಸಿಬಂದಿ ಬಂದು ಸೋರಿಕೆ ತಡೆಗೆ ಯತ್ನ ನಡೆಸಿದರು. ಸಮೀಪವೇ ಇರುವ ಎಂಸಿಎಫ್ ರಸಗೊಬ್ಬರ ಕಾರ್ಖಾನೆಯ ಅಮೋನಿಯ ನಿರ್ವಹಣ ತಂಡವೂ ಆಗಮಿಸಿ ವಿಶೇಷ ಉಪಕರಣಗಳನ್ನು ಬಳಸಿ ಸೋರಿಕೆ ತಡೆಯುವಲ್ಲಿ ಯಶಸ್ವಿಯಾಯಿತು.
ಇದನ್ನೂ ಓದಿ : ಗಂಗಾವತಿ: ಕಾರ್ಯಕರ್ತರಿಗೆ ಪುನರ್ವಸತಿ ಕಲ್ಪಿಸಲು ಎಪಿಎಂಸಿ ವಿಭಜನೆಗೆ ಮುಂದಾದ ಸರಕಾರ
ಶಾಸಕ ಡಾಕ್ಟರ್ ಭರತ್ ಶೆಟ್ಟಿ. ವೈ ಯವರು ಭೇಟಿ ನೀಡಿ ಕಾರ್ಮಿಕ ವರ್ಗದವರ ಆರೋಗ್ಯ ವಿಚಾರಿಸಿದರು. ವೈದ್ಯರಾದ ಡಾ.ಡೇವಿಡ್,ತಾಲೂಕು ಆರೋಗ್ಯಾಧಿಕಾರಿ ಡಾ.ಸುಜಯ್ ಮಾತುಕತೆ ನಡೆಸಿ ಚಿಕಿತ್ಸೆಗೆ ಸಂಬಂಧಪಟ್ಟಂತೆ ಮಾಹಿತಿಯನ್ನು ಪಡೆದುಕೊಂಡರು. ಈ ಸಂದರ್ಭ ಬಿಜೆಪಿ ಮಂಡಲ ಅಧ್ಯಕ್ಷ ತಿಲಕ್ ರಾಜ್ ಕೃಷ್ಣಾಪುರ,ರಾಜೇಶ್ ಮುಕ್ಕ,ಯೋಗೀಶ್ ಶೆಟ್ಟಿ ಜೆಪ್ಪು ಉಪಸ್ಥಿತರಿದ್ದರು.